ಗ್ರಾಹಕರು ಕರೆದ ಕಡೆ ಬಾರದ 918 ಆಟೋ ಚಾಲಕರ ಲೈಸನ್ಸ್‌ ರದ್ದು!

By Web Desk  |  First Published Aug 15, 2019, 12:02 PM IST

ಗ್ರಾಹಕರು ಕರೆದ ಕಡೆ ಬಾರದ 918 ಆಟೋ ಚಾಲಕರ ಲೈಸನ್ಸ್‌ ರದ್ದು!| ಗ್ರಾಹಕರ ಸೇವೆ ಮೇಲ್ದರ್ಜೆಗೇರಿಸಲು ಸಾರಿಗೆ ಇಲಾಖೆ ಕ್ರಮ


ಮುಂಬೈ[ಆ.15]: ಗ್ರಾಹಕರು ಕರೆದ ಕಡೆಗೆ ಸೇವೆ ನೀಡಲು ನಿರಾಕರಿಸುವ ಆಟೋ-ರಿಕ್ಷಾ ಚಾಲಕರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿರುವ ಮಹಾರಾಷ್ಟ್ರದ ಸಾರಿಗೆ ಇಲಾಖೆ, ಗ್ರಾಹಕರಿಗೆ ಸೇವೆ ನಿರಾಕರಿಸಿದ 918 ಆಟೋ ಚಾಲಕರ ಚಾಲನಾ ಪರವಾನಗಿಯನ್ನೇ ರದ್ದುಗೊಳಿಸಿದೆ. ಸಾರ್ವಜನಿಕರ ಸೇವೆಯನ್ನು ಮೇಲ್ದರ್ಜೆಗೇರಿಸುವ ನಿಟ್ಟಿನಲ್ಲಿ ಇದೇ ಮೊದಲ ಬಾರಿಗೆ ಮಹಾರಾಷ್ಟ್ರ ಸಾರಿಗೆ ಇಲಾಖೆ ಈ ಕ್ರಮ ಕೈಗೊಂಡಿದೆ.

ಈ ಬಗ್ಗೆ ಬುಧವಾರ ಪ್ರತಿಕ್ರಿಯಿಸಿದ ಸಾರಿಗೆ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು, ‘ಮುಂಬೈ ಮತ್ತು ಥಾಣೆಗಳಲ್ಲಿ ಇದುವರೆಗೂ ನಕಲಿ ದಾಖಲೆಗಳನ್ನು ಸಲ್ಲಿಸಿ ಪಡೆಯಲಾದ ಡ್ರೈವಿಂಗ್‌ ಲೈಸನ್ಸ್‌ಗಳನ್ನು ರದ್ದುಗೊಳಿಸಲಾಗುತ್ತಿತ್ತು. ಆದರೆ, ಇದೇ ಮೊದಲ ಬಾರಿಗೆ ಗ್ರಾಹಕರು ಕರೆದ ಕಡೆ ಬಾರದೇ ಇರುವ ಆಟೋ ಚಾಲಕರ ಲೈಸನ್ಸ್‌ ರದ್ದುಗೊಳಿಸಲಾಗಿದೆ’ ಎಂದಿದ್ದಾರೆ.

Latest Videos

ಸಾರಿಗೆ ಆಯುಕ್ತ ಶೇಖರ್‌ ಚನ್ನೆ ಅವರು ಇತ್ತೀಚೆಗಷ್ಟೇ ಮುಂಬೈ ಮತ್ತು ಥಾಣೆಗಳಲ್ಲಿ ಗ್ರಾಹಕರು ಕರೆದ ಕಡೆಗೆ ಹೋಗಲು ನಿರಾಕರಿಸುವ ಆಟೋ ಚಾಲಕರ ವಿರುದ್ಧದ ಈ ಕಾರ್ಯಾಚರಣೆ ಕೈಗೊಂಡಿದ್ದರು. ಅಲ್ಲದೆ, ಕಳೆದ 6 ತಿಂಗಳ ಅವಧಿಯಲ್ಲಿ ಹಲವು ಸಂಚಾರ ನಿಯಮ ಉಲ್ಲಂಘಿಸಿದ 12,342 ಆಟೋ ಚಾಲಕರ ಚಾಲನಾ ಪರವಾನಗಿಯನ್ನು ಸ್ಥಳೀಯ ಸಾರಿಗೆ ಕಚೇರಿ(ಆರ್‌ಟಿಒ) ಅಮಾನತು ಮಾಡಿದೆ ಎಂದು ಮತ್ತೋರ್ವ ಅಧಿಕಾರಿ ತಿಳಿಸಿದರು.

click me!