ಎಲ್ಐಸಿಯ ಜೀವನ ಆನಂದ್ ಪಾಲಿಸಿಯಲ್ಲಿ ಹೂಡಿಕೆ ಮಾಡಿದ್ರೆ ದುಪ್ಪಟ್ಟು ಲಾಭ ಗಳಿಸಲು ಸಾಧ್ಯವಿದೆ. ನಿಗದಿತ ಸಮಯದ ತನಕ ಹೂಡಿಕೆ ಮಾಡುವ ಮೂಲಕ ಈ ಯೋಜನೆಯಿಂದ ಅಧಿಕ ಲಾಭ ಗಳಿಸಲು ಸಾಧ್ಯವಿದೆ. ಹಾಗಾದ್ರೆ ಈ ಪಾಲಿಸಿಯಲ್ಲಿ ದಿನಕ್ಕೆ 45ರೂ. ಹೂಡಿಕೆ ಮಾಡಿ 25ಲಕ್ಷ ರೂ. ರಿಟರ್ನ್ ಗಳಿಸೋದು ಹೇಗೆ? ಇಲ್ಲಿದೆ ಮಾಹಿತಿ.
Business Desk:ಹೂಡಿಕೆ ಮಾಡುವಾಗ ಪ್ರತಿಯೊಬ್ಬರು ಮೊದಲು ನೋಡೋದು ಸುರಕ್ಷತೆಯನ್ನು. ಇದೇ ಕಾರಣಕ್ಕೆ ಭಾರತದ ಮಧ್ಯಮ ವರ್ಗದ ಜನರು ಇಂದಿಗೂ ಸರ್ಕಾರಿ ಬೆಂಬಲಿತ ಸಂಸ್ಥೆಯಲ್ಲಿ ಹೂಡಿಕೆ ಮಾಡೋದು ಸುರಕ್ಷಿತ ಎಂಬ ಭಾವನೆ ಹೊಂದಿದ್ದಾರೆ. ಇದೇ ಕಾರಣಕ್ಕೆ ಭಾರತೀಯ ಜೀವ ವಿಮಾ ನಿಗಮದಲ್ಲಿ (ಎಲ್ಐಸಿ) ಹೂಡಿಕೆ ಮಾಡೋದು ಹೆಚ್ಚು ಸುರಕ್ಷಿತ ಎಂಬ ಭಾವನೆ ಅವರಲ್ಲಿದೆ. ಎಲ್ಐಸಿ ಕೂಡ ಆಯಾ ವರ್ಗದ ಜನರಿಗೆ ಹೊಂದಿಕೆಯಾಗುವ ಪಾಲಿಸಿಗಳನ್ನು ರೂಪಿಸುತ್ತ ಬಂದಿದೆ. ಹೀಗಾಗಿ ಆದಾಯ, ವಯಸ್ಸನ್ನು ಆಧರಿಸಿ ಎಲ್ಲ ವರ್ಗದ ಜನರು ಎಲ್ಐಸಿ ಪಾಲಿಸಿಗಳಲ್ಲಿ ಹೂಡಿಕೆ ಮಾಡಲು ಅವಕಾಶವಿದೆ. ಎಲ್ಐಸಿಯ ಇಂಥ ಯೋಜನೆಗಳಲ್ಲಿ ಜೀವನ ಆನಂದ್ ಪಾಲಿಸಿ ಕೂಡ ಒಂದು. ಈ ಪಾಲಿಸಿಯಲ್ಲಿ ಹೂಡಿಕೆ ಮಾಡಿದ್ರೆ ಎರಡು ಪಟ್ಟು ಲಾಭ ಸಿಗುತ್ತದೆ. ಅದರಲ್ಲೂ ನೀವು ನಿಗದಿತ ಸಮಯ ಮಿತಿಯ ತನಕ ಹೂಡಿಕೆ ಮಾಡಿದರೆ ಈ ಯೋಜನೆಯಿಂದ ಅಧಿಕ ಲಾಭ ಗಳಿಸಬಹುದು. ಇನ್ನು ಎಲ್ಐಸಿ ಜೀವನ್ ಆನಂದ ಪಾಲಿಸಿಯಲ್ಲಿ ದಿನಕ್ಕೆ 45ರೂ. ಹೂಡಿಕೆ ಮಾಡಿದ್ರೆ ಮೆಚ್ಯೂರಿಟಿ ಬಳಿಕ 25ಲಕ್ಷ ರೂ. ಗಳಿಸಲು ಅವಕಾಶವಿದೆ.
ಪ್ರತಿದಿನ 45ರೂ. ಹೂಡಿಕೆ ಮಾಡಿ 25ಲಕ್ಷ ರೂ. ಗಳಿಸೋದು ಹೇಗೆ?
ಜೀವನ ಆನಂದ್ ಪಾಲಿಸಿಯಲ್ಲಿ ಭರವಸೆ ನೀಡಿರುವ ಕನಿಷ್ಠ ಮೊತ್ತ 5ಲಕ್ಷ ರೂ. ಆದ್ರೆ ನೀವು 25ಲಕ್ಷ ರೂ. ತನಕ ರಿಟರ್ನ್ ಪಡೆಯಲು ಅವಕಾಶವಿದೆ. ಈ ಪ್ರಯೋಜನ ಪಡೆಯಲು ನೀವು ಪಾಲಿಸಿಯಲ್ಲಿ 35 ವರ್ಷಗಳ ತನಕ ಪ್ರತಿ ತಿಂಗಳು 1,358ರೂ. ಅಥವಾ ವಾರ್ಷಿಕ 16,300ರೂ. ಹೂಡಿಕೆ ಮಾಡಬೇಕು. ಅಂದ್ರೆ ಪ್ರತಿದಿನ 45ರೂ. ಹೂಡಿಕೆ ಮಾಡಬೇಕು.
New Investment : ಮಹಿಳೆಯರಿಗೆ ಲಾಭಕಾರಿ ಈ ಹೂಡಿಕೆ ಯೋಜನೆ
ಯಾವೆಲ್ಲ ದಾಖಲೆಗಳು ಅಗತ್ಯ?
ಜೀವನ ಆನಂದ್ ಪಾಲಿಸಿಯಲ್ಲಿ ಹೂಡಿಕೆ ಮಾಡಲು ನಿಮ್ಮ ಬಳಿ ಆಧಾರ್ ಕಾರ್ಡ್, ಬ್ಯಾಂಕ್ ಖಾತೆ, ಮೊಬೈಲ್ ಸಂಖ್ಯೆ ಹಾಗೂ ಪ್ಯಾನ್ ಕಾರ್ಡ್ ಇರೋದು ಅಗತ್ಯ.
ಮರಣ ಹೊಂದಿದ ಸಂದರ್ಭದಲ್ಲಿ ಸಿಗಲಿದೆ ಈ ಪ್ರಯೋಜನ
ಜೀವನ ಆನಂದ್ ಪಾಲಿಸಿ ಡೆತ್ ಬೆನಿಫಿಟ್ ಹಾಗೂ ರೈಡರ್ ಬೆನಿಫಿಟ್ ಸೌಲಭ್ಯಗಳನ್ನು ನೀಡುತ್ತವೆ. ಒಂದು ವೇಳೆ ಪಾಲಿಸಿದಾರ ಮೆಚ್ಯುರಿಟಿ ಅವಧಿಗೂ ಮುನ್ನ ಸಾವನ್ನಪ್ಪಿದರೆ, ಪಾಲಿಸಿದಾರನ ನಾಮಿನಿ ಶೇ.125 ರಷ್ಟು ಡೆತ್ ಬೆನಿಫಿಟ್ ಪ್ರಯೋಜನ ಪಡೆಯಲಿದ್ದಾರೆ. ಇನ್ನು ಈ ಯೋಜನೆಯ ರೈಡರ್ ಬೆನಿಫಿಟ್ ಅಪಘಾತದ ಸಂದರ್ಭದಲ್ಲಿ ಮರಣ ಹೊಂದಿದ್ರೆ ಹಾಗೂ ಅಂಗವೈಕಲ್ಯಕ್ಕೆ ತುತ್ತಾದ್ರೆ ವಿಮಾ ಕವರೇಜ್ ಒದಗಿಸುತ್ತದೆ. ಅಪಘಾತ ಪ್ರಯೋಜನ, ಹೊಸ ಟರ್ಮ್ ರೈಡರ್, ಹೊಸ ಟರ್ಮ್ ಇನ್ಯುರೆನ್ಸ್ ರೈಡರ್ ಹಾಗೂ ಹೊಸ ಗಂಭೀರ ಕಾಯಿಲೆಗಳ ಪ್ರಯೋಜನ ಸೌಲಭ್ಯ ಸಿಗಲಿದೆ. ಆದರೆ, ಜೀವನ ಆನಂದ್ ಪಾಲಿಸಿಯಲ್ಲಿ ನೀವು ಮಾಡುವ ಹೂಡಿಕೆಗೆ ಯಾವುದೇ ತೆರಿಗೆ ವಿನಾಯ್ತಿ ಸಿಗೋದಿಲ್ಲ.
ವಾಟ್ಸ್ಆ್ಯಪ್ ಸೇವೆ
ಎಲ್ಐಸಿ ಪೋರ್ಟಲ್ ನಲ್ಲಿ ತಮ್ಮ ಪಾಲಿಸಿಗಳನ್ನು ನೋಂದಣಿ ಮಾಡಿಸಿರೋರು ವಾಟ್ಸ್ಆ್ಯಪ್ ನಲ್ಲಿ ನಿಗದಿತ ಸೇವೆಗಳನ್ನು ಮನೆಯಲ್ಲೇ ಕುಳಿತು ಪಡೆಯಬಹುದು. ಪಾಲಿಸಿದಾರರು ವಾಟ್ಸ್ಆ್ಯಪ್ ನಲ್ಲಿ 'ಹಾಯ್' ಎಂದು 8976862090 ಮೊಬೈಲ್ ಸಂಖ್ಯೆಗೆ ಮೆಸೇಜ್ ಮಾಡುವ ಮೂಲಕ ಈ ಸೇವೆ ಪಡೆಯಬಹುದು. ಪ್ರೀಮಿಯಂ ಬಾಕಿ, ಬೋನಸ್ ಮಾಹಿತಿ, ಪಾಲಿಸಿ ವಿವರ, ಸಾಲದ ಮರುಪಾವತಿ, ಸಾಲದ ಬಡ್ಡಿ ಸೇರಿದಂತೆ ಅನೆಕ ಮಾಹಿತಿಗಳನ್ನು ಪಾಲಿಸಿದಾರ ವಾಟ್ಸ್ಆ್ಯಪ್ ಮೂಲಕ ಪಡೆದುಕೊಳ್ಳಬಹುದು. ಹೀಗಾಗಿ ನೀವು ಇನ್ನು ಮುಂದೆ ಇಂಥ ಸಣ್ಣ ಹಾಗೂ ದೊಡ್ಡ ಕೆಲಸಗಳಿಗೆ ಎಲ್ಐಸಿ ಕಚೇರಿಗೆ ಭೇಟಿ ನೀಡೋದು ಅಥವಾ ಎಲ್ಐಸಿ ಏಜೆಂಟ್ ರನ್ನು ಸಂಪರ್ಕಿಸಬೇಕಾದ ಅಗತ್ಯವಿಲ್ಲ. ವಾಟ್ಸ್ಆ್ಯಪ್ ಮೂಲಕವೇ ಸೇವೆಗಳನ್ನು ಪಡೆದುಕೊಳ್ಳಬಹುದು.