ಏನಿದು ಕೆವೈಸಿ ವಂಚನೆ? ಇದರಿಂದ ಬಚಾವಾಗಲು ಏನ್ ಮಾಡ್ಬೇಕು? ಇಲ್ಲಿದೆ ಮಾಹಿತಿ
ಇತ್ತೀಚಿನ ದಿನಗಳಲ್ಲಿ ಕೆವೈಸಿ ವಂಚನೆ ಕೂಡ ಹೆಚ್ಚುತ್ತಿದೆ.ಏನಿದು ಕೆವೈಸಿ ವಂಚನೆ? ಇದನ್ನು ಹೇಗೆ ಮಾಡುತ್ತಾರೆ? ಇದರಿಂದ ಬಚಾವಾಗೋದು ಹೇಗೆ? ಇಲ್ಲಿದೆ ಮಾಹಿತಿ.
Business Desk: ಇತ್ತೀಚಿನ ದಿನಗಳಲ್ಲಿ ವಂಚನೆ ಹೇಗೆ, ಯಾವ ರೂಪದಲ್ಲಿ ನಡೆಯುತ್ತದೆ ಎಂದು ಊಹಿಸೋದು ಕಷ್ಟ. ಸೈಬರ್ ವಂಚನೆ ಪ್ರಕರಣಗಳು ದೇಶಾದ್ಯಂತ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡಿವೆ. ಹೀಗಿರುವಾಗ ಆನ್ ಲೈನ್ ಹಣಕಾಸು ವಹಿವಾಟು ನಡೆಸುವಾಗ ಅಥವಾ ವೈಯಕ್ತಿಕ ಹಾಗೂ ಹಣಕಾಸು ಸಂಬಂಧಿ ಮಾಹಿತಿಗಳ ಬಗ್ಗೆ ಎಷ್ಟು ಸಾಧ್ಯವೋ ಅಷ್ಟು ಎಚ್ಚರ ವಹಿಸೋದು ಅತ್ಯಗತ್ಯ. ಇತ್ತೀಚೆಗೆ ನೋ ಯುವರ್ ಕಸ್ಟಮರ್ ಅಥವಾ ಕೆವೈಸಿ ವಂಚನೆಗಳು ಕೂಡ ನಡೆಯುತ್ತಿವೆ. ಅಂದ್ರೆ ಸೈಬರ್ ವಂಚಕರು ಇತರರ ವೈಯಕ್ತಿಕ ಮಾಹಿತಿಗಳನ್ನು ಬಳಸಿಕೊಂಡು ಹಣಕಾಸು ವಂಚನೆಗಳನ್ನು ಮಾಡುತ್ತಿದ್ದಾರೆ. ಹೆಸರು, ವಿಳಾಸ, ಸರ್ಕಾರಿ ಐಡಿ ಅಥವಾ ಬ್ಯಾಂಕ್ ಮಾಹಿತಿಗಳನ್ನು ಬಳಸಿಕೊಂಡು ಅನಧಿಕೃತ ಖಾತೆಗಳನ್ನು ತೆಗೆಯೋದು ಅಥವಾ ಸಿಮ್ ಖರೀದಿಸಿ ಅದರ ಮೂಲಕ ಕರೆ ಮಾಡಿ ಖಾತೆಯಲ್ಲಿರುವ ಹಣ ಎಗರಿಸೋದು ಮುಂತಾದ ಕೆಲಸಗಳನ್ನು ಮಾಡುತ್ತಿದ್ದಾರೆ. ಹೀಗಾಗಿ ಯಾರೇ ಕರೆ ಮಾಡಿ ನಿಮ್ಮ ಕೆವೈಸಿ ಮಾಹಿತಿಗಳನ್ನು ನೀಡುವಂತೆ ಕೇಳಿದರೆ ಖಂಡಿತಾ ನೀಡಬೇಡಿ. ಹಾಗಾದ್ರೆ ಕೆವೈಸಿ ವಂಚನೆಯಿಂದ ತಪ್ಪಿಸಿಕೊಳ್ಳಲು ಏನೆಲ್ಲ ಎಚ್ಚರಿಕೆ ವಹಿಸಬೇಕು? ಇಲ್ಲಿದೆ ಮಾಹಿತಿ.
ವಂಚಕರು ಸಾಮಾನ್ಯವಾಗಿ ಬ್ಯಾಂಕ್ ಅಧಿಕಾರಿಗಳ ಹೆಸರಿನಲ್ಲಿ ಕರೆ ಮಾಡಿ ಅಥವಾ ಇ-ಮೇಲ್ ಕಳುಹಿಸಿ ವೈಯಕ್ತಿಕ ಹಾಗೂ ಬ್ಯಾಂಕಿಂಗ್ ಮಾಹಿತಿಗಳನ್ನು ನೀಡುವಂತೆ ಕೇಳುತ್ತಾರೆ. ಇಂಥ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಅವರಿಗೆ ಮಾಹಿತಿಗಳನ್ನು ನೀಡಬಾರದು. ಯಾವುದೇ ಬ್ಯಾಂಕ್ ಕರೆ ಮಾಡಿ ಇಂಥ ಮಾಹಿತಿಗಳನ್ನು ಕೇಳೋದಿಲ್ಲ ಎಂಬುದನ್ನು ನೆನಪಿಟ್ಟುಕೊಳ್ಳಿ. ಒಂದು ವೇಳೆ ನಿಮಗೆ ಕೆವೈಸಿ ಮಾಹಿತಿ ನೀಡಲೇಬೇಕಿದ್ದರೆ ಬ್ಯಾಂಕಿಗೆ ನೇರವಾಗಿ ಹೋಗಿ ಕೊಡಿ. ಇನ್ನು ಕೆವೈಸಿ ಅಪ್ಡೇಟ್ ಮಾಡುವಂತೆ ಎಸ್ ಎಂಎಸ್ ಅಥವಾ ಮೇಲ್ ಮೂಲಕ ಯಾವುದೇ ಲಿಂಕ್ ಕಳುಹಿಸಿದ್ದರೆ ಅದರ ಮೇಲೆ ಕ್ಲಿಕ್ ಮಾಡ್ಬೇಡಿ.
ಸೈಬರ್ ವಂಚಕರ ವಿರುದ್ಧ ಸರ್ಕಾರದ ಸಮರ; ಅನುಮಾನಾಸ್ಪದ ಬ್ಯಾಂಕ್ ಖಾತೆ, ಮೊಬೈಲ್ ಬ್ಲಾಕ್ ಗೆ ಚಿಂತನೆ
ಕೆವೈಸಿ ವಂಚನೆ ತಡೆಯಲು ಈ ಕ್ರಮಗಳನ್ನು ಪಾಲಿಸಿ
*ವೈಯಕ್ತಿಕ ಮಾಹಿತಿಗಳ ಬಗ್ಗೆ ಎಚ್ಚರ: ಅತೀಮುಖ್ಯವಾದ ವೈಯಕ್ತಿಕ ಮಾಹಿತಿಗಳನ್ನು ಆನ್ ಲೈನ್ ಅಥವಾ ಮೊಬೈಲ್ ಕರೆ, ಎಸ್ ಎಂಎಸ್ ಮೂಲಕ ಯಾವುದೇ ಕಾರಣಕ್ಕೂ ಹಂಚಿಕೊಳ್ಳಬೇಡಿ. ಅದರಲ್ಲೂ ಅಪರಿಚಿತ ಕರೆಗಳು ಹಾಗೂ ವೆಬ್ಸೈಟ್ ಗಳಲ್ಲಿ ಇಂಥ ಮಾಹಿತಿಗಳನ್ನು ಹಂಚಿಕೊಳ್ಳಲೇಬೇಡಿ. ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳು ನಿಮ್ಮ ಪಿನ್, ಪಾಸ್ ವರ್ಡ್, ಒಟಿಪಿ ಮುಂತಾದ ಮಾಹಿತಿಗಳನ್ನು ಫೋನ್ ಅಥವಾ ಇ-ಮೇಲ್ ಮೂಲಕ ಕೇಳೋದಿಲ್ಲ ಎಂಬುದು ನೆನಪಿರಲಿ.
*ಸುರಕ್ಷಿತ ಡಿಜಿಟಲ್ ಅಭ್ಯಾಸಗಳನ್ನು ರೂಢಿಸಿಕೊಳ್ಳಿ: ವಿವಿಧ ಖಾತೆಗಳಿಗೆ ಪ್ರಬಲ ಹಾಗೂ ವಿಶಿಷ್ಟ ಪಾಸ್ ವರ್ಡ್ ಬಳಸುವ ಮೂಲಕ ನಿಮ್ಮ ಡಿಜಿಟಲ್ ಸುರಕ್ಷತೆ ಭದ್ರಪಡಿಸಿಕೊಳ್ಳಿ. ಯಾವಾಗೆಲ್ಲ ಸಾಧ್ಯವೋ ಆಗ 2-ಫ್ಯಾಕ್ಟರ್ ಅಥೆಂಟಿಕೇಷನ್ ಬಳಸಿ. ಹಾಗೆಯೇ ಕಂಪ್ಯೂಟರ್ ಹಾಗೂ ಸ್ಮಾರ್ಟ್ ಫೋನ್ ಗಳು ಸೇರಿದಂತೆ ನಿಮ್ಮ ಸಾಧನಗಳನ್ನು ಸುರಕ್ಷಿತವಾಗಿಟ್ಟುಕೊಳ್ಳಿ.
*ಮನವಿಗಳ ವಿಶ್ವಾಸಾರ್ಹತೆ ಪರಿಶೀಲಿಸಿ:ಯಾವುದೇ ಮಾಹಿತಿ ಹಂಚಿಕೊಳ್ಳುವ ಮುನ್ನ ಅಥವಾ ವಹಿವಾಟು ಪ್ರಾರಂಭಿಸುವ ಮೊದಲು ನಿಮಗೆ ಕರೆ ಮಾಡಿರುವ ಅಥವಾ ಮಾಹಿತಿ ಕೇಳಿರುವ ಮೊಬೈಲ್ ಸಂಖ್ಯೆ, ವ್ಯಕ್ತಿ ಅಥವಾ ಇ-ಮೇಲ್ ವಿಳಾಸದ ವಿಶ್ವಾಸಾರ್ಹತೆ ಪರೀಕ್ಷಿಸಿ. ವೆನ್ ಸೈಟ್ ಅಥವಾ ಸೇವಾ ಸಂಸ್ಥೆಯ ವಿಶ್ವಾಸಾರ್ಹತೆ ಪರಿಶೀಲಿಸೋದು ಅತ್ಯಗತ್ಯ. ಬ್ಯಾಂಕ್ ಹಾಗೂ ಸಂಬಂಧಿತ ಹಣಕಾಸು ಸಂಸ್ಥೆಗಳನ್ನು ಸಂಪರ್ಕಿಸಿ ನಿಮಗೆ ಕರೆ ಮಾಡಿರುವ ವ್ಯಕ್ತಿ ಅಥವಾ ಬಂದಿರುವ ಇ-ಮೇಲ್ ಐಡಿ ಬಗ್ಗೆ ವಿಚಾರಿಸಲು ಹಿಂಜರಿಕೆ ಬೇಡ.
ಸೈಬರ್ ವಂಚನೆ ತಡೆಗೆ ಹೊಸ ಕ್ರಮ; 4 ಗಂಟೆ ವಿಳಂಬವಾಗಲಿದೆಯಾ 2000ರೂ. ಮೀರಿದ ಯುಪಿಐ ವಹಿವಾಟು?
*ಹಣಕಾಸು ಸ್ಟೇಟ್ಮೆಂಟ್ ಗಳನ್ನು ಆಗಾಗ ಪರಿಶೀಲಿಸಿ: ನಿಮ್ಮ ಬ್ಯಾಂಕ್ ಸ್ಟೇಟ್ಮೆಂಟ್ ಗಳು, ಕ್ರೆಡಿಟ್ ಕಾರ್ಡ್ ಬಿಲ್ ಗಳು ಹಾಗೂ ಹಣಕಾಸು ವಹಿವಾಟುಗಳ ಮೇಲೆ ಒಂದು ಕಣ್ಣಿಡಿ. ಯಾವುದೇ ಅನುಮಾನಾಸ್ಪದ ಅಥವಾ ಅನಧಿಕೃತ ಚಟುವಟಿಕೆ ನಡೆದಿದ್ದರೂ ತಕ್ಷಣ ಬ್ಯಾಂಕಿಗೆ ಈ ಬಗ್ಗೆ ಮಾಹಿತಿ ನೀಡಿ.
*ಮಾಹಿತಿ ಹೊಂದಿರಿ: ಇತ್ತೀಚೆಗೆ ನಡೆಯುತ್ತಿರುವ ವಂಚನೆಗಳ ಬಗ್ಗೆ ಮಾಹಿತಿ ಹೊಂದಿರೋದು ಅಗತ್ಯ. ಈ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿಗಳು ಪ್ರಸಾರವಾಗುತ್ತಲಿರುತ್ತವೆ. ಇತ್ತೀಚೆಗೆ ವಂಚಕರು ವಂಚನೆಗೆ ಹೊಸ ತಂತ್ರಗಳನ್ನು ಬಳಸುತ್ತಿದ್ದಾರೆ. ಹೀಗಾಗಿ ಈ ಬಗ್ಗೆ ಮಾಹಿತಿ ಹೊಂದಿರೋದು ಕೂಡ ಪ್ರಯೋಜನಕಾರಿ.
*ಅನುಮಾನಾಸ್ಪದ ಚಟುವಟಿಕೆ ಬಗ್ಗೆ ವರದಿ ನೀಡಿ: ನಿಮ್ಮ ವೈಯಕ್ತಿಕ ಮಾಹಿತಿ ಅಥವಾ ಹಣಕಾಸು ಖಾತೆಗಳಿಗೆ ಸಂಬಂಧಿಸಿ ಯಾವುದೇ ಅನಧಿಕೃತ ಚಟುವಟಿಕೆ ನಡೆದಿದ್ದರೆ ಆ ಬಗ್ಗೆ ತಕ್ಷಣ ನಿಮ್ಮ ಬ್ಯಾಂಕಿಗೆ ಅಥವಾ ಸಂಬಂಧಪಟ್ಟ ಪ್ರಾಧಿಕಾರಕ್ಕೆ ಮಾಹಿತಿ ನೀಡಿ.