ಷೇರುಪೇಟೆ ಮೌಲ್ಯವೀಗ 219 ಲಕ್ಷ ಕೋಟಿ ರು.!

By Kannadaprabha NewsFirst Published May 25, 2021, 8:03 AM IST
Highlights

* ಷೇರುಪೇಟೆ ಮೌಲ್ಯವೀಗ 219 ಲಕ್ಷ ಕೋಟಿ ರು.!

* ಸಂಪತ್ತು ಸೃಷ್ಟಿ, ಬಿಎಸ್‌ಇ ಮಾರುಕಟ್ಟೆಬಂಡವಾಳ 3 ಲಕ್ಷ ಕೋಟಿ ಡಾಲರ್‌

* ಜಗತ್ತಿನಲ್ಲಿ ಈ ಸಾಧನೆ ಮಾಡಿದ 8ನೇ ದೇಶವೆಂಬ ಹೆಗ್ಗಳಿಕೆ ಭಾರತಕ್ಕೆ

ನವದೆಹಲಿ(ಮೇ.25): ಬಾಂಬೆ ಷೇರುಪೇಟೆ (ಬಿಎಸ್‌ಇ) ಸೋಮವಾರ ಹೊಸ ಮೈಲುಗಲ್ಲೊಂದನ್ನು ಸ್ಥಾಪಿಸಿದ್ದು, ಇಲ್ಲಿ ವಹಿವಾಟು ನಡೆಸುವ 4700ಕ್ಕೂ ಹೆಚ್ಚು ಕಂಪನಿಗಳ ಒಟ್ಟು ಮಾರುಕಟ್ಟೆಬಂಡವಾಳ 3 ಲಕ್ಷ ಕೋಟಿ ಡಾಲರ್‌ (ಅಂದಾಜು 219 ಲಕ್ಷ ಕೋಟಿ ರು.) ದಾಟಿದೆ. ಈ ಮೂಲಕ ಇಂಥ ಸಾಧನೆ ಮಾಡಿದ ವಿಶ್ವದ 8ನೇ ದೇಶವಾಗಿ ಭಾರತ ಹೊರಹೊಮ್ಮಿದೆ.

ಕೋವಿಡ್‌ ಅಲೆಯಿಂದಾಗಿ ಆರ್ಥಿಕ ಚಟುವಟಿಕೆ ಮೇಲೆ ಹೊಡೆತ ಬಿದ್ದಿದ್ದರೂ ದೇಶದ ಕಾರ್ಪೊರೇಟ್‌ ಕಂಪನಿಗಳ ವಹಿವಾಟು ಉನ್ನತ ಮಟ್ಟಕ್ಕೇರಿರುವುದು ವಿಶೇಷ. ಮುಂದಿನ ದಿನಗಳಲ್ಲಿ ಉತ್ತಮ ಆರ್ಥಿಕ ಬೆಳವಣಿಗೆಯ ಆಶಾವಾದವು ಹೂಡಿಕೆದಾರರನ್ನು ನಿರಂತರವಾಗಿ ಷೇರುಪೇಟೆಯಲ್ಲಿ ಹೂಡಿಕೆ ಮಾಡುವಂತೆ ಮಾಡಿದ ಪರಿಣಾಮ ಷೇರುಪೇಟೆ ನಿರಂತರವಾಗಿ ಏರುತ್ತಿದೆ. ಸೋಮವಾರ ಕೂಡ ಸೆನ್ಸೆಕ್ಸ್‌ 111 ಅಂಕಗಳ ಏರಿಕೆ ಕಂಡು 50651 ಅಂಕಗಳಲ್ಲಿ ಮುಕ್ತಾಯವಾಗಿದೆ.

ಈ ಬೆಳವಣಿಗೆ ಕುರಿತು ಹರ್ಷ ವ್ಯಕ್ತಪಡಿಸಿರುವ ಬಿಎಸ್‌ಇ ಸಿಇಒ ಆಶೀಶ್‌ ಕುಮಾರ್‌ ಚೌಹಾಣ್‌, ‘ಬಿಎಸ್‌ಇಯಲ್ಲಿ ನೋಂದಾಯಿತ ಎಲ್ಲಾ ಕಂಪನಿಗಳ ಮಾರುಕಟ್ಟೆಬಂಡವಾಳ ಮೊದಲ ಬಾರಿಗೆ ಸೋಮವಾರ 3 ಲಕ್ಷ ಕೋಟಿ ಡಾಲರ್‌ ಗಡಿಯನ್ನು ದಾಟಿದೆ. ಸುದೀರ್ಘ ಪಯಣದಲ್ಲಿ ಇದೊಂದು ಐತಿಹಾಸಿಕ ಮೈಲುಗಲ್ಲು. ಎಲ್ಲಾ 6.9 ಕೋಟಿ ನೋಂದಾಯಿತ ಹೂಡಿಕೆದಾರರು, 1400ಕ್ಕಿಂತ ಹೆಚ್ಚಿನ ಬ್ರೋಕರ್‌ಗಳು, 69000ಕ್ಕೂ ಹೆಚ್ಚು ಮ್ಯೂಚುವಲ್‌ ಫಂಡ್‌ ಹಂಚಿಕೆದಾರರು ಮತ್ತು 4700ಕ್ಕೂ ಹೆಚ್ಚು ಕಂಪನಿಗಳಿಗೆ ಅಭಿನಂದನೆಗಳು’ ಎಂದು ಹೇಳಿದ್ದಾರೆ.

ಕೋವಿಡ್‌ ಅಲೆಯಲ್ಲೂ ಈ ಸಾಧನೆಗೆ ಕಾರಣ

- ದಿನೇ ದಿನೇ ಸೋಂಕಿನ ಪ್ರಮಾಣ ಇಳಿಕೆ

- ಲಸಿಕೆ ಉತ್ಪಾದನೆ ಹೆಚ್ಚಳವಾಗುತ್ತಿರುವುದು

- ಭವಿಷ್ಯದಲ್ಲಿ ಆರ್ಥಿಕತೆ ಚೇತರಿಕೆಯ ನಿರೀಕ್ಷೆ

ಬಿಎಸ್‌ಇ ಸಾಗಿಬಂದ ಹಾದಿ

2005 ಆಗಸ್ಟ್‌ 500 ಶತಕೋಟಿ ಡಾಲರ್‌

2007 ಮೇ 28 1 ಲಕ್ಷ ಕೋಟಿ ಡಾಲರ್‌

2017 ಜು.10 2 ಲಕ್ಷ ಕೋಟಿ ಡಾಲರ್‌

2021 ಮೇ 24 3 ಲಕ್ಷ ಕೋಟಿ ಡಾಲರ್‌

click me!