ವಿಶ್ವದ ನಂ.1 ಶ್ರೀಮಂತನ ಪಟ್ಟ ಕಳೆದುಕೊಂಡಿದ್ದ ಎಲಾನ್ ಮಸ್ಕ್ ಈಗ ಅದನ್ನು ಮರಳಿ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ಭಾರತದ ಉದ್ಯಮಿ ಗೌತಮ್ ಅದಾನಿ ಮಾತ್ರ ತಮ್ಮ ಸ್ಥಾನದಲ್ಲಿ ಮತ್ತೆ ಕುಸಿತ ಕಂಡಿದ್ದು, 32ನೇ ಸ್ಥಾನಕ್ಕೆ ಜಾರಿದ್ದಾರೆ.
ನ್ಯೂಯಾರ್ಕ್ (ಫೆ.28): ಟ್ವಿಟ್ಟರ್ ಖರೀದಿಯ ಬಳಿಕ ಸಂಪತ್ತಿನಲ್ಲಿ ಸಾಕಷ್ಟು ಇಳಿಕೆ ಕಂಡಿದ್ದ ಟೆಸ್ಲಾ ಸಿಇಒ ಎಲಾನ್ ಮಸ್ಕ್, ಈಗ ಚೇತರಿಸಿಕೊಂಡಿದ್ದು, ವಿಶ್ವದ ನಂ.1 ಶ್ರೀಮಂತ ಪಟ್ಟವನ್ನು ಮರಳಿ ಪಡೆದಿದ್ದಾರೆ. ಬ್ಲೂಮ್ ಬರ್ಗ್ ಬಿಡುಗಡೆಗೊಳಿಸಿದ ಶ್ರೀಮಂತರ ಪಟ್ಟಿಯಲ್ಲಿ ಬರ್ನಾರ್ಡ್ ಅರ್ನಾಲ್ಟ್ ಅವರನ್ನು ಹಿಂದಿಕ್ಕಿ ಎಲಾನ್ ಮಸ್ಕ್ ನಂ.1 ಪಟ್ಟ ಅಲಂಕರಿಸಿದ್ದಾರೆ. ಈ ವರ್ಷ ಇಲ್ಲಿಯ ತನಕ ಟೆಸ್ಲಾಇಂಕ್ ಷೇರುಗಳಲ್ಲಿ ಶೇ.90ರಷ್ಟು ಏರಿಕೆಯಾಗಿರೋದೆ ಈ ಬೆಳವಣಿಗೆಗೆ ಕಾರಣ ಎನ್ನಲಾಗಿದೆ. ಇನ್ನೊಂದೆಡೆ ಭಾರತದ ಉದ್ಯಮಿ ಗೌತಮ್ ಅದಾನಿ ಸಂಪತ್ತಿನಲ್ಲಿ ಇಳಿಕೆ ಮುಂದುವರಿದಿದ್ದು, ಪಟ್ಟಿಯಲ್ಲಿ 32ನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ. ಈ ವರ್ಷದ ಪ್ರಾರಂಭದಲ್ಲಿ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದ ಅದಾನಿ, ಜನವರಿ 24ರಂದು ಹಿಂಡೆನ್ ಬರ್ಗ್ ವರದಿ ಅದಾನಿ ಸಮೂಹ ಸಂಸ್ಥೆಗಳ ಮೇಲೆ ವಂಚನೆ ಆರೋಪ ಮಾಡಿದ ಬಳಿಕ ಸಂಪತ್ತಿನಲ್ಲಿ ಭಾರೀ ನಷ್ಟ ಅನುಭವಿಸಿದ್ದಾರೆ. ಬ್ಲೂಮ್ ಬರ್ಗ್ ಸೂಚ್ಯಂಕದ ಪ್ರಕಾರ 2023ರ ಫೆ.28ಕ್ಕೆ ಎಲಾನ್ ಮಸ್ಕ್ ಅವರ ಸಂಪತ್ತು 187 ಬಿಲಿಯನ್ ಡಾಲರ್ ಇದೆ. ಮಸ್ಕ್ ಸಂಪತ್ತಿನಲ್ಲಿ 50 ಬಿಲಿಯನ್ ಡಾಲರ್ ಅಥವಾ ಶೇ.36ರಷ್ಟು ಹೆಚ್ಚಳ ಕಂಡುಬಂದಿದೆ. ಫ್ರೆಂಚ್ ಉದ್ಯಮಿ, ಲೂಯಿಸ್ ವೈಟ್ಟನ್ ಸಿಇಒ ಬರ್ನಾರ್ಡ್ ಅರ್ನಾಲ್ಟ್ ಅವರ ಸಂಪತ್ತು 185 ಬಿಲಿಯನ್ ಡಾಲರ್ ಇದ್ದು, ಶ್ರೀಮಂತರ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಜಾರಿದ್ದಾರೆ.
2023ನೇ ಸಾಲಿಗೆ ಪ್ರವೇಶಿಸುವಾಗಲೇ ಎಲಾನ್ ಮಸ್ಕ್ ಸಂಪತ್ತಿನಲ್ಲಿ ಭಾರೀ ಇಳಿಕೆ ಕಂಡುಬಂದಿತ್ತು. 2023ಏ ಸಾಲಿನ ಪ್ರಾರಂಭದಲ್ಲಿ ಅವರ ಸಂಪತ್ತು 137 ಬಿಲಿಯನ್ ಡಾಲರ್ ಆಗಿತ್ತು. ನವೆಂಬರ್ 2021 ರಿಂದ ಡಿಸೆಂಬರ್ 2022ರ ನಡುವೆ ಎಲಾನ್ ಮಸ್ಕ್ ಬರೋಬ್ಬರಿ 182 ಶತಕೋಟಿ ಡಾಲರ್ ಅಂದರೆ, ಅಂದಾಜು 15 ಲಕ್ಷ ಕೋಟಿ ರೂಪಾಯಿಗಳನ್ನು ಕಳೆದುಕೊಂಡಿದ್ದರು. ಈ ಮೂಲಕ ಅತೀ ಹೆಚ್ಚು ಆಸ್ತಿ ಕಳೆದುಕೊಂಡ ವಿಶ್ವದ ಮೊದಲ ವ್ಯಕ್ತಿ ಎಂಬ ಗಿನ್ನಿಸ್ ವಿಶ್ವ ದಾಖಲೆ ಕೂಡ ಮಸ್ಕ್ ಹೆಸರಲ್ಲಿ ಸೃಷ್ಟಿಯಾಗಿತ್ತು.
ಭಾರತದ ಶ್ರೀಮಂತ ಉದ್ಯಮಿಗಳು ಯಾವ ನಗರದಲ್ಲಿ ನೆಲೆಸಿದ್ದಾರೆ? ಅವರ ಐಷಾರಾಮಿ ಮನೆಗಳು ಹೇಗಿವೆ? ಇಲ್ಲಿದೆ ಮಾಹಿತಿ
2021ರ ನವೆಂಬರ್‌ನಲ್ಲಿ ಮಸ್ಕ್ ಅವರ ಒಟ್ಟು ಆಸ್ತಿ ಅಂದಾಜು 26 ಲಕ್ಷ ಕೋಟಿ ರೂಪಾಯಿ ಆಗಿತ್ತು. ಇನ್ನು ಇದು ಮಸ್ಕ್ ಅವರ ಆದಾಯದ ಉತ್ತುಂಗದ ಅವಧಿ ಎಂದೇ ಹೇಳಲಾಗಿದೆ. 320 ಬಿಲಿಯನ್ ಅಮೇರಿಕನ್ ಡಾಲರ್ ಸಂಪತ್ತಿಗೆ ಮಸ್ಕ್ ಒಡೆಯರಾಗಿದ್ದರು. 2022ರ ಡಿಸೆಂಬರ್‌ನಲ್ಲಿಇವರ ಆದಾಯದಲ್ಲಿ 138 ಬಿಲಿಯನ್ ಡಾಲರ್ ಇಳಿಕೆಯಾಗಿತ್ತು. ಈ ಸಮಯದಲ್ಲಿ, ಮಸ್ಕ್ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎನ್ನುವ ಸ್ಥಾನವನ್ನು ಸಹ ಕಳೆದುಕೊಳ್ಳಬೇಕಾಯಿತು. ಇದಕ್ಕೆಲ್ಲ 44 ಬಿಲಿಯನ್ ಡಾಲರ್ ವ್ಯಯಿಸಿ ಟ್ವಿಟ್ಟರ್ ಖರೀದಿಸಿರುವ ಜೊತೆಗೆ ಟೆಸ್ಲಾ ಷೇರುಗಳ ಬೆಲೆಯಲ್ಲಿ ಇಳಿಕೆಯಾಗಿರುವುದು ಕೂಡ ಕಾರಣ ಎಂದು ಹೇಳಲಾಗಿತ್ತು. ಮಸ್ಕ್ ಒಡೆತನದ ಟೆಸ್ಲಾ ಎಲೆಕ್ಟ್ರಿಕ್ ಕಾರುಗಳ ಉತ್ಪಾದನಾ ಕಂಪನಿಯಾಗಿದ್ದು, ಅಮೆರಿಕ ಬಿಟ್ಟರೆ ಚೀನಾದಲ್ಲೇ ದೊಡ್ಡ ಮಾರುಕಟ್ಟೆ ಹೊಂದಿದೆ. ಆದರೆ, ಕೋವಿಡ್ ನಿರ್ಬಂಧಗಳ ಪರಿಣಾಮ ಚೀನಾದಲ್ಲಿ ಟೆಸ್ಲಾ ಮಾರುಕಟ್ಟೆ ಕುಸಿತ ಕಂಡಿದ್ದು, ಷೇರುಗಳ ಮೌಲ್ಯದಲ್ಲಿ ಕೂಡ ಇಳಿಕೆಯಾಗಿತ್ತು ಇನ್ನು ಟ್ವಿಟ್ಟರ್ ಕೂಡ ನಷ್ಟದ ಹಾದಿಯಲ್ಲಿದೆ ಎಂದು ಹೇಳಲಾಗಿತ್ತು.
ಏರ್ ಇಂಡಿಯಾದ ಮೀಸೆ ಮಹಾರಾಜರಿಗೆ ಬರಲಿದ್ದಾಳೆ ಜೋಡಿ: ಲೋಗೋದಲ್ಲಿ ಶೀಘ್ರ ಮಹಿಳೆ ಚಿತ್ರ..!
ಎರಡರಿಂದ 32ನೇ ಸ್ಥಾನಕ್ಕೆ ಕುಸಿದ ಅದಾನಿ
ಗೌತಮ್ ಅದಾನಿ ಸಂಪತ್ತಿನಲ್ಲಿ ಇಳಿಕೆ ಮುಂದುವರಿದಿದೆ. ಸ್ವಲ್ಪ ಸಮಯದ ಹಿಂದೆ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಎರಡು ಅಥವಾ ಮೂರನೇ ಸ್ಥಾನದಲ್ಲಿ ಕಾಣಿಸಿಕೊಳ್ಳುತ್ತಿದ್ದ ಅದಾನಿ ಇದೀಗ 32ನೇ ಸ್ಥಾನಕ್ಕೆ ಕುಸಿದಿದ್ದಾರೆ. ಬ್ಲೂಮ್ ಬರ್ಗ್ ಸೂಚ್ಯಂಕದ ಪ್ರಕಾರ ಅದಾನಿ ಸಂಪತ್ತು ಪ್ರಸ್ತುತ 37.7 ಬಿಲಿಯನ್ ಡಾಲರ್ ಇದೆ. ಜನವರಿ 24ರಂದು ಅಮೆರಿಕದ ಹಿಂಡೆನ್ ಬರ್ಗ್ ಸಂಸ್ಥೆ ತನ್ನ ವರದಿಯಲ್ಲಿ ಅದಾನಿ ಸಮೂಹ ಸಂಸ್ಥೆಗಳ ಮೇಲೆ ವಂಚನೆ ಆರೋಪ ಮಾಡಿತ್ತು. ಪರಿಣಾಮ ಅದಾನಿ ಸಮೂಹದ ಎಲ್ಲ ಷೇರುಗಳು ಕೂಡ ಮಾರುಕಟ್ಟೆಯಲ್ಲಿ ಕುಸಿತ ಕಂಡಿವೆ. ಹಿಂಡನ್‌ಬರ್ಗ್ ವರದಿ ನಂತರ ಗೌತಮ್ ಅದಾನಿ (Gautam Adani) ಅವರ ವೈಯಕ್ತಿಕ ಸಂಪತ್ತು (Personal Asset) 9.80 ಲಕ್ಷ ಕೋಟಿ ರೂ.ನಿಂದ 3.36 ಲಕ್ಷ ಕೋಟಿ ರೂ.ಗೆ ಇಳಿದಿದೆ.