*BSEಯಲ್ಲಿ 949 ರೂ.ವಿತರಣ ಬೆಲೆಯ ಎಲ್ಐಸಿ ಷೇರು 867.20 ರೂ.ಗೆ ಲಿಸ್ಟ್
*NSEಯಲ್ಲಿ ಎಲ್ಐಸಿ ಪ್ರತಿ ಷೇರು ಶೇ.8.11ರಷ್ಟು ಕಡಿಮೆ ಬೆಲೆ ಅಂದ್ರೆ 872ರೂ.ಗೆ ಲಿಸ್ಟ್ ಆಗಿದೆ.
* ಕೆಲವೇ ನಿಮಿಷಗಳಲ್ಲಿ 42,500 ಕೋಟಿ ರೂ. ಕಳೆದುಕೊಂಡ ಹೂಡಿಕೆದಾರರು
ಮುಂಬೈ (ಮೇ 17): ಭಾರತೀಯ ಜೀವ ವಿಮಾ ನಿಗಮದ (LIC) ಷೇರುಗಳು ಮಂಗಳವಾರ ಷೇರು ಮಾರುಕಟ್ಟೆಗೆ (Stock Market) ಪದಾರ್ಪಣೆ ಮಾಡಿದ್ದು,ವಿತರಣೆ ಬೆಲೆಗಿಂತ (Issue price) ಶೇ.8.62ರಷ್ಟು ಕಡಿಮೆ ದರಕ್ಕೆ ಲಿಸ್ಟಿಂಗ್ (Listing) ಆಗಿವೆ. ಎಲ್ಐಸಿ ಐಪಿಒನಲ್ಲಿ ಪ್ರತಿ ಷೇರಿನ ವಿತರಣ ಬೆಲೆ 949 ರೂ.ನಿಗದಿಪಡಿಸಲಾಗಿತ್ತು. ಆದ್ರೆ ಬಾಂಬೆ ಸ್ಟಾಕ್ ಎಕ್ಸ್ ಚೇಂಜ್ ನಲ್ಲಿ (BSE) ಎಲ್ಐಸಿಯ ಪ್ರತಿ ಷೇರು 867.20 ರೂ.ಗೆ ಲಿಸ್ಟ್ ಆಗಿದೆ.ಹಾಗೆಯೇ ನ್ಯಾಷನಲ್ ಸ್ಟಾಕ್ ಎಕ್ಸ್ ಚೇಂಜ್ ನಲ್ಲಿ (NSE) ಶೇ.8.11ರಷ್ಟು ಕಡಿಮೆ ಬೆಲೆ ಅಂದ್ರೆ ಪ್ರತಿ ಷೇರು 872ರೂ.ಗೆ ಲಿಸ್ಟ್ ಆಗಿದೆ. ಪರಿಣಾಮ ಹೂಡಿಕೆದಾರರು (Investors) ಕೆಲವೇ ನಿಮಿಷಗಳಲ್ಲಿ 42,500 ಕೋಟಿ ರೂ. ಕಳೆದುಕೊಂಡಿದ್ದಾರೆ.
ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯದ ಸಾರ್ವಕಾಲಿಕ ಕುಸಿತ, ಹಣದುಬ್ಬರ ಏರಿಕೆ ಹಾಗೂ ಹಣದುಬ್ಬರ ಏರಿಕೆಗೆ ಕಡಿವಾಣ ಹಾಕಲು ಕೇಂದ್ರ ಬ್ಯಾಂಕುಗಳು ಬಡ್ಡಿದರ ಏರಿಕೆ ಮಾಡುತ್ತಿರುವ ಕಾರಣ ಹೂಡಿಕೆದಾರರಲ್ಲಿ ಆತಂಕ ಮನೆ ಮಾಡಿದೆ. ಆದ್ರೆ, ಭಾರತದ ಷೇರು ಮಾರುಕಟ್ಟೆಗಳಲ್ಲಿ ಇಂದು (ಮೇ 17) ಕೂಡ ಸೂಚ್ಯಂಕಗಳು ಸತತ ಏರಿಕೆ ದಾಖಲಿಸುತ್ತಿವೆ.
21,000 ಕೋಟಿ ರೂ. ಗಾತ್ರದ ಭಾರತದ ಅತೀದೊಡ್ಡ ಐಪಿಒ ಎಂಬ ಹೆಗ್ಗಳಿಕೆ ಗಳಿಸಿದ ಎಲ್ಐಸಿ ಐಪಿಒ ಮೇ 4 ರಿಂದ ಮೇ 9 ರ ತನಕ ಒಟ್ಟು 6 ದಿನಗಳ ಕಾಲ ನಡೆದಿತ್ತು. ಈ ಐಪಿಒಗೆ ಹೂಡಿಕೆದಾರರಿಂದ ಭರ್ಜರಿ ಸ್ಪಂದನೆ ಸಿಕ್ಕಿತು. ಆರು ದಿನಗಳ ಬಿಡ್ಡಿಂಗ್ ನ ಕೊನೆಯಲ್ಲಿ ಎಲ್ಐಸಿ ಷೇರುಗಳು 2.95 ಬಾರಿ ಸಬ್ ಸ್ಕ್ರೈಬ್ ಆಗಿವೆ. ಷೇರುಗಳು ಅತ್ಯಧಿಕ ಬೆಲೆ ಶ್ರೇಣಿಯಲ್ಲಿ ಮಾರಾಟವಾಗುವ ಜೊತೆಗೆ ಸ್ಥಳೀಯ ಹೂಡಿಕೆದಾರರಿಂದ ಭಾರೀ ಬೇಡಿಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಈ ಐಪಿಒ ಮೂಲಕ ಕೇಂದ್ರ ಸರ್ಕಾರ 20,500 ಕೋಟಿ ರೂ. ಸಂಗ್ರಹಿಸಿದೆ. 16.2 ಕೋಟಿ ಈಕ್ವಿಟಿ ಷೇರುಗಳ ಗಾತ್ರದ ಐಪಿಒಗೆ 47.83 ಕೋಟಿ ಬಿಡ್ಡಿಂಗ್ ಗಳು ಸಲ್ಲಿಕೆ ಆಗಿವೆ.
ಎಲ್ಐಸಿ ಪಾಲಿಸಿದಾರರಿಗೆ ಮೀಸಲಿಟ್ಟ ಷೇರುಗಳು 6.11 ಬಾರಿ ಸಬ್ ಸ್ಕ್ರೈಬ್ ಆಗಿವೆ. ಉದ್ಯೋಗಿಗಳ ಮೀಸಲು ಕೋಟಾದಡಿ 4.39 ಬಾರಿ ಹಾಗೂ ರಿಟೇಲ್ ಹೂಡಿಕೆದಾರರ ಕೋಟಾದಡಿ 1.99 ಬಾರಿ ಚಂದಾದಾರಿಕೆ ಆಗಿವೆ. ಇನ್ನು ಅರ್ಹ ಸಾಂಸ್ಥಿಕ ಹೂಡಿಕೆದಾರರಿಗೆ ಮೀಸಲಿಟ್ಟ ಷೇರುಗಳು 2.83 ಬಾರಿ ಬುಕ್ ಆಗಿದ್ದರೆ, ಸಾಂಸ್ಥಿಕವಲ್ಲದ ಹೂಡಿಕೆದಾರರ ವಿಭಾಗದಲ್ಲಿ 2.91 ಬಾರಿ ಸಬ್ ಸ್ಕ್ರೈಬ್ ಆಗಿವೆ. ಮೇ 12ರಂದು ಬಿಡ್ ಸಲ್ಲಿಕೆ ಮಾಡಿದ ಹೂಡಿಕೆದಾರರ ಖಾತೆಗಳಿಗೆ ಷೇರುಗಳ ಹಂಚಿಕೆಯಾಗಿತ್ತು.
ಎಲ್ಐಸಿ ಐಪಿಒನಲ್ಲಿ ಪ್ರತಿ ಈಕ್ವಿಟಿ ಷೇರಿಗೆ (equity share) 902ರೂ. ನಿಂದ 949ರೂ. ಬೆಲೆ (Price band) ನಿಗದಿಪಡಿಸಲಾಗಿತ್ತು. ಹೂಡಿಕೆದಾರರಿಗೆ ಷೇರುಗಳ ಹಂಚಿಕೆ ಸಮಯದಲ್ಲಿ ಎಲ್ಐಸಿ ಪ್ರತಿ ಷೇರಿಗೆ ನಿಗದಿತ ಶ್ರೇಣಿಯ ಅತ್ಯಧಿಕ ಬೆಲೆ 949 ರೂ. ಗೆ ನಿಗದಿಪಡಿಸಿತ್ತು. ಎಲ್ ಐಸಿ ಪಾಲಿಸಿದಾರರಿಗೆ (Policyholders) ಪ್ರತಿ ಷೇರಿನ ಮೇಲೆ 60ರೂ. ಡಿಸ್ಕೌಂಟ್ (Discount)ನೀಡಲಾಗಿತ್ತು. ಇನ್ನು ಎಲ್ಐಸಿ ಸಿಬ್ಬಂದಿ (employees) ಹಾಗೂ ರಿಟೇಲ್ ಹೂಡಿಕೆದಾರರಿಗೆ (Retail Investors) ಪ್ರತಿ ಷೇರಿನ ಮೇಲೆ 45ರೂ. ಡಿಸ್ಕೌಂಟ್ ನೀಡಲಾಗಿತ್ತು. ಹೀಗಾಗಿ ಎಲ್ಲ ಪಾಲಿಸಿದಾರರು ಹಾಗೂ ರಿಟೇಲ್ ಹೂಡಿಕೆದಾರರು ಪ್ರತಿ ಷೇರಿಗೆ ಕ್ರಮವಾಗಿ 889 ರೂ. ಹಾಗೂ 904 ರೂ. ಬೆಲೆಯಲ್ಲಿ ಷೇರುಗಳನ್ನು ಖರೀದಿಸಿದ್ದಾರೆ.