ರೋಹನ್ ಮೂರ್ತಿ ಭಾರತದ ಅತೀದೊಡ್ಡ ಐಟಿ ಕಂಪನಿಗಳಲ್ಲಿ ಒಂದಾಗಿರುವ ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಅವರ ಪುತ್ರ. ಆದರೆ, ರೋಹನ್ ಮಾತ್ರ ಅಪ್ಪನ ಸಂಸ್ಥೆ ಸೇರದೆ ತನ್ನದೇ ಸ್ಟಾರ್ಟ್ ಅಪ್ ಸ್ಥಾಪಿಸುವ ಮೂಲಕ ಉದ್ಯಮ ಜಗತ್ತಿನಲ್ಲಿ ತಮ್ಮದೇ ಹೆಜ್ಜೆ ಗುರುತು ಮೂಡಿಸುತ್ತಿದ್ದಾರೆ.
Business Desk:ಕೆಲವರು ಅಪ್ಪ ನೆಟ್ಟ ಆಲದ ಮರಕ್ಕೆ ಜೋತು ಬೀಳುವ ಜಾಯಮಾನ ಹೊಂದಿರಲ್ಲ. ಅಪ್ಪನ ಹೆಜ್ಜೆ ಗುರುತುಗಳ ಮೇಲೆ ನಡೆಯುವ ಬದಲು ತಮ್ಮದೇ ಹೆಜ್ಜೆ ಗುರುತಿನ ಛಾಪು ಮೂಡಿಸುವ ಬಯಕೆ ಹೊಂದಿರುತ್ತಾರೆ. ಅಂಥವರ ಸಾಲಿಗೆ ರೋಹನ್ ಮೂರ್ತಿ ಕೂಡ ಸೇರುತ್ತಾರೆ. ಇನ್ಫೋಸಿಸ್ ಸಂಸ್ಥಾಪಕ ಎನ್.ಆರ್. ನಾರಾಯಣಮೂರ್ತಿ ಹಾಗೂ ಸುಧಾ ಮೂರ್ತಿ ಅವರ ಪುತ್ರನಾಗಿರುವ ರೋಹನ್, ತಮ್ಮದೇ ಸ್ಟಾರ್ಟ್ ಅಪ್ ಸ್ಥಾಪಿಸುವ ಮೂಲಕ ಉದ್ಯಮ ರಂಗದಲ್ಲಿ ಮುನ್ನಡೆಯುತ್ತಿದ್ದಾರೆ. ಭಾರತದ ಅತೀದೊಡ್ಡ ಐಟಿ ಕಂಪನಿಗಳಲ್ಲಿ ಒಂದಾದ ಇನ್ಫೋಸಿಸ್ ಸ್ಥಾಪಕರಾದ ನಾರಾಯಣ ಮೂರ್ತಿ ಅವರ ಮಗನಾಗಿದ್ದರೂ ರೋಹನ್, ಅದ್ಯಾವುದರ ಬೆಂಬಲವಿಲ್ಲದೆ ಸ್ವಂತ ಸಂಸ್ಥೆ ಕಟ್ಟಿದ್ದಾರೆ. ರೋಹನ್ ಅವರ ದೃಢ ಸಂಕಲ್ಪ, ಆತ್ಮಸ್ಥೈರ್ಯ ಹಾಗೂ ಪರಿಶ್ರಮದ ಫಲವಾಗಿ 'ಸೊರೊಕೊ' ಸ್ಟಾರ್ಟ್ ಅಪ್ ಜನ್ಮ ತಾಳಿದೆ. ರೋಹನ ಮೂರ್ತಿ ಅವರ ಸಾಧನೆಗೆ ಬಾಲ್ಯದಿಂದ ಅವರು ಬೆಳೆದ ಬಂದು ವಾತಾವರಣ, ಕುಟುಂಬದ ಸಹಕಾರ ಕೂಡ ಮುಖ್ಯ ಕಾರಣವಾಗಿದೆ ಎಂದೇ ಹೇಳಬಹುದು. ನಾರಾಯಣ ಮೂರ್ತಿ ಹಾಗೂ ಸುಧಾ ಮೂರ್ತಿ ತಮ್ಮದೇ ಆದ ಜೀವನಮೌಲ್ಯಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡಿದ್ದು, ಅದು ರೋಹನ್ ಮೇಲೆ ಕೂಡ ಪರಿಣಾಮ ಬೀರಿತ್ತು ಎಂದರೆ ತಪ್ಪಿಲ್ಲ. ಇದೇ ಕಾರಣಕ್ಕೆ ರೋಹನ್ ತನ್ನದೇ ಸ್ವತಂತ್ರ ಹಾದಿಯಲ್ಲಿ ಮುನ್ನಡೆಯುವ ನಿರ್ಧಾರ ಕೂಡ ಕೈಗೊಂಡಿದ್ದರು.
ರೋಹನ್ ಮೂರ್ತಿ ಅವರ ತಾಯಿ ಸುಧಾ ಮೂರ್ತಿ ವೃತ್ತಿಯಲ್ಲಿ ಇಂಜಿನಿಯರ್ ಆಗಿದ್ದವರು. ಟಾಟಾ ಮೋಟಾರ್ಸ್ ನಲ್ಲಿ ಕಾರ್ಯನಿರ್ವಹಿಸಿದ್ದ ಮೊದಲ ಮಹಿಳಾ ಉದ್ಯೋಗಿ ಅವರು. ಅಲ್ಲದೆ, ಅನೇಕ ಕೃತಿಗಳನ್ನು ರಚಿಸಿರುವ ಇವರು, ಉತ್ತಮ ವಾಗ್ಮಿ, ಸಮಾಜಸೇವಕಿ ಕೂಡ ಹೌದು. ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆಯಾಗಿ ಅವರು ಸಮಾಜಕ್ಕೆ ನೀಡಿರುವ ಕೊಡುಗೆ ಅಪಾರ. ಹೀಗಾಗಿ ಅಪ್ಪ-ಅಮ್ಮ ಇಬ್ಬರೂ ಜನಪ್ರಿಯರಾಗಿರುವ ಕುಟುಂಬದಲ್ಲಿ ಜನಿಸಿದ ರೋಹನ್, ಬಾಲ್ಯದಿಂದಲೂ ಮಾಹಿತಿ ತಂತ್ರಜ್ಞಾನ ಕ್ಷೇತ್ರದತ್ತ ಆಸಕ್ತಿ ಬೆಳೆಸಿಕೊಂಡಿದ್ದರು. ಇದಕ್ಕೆ ಮನೆಯಲ್ಲೇ ಕೂಡ ಸೂಕ್ತ ಪ್ರೋತ್ಸಾಹ ದೊರಕಿತ್ತು. ಪ್ರೋಗ್ರಾಮಿಂಗ್ ಬಗ್ಗೆ ರೋಹನ್ ಗೆ ಮೊದಲಿನಿಂದಲೂ ಸಾಕಷ್ಟು ಆಸಕ್ತಿಯಿತ್ತು.
ಅಪ್ಪನನ್ನೇ ಮೀರಿಸಿದ ಮಗಳು: ರಿಲಯನ್ಸ್‌ನ ಎಲ್ಲ ಕಂಪನಿಗಳಿಗಿಂತ ರಿಲಯನ್ಸ್ ರೀಟೇಲ್ ಮೌಲ್ಯವೇ ಹೆಚ್ಚು!
ಬಾಲ್ಯದಿಂದಲೇ ಚುರುಕು ಹಾಗೂ ಜಾಣತನ ಹೊಂದಿದ್ದ ರೋಹನ್ ಮೂರ್ತಿ, ಬೆಂಗಳೂರಿನ ಬಿಷಪ್ ಕಾಟನ್ ಬಾಯ್ಸ್ ಸ್ಕೂಲ್ ನಲ್ಲಿ ಆರಂಭಿಕ ಶಿಕ್ಷಣ ಪೂರ್ಣಗೊಳಿಸಿದರು. ಈ ಶಾಲೆ ರೋಹನ್ ಅವರ ಭವಿಷ್ಯದ ಶೈಕ್ಷಣಿಕ ಬದುಕಿಗೆ ಭದ್ರ ಅಡಿಪಾಯ ಒದಗಿಸಿತು. ಕಂಪ್ಯೂಟರ್ ಸೈನ್ಸ್ ಅಧ್ಯಯನಕ್ಕಾಗಿ ಕಾರ್ನ್ ವೆಲ್ ವಿಶ್ವವಿದ್ಯಾಲಯ ಸೇರಿಸ ರೋಹನ್, ಆ ವಿಷಯದಲ್ಲಿ ಬ್ಯಾಚುಲರ್ ಆಫ್ ಸೈನ್ಸ್ ಪದವಿ ಪಡೆದರು. ಆ ಬಳಿಕ ಹಾರ್ವರ್ಡ್ ವಿಶ್ವವಿದ್ಯಾಲಯದಿಂದ ಕಂಪ್ಯೂಟರ್ ಇಂಜಿನಿಯರಿಂಗ್ ನಲ್ಲಿ ಪಿಎಚ್ ಡಿ ಪದವಿ ಪಡೆದರು.
ಡಾಕ್ಟರೇಟ್ ಪದವಿ ಪಡೆದ ಬಳಿಕ ರೋಹನ್ ಮೂರ್ತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಅನ್ವೇಷಣೆಗಳನ್ನು ಮಾಡುವತ್ತ ಗಮನ ಕೇಂದ್ರೀಕರಿಸಿದರು. 2014ರಲ್ಲಿ ಸೊರೊಕೊ ಎಂಬ ಸಂಸ್ಥೆಯನ್ನು ಕಂಪ್ಯೂಟರ್ ವಿಜ್ಞಾನಿಗಳಾದ ಅರ್ಜುನ್ ನಾರಾಯಣ್ ಹಾಗೂ ಜಾರ್ಜ್ ನೈಚಿಸ್ ಜೊತೆ ಸೇರಿ ಸ್ಥಾಪಿಸಿದರು. ಕೃತಕ ಬುದ್ಧಿಮತ್ತೆಗೆ ಸಂಬಂಧಿಸಿ ಈ ಕಂಪನಿ ಕಾರ್ಯನಿರ್ವಹಿಸುತ್ತಿದೆ. ರೋಹನ್ ಈ ಸ್ಟಾರ್ಟ್ ಅಪ್ ನ ತಾಂತ್ರಿಕ ಕಾರ್ಯಗಳ ನೇತೃತ್ವ ವಹಿಸಿದ್ದಾರೆ.
ಭಾರತದ ಮೊದಲ ಖಾಸಗಿ ಗಿರಿಧಾಮ ಲವಾಸಾ ಖರೀದಿಸಿದ ಮುಂಬೈ ಉದ್ಯಮಿ; ಯಾರು ಈ ಅಜಯ್ ಹರಿನಾಥ್ ಸಿಂಗ್?
ಸೊರೊಕೊ ಕಳೆದ ಒಂದು ವರ್ಷದಿಂದ ವೇಗವಾಗಿ ತನ್ನ ಕಾರ್ಯಕ್ಷೇತ್ರವನ್ನು ವಿಸ್ತರಿಸಿಕೊಳ್ಳುತ್ತಿದೆ. 15 ಬಿಲಿಯನ್ ಡಾಲರ್ ಗಾತ್ರದ ಮಾರುಕಟ್ಟೆಯನ್ನು ಆಕ್ರಮಿಸಿಕೊಳ್ಳುವ ಭರವಸೆಯನ್ನು ಕೂಡ ಈ ಸಂಸ್ಥೆ ಹೊಂದಿದೆ ಎಂದು ಫೋರ್ಬ್ಸ್ ವರದಿ ಮಾಡಿದೆ. 2022ರಲ್ಲಿ ಸೊರೊಕೊ ಸಂಸ್ಥೆ ಆದಾಯ 148 ಕೋಟಿ ರೂ. ಎಂದು NEAT ಅಂದಾಜಿಸಿದೆ. ಆದರೆ, ಸೊರೊಕೊ ಮಾತ್ರ ತನ್ನ ಆದಾಯದ ಬಗ್ಗೆ ಎಲ್ಲೂ ಮಾಹಿತಿಯನ್ನು ಬಹಿರಂಗಪಡಿಸಿಲ್ಲ.
ಇನ್ನು ಎನ್ .ಆರ್. ನಾರಾಯಣಮೂರ್ತಿ ಪುತ್ರನಾಗಿರುವ ಕಾರಣಕ್ಕೆ ರೋಹನ್ ಕೂಡ ಇನ್ಫೋಸಿಸ್ ನಲ್ಲಿ ದೊಡ್ಡ ಪ್ರಮಾಣದ ಷೇರುಗಳನ್ನು ಹೊಂದಿದ್ದಾರೆ. ಇನ್ಫೋಸಿಸ್ ನಲ್ಲಿ 6,08,12,892 ಷೇರುಗಳನ್ನು ರೋಹನ್ ಹೊಂದಿದ್ದು, ಡಿವಿಡೆಂಡ್ ಆದಾಯವಾಗಿ 106.42 ಕೋಟಿ ರೂ. ಗಳಿಸಿದ್ದಾರೆ ಎಂದು ಬ್ಯುಸಿನೆಸ್ ಟುಡೇ ವರದಿ ತಿಳಿಸಿದೆ.