ಸಾಲ ವಸೂಲಿಗೆ ಮಹಿಳೆಯರ ಅಶ್ಲೀಲ ಫೋಟೋ ಸೃಷ್ಟಿಸಿ ಬೆದರಿಕೆ: ಲೋನ್ ಆ್ಯಪ್‌ ವಿರುದ್ಧ ಗಾಯಕಿ ಚಿನ್ಮಯಿ ಶ್ರೀಪಾದ ಆರೋಪ

By Suvarna News  |  First Published Nov 8, 2023, 12:42 PM IST

ನಟಿ ರಶ್ಮಿಕಾ ಮಂದಣ್ಣ ಅವರ ಡೀಪ್ ಫೇಕ್ ವಿಡಿಯೋ ಕೃತಕ ಬುದ್ಧಿಮತ್ತೆ ಅಪಾಯದ ಬಗ್ಗೆ ಭಾರೀ ಚರ್ಚೆ ಹುಟ್ಟು ಹಾಕಿರುವ ಬೆನ್ನಲ್ಲೇ ಗಾಯಕಿ ಚಿನ್ಮಯಿ ಶ್ರೀಪಾದ ಅವರ ಪೋಸ್ಟ್ ವೊಂದು ಸುದ್ದಿಯಾಗಿದೆ. ತಮ್ಮ ಎಕ್ಸ್ ಪೋಸ್ಟ್ ನಲ್ಲಿ ಇವರು ಲೋನ್ ಆ್ಯಪ್‌ ಗಳು ಸಾಲ ವಸೂಲಾತಿಗೆ ಅಶ್ಲೀಲ ಫೋಟೋ ಬಳಸಿ  ಮಹಿಳೆಯರಿಗೆ ಕಿರುಕುಳ ನೀಡುತ್ತಿವೆ ಎಂದು ಆರೋಪಿಸಿದ್ದಾರೆ. 
 


ನವದೆಹಲಿ (ನ.8): ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ವೈರಲ್ ಆಗಿರುವ ನಟಿ ರಶ್ಮಿಕಾ ಮಂದಣ್ಣ ಅವರ ಡೀಪ್‌ಫೆಕ್‌ ವಿಡಿಯೋ ಕೃತಕ ಬುದ್ಧಿಮತ್ತೆ (ಎಐ) ಅಪಾಯದ ಬಗ್ಗೆ ಎಚ್ಚರಿಕೆ ನೀಡಿದೆ. ಇದರ ಬೆನ್ನಲ್ಲೇ ಗಾಯಕಿ ಚಿನ್ಮಯಿ ಶ್ರೀಪಾದ ಶಾಕಿಂಗ್ ಮಾಹಿತಿಯೊಂದನ್ನು ಹಂಚಿಕೊಂಡಿದ್ದಾರೆ. ಅದೇನೆಂದರೆ ಇಂಥ ವಿಡಿಯೋಗಳನ್ನು ಬರೀ ಸೆಲೆಬ್ರೆಟಿಗಳಿಗಷ್ಟೇ ಕಿರುಕುಳ ನೀಡಲು ಸೃಷ್ಟಿಸಲಾಗುತ್ತಿಲ್ಲ. ಬದಲಿಗೆ ಸಾಮಾನ್ಯ ಮಹಿಳೆಯರಿಗೂ ಕೂಡ ಡೀಪ್ ಫೆಕ್ ವಿಡಿಯೋ ಮೂಲಕ ಮಾನಸಿಕ ಹಿಂಸೆ ನೀಡಲಾಗುತ್ತಿದೆ ಎಂದು ಚಿನ್ಮಯಿ ಶ್ರೀಪಾದ ಆರೋಪಿಸಿದ್ದಾರೆ. ಸಾಲ ನೀಡುವ ಅಪ್ಲಿಕೇಷನ್ ಗಳಿಂದ ಸಾಲ ಪಡೆದ ಮಹಿಳೆಯರಿಂದ ಹಣ ಹಿಂಪಡೆಯಲು ಇಂಥ ವಿಡಿಯೋ ಹಾಗೂ ಫೋಟೋ ಮೂಲಕ ಬೆದರಿಕೆ ಹಾಕಲಾಗುತ್ತಿದೆ ಎಂಬ ಮಾಹಿತಿಯನ್ನು ಅವರು ನೀಡಿದ್ದಾರೆ. ರಶ್ಮಿಕಾ ಮಂದಣ್ಣ ಅವರಿಗೆ ಬೆಂಬಲ ನೀಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿರುವ ಗಾಯಕಿ, ಎಐ ತಂತ್ರಜ್ಞಾನ ದುರುಪಯೋಗಪಡಿಸಿಕೊಂಡವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಅಲ್ಲದೆ, ಮಹಿಳೆಯರಿಗೆ ಹಿಂಸೆ ನೀಡಲು, ಬ್ಲ್ಯಾಕ್ ಮೇಲ್ ಮಾಡಲು ಹಾಗೂ ಅತ್ಯಾಚಾರ ನಡೆಸಲು  ಡೀಪ್ ಫೆಕ್ ತಂತ್ರಜ್ಞಾನವನ್ನು ಮುಂದಿನ ಆಯುಧವಾಗಿ ಬಳಸಲಾಗುತ್ತದೆ ಎಂಬ ಎಚ್ಚರಿಕೆ ನೀಡಿದ್ದಾರೆ. 

'ಹುಡುಗಿಯರನ್ನು ಹಿಂಸಿಸಲು, ಬ್ಲ್ಯಾಕ್ ಮೇಲ್ ಮಾಡಲು ಹಾಗೂ ಅತ್ಯಾಚಾರ ನಡೆಸಲು ಡೀಪ್ ಫೇಕ್ ಭವಿಷ್ಯದ ಆಯುಧವಾಗುವ ಸಾಧ್ಯತೆಯಿದೆ. ಒಂದು ಪುಟ್ಟ ಹಳ್ಳಿ ಅಥವಾ ನಗರದಲ್ಲಿ ಲೆಕ್ಕವಿಲ್ಲದಷ್ಟು ಕುಟುಂಬಗಳು ತಮ್ಮ ಮಾನವನ್ನು ಕೈಯಲ್ಲಿ ಹಿಡಿದು ಯಾವಾಗ ಹರಾಜರಾಗುತ್ತದೋ ಎಂಬ ಭಯದಲ್ಲಿ ಬದುಕುತ್ತಿವೆ' ಎಂದು ಗಾಯಕಿ ಎಕ್ಸ್ ನಲ್ಲಿ (ಹಿಂದಿನ ಟ್ವಿಟ್ಟರ್ ) ತಿಳಿಸಿದ್ದಾರೆ. ಲೋನ್ ಅಪ್ಲಿಕೇಷನ್ ಗಳಿಂದ ಸಾಲ ಪಡೆದ ಮಹಿಳೆಯರಿಂದ ಹಣ ವಸೂಲಿ ಮಾಡಲು ಕಲೆಕ್ಟರ್ ಗಳು ಅವರ ಫೋಟೋಗಳನ್ನು 'ಪೋರ್ನ್ ಫೋಟೋಗಳಂತೆ' ಎಡಿಟ್ ಮಾಡಿ ಬೆದರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಶ್ರೀಪಾದ ಶಾಕಿಂಗ್ ಮಾಹಿತಿ ಬಹಿರಂಗಪಡಿಸಿದ್ದಾರೆ.

Tap to resize

Latest Videos

undefined

ರಶ್ಮಿಕಾ ಮಂದಣ್ಣ ಡೀಪ್‌ಫೇಕ್ ವಿಡಿಯೋ ವೈರಲ್‌: ನಕಲಿ ವಿಡಿಯೋ ಗುರುತಿಸೋದು ಹೇಗೆ ತಿಳ್ಳೊಳ್ಳಿ..!

ಅಂದಹಾಗೇ ಈ ಹಿಂದೆ ಕೂಡ ಸಾಲ ವಸೂಲಾತಿ ಮಾಡಲು ಲೋನ್ ಆಪ್ ಗಳು ಮಹಿಳೆಯರ ಫೋಟೋಗಳನ್ನು ಅಶ್ಲೀಲವಾಗಿ ಎಡಿಟ್ ಮಾಡಿ ಬೆದರಿಸಿದ ಅನೇಕ ಪ್ರಕರಣಗಳು ಕೂಡ ವರದಿಯಾಗಿವೆ. ಚೀನಾ ಮೂಲದ ಲೋನ್ ಆಪ್ ಗಳು ಕೂಡ ಇಂಥ ಕೃತ್ಯ ಮಾಡಿರೋದು ಬಹಿರಂಗವಾಗಿತ್ತು. 

'ಪರಿಣತಿ ಹೊಂದಿಲ್ಲದವರಿಗೆ ಡೀಪ್ ಫೇಕ್ ಫೋಟೋ ಅಥವಾ ವಿಡಿಯೋ ಗುರುತಿಸೋದು ಕಷ್ಟದ ಕೆಲಸ. ಹೀಗಾಗಿ ಈ ಬಗ್ಗೆ ರಾಷ್ಟ್ರವ್ಯಾಪಿ ಜಾಗೃತಿ ಅಭಿಯಾನ ಕೈಗೊಂಡು ಯುವತಿಯರಿಗೆ ಡೀಪ್ ಫೇಕ್ ಹೇಗೆ ಅಪಾಯಕಾರಿಯಾಗಿದೆ ಎಂಬ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕಾದ ಅಗತ್ಯವಿದೆ. ಹಾಗೆಯೇ ಇಂಥ ಘಟನೆಗಳು ನಡೆದಾಗ ಆ ಬಗ್ಗೆ ಪೊಲೀಸರಿಗೆ ವರದಿ ಮಾಡಬೇಕು' ಎಂದು ಚಿನ್ಮಯಿ ಶ್ರೀಪಾದ ತಮ್ಮ ಪೋಸ್ಟ್ ನಲ್ಲಿ ಸಲಹೆ ನೀಡಿದ್ದಾರೆ.

ನಟಿ ರಶ್ಮಿಕಾ ಮಂದಣ್ಣ ಅರೆಬರೆ ಬಟ್ಟೆಯಲ್ಲಿ ಲಿಫ್ಟ್‌ಗೆ ಹೋಗುತ್ತಿರುವುದನ್ನು ತೋರಿಸುವ ವಿಡಿಯೋವೊಂದು ಅಂತರ್ಜಾಲದಲ್ಲಿ ಇತ್ತೀಚೆಗೆ ವಿವಾದದ ಕಿಚ್ಚು ಹೊತ್ತಿಸಿತ್ತು. ಈ ಬಗ್ಗೆ ನಟಿ ತಮ್ಮ ಎಕ್ಸ್ ನಲ್ಲಿ ಬರೆದುಕೊಂಡು ಬೇಸರ ವ್ಯಕ್ತಪಡಿಸಿದ್ದರು. ನಾವೆಲ್ಲರೂ ಸೇರಿ ಇಂಥಹ ವೈಯಕ್ತಿಕ ತೇಜೋವಧೆಯ ಕೃತ್ಯ ಹಾಗೂ ದುಃಷ್ಪರಿಣಾಮಗಳನ್ನು ಸಾಮೂಹಿಕವಾಗಿ ಖಂಡಿಸಬೇಕಿದೆ ಎಂದು ಕೂಡ ಅವರು ಬರೆದುಕೊಂಡಿದ್ದರು. ಅವರ ಈ ಪೋಸ್ಟ್ ಗೆ ಸಾಕಷ್ಟು ಮಂದಿ ಬೆಂಬಲ ವ್ಯಕ್ತಪಡಿಸಿದ್ದರು. 

ಸ್ಕೂಲ್ ಅಥವಾ ಕಾಲೇಜಿನಲ್ಲಿ ಹೀಗೆ ನನ್ನ ಅಶ್ಲೀಲ ವಿಡಿಯೋ ವೈರಲ್ ಆಗಿದ್ದರೆ ಗತಿ ಏನಾಗಿರುತ್ತಿತ್ತೋ!

ಆರಂಭದಲ್ಲಿ ಈ ವಿಡಿಯೋ ನೋಡಿದ್ರೆ ಅಸಲಿ ಎಂದೇ ಕಾಣಿಸಿಕೊಳ್ಳುತ್ತದೆ. ಆದರೆ, ವಾಸ್ತವವಾಗಿ, ರಶ್ಮಿಕಾ ಮಂದಣ್ಣ ವಿಡಿಯೋ 'ಡೀಪ್‌ಫೇಕ್' ಆಗಿದೆ. ಮೂಲ ವಿಡಿಯೋದಲ್ಲಿ ಬ್ರಿಟಿಷ್ ಭಾರತೀಯ ಹುಡುಗಿ ಜಾರಾ ಪಟೇಲ್ ಕಾಣಿಸಿಕೊಂಡಿದ್ದು, ರಶ್ಮಿಕಾ ಮುಖವನ್ನು ಸೇರಿಸಲು ಆಕೆಯ ಮುಖವನ್ನು ಮಾರ್ಫ್ ಮಾಡಲಾಗಿದೆ ಎಂದು ತಿಳಿದುಬಂದಿದೆ.ಇನ್ನು ರಶ್ಮಿಕಾ ಮಂದಣ್ಣ ಅವರ ಡೀಪ್ ಫೇಕ್ ವಿಡಿಯೋ ವೈರಲ್ ಆದ ಬೆನ್ನಲ್ಲೇ ಬಾಲಿವುಡ್ ನಟಿ ಕತ್ರಿನಾ ಕೈಫ್ ಅವರ ತಿರುಚಿದ ಡೀಪ್‌ಫೇಕ್ ಫೋಟೊವೊಂದು ವೈರಲ್ ಆಗಿದೆ. 

ನಟಿ ರಶ್ಮಿಕಾ ಮಂದಣ್ಣರ ಡೀಪ್ ಫೇಕ್‌ ವಿಡಿಯೋ (Deep Fake video) ವೈರಲ್ ಆದ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಿಗೆ ಮತ್ತೊಮ್ಮೆ ಎಚ್ಚರಿಕೆ ಸಂದೇಶ ರವಾನಿಸಿರುವ ಕೇಂದ್ರ ಸರ್ಕಾರ, ಇಂಥ ನಕಲಿ ಫೋಟೋ, ವಿಡಿಯೋ, ಕುರಿತು ದೂರು ಸಲ್ಲಿಕೆಯಾದ 24 ಗಂಟೆಗಳಲ್ಲಿ ಅವುಗಳನ್ನು ತೆಗೆದು ಹಾಕಬೇಕು ಎಂದು ಗಡುವು ನೀಡಿದೆ,

click me!