ಎಲ್ಐಸಿ ಹೊಸ ವಿಮಾ ಯೋಜನೆಗಳನ್ನು ಆಗಾಗ ಪರಿಚಯಿಸುತ್ತಲಿರುತ್ತದೆ. ಅದರಂತೆ ಹೊಸ ಬಿಮಾ ಬಚತ್ ಯೋಜನೆಯನ್ನು ಪರಿಚಯಿಸಿದೆ. ಇದು ಪಾಲಿಸಿದಾರರಿಗೆ ಹಾಗೂ ಅವರ ಆಕಸ್ಮಿಕ ಮರಣ ಅಥವಾ ಅಂಗವೈಕಲ್ಯದ ಸಂದರ್ಭದಲ್ಲಿ ಕುಟುಂಬಕ್ಕೆ ಹಣಕಾಸಿನ ಸುರಕ್ಷತೆ ಒದಗಿಸುತ್ತದೆ.
Business Desk:ಭಾರತೀಯ ಜೀವ ವಿಮಾ ನಿಗಮ (ಎಲ್ ಐಸಿ) ಆಗಾಗ ಹೊಸ ವಿಮಾ ಯೋಜನೆಗಳನ್ನು ಪರಿಚಯಿಸುತ್ತಲೇ ಇರುತ್ತದೆ. ವಯಸ್ಸು, ಆದಾಯ ಇತ್ಯಾದಿ ಆಧಾರದಲ್ಲಿ ಆಯಾ ವರ್ಗದ ಜನರಿಗೆ ಸರಿಹೊಂದುವ ಪಾಲಿಸಿಗಳನ್ನು ಎಲ್ಐಸಿ ರೂಪಿಸುತ್ತದೆ. ಎಲ್ಐಸಿಯ ಹೊಸ ಬಿಮಾ ಬಚತ್ ಪ್ಲ್ಯಾನ್ ಉಳಿತಾಯ ಹಾಗೂ ವಿಮಾ ಯೋಜನೆಯಾಗಿದೆ. ಈ ಯೋಜನೆ ಪಾಲಿಸಿದಾರರಿಗೆ ಹಾಗೂ ಅವರ ಆಕಸ್ಮಿಕ ಮರಣ ಅಥವಾ ಅಂಗವೈಕಲ್ಯದ ಸಂದರ್ಭದಲ್ಲಿ ಕುಟುಂಬಕ್ಕೆ ಹಣಕಾಸಿನ ಸುರಕ್ಷತೆ ಒದಗಿಸುತ್ತದೆ. ಇನ್ನು ಪಾಲಿಸಿ ಅವಧಿ ಮುಗಿದ ಬಳಿಕ ಪಾಲಿಸಿದಾರರಿಗೆ ಮೆಚ್ಯುರಿಟಿ ಪ್ರಯೋಜನಗಳನ್ನು ಕೂಡ ಈ ಯೋಜನೆ ನೀಡುತ್ತದೆ. ಹೊಸ ಬಿಮಾ ಬಚತ್ ಪ್ಲ್ಯಾನ್ ಅವಧಿ, ಪ್ರೀಮಿಯಂ ಪಾವತಿ ಆಯ್ಕೆ ಹಾಗೂ ಭರವಸೆ ನೀಡಿರುವ ಮೊತ್ತ ಈ ಎಲ್ಲವನ್ನೂ ಆಯ್ಕೆ ಮಾಡಲು ಪಾಲಿಸಿದಾರರಿಗೆ ಸಾಕಷ್ಟು ಅವಕಾಶಗಳಿವೆ. ಭರವಸೆ ನೀಡಿರುವ ಮೊತ್ತವನ್ನು ಪ್ರತಿ ವರ್ಷ ನಿಗದಿತ ಶೇಕಡವಾರು ಏರಿಕೆ ಮಾಡಲು ಕೂಡ ಅವಕಾಶವಿದೆ. ಆ ಮೂಲಕ ಪಾಲಿಸಿದಾರರಿಗೆ ಸಮಯ ಕಳೆದಂತೆ ಹೆಚ್ಚಿನ ಸುರಕ್ಷತೆ ಒದಗಿಸಲು ಸಾಧ್ಯವಾಗಲಿದೆ. ಇನ್ನು ಪಾಲಿಸಿ ಅವಧಿ ಮುಗಿದ ಬಳಿಕ ಮೆಚ್ಯುರಿಟಿ ಪ್ರಯೋಜನ ಪಡೆಯಲು ಅವಕಾಶವಿದೆ. ಪಾಲಿಸಿ ಅವಧಿ ಮುಗಿದ ಬಳಿಕ ಪಾಲಿಸಿದಾರನಿಗೆ ಭರವಸೆ ನೀಡಿರುವ ಮೊತ್ತದ ಜೊತೆಗೆ ಪಾಲಿಸಿ ಅವಧಿಯಲ್ಲಿ ಸಂಗ್ರಹವಾದ ಬೋನಸ್ ಕೂಡ ನೀಡಲಾಗುತ್ತದೆ. ಇದು ಪಾಲಿಸಿದಾರರು ಹಾಗೂ ಅವರ ಕುಟುಂಬಗಳಿಗೆ ಉಳಿತಾಯ ಹಾಗೂ ಆರ್ಥಿಕ ಭದ್ರತೆಗೆ ಮೌಲ್ಯಯುತ ಮೂಲವೊಂದನ್ನು ಒದಗಿಸುತ್ತದೆ.
ಅರ್ಜಿ ಸಲ್ಲಿಕೆ ಹೇಗೆ?
ಹೊಸ ಬಿಮಾ ಬಚಾತ್ ಪ್ಲ್ಯಾನ್ ಗೆ ಅರ್ಜಿ ಸಲ್ಲಿಕೆಗೆ ಸಮೀಪದ ಎಲ್ಐಸಿ ಶಾಖೆ ಅಥವಾ ಎಲ್ಐಸಿ ಏಜೆಂಟ್ ಅನ್ನು ಸಂಪರ್ಕಿಸಬಹುದು. ಅರ್ಜಿ ಭರ್ತಿ ಹಾಗೂ ಗುರುತು ಹಾಗೂ ವಯಸ್ಸಿನ ದೃಢೀಕರಣ ದಾಖಲೆಗಳನ್ನು ನೀಡಬೇಕಾಗುತ್ತದೆ. 8 ಹಾಗೂ 55 ವಯಸ್ಸಿನ ನಡುವಿನವರು ಈ ಪ್ಲ್ಯಾನ್ ಗೆ ಅರ್ಜಿ ಸಲ್ಲಿಕೆ ಮಾಡಲು ಅರ್ಹರಾಗಿದ್ದಾರೆ.
ಒಂದೇ ಒಂದು ರಿಪೋರ್ಟ್, 1.44 ಲಕ್ಷ ಕೋಟಿ ಕಳೆದುಕೊಂಡ ಗೌತಮ್ ಅದಾನಿ!
ಪ್ರೀಮಿಯಂ ಎಷ್ಟು?
ಹೊಸ ಬಿಮಾ ಬಚತ್ ಪ್ಲ್ಯಾನ್ ಪ್ರೀಮಿಯಂ ಅನ್ನು ಪಾಲಿಸಿದಾರರ ವಯಸ್ಸು, ಭರವಸೆ ನೀಡಿರುವ ಮೊತ್ತ ಹಾಗೂ ಪಾಲಿಸಿ ಅವಧಿ ಆಧಾರದಲ್ಲಿ ನಿರ್ಧರಿಸಲಾಗುತ್ತದೆ. ಪಾಲಿಸಿದಾರರು ಪ್ರೀಮಿಯಂ ಅನ್ನು ಮಾಸಿಕ, ತ್ರೈಮಾಸಿಕ, ಅರ್ಧವಾರ್ಷಿಕ ಹಾಗೂ ವಾರ್ಷಿಕ ಆಧಾರದಲ್ಲಿ ಪಾವತಿಸಬಹುದು.
1791ರೂ. ಹೂಡಿಕೆ ಮಾಡಿ 5ಲಕ್ಷ ಗಳಿಸೋದು ಹೇಗೆ?
ನೀವು 5ಲಕ್ಷ ರೂ. ಮೊತ್ತದ ಪಾಲಿಸಿಯನ್ನು 20 ವರ್ಷಗಳ ಅವಧಿಗೆ ಖರೀದಿಸಿದ್ರೆ, ವಾರ್ಷಿಕ ಅಂದಾಜು 21,500ರೂ. ಪ್ರೀಮಿಯಂ ಪಾವತಿಸಬೇಕಾಗುತ್ತದೆ. ಅಂದ್ರೆ ತಿಂಗಳಿಗೆ 1,791ರೂ. ಪ್ರೀಮಿಯಂ ಪಾವತಿಸಬೇಕು. ಪಾಲಿಸಿ ಅವಧಿ ಮುಗಿದ ಬಳಿಕ ನಿಮಗೆ 5 ಲಕ್ಷ ರೂ. ಮೊತ್ತದ ಜೊತೆಗೆ ಬೋನಸ್ ಕೂಡ ಸಿಗಲಿದೆ. ಒಂದು ವೇಳೆ ಪಾಲಿಸಿ ಅವಧಿಯಲ್ಲಿ ನೀವು ನಿಧನರಾದ್ರೆ ನಿಮ್ಮ ನಾಮಿನಿಗೆ 5 ಲಕ್ಷ ರೂ. ಸಿಗಲಿದೆ.
ಬಜೆಟ್‌ನಲ್ಲಿ ಮಧ್ಯಮ ವರ್ಗಕ್ಕೆ ಬಂಪರ್?
ವಾಟ್ಸ್ಆ್ಯಪ್ ಸೇವೆ
ಎಲ್ಐಸಿ ಪೋರ್ಟಲ್ ನಲ್ಲಿ ಪಾಲಿಸಿಗಳನ್ನು ನೋಂದಣಿ ಮಾಡಿಸಿರೋರು ವಾಟ್ಸ್ಆ್ಯಪ್ ನಲ್ಲಿ ನಿಗದಿತ ಸೇವೆಗಳನ್ನು ಮನೆಯಲ್ಲೇ ಕುಳಿತು ಪಡೆಯಬಹುದು. ಪ್ರೀಮಿಯಂ ಬಾಕಿ, ಬೋನಸ್ ಮಾಹಿತಿ, ಪಾಲಿಸಿ ವಿವರ, ಸಾಲದ ಮರುಪಾವತಿ, ಸಾಲದ ಬಡ್ಡಿ ಸೇರಿದಂತೆ ಅನೆಕ ಮಾಹಿತಿಗಳನ್ನು ಪಾಲಿಸಿದಾರ ವಾಟ್ಸ್ಆ್ಯಪ್ ಮೂಲಕ ಪಡೆದುಕೊಳ್ಳಬಹುದು.ನೀವು ಮೊಬೈಲ್ ಮುಖಾಂತರ ಎಲ್ಐಸಿ ವಾಟ್ಸ್ಆ್ಯಪ್ ಸೇವೆಗಳನ್ನು ಪಡೆಯಲು ಎಲ್ಐಸಿ ಪೋರ್ಟಲ್ ನಲ್ಲಿ ಎಲ್ ಐಸಿ ಪಾಲಿಸಿ ನೋಂದಣಿ ಮಾಡಿಸೋದು ಅಗತ್ಯ. ಆ ಬಳಿಕ ನೀವು ನಿಮ್ಮ ವಾಟ್ಸ್ಆ್ಯಪ್ ನಿಂದ 8976862090 ಸಂಖ್ಯೆಗೆ "Hi" ಎಂದು ಮೆಸೇಜ್ ಕಳುಹಿಸಬೇಕು. ಆ ಬಳಿಕ ನಿಮಗೆ ಯಾವೆಲ್ಲ ಸೇವೆಗಳು ಲಭ್ಯವಿವೆ ಎಂಬ ಮಾಹಿತಿ ಸಿಗಲಿದೆ. ಅಲ್ಲಿ ಆಯಾ ಸೇವೆಗೆ ಸಂಬಂಧಿಸಿದ ಸಂಖ್ಯೆ ಆಯ್ಕೆ ಮಾಡಿದರೆ ಅಗತ್ಯವಿರುವ ಮಾಹಿತಿ ಲಭಿಸುತ್ತದೆ.