ಅಂಬಾನಿ ಕುಟುಂಬದ ಈ ಯಶಸ್ವಿ ಮಹಿಳಾ ಉದ್ಯಮಿ ಬಗ್ಗೆ ನಿಮ್ಗೆ ಗೊತ್ತಾ? ಈಕೆ 68,000 ಕೋಟಿ ರೂ. ಮೌಲ್ಯದ ಕಂಪನಿ ಒಡತಿ!

By Suvarna News  |  First Published Feb 28, 2023, 4:23 PM IST

ಅಂಬಾನಿ ಕುಟುಂಬ ಎಂದ ತಕ್ಷಣ ಮುಖೇಶ್ ಅಂಬಾನಿ ಹಾಗೂ ಅನಿಲ್ ಅಂಬಾನಿ ಹೆಸರು ನೆನಪಾಗುತ್ತದೆ. ಆದರೆ, ಈ ಕುಟುಂಬದಲ್ಲಿ ಇನ್ನೊಬ್ಬ ಯಶಸ್ವಿ ಉದ್ಯಮಿ ಕೂಡ ಇದ್ದಾರೆ. ಅವರೇ ನೀನಾ ಕೊಠಾರಿ. ಮಾಧ್ಯಮಗಳಿಂದ ಅಂತರ ಕಾಯ್ದುಕೊಂಡಿರುವ ಅಂಬಾನಿ ಸಹೋದರರ ಈ ಮುದ್ದಿನ ಸಹೋದರಿ ಬಗ್ಗೆ ಬಹುತೇಕರಿಗೆ ತಿಳಿದೇ ಇಲ್ಲ. ಈಕೆ ಸ್ವಂತ ಉದ್ಯಮ ಸಂಸ್ಥೆಯನ್ನು ಸ್ಥಾಪಿಸಿರುವ ಜೊತೆಗೆ ಪತಿಯ ಉದ್ಯಮವನ್ನು ಕೂಡ ಯಶಸ್ವಿಯಾಗಿ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. 
 


Business Desk:ಭಾರತದಲ್ಲಿ ಶ್ರೀಮಂತ ಕುಟುಂಬ ಅಂದ ತಕ್ಷಣ ಮೊದಲಿಗೆ ನೆನಪಿಗೆ ಬರುವ ಹೆಸರು ಅಂಬಾನಿ ಅವರದ್ದು. ಸಾಮಾನ್ಯ ಜನರು ಮಾತನಾಡುವಾಗ ಕೂಡ ಶ್ರೀಮಂತಿಕೆಗೆ ಪರ್ಯಾಯವಾಗಿ ಅಂಬಾನಿ ಎಂಬ ಹೆಸರು ಬಳಸೋದು ಭಾರತದಲ್ಲಿ ಸಾಮಾನ್ಯವಾಗಿದೆ. ಜಗತ್ತಿನಾದ್ಯಂತ ವಿಸ್ತರಿಸಿರುವ ಉದ್ಯಮ, ಐಷಾರಾಮಿ ಬಂಗಲೆ, ಅದ್ದೂರಿ ಪಾರ್ಟಿಗಳು ಹೀಗೆ ಅನೇಕ ಕಾರಣಗಳಿಂದ ಅಂಬಾನಿ ಕುಟುಂಬ ಆಗಾಗ ಸದ್ದು ಮಾಡುತ್ತಲೇ ಇರುತ್ತದೆ. ಅಂಬಾನಿ ಕುಟುಂಬ ಎಂದ ತಕ್ಷಣ ಮುಖೇಶ್ ಅಂಬಾನಿ ಹಾಗೂ ಅನಿಲ್ ಅಂಬಾನಿ ಸಹೋದರರ ಹೆಸರು ಮೊದಲಿಗೆ ನೆನಪಾಗುತ್ತದೆ. ಈ ಇಬ್ಬರೂ ಸಹೋದರರು ಸದಾ ಸುದ್ದಿಯಲ್ಲೇ ಇರುವ ಕಾರಣ ಎಲ್ಲರಿಗೂ ಚಿರಪರಿಚಿತರು. ಆದರೆ, ಇವರಿಗೆ ಇಬ್ಬರು ಸಹೋದರಿಯರು ಕೂಡ ಇದ್ದಾರೆ ಎಂಬ ವಿಷಯ ಬಹುತೇಕರಿಗೆ ತಿಳಿದಿಲ್ಲ. ಹೌದು, ಅಂಬಾನಿ ಸಹೋದರರಿಗೆ ನೀನಾ ಕೊಠಾರಿ ಹಾಗೂ ದೀಪ್ತಿಸಲ್ಗೋಕರ್ ಎಂಬ ಇಬ್ಬರು ಸಹೋದರಿಯರು ಕೂಡ ಇದ್ದಾರೆ. ಇನ್ನು ನೀನಾ ಕೊಠಾರಿ ಕೂಡ ಉದ್ಯಮಿಯಾಗಿದ್ದು, ಕಾಫಿ ಹಾಗೂ ಫುಡ್ ಚೈನ್ ಸಂಸ್ಥೆ ಜವಗ್ರೀನ್ ಒಡತಿಯಾಗಿದ್ದಾರೆ.

ಜವಗ್ರೀನ್ ಸಂಸ್ಥೆ ಅನ್ನು 2003ರಲ್ಲಿ ನೀನಾ ಕೊಠಾರಿ ಪ್ರಾರಂಭಿಸಿದರು. ಭಾರತದ ಖ್ಯಾತ ಉದ್ಯಮಿ ಧೀರೂಭಾಯಿ ಅಂಬಾನಿ ಅವರ ಮಗಳಾದ ನೀನಾ ಕೊಠಾರಿಯವರಲ್ಲೂ ಉದ್ಯಮಶೀಲತೆ ಗುಣವಿದೆ. ಇದೇ ಕಾರಣಕ್ಕೆ ಅವರು ಉದ್ಯಮ ರಂಗದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ನೀನಾ ಕೊಠಾರಿ ಅವರ ಪತಿ ಕೂಡ ಉದ್ಯಮಿಯಾಗಿದ್ದರು. 1986ರಲ್ಲಿ ನೀನಾ ಕೊಠಾರಿ ಭದ್ರಶ್ಯಾಮ್ ಕೊಠಾರಿ ಎಂಬ ಉದ್ಯಮಿಯನ್ನು ಮದುವೆಯಾದರು. ಇವರಿಗೆ ಅರ್ಜುನ್ ಕೊಠಾರಿ ಎಂಬ ಹೆಸರಿನ ಪುತ್ರ ಹಾಗೂ ನಯಂತರ ಕೊಠಾರಿ ಎಂಬ ಮಗಳು ಇದ್ದಾಳೆ. ದೀರ್ಘಕಾಲದಿಂದ ಕ್ಯಾನ್ಸರ್ ನಿಂದ ಬಳಲುತ್ತಿದ್ದ ನೀನಾ ಕೊಠಾರಿ ಅವರ ಪತಿ ಶ್ಯಾಮ್ ಕೊಠಾರಿ 2015ರಲ್ಲಿ ನಿಧನರಾದರು. 

Tap to resize

Latest Videos

ಅಮೆರಿಕದ ಶ್ರೀಮಂತ ಸೆಲ್ಫ್ ಮೇಡ್ ಮಹಿಳೆ ಜಯಶ್ರೀ ಉಲ್ಲಾಳ್, 18 ಸಾವಿರ ಕೋಟಿ ರೂ. ಒಡತಿಯಾಗಿದ್ದು ಹೇಗೆ?

ಪತಿಯ ನಿಧನದ ಬಳಿಕ ನೀನಾ ಕೊಠಾರಿ ಕಂಗೆಡಲಿಲ್ಲ. ಪತಿಯ ಉದ್ಯಮವನ್ನು ಮುನ್ನಡೆಸುವುದು ಅಷ್ಟು ಸುಲಭದ ಸಂಗತಿಯಾಗಿರಲಿಲ್ಲ. ಆದರೂ, ನೀನಾ ಧೈರ್ಯವಾಗಿ ಪತಿಯ ಉದ್ಯಮದ ಜವಾಬ್ದಾರಿಯನ್ನು ವಹಿಸಿಕೊಂಡರು. ಕೊಠಾರಿ ಶುಗರ್ಸ್ ಹಾಗೂ ಕೆಮಿಕಲ್ಸ್ ಸಂಸ್ಥೆಯನ್ನು ಅವರು ಇಂದು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ. 2015ರ ಏಪ್ರಿಲ್ 18ರಿಂದ ಅವರು ಈ ಸಂಸ್ಥೆಯ ಮುಖ್ಯಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದ್ದು, ತಮ್ಮ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ. ನೀನಾ ಕೊಠಾರಿ ಅವರ ಕಂಪನಿಯ ಒಟ್ಟು ಮೌಲ್ಯ 68,000 ಕೋಟಿ ರೂ.

ಸೋಷಿಯಲ್ ಮೀಡಿಯಾದಿಂದ ಅಂತರ
ನೀನಾ ಕೊಠಾರಿ ಮಾಧ್ಯಮ ಹಾಗೂ ಸೋಷಿಯಲ್ ಮೀಡಿಯಾಗಳಿಂದ ಸಾಕಷ್ಟು ಅಂತರ ಕಾಯ್ದುಕೊಂಡಿದ್ದಾರೆ. ಹೀಗಾಗಿ ಅವರ ಕುರಿತು ಬಹುತೇಕರಿಗೆ ತಿಳಿದಿಲ್ಲ. ಇನ್ನು ನೀನಾ ಅವರು ಸಹೋದರರ ಪತ್ನಿಯರಾದ ನೀತಾ ಹಾಗೂ ಟೀನಾ ಅಂಬಾನಿ ಅವರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ.ನೀನಾ ಅವರ ನಿವ್ವಳ ಸಂಪತ್ತು 52.4 ಕೋಟಿ ರೂ. ಆಗಿದೆ.ನೀನಾ ಕೊಠಾರಿ ಅವರ ಪುತ್ರಿ ನಯಂತರ ಕೊಠಾರಿ ಅವರ ಮದುವೆ ಕೆ.ಕೆ.ಬಿರ್ಲಾ ಅವರ ಮೊಮ್ಮಗ ಶಮಿತ್ ಜೊತೆಗೆ 2012ರಲ್ಲಿ  ನಡೆದಿತ್ತು. ಇನ್ನು ಪುತ್ರ ಅರ್ಜುನ್ ಕೊಠಾರಿ 2019ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. 

ವೇಟರ್ ಆಗಿದ್ದ ಮಹಿಳೆ ಇಂದು 105 ಕೋಟಿ ರೂ. ಸಂಪಾದಿಸುವ ಬ್ಲಾಗರ್!

ಧೀರೂಭಾಯಿ ಅಂಬಾನಿ ಅವರ ಪುತ್ರರು ಉದ್ಯಮ ರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಇವರಿಬ್ಬರ ಬಗ್ಗೆ ಎಲ್ಲರಿಗೂ ತಿಳಿದಿದೆ. ಆದರೆ, ಸಹೋದರರಂತೆ ಉದ್ಯಮ ರಂಗದಲ್ಲಿ ಸದ್ದಿಲ್ಲದೆ ನೆಲೆಯೂರಿರುವ ನೀನಾ ಕೊಠಾರಿ ಬಗ್ಗೆ ಬಹುತೇಕರಿಗೆ ತಿಳಿದಿಲ್ಲ. ನೀನಾ ಕೊಠಾರಿ ಕೂಡ ಪತಿಯ ಉದ್ಯಮದ ಜೊತೆಗೆ ತನ್ನ ಸಂಸ್ಥೆಯನ್ನು ಕೂಡ ಯಶಸ್ವಿಯಾಗಿ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. ಆ ಮೂಲಕ ಭಾರತದ ಪ್ರಭಾವಿ ಮಹಿಳಾ ಉದ್ಯಮಿಗಳಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ. 
 

click me!