ಅವಮಾನ, ಸೋಲುಗಳಿಗೆ ತಲೆಕೆಡಿಸಿಕೊಳ್ಳದ ಭಾರತೀಯ ಮೂಲದ ವ್ಯಕ್ತಿಯೊಬ್ಬ ಇಂದು ಅಮೆರಿಕದ ಜನಪ್ರಿಯ ಉದ್ಯಮಿ. 24,102 ಕೋಟಿ ಸಂಪತ್ತಿನ ಒಡೆಯನಾಗಿರುವ ಈತನ ಕಥೆ ಹಲವರಿಗೆ ಪ್ರೇರಣೆದಾಯಿ.
Business Desk: ಉದ್ಯಮ ಜಗತ್ತಿನಲ್ಲಿ ಸ್ವಂತ ಪರಿಶ್ರಮದಿಂದ ಮೇಲೆ ಬಂದವರ ಕಥೆಗಳು ಸದಾ ಪ್ರೇರಣೆ ನೀಡುತ್ತವೆ. ಸಾಮಾನ್ಯ ಮಧ್ಯಮ ಅಥವಾ ಬಡ ಕುಟುಂಬ ಹಿನ್ನೆಲೆಯುಳ್ಳವರು ಬಹುಕೋಟಿ ಮೌಲ್ಯದ ಕಂಪನಿಯೊಂದನ್ನು ಕಟ್ಟಿ ಬೆಳೆಸೋದು ಸುಲಭದ ಮಾತು ಖಂಡಿತ ಅಲ್ಲ. ಅದಕ್ಕೆ ಸಾಕಷ್ಟು ಛಲ, ಆತ್ಮವಿಶ್ವಾಸ ಹಾಗೂ ಕಠಿಣ ಪರಿಶ್ರಮದ ಅಗತ್ಯವಿದೆ. ಈ ರೀತಿ ಸೆಲ್ಫ್ ಮೇಡ್ ಬಿಲಿಯನೇರ್ ಆದವರಲ್ಲಿ ಕಾರ್ತಿಕ್ ಶರ್ಮಾ ಕೂಡ ಒಬ್ಬರು. ಇಂದು ಅಮೆರಿಕದಲ್ಲಿ ಯಶಸ್ವಿ ಉದ್ಯಮಿಯಾಗಿ ಬೆಳೆದಿರುವ ಕಾರ್ತಿಕ್ ಶರ್ಮಾ ಅವರ ನಿವ್ವಳ ಸಂಪತ್ತು 24,102 ಕೋಟಿ ರೂ. ಅಂದಹಾಗೇ ಶರ್ಮಾ ಎಂದಿಗೂ ಪ್ರಚಾರದ ಹಿಂದೆ ಬಿದ್ದವರಲ್ಲ. ತಾನಾಯ್ತು ತನ್ನ ಕೆಲಸ ಆಯ್ತು ಎಂದು ಇರೋರು. ಹಾಗೆಯೇ ಬಹುಕೋಟಿ ಒಡೆಯನಾದರೂ ಸರಳ ಜೀವನಕ್ಕೆ ಇವರು ಹೆಚ್ಚಿನ ಒತ್ತು ನೀಡುತ್ತಿದ್ದಾರೆ. ವಿಶ್ವದ ಅತ್ಯಂತ ದೊಡ್ಡ ಹೆಡ್ಜ ಫಂಡ್ ವೊಂದರ ಮ್ಯಾನೇಜರ್ ಎಂಬ ಹೆಗ್ಗಳಿಕೆ ಇವರದ್ದು. ಇನ್ನು ಒಂದು ಸಮಯದಲ್ಲಿ ಇವರನ್ನು 'ಪ್ರತಿಭಾವಂತನಲ್ಲದ ಪಾಲುದಾರ' ಎಂದು ಅನೇಕರು ಟೀಕೆ ಮಾಡಿದ್ದರು. ಆದರೆ, ಒಂದೇ ಬೆಟ್ ನಲ್ಲಿ ಶರ್ಮಾ ತಮ್ಮ ಅದೃಷ್ಟ ಬದಲಾಯಿಸಿಕೊಳ್ಳುವ ಮೂಲಕ ಎಲ್ಲರ ಬಾಯಿ ಮುಚ್ಚಿಸಿದ್ದರು.
ಮದ್ರಾಸ್ ಐಐಟಿ ಹಳೇ ವಿದ್ಯಾರ್ಥಿ
ಭಾರತದಲ್ಲೇ ಹುಟ್ಟಿ ಬೆಳೆದ ಕಾರ್ತಿಕ್ ಶರ್ಮಾ, ಮದ್ರಾಸ್ ಇಂಡಿಯನ್ ಇನ್ಸಿಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಹಳೇ ವಿದ್ಯಾರ್ಥಿ. ಐಐಟಿಯಲ್ಲಿ ಇಂಜಿನಿಯರಿಂಗ್ ಪದವಿ ಪೂರ್ಣಗೊಳಿಸಿದ ಬಳಿಕ ಶರ್ಮಾ ಸ್ನಾತಕೋತ್ತರ ಪದವಿ ಪಡೆಯಲು ಅಮೆರಿಕಕ್ಕೆ ತೆರಳಿದರು. ಅಮೆರಿಕದ ಪ್ರಿನ್ಸ್ ಟನ್ ವಿಶ್ವವಿದ್ಯಾಲಯದಲ್ಲಿ ವಿಜ್ಞಾನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿದರು. ಆ ಬಳಿಕ ಮೆಕ್ ಕೆನ್ಸೆ ಹಾಗೂ ಕಂಪನಿಯಲ್ಲಿ ಗ್ಲೋಬಲ್ ಕನ್ಸಲ್ಟಿಂಗ್ ಆಗಿ 1998ರಲ್ಲಿ ವೃತ್ತಿ ಪ್ರಾರಂಭಿಸಿದರು. ಆ ಬಳಿಕ ಅವರು ಟೈಗರ್ ಗ್ಲೋಬಲ್ ಮ್ಯಾನೇಜ್ಮೆಂಟ್ ಸಂಸ್ಥೆಯಲ್ಲಿ ಎಂಡಿ ಆಗಿ ಕೂಡ ಕಾರ್ಯನಿರ್ವಹಿಸಿದ್ದರು
ಮಹಿಳೆಯರ ಒಡಕು ಪಾದ ನೋಡಿ ಬ್ಯುಸಿನೆಸ್ ಶುರು ಮಾಡಿದ ವ್ಯಕ್ತಿ ಈಗ ಕೋಟ್ಯಾಧಿಪತಿ
ಎಸ್ಆರ್ ಎಸ್ ಇನ್ವೆಸ್ಟಮೆಂಟ್ ಸಂಸ್ಥೆ ಸ್ಥಾಪನೆ
ಕೆಲವು ಕಂಪನಿಗಳಲ್ಲಿ ಕಾರ್ಯನಿರ್ವಹಿಸಿದ ಬಳಿಕ ಶರ್ಮಾ ಸ್ವಂತ ಸಂಸ್ಥೆಯೊಂದನ್ನು ಹುಟ್ಟುಹಾಕುವ ಬಗ್ಗೆ ಯೋಚಿಸಿದರು. ಪರಿಣಾಮ 2006ರಲ್ಲಿ 'ಎಸ್ ಆರ್ ಎಸ್ ಇನ್ವೆಸ್ಟಮೆಂಟ್' ಸ್ಥಾಪಿಸಿದರು. ತನ್ನ ತಂದೆಯ ಹೆಸರಿನ ಮೊದಲ ಅಕ್ಷರಗಳನ್ನೇ ಕೂಡಿಸಿ ಕಂಪನಿಗೆ ಹೆಸರಿಟ್ಟಿದ್ದರು. ಸಂಸ್ಥೆಯನ್ನು ಮುನ್ನಡೆಸಲು ಶರ್ಮಾ ಸಾಕಷ್ಟು ಶ್ರಮ ಪಡಬೇಕಾಯಿತು. ಹೀಗಿರುವಾಗ 2010ರ ಸುಮಾರಿನಲ್ಲಿ ಕಾರು ಬಾಡಿಗೆ ಕಂಪನಿಯ ಸ್ಟಾಕ್ ನಲ್ಲಿ ಶರ್ಮಾ ಕಂಪನಿ ಬೆಟ್ ಮಾಡಿತು. 11 ವರ್ಷಗಳ ಬಳಿಕ ಈ ಸಂಸ್ಥೆಯಲ್ಲಿ ಮಾಡಿದ ಹೂಡಿಕೆಗೆ ಬೃಹತ್ ಒತ್ತದ ರಿಟರ್ನ್ಸ್ ಸಿಕ್ಕಿತು. ಶರ್ಮಾ ಹೂಡಿಕೆ ಮಾಡಿದ ಕಂಪನಿಯ ಷೇರುಗಳಲ್ಲಿ ಶೇ. 456ರಷ್ಟು ಏರಿಕೆ ಕಂಡುಬಂದಿತ್ತು. ಎಸ್ ಆರ್ ಎಸ್ ಅವಿಸ್ ನಲ್ಲಿ (ಹೂಡಿಕೆ ಮಾಡಿದ ಕಂಪನಿಯಲ್ಲಿ) ಶೇ.50ಕ್ಕಿಂತಲೂ ಹೆಚ್ಚಿನ ಷೇರುಗಳನ್ನು ಹೊಂದಿದ್ದು, ಈ ಮೂಲಕ ಕಾರ್ತಿಕ್ ಅವರ ಸಂಪತ್ತು ಹಾಗೂ ಜನಪ್ರಿಯತೆ ಎರಡೂ ಕೂಡ ಹೆಚ್ಚಿತು. ಅಲ್ಲದೆ, ಕಾರ್ತಿಕ್ ಶರ್ಮಾ ವಿಶ್ವದ ಟಾಪ್ ಹೆಡ್ಜ ಫಂಡ್ ಮ್ಯಾನೇಜರ್ ಗಳಲ್ಲಿ ಒಬ್ಬರೆಂದು ಗುರುತಿಸಲ್ಪಟ್ಟರು ಕೂಡ. ಇನ್ನು 2022ರಲ್ಲಿ ಶರ್ಮಾ ಬಿಲಿಯನೇರ್ ಕ್ಲಬ್ ಗೆ ಸೇರ್ಪಡೆಗೊಂಡಿದ್ದಾರೆ.
ಸಿಎ, ಐಐಎಂ ಪದವೀಧರೆಯಾದ್ರೂ ಬೆಂಗಳೂರಲ್ಲಿ ಪುಟ್ಟ ಹೋಟೆಲ್ ತೆರೆದ ಈಕೆ ತಿಂಗಳ ಗಳಿಕೆ ಈಗ 4.5 ಕೋಟಿ
11 ವರ್ಷಗಳಲ್ಲಿ ಕಾರ್ತಿಕ್ ಶರ್ಮಾ ಅವರ ಸ್ಥಾನವೇ ಬದಲಾಗಿತ್ತು. ಅವರನ್ನು ಪ್ರತಿಭೆಯಿಲ್ಲದ ಹೆಡ್ಜ ಮ್ಯಾನೇಜರ್ ಎಂದು ಕರೆದವರೇ ಅವರ ಪ್ರತಿಭೆಯನ್ನು ಹೊಗಳುವಂತಾಯಿತು. ಯಾವುದೇ ಟೀಕೆ, ಸೋಲುಗಳಿಗೂ ಪ್ರತಿಕ್ರಿಯಿಸದೆ ತನ್ನ ಕೆಲಸದ ಮೇಲೆ ಮಾತ್ರ ಗಮನ ಕೇಂದ್ರೀಕರಿಸಿದ ಕಾರ್ತಿಕ್ ಕೊನೆಗೂ ತಾವಂದುಕೊಂಡಿದ್ದನ್ನು ಸಾಧಿಸುವಲ್ಲಿ ಸಫಲರಾಗಿದ್ದಾರೆ. ಇವರ ಕಥೆ ನಿಜಕ್ಕೂ ಯುವಜನರಿಗೆ ಪ್ರೇರಣೆ.