ಸಮಸ್ಯೆ ಯಾರಿಗೆ ತಾನೇ ಇರಲ್ಲ ಹೇಳಿ? ಎಲ್ಲರಿಗೂ ಏನೋ ಒಂದು ಸಮಸ್ಯೆ ಇದ್ದೇಇರುತ್ತದೆ. ಆದರೆ, ಆ ಸಮಸ್ಯೆಯಿಂದಲೇ ಬದುಕು ಕಟ್ಟಿಕೊಳ್ಳುವ ಹಾದಿಯನ್ನು ಕಂಡುಕೊಳ್ಳುವವರು ತುಂಬಾ ವಿರಳ. ಇಂಥ ವಿರಳ ಜನರಲ್ಲಿ ಸಲೋನಿ ಆನಂದ್ ಹಾಗೂ ಅವರ ಪತಿ ಅಲ್ತಾಫ್ ಸೈಯದ್ ಕೂಡ ಸೇರಿದ್ದಾರೆ.ಸೈಯದ್ ಕೂದಲು ಉದುರುವಿಕೆ ಸಮಸ್ಯೆಯೇ ಪತ್ನಿ ಸಲೋನಿ ಆನಂದ್ ಅವರಿಗೆ ಹೊಸ ಉದ್ಯಮ ಪ್ರಾರಂಭಿಸುವ ದಾರಿ ತೋರಿತು. ಪರಿಣಾಮ ಈ ದಂಪತಿ ಜೊತೆಯಾಗಿ ಸ್ಥಾಪಿಸಿದ 'ತ್ರಯಾ' ಎಂಬ ಸಂಸ್ಥೆ ಇಂದು ಲಕ್ಷಾಂತರ ಮಂದಿಗೆ ಕೂದಲು ಉದುರುವಿಕೆ ಸಮಸ್ಯೆಗೆ ಪರಿಹಾರ ನೀಡುವ ಮೂಲಕ ದೇಶಾದ್ಯಂತ ಸಾಕಷ್ಟು ಜನಪ್ರಿಯತೆ ಗಳಿಸುತ್ತಿದೆ.
Business Desk: ಕೆಲವೊಮ್ಮೆ ಬದುಕಿನಲ್ಲಿ ಎದುರಾಗುವ ಸಮಸ್ಯೆಗಳೇ ನಮಗೆ ಯಶಸ್ಸಿನ ಹಾದಿಯನ್ನು ತೋರಿಸುತ್ತವೆ. ಇದೇ ಕಾರಣಕ್ಕೆ ಹೇಳೋದು ಸಮಸ್ಯೆ ಎದುರಾದಾಗ ಎದೆಗುಂದಬಾರದು. ಏಕೆಂದರೆ ಆ ಸಮಸ್ಯೆ ನಮಗೊಂದು ಅನುಭವ ಅಥವಾ ಪಾಠವನ್ನು ಕಲಿಸಿಯೇ ಕಲಿಸುತ್ತದೆ. ಹಾಗೆಯೇ ಪ್ರತಿ ಸಮಸ್ಯೆಗೂ ಒಂದು ಪರಿಹಾರವಿರುವ ಕಾರಣ ಅದು ತಾತ್ಕಾಲಿಕವಾಗಿರುತ್ತದೆ. ಕೆಲವರಿಗೆ ಕೆಲವೊಂದು ಸಮಸ್ಯೆಗಳು ಬದುಕು ಕಟ್ಟಿಕೊಳ್ಳಲು ನೆರವು ಕೂಡ ನೀಡಿವೆ. ಮಾರುಕಟ್ಟೆಯಲ್ಲಿರುವ ಅನೇಕ ಬ್ರ್ಯಾಂಡ್ ಗಳು ಅದರ ಸಂಸ್ಥಾಪಕರು ಎದುರಿಸಿದ ಸಮಸ್ಯೆಗಳಿಗೆ ಪರಿಹಾರವಾಗಿಯೇ ಜನ್ಮ ತಾಳಿರುವಂತಹವು. ಇಂಥದ್ದೇ ಒಂದು ಪರಿಸ್ಥಿತಿಯಿಂದ ಜನ್ಮ ತಾಳಿದ ಬ್ರ್ಯಾಂಡ್ ತ್ರಯ. ಸಲೋನಿ ಆನಂದ್ ಹಾಗೂ ಆಕೆಯ ಪತಿ ಅಲ್ತಾಫ್ ಸೈಯದ್ ದಂಪತಿ ತಮಗೆ ಎದುರಾದ ಆರೋಗ್ಯ ಸಮಸ್ಯೆಯನ್ನೇ ಮೂಲವಾಗಿರಿಸಿಕೊಂಡು ಕಂಪನಿಯೊಂದನ್ನು ಕಟ್ಟಿ ಯಶಸ್ವಿಯಾಗಿದ್ದಾರೆ. ತ್ರಯಾ ಕೂದಲು ಆರೈಕೆ ಪ್ಲಾಟ್ ಫಾರ್ಮ್ ಆಗಿದ್ದು, ಉತ್ತಮ ಆದಾಯ ಗಳಿಸುತ್ತಿದೆ ಕೂಡ.
ಅಲ್ತಾಫ್ ಕೂದಲು ಉದುರುವಿಕೆ ಸಮಸ್ಯೆ ಹಾಗೂ ಇತರ ಆರೋಗ್ಯ ಸಂಬಂಧಿ ತೊದರೆಗಳನ್ನು ಎದುರಿಸಿದ್ದರು. ಇದಕ್ಕಾಗಿ ಅವರು ಸಾಕಷ್ಟು ಹಣವನ್ನು ಕೂಡ ಖರ್ಚು ಮಾಡಿದ್ದರು. ಈ ಸಮಯದಲ್ಲಿ ಅವರಿಗೆ ಒಂದು ವಿಷಯ ಅರ್ಥವಾಗಿತ್ತು. ಕೂದಲು ಉದುರುವಿಕೆಗೆ ನೀರಿನ ಗುಣಮಟ್ಟ, ಮಾಲಿನ್ಯ ಹಾಗೂ ರಾಸಾಯನಿಕ ಚಿಕಿತ್ಸೆಗಳು ಮಾತ್ರ ಕಾರಣವಲ್ಲ, ಬದಲಿಗೆ ಕೆಲವು ಆರೋಗ್ಯ ಸಮಸ್ಯೆಗಳು ಕೂಡ ಇದಕ್ಕೆ ಕಾರಣವಾಗಿವೆ. ಈ ಹಿನ್ನೆಲೆಯಲ್ಲಿ ಕೂದಲು ಉದುರುವಿಕೆ ಸಮಸ್ಯೆ ನಿವಾರಣೆಗೆ 2019ರಲ್ಲಿ ತ್ರಯಾ ಎಂಬ ಸಂಸ್ಥೆಯನ್ನು ಸ್ಥಾಪಿಸಿದರು. ಈ ಸಂಸ್ಥೆ ಕೂದಲು ಉದುರುವಿಕೆ ಸಮಸ್ಯೆಗೆ ಡಿಜಿಟಲ್ ಮಾಧ್ಯಮದ ಮುಖಾಂತರವೇ ಪರಿಹಾರ ನೀಡುತ್ತಿದೆ. ಆಯುರ್ವೇದ, ಪೌಷ್ಟಿಕಾಂಶ ಹಾಗೂ ಚರ್ಮರೋಗ ತಜ್ಞರು ಈ ಮೂರು ಅಂಶಗಳನ್ನು ಒಳಗೊಂಡಂತೆ ಇದು ಕೂದಲು ಉದುರುವಿಕೆ ಸಮಸ್ಯೆಗೆ ಪರಿಹಾರವನ್ನು ನೀಡುತ್ತಿದೆ. ಅಲ್ಲದೆ, ಈ ಸಮಸ್ಯೆ ನಿವಾರಣೆಯಲ್ಲಿ ಈ ಸಂಸ್ಥೆ ಶೇ.93ರಷ್ಟು ಯಶಸ್ಸು ಕೂಡ ಸಾಧಿಸಿದೆ.
ಸ್ವಿಜರ್ಲ್ಯಾಂಡ್ ನಲ್ಲಿ ದುಬಾರಿ ಬಂಗಲೆ ಖರೀದಿಸಿದ ಭಾರತೀಯ ಉದ್ಯಮಿ ಪಂಕಜ್ ಓಸ್ವಾಲ್; ಅದರ ಮೌಲ್ಯ ಎಷ್ಟು ಗೊತ್ತಾ?
ತ್ರಯಾ ಸಂಸ್ಥೆ ಪ್ರಾರಂಭಿಸಿದ ಸಮಯದಲ್ಲಿ ಈ ದಂಪತಿ ಆರ್ಯುವೇದ ಮಾರುಕಟ್ಟೆಯನ್ನು ಅನ್ವೇಷಿಸಿದರು. ಕೂದಲಿನ ಸಮಸ್ಯೆಗಳನ್ನು ಮೂಲದಿಂದಲೇ ತಿಳಿಯಲು ಪ್ರಯತ್ನಿಸಿದರು. ಫೈರ್ ಸೈಡ್ ವೆಂಚರ್ಸ್ ಮೂಲಕ ಈ ಕಂಪನಿ 2022ರ ಜನವರಿಯಲ್ಲಿ 2.2 ಮಿಲಿಯನ್ ಡಾಲರ್ ನಿಧಿ ಸಂಗ್ರಹಿಸಿದೆ.
ಸಲೋನಿ ಆನಂದ್ ಯಾರು?
ಸಲೋನಿ ಆನಂದ್ ಟೆಕ್ಕಿ ಆಗಿದ್ದು, ಮಾರ್ಕೆಟಿಂಗ್ ಕ್ಷೇತ್ರದಲ್ಲಿ ಕೂಡ ಕಾರ್ಯನಿರ್ವಹಿಸಿದ್ದರು. ಕಂಪ್ಯೂಟರ್ ಇಂಜಿನಿಯರಿಂಗ್ ನಲ್ಲಿ ಪದವಿ ಪೂರ್ಣಗೊಳಿಸಿದ ಬಳಿಕ ಹೈದರಾಬಾದ್ ಐಬಿಎಸ್ ನಿಂದ ಆಕೆ ಎಂಬಿಎ ಪೂರ್ಣಗೊಳಿಸಿದ್ದರು. ಅದಾದ ಬಳಿಕ ಆಕೆ Upshot.ai ಎಂಬ ಸ್ಟಾರ್ಟ್ ಅಪ್ ಅನ್ನು ಮೂರು ವರ್ಷಗಳ ಕಾಲ ಮುನ್ನಡೆಸಿದ್ದರು. ಕಾಸ್ಟ್ ಲೈಟ್ ಎಂಬ ಹೆಲ್ತ್ ಕೇರ್ ಸಂಸ್ಥೆಯಲ್ಲಿ ಕೂಡ ಮೂರು ವರ್ಷಗಳ ಕಾಲ ಕಾರ್ಯನಿರ್ವಹಿಸಿದ್ದರು. ಹೈದರಾಬಾದ್ ನಲ್ಲಿ ಅಲ್ತಾಫ್ ಅವರನ್ನು ಭೇಟಿಯಾದ ಸಲೋನಿ ಆ ಬಳಿಕ 2017ರಲ್ಲಿ ವಿವಾಹವಾದರು. ತ್ರಯಾ ಸ್ಥಾಪಿಸೋದಕ್ಕೂ ಮುನ್ನ ಅಲ್ತಾಫ್ 'ಬಿಲ್ಟ್ ಟು ಕುಕ್ ಎಂಬ ಫುಡ್ ಡೆಲಿವರಿ ಸ್ಟಾರ್ಟ್ ಅಪ್ ನಡೆಸುತ್ತಿದ್ದರು. ಅಲ್ತಾಫ್ ಸ್ಟ್ಯಾನ್ ಫೋರ್ಡ್ ವಿಶ್ವವಿದ್ಯಾಲಯದ ಗ್ರ್ಯಾಜುವೇಟ್ ಸ್ಕೂಲ್ ಆಫ್ ಬ್ಯುಸಿನೆಸ್ ನಲ್ಲಿ 2012-14ನೇ ಸಾಲಿನಲ್ಲಿ ಎಂಬಿಎ ಪೂರ್ಣಗೊಳಿಸಿದ್ದರು. ಇನ್ನು ಯುನಿವರ್ಸಿಟಿ ಆಫ್ ಗ್ಲಾಸ್ಗೋನಿಂದ ವೈದ್ಯಕೀಯ ಬಯೋಕೆಮೆಸ್ಟ್ರಿಯಲ್ಲಿ ಪದವಿ ಕೂಡ ಪಡೆದಿದ್ದಾರೆ.
ಕಳೆದ ಸಾಲಿನಲ್ಲಿ ತ್ರಯಾ ಒಂದು ಲಕ್ಷಕ್ಕೂ ಅಧಿಕ ಪ್ರಕರಣಗಳನ್ನು ನಿರ್ವಹಿಸಿದೆ. ಇನ್ನು ತ್ರಯಾದ ಗ್ರಾಹಕರಲ್ಲಿ ಶೇ.65ರಷ್ಟು ಮಂದಿ ಪುರುಷರೇ ಆಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ಮಹಿಳಾ ಗ್ರಾಹಕರ ಸಂಖ್ಯೆಯಲ್ಲಿ ಕೂಡ ಹೆಚ್ಚಳ ಕಂಡುಬಂದಿದ್ದು, ಶೇ.35ರಷ್ಟು ಮಂದಿ ಇದ್ದಾರೆ ಎಂದು ಸಲೋನಿ ಆನಂದ್ ತಿಳಿಸಿದ್ದಾರೆ.