ಸಿಎ, ಐಐಎಂ ಪದವೀಧರೆಯಾದ್ರೂ ಬೆಂಗಳೂರಲ್ಲಿ ಪುಟ್ಟ ಹೋಟೆಲ್ ತೆರೆದ ಈಕೆ ತಿಂಗಳ ಗಳಿಕೆ ಈಗ 4.5 ಕೋಟಿ

By Suvarna News  |  First Published Jan 9, 2024, 12:46 PM IST

21ನೇ ವಯಸ್ಸಿಗೆ ಸಿಎ ಪರೀಕ್ಷೆ ಪಾಸಾದ ದಿವ್ಯಾ ರಾವ್, ಐಐಎಂ ಪದವೀಧರೆ ಕೂಡ. ಉತ್ತಮ ಉದ್ಯೋಗವಿದ್ರೂ ಎಲ್ಲ ಬಿಟ್ಟು ಬೆಂಗಳೂರಲ್ಲಿ ಪುಟ್ಟ ಹೋಟೆಲ್ ಪ್ರಾರಂಭಿಸಿದ ಈಕೆ ಈಗ ಯಶಸ್ವಿ ಉದ್ಯಮಿ. ಈಕೆ ರೆಸ್ಟೋರೆಂಟ್ ಗಳ ವಾರ್ಷಿಕ ವಹಿವಾಟು 50 ಕೋಟಿ. 
 


Business Desk: ಕೆಲವರು ಮುಟ್ಟಿದ್ದೆಲ್ಲ ಚಿನ್ನವಾಗುತ್ತದೆ. ಅಂದ್ಕೊಂಡಿದ್ದೆಲ್ಲ ನೆರವೇರುತ್ತದೆ. ಈ ರೀತಿ ಯಶಸ್ಸು ಸಿಕ್ಕಾಗ ಬಹುತೇಕರು ಅಲ್ಲೇ ನಿಂತು ಬಿಡೋದೆ ಹೆಚ್ಚು. ಅಂದ್ಕೊಂಡಿದ್ದೆಲ್ಲ ಸಿಕ್ಕಿತ್ತಲ್ಲ, ಇನ್ನೇನು ಎಂಬ ನಿರಾಸಕ್ತಿ ಬೆಳೆಸಿಕೊಂಡು ಬಿಡುತ್ತಾರೆ. ಆದರೆ, ಕೆಲವೇ ಕೆಲವು ಮಂದಿ ಮಾತ್ರ, ಯಶಸ್ಸು ಸಿಕ್ಕರೂ ಮತ್ತಷ್ಟು ಸವಾಲುಗಳಿಗೆ ತಮ್ಮನ್ನು ಒಡ್ಡಿಕೊಂಡು ಇನ್ನೂ ಮಹತ್ತರ ಸಾಧನೆ ಮಾಡುವ ಹಂಬಲ ಹೊಂದಿರುತ್ತಾರೆ. ದೊಡ್ಡ ಕನಸು ಕಾಣುವ ಇಂಥವರು ತಮ್ಮ ಮನಸ್ಸಿನ ಮಾತಿಗೆ ಕಿವಿಗೊಟ್ಟು ಅಪಾಯಗಳನ್ನು ಮೈ ಮೇಲೆ ಎಳೆದುಕೊಂಡು ಯಾರೂ ಮಾಡಿರದ ಸಾಧನೆ ಮಾಡುತ್ತಾರೆ. ಅಂಥವರಲ್ಲಿ ದಿವ್ಯಾ ರಾವ್ ಕೂಡ ಒಬ್ಬರು. 21ನೇ ವಯಸ್ಸಿಗೆ ಸಿಎ ಪೂರ್ಣಗೊಳಿಸಿ, ಆ ಬಳಿಕ ಅಹ್ಮದಾಬಾದ್ ಐಐಎಂನಲ್ಲಿ ಎಂಬಿಎ ಓದಿದ ಈಕೆ, ವೃತ್ತಿಯಲ್ಲಿ ಸ್ಥಾನ ಭದ್ರಗೊಳಿಸುತ್ತಿರುವ ಸಮಯದಲ್ಲೇ ಅಚ್ಚರಿಯ ನಿರ್ಧಾರವೊಂದನ್ನು ಕೈಗೊಳ್ಳುತ್ತಾರೆ. ಅದೇ ಸಿಎ ಕೆಲಸ ಬಿಟ್ಟು ಹೋಟೆಲ್ ಉದ್ಯಮ ಪ್ರಾರಂಭಿಸುವ ನಿರ್ಧಾರ. ಇದಕ್ಕೆ ಕುಟುಂಬ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರೂ ಛಲ ಬಿಡದೆ ರಾಘವ್ ಎಂಬ ಪಾಲುದಾರರ ಜೊತೆಗೆ ರೆಸ್ಟೋರೆಂಟ್ ಚೈನ್ ಪ್ರಾರಂಭಿಸಿದ ಈಕೆ ಈಗ ಯಶಸ್ವಿ ಉದ್ಯಮಿ. ಇವರ ಹೋಟೆಲ್ ತಿಂಗಳ ವಹಿವಾಟು 4.5 ಕೋಟಿ. ಅಂದರೆ ವರ್ಷಕ್ಕೆ ಸುಮಾರು 50 ಕೋಟಿ ಹತ್ತಿರ ವಹಿವಾಟು ನಡೆಸುತ್ತಿದ್ದಾರೆ.

21ನೇ ವಯಸ್ಸಿಗೆ ಸಿಎ 
ಬಡ ಮಧ್ಯಮ ವರ್ಗದಲ್ಲಿ ಜನಿಸಿದ ದಿವ್ಯಾ ಅವರಿಗೆ ಮನೆಯ ಆರ್ಥಿಕ ಪರಿಸ್ಥಿತಿಯ ಬಗ್ಗೆ ಚೆನ್ನಾಗಿ ಅರಿವಿತ್ತು. ಕಾಲೇಜು ದಿನಗಳಲ್ಲಿ ಆಕೆಗೆ ತಿಂಗಳಿಗೆ 1000ರೂ. ಪಾಕೆಟ್ ಮನಿ ಸಿಗೋದು ಕೂಡ ಕಷ್ಟ ಎಂಬಂತಹ ಪರಿಸ್ಥಿತಿ. ಕುಟುಂಬಕ್ಕೆ ಯಾವುದೇ ಆಸ್ತಿಯಿರದ ಕಾರಣ ಕಷ್ಟಪಟ್ಟು ಓದಿದರೆ ಮಾತ್ರ ಅಪ್ಪ-ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳಲು ಸಾಧ್ಯ ಎಂಬ ಸತ್ಯದ ಅರಿವು ದಿವ್ಯಾ ಅವರಿಗಿತ್ತು. ಹೀಗಾಗಿ ಅವರು ಶ್ರಮ ವಹಿಸಿ ಓದುತ್ತಿದ್ದರು. ಸಿಎ ಮಾಡುವ ಸಂದರ್ಭದಲ್ಲಿ ಟ್ಯೂಷನ್ ಗೆ ಹೋಗಲು ಪ್ರತಿದಿನ 2-3 ಬಸ್ ಗಳನ್ನು ಬದಲಾಯಿಸಿ ಹೋಗುತ್ತಿದ್ದರು. ಆದರೆ, ಇಷ್ಟೆಲ್ಲ ಆರ್ಥಿಕ ಸಂಕಷ್ಟಗಳ ನಡುವೆ ದಿವ್ಯಾ ತುಂಬಾ ಚೆನ್ನಾಗಿ ಓದುತ್ತಾರೆ. ಪರಿಣಾಮ 21ನೇ ವಯಸ್ಸಿನಲ್ಲೇ ಸಿಎ ಪೂರ್ಣಗೊಳಿಸುತ್ತಾರೆ. 

Tap to resize

Latest Videos

ಕೇವಲ 300 ರೂ. ಬಂಡವಾಳದಿಂದ 200 ಕೋಟಿ ರೂ. ಗಳಿಸಿದ ಶ್ರೇಷ್ಠ ಮಹಿಳಾ ಉದ್ಯಮಿ!

ಐಐಎಂನಲ್ಲೇ ಒಡಮೂಡಿದ ಉದ್ಯಮದ ಕನಸು
ಅಹ್ಮದಾಬಾದ್ ಐಐಎಂನಲ್ಲಿ ಎಂಬಿಎ ಓದುತ್ತಿರುವಾಗಲೇ ದಿವ್ಯಾಗೆ ಆಹಾರ ಉದ್ಯಮ ಪ್ರಾರಂಭಿಸುವ ಯೋಚನೆ ಮೂಡಿತ್ತು.  ದಕ್ಷಿಣ ಭಾರತದ ತಿನಿಸುಗಳನ್ನು ಜಗತ್ಪ್ರಸಿದ್ಧಿ ಮಾಡುವ ಕನಸು ಅವರಿಗಿತ್ತು.

ಕನಸು ನನಸಾದ ಹೊತ್ತು
ಸಿಎ ವೃತ್ತಿ ಪ್ರಾರಂಭಿಸಿ ಗಳಿಕೆಯೂ ಉತ್ತಮ ಹಂತದಲ್ಲಿರುವ ಸಮಯದಲ್ಲೇ ದಿವ್ಯಾ ಅವರಿಗೆ ರಾಘವ್ ಅವರ ಭೇಟಿಯಾಗುತ್ತದೆ. ಆಹಾರ ಉದ್ಯಮದಲ್ಲಿ 15ಕ್ಕೂ ಹೆಚ್ಚು ವರ್ಷಗಳ ಅನುಭವವಿತ್ತು. ಅವರು ದಿವ್ಯಾ ಅವರ ಬಳಿ ಉದ್ಯಮ ಮುನ್ನಡೆಸುವ ಸಂಬಂಧ ಸಲಹೆ ಕೇಳಲು ಬಂದಿದ್ದರು. ಹೀಗೆ ಪರಿಚಿತರಾದ ರಾಘವ್ ಮುಂದೆ ಹೊಸ ರೆಸ್ಟೋರೆಂಟ್ ಚೈನ್ ಪ್ರಾರಂಭಿಸಲು ಪಾಲುದಾರರಾಗಿ ಕೈಜೋಡಿಸುವಂತೆ ದಿವ್ಯಾ ಬಳಿ ಕೇಳಿದ್ದರು. ಈ ಸಮಯದಲ್ಲಿ ದಿವ್ಯಾ ಅವರ ವೃತ್ತಿ ಉತ್ತಮ ಸ್ಥಿತಿಯಲ್ಲಿತ್ತು. ಆದರೂ ಅದನ್ನು ಬಿಟ್ಟು ಹೋಟೆಲ್ ಉದ್ಯಮ ಪ್ರಾರಂಭಿಸಲು ರಾಘವ್ ಅವರ ಜೊತೆಗೆ ಕೈಜೋಡಿಸಿದರು.

ರಾಮೇಶ್ವರಂ ಕೆಫೆ ಜನ್ಮ ತಾಳಿತು
ದಿವ್ಯಾ ಹಾಗೂ ರಾಘವ್ ತಮ್ಮ ಕನಸಿನ ರೆಸ್ಟೋರೆಂಟ್ ಗೆ ಭಾರತದ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರ ಗೌರವಾರ್ಥ 'ರಾಮೇಶ್ವರಂ ಕೆಫೆ' ಎಂಬ ಹೆಸರಿಟ್ಟರು. ಬೆಂಗಳೂರಿನಲ್ಲಿ ಪ್ರಾರಂಭವಾದ ಈ ರೆಸ್ಟೋರೆಂಟ್ ರುಚಿ ಹಾಗೂ ಶುಚಿಗೆ ಆದ್ಯತೆ ನೀಡಿದ ಕಾರಣ ದೊಡ್ಡ ಯಶಸ್ಸು ಕಂಡಿತು. ಇಂದು ಈ ಕೆಫೆ ಬೆಂಗಳೂರಿನಲ್ಲಿ ನಾಲ್ಕು ಶಾಖೆಯನ್ನು ಹೊಂದಿದೆ. ದುಬೈ,ಹೈದರಾಬಾದ್ ಹಾಗೂ ಚೆನ್ನೈನಲ್ಲಿ ಕೂಡ ಶಾಖೆಗಳನ್ನು ಎರೆಯುತ್ತಿದೆ. 700 ಉದ್ಯೋಗಿಗಳು ಈ ಹೋಟೆಲ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. 

ಅಮೆರಿಕದಲ್ಲಿ ಗಾರ್ಡ್ ಕೆಲಸ, ಬರ್ಗರ್ ಮಾರುತ್ತಿದ್ದ ವ್ಯಕ್ತಿ ಈಗ ಕೋಟ್ಯಾಧಿಪತಿ!

ವಾರ್ಷಿಕ 50 ಕೋಟಿ ವಹಿವಾಟು
ರಾಮೇಶ್ವರಂ ಕೆಫೆ ಪ್ರತಿ ಶಾಖೆಯಲ್ಲಿ ತಿಂಗಳಿಗೆ  4.5 ಕೋಟಿ ವ್ಯಾಪಾರವಾಗುತ್ತಿದೆ. ಅಂದರೆ ವರ್ಷಕ್ಕೆ ಸುಮಾರು 50 ಕೋಟಿ ವಹಿವಾಟು ನಡೆಯುತ್ತಿದೆ. ಪ್ರತಿದಿನ ಈ ಕೆಫೆಯಲ್ಲಿ  7,500 ಬಿಲ್ ಗಳು ಸೃಷ್ಟಿಯಾಗುತ್ತವೆ. 

ಉದ್ಯಮ ಪಾಲುದಾರನೇ ಈಗ ಜೀವನಸಂಗಾತಿ
ರಾಘವ್ ಹೋಟೆಲ್ ಉದ್ಯಮದಲ್ಲಿ ದಿವ್ಯಾಗೆ ಪಾಲುದಾರರಾದ ಬಳಿಕ ಜೀವನ ಸಂಗಾತಿಯೂ ಆಗುವಂತೆ ಆಕೆ ಬಳಿ ಕೋರುತ್ತಾರೆ. ಇದಕ್ಕೆ ದಿವ್ಯಾ ಕೂಡ ಸಮ್ಮತಿಸುತ್ತಾರೆ. ಈಗ ಇವರಿಬ್ಬರು ಪತಿ-ಪತ್ನಿಯಾಗಿದ್ದು, ಉದ್ಯಮವನ್ನು ಕೂಡ ಯಶಸ್ವಿಯಾಗಿ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. 

click me!