
ನವದೆಹಲಿ (ಏ.27): ಭಾರತೀಯ ಜೀವ ವಿಮಾ ನಿಗಮದ (LIC) ಬಹುನಿರೀಕ್ಷಿತ ಐಪಿಒ (IPO) ಮೇ 4ರಂದು ಪ್ರಾರಂಭವಾಗಿ ಮೇ 9ರಂದು ಮುಕ್ತಾಯವಾಗಲಿದ್ದು, ಷೇರಿನ ಬೆಲೆ (Share price), ಐಪಿಒ ಗಾತ್ರ, ಪಾಲಿಸಿದಾರರಿಗೆ (Policyholders) ಹಾಗೂ ಉದ್ಯೋಗಿಗಳಿಗೆ (employees) ಡಿಸ್ಕೌಂಟ್ ಇತ್ಯಾದಿ ಮಾಹಿತಿಗಳನ್ನು ಕೇಂದ್ರ ಸರ್ಕಾರ ಬುಧವಾರ (ಏ.27) ಘೋಷಿಸಿದೆ. ಎಲ್ಐಸಿಯ ಪ್ರತಿ ಷೇರಿಗೆ 902ರೂ.-949ರೂ. ಬೆಲೆ ನಿಗದಿಪಡಿಸಲಾಗಿದೆ ಎಂದು ಹೂಡಿಕೆ ಹಾಗೂ ಸಾರ್ವಜನಿಕ ಆಸ್ತಿ ನಿರ್ವಹಣೆ ಇಲಾಖೆ (DIPAM) ಕಾರ್ಯದರ್ಶಿ (Secretary) ತುಹೀನ್ ಕಾಂತ ಪಾಂಡೆ (Tuhin Kanta Pandey) ತಿಳಿಸಿದ್ದಾರೆ.
ಎಲ್ಐಸಿ ಐಪಿಒ ಮೂಲಕ ಸರ್ಕಾರ ಶೇ.3.5 ಷೇರುಗಳನ್ನು ಮಾರಾಟ ಮಾಡಿ ಸುಮಾರು 21,000 ಕೋಟಿ ರೂ. ಸಂಗ್ರಹಿಸುವ ಗುರಿ ಹೊಂದಿದೆ. ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ತುಹೀನ್ ಕಾಂತ ಪಾಂಡೆ, 'ಗಾತ್ರವನ್ನು 21,000 ಕೋಟಿ ರೂ.ಗೆ ತಗ್ಗಿಸಿದ ಮೇಲೂ ಎಲ್ ಐಸಿ ಐಪಿಒ ದೇಶದ ಅತೀದೊಡ್ಡ ಐಪಿಒ ಆಗಲಿದೆ' ಎಂದಿದ್ದಾರೆ. ಕಳೆದ ವರ್ಷ ನಡೆದ 18,300 ಕೋಟಿ ರೂ. ಗಾತ್ರದ ಪೇಟಿಎಂ (Paytm) ಐಪಿಒ ಈ ತನಕದ ಭಾರತದ ಅತೀದೊಡ್ಡ ಐಪಿಒ ಆಗಿದೆ.
Elon Musk Twitter ಟ್ವಿಟರ್‌ಗೆ ಎಲಾನ್ ಮಸ್ಕ್ ಬಾಸ್, 5 ಬದಲಾವಣೆ ಸಾಧ್ಯತೆ!
ಪ್ರತಿ ಷೇರಿನ ಬೆಲೆ ಎಷ್ಟು?
ಎಲ್ಐಸಿ ಐಪಿಒನಲ್ಲಿ ಪ್ರತಿ ಷೇರಿನ ಬೆಲೆಯನ್ನು 902ರೂ.-949ರೂ. ನಿಗದಿಪಡಿಸಲಾಗಿದೆ. ಎಲ್ ಐಸಿ ಪಾಲಿಸಿದಾರರಿಗೆ (Policyholders) ಪ್ರತಿ ಷೇರಿನ ಮೇಲೆ 60ರೂ. ಡಿಸ್ಕೌಂಟ್ (Discount) ನೀಡಲಾಗಿದೆ. ಇನ್ನು ಎಲ್ಐಸಿ ಸಿಬ್ಬಂದಿ (employees) ಹಾಗೂ ರಿಟೇಲ್ ಹೂಡಿಕೆದಾರರಿಗೆ (Retail Investors) ಪ್ರತಿ ಷೇರಿನ ಮೇಲೆ 45ರೂ. ಡಿಸ್ಕೌಂಟ್ ನೀಡಲಾಗಿದೆ. ಎಲ್ಐಸಿಯಲ್ಲಿ 30 ಕೋಟಿ ಪಾಲಿಸಿದಾರರಿದ್ದು, ಹೊಸ ವ್ಯವಹಾರ ಪ್ರೀಮಿಯಂನಲ್ಲಿ ಶೇ.61 ಹಾಗೂ ಪಾಲಿಸಿಗಳ ಸಂಖ್ಯೆಯಲ್ಲಿ ಶೇ.71 ಪಾಲು ಹೊಂದಿದೆ.
ಗಮನಿಸಬೇಕಾದ ದಿನಾಂಕ
ಎಲ್ಐಸಿ ಐಪಿಒ ಮೇ 4 ಕ್ಕೆ ಪ್ರಾರಂಭವಾಗಿ ಮೇ 9ರ ತನಕ ನಡೆಯಲಿದೆ. ಆಂಕರ್ ಹೂಡಿಕೆದಾರರಿಗೆ (anchor investor) ಮೇ 2ಕ್ಕೆ ಪ್ರಾರಂಭವಾಗಲಿದೆ. ಷೇರುಗಳನ್ನು ಮೇ 16ಕ್ಕೆ ಡಿಮ್ಯಾಟ್ (Demate) ಖಾತೆಗಳಿಗೆ ಹಂಚಿಕೆ ಮಾಡಲಾಗುತ್ತದೆ. ಮೇ 17ರಂದು ವಿನಿಮಯ ಕೇಂದ್ರಗಳಲ್ಲಿ ಷೇರುಗಳನ್ನು ಲಿಸ್ಟ್ ಮಾಡಲಾಗುವುದು.
ಪಾಲಿಸಿದಾರರು, ಉದ್ಯೋಗಿಗಳಿಗೆ ಮೀಸಲು
ಹೂಡಿಕೆ ಉತ್ತೇಜನಕ್ಕೆ ಸರ್ಕಾರ ಎಲ್ಐಸಿ ಪಾಲಿಸಿದಾರರಿಗೆ ಶೇ.10ರಷ್ಟು ಷೇರುಗಳನ್ನು ಮೀಸಲಿಟ್ಟಿದೆ. ಇನ್ನು ಎಲ್ಐಸಿ ಉದ್ಯೋಗಿಗಳಿಗೆ ಶೇ.5ರಷ್ಟು ಷೇರುಗಳನ್ನು ಮೀಸಲಿಡಲಾಗಿದೆ. ರಿಟೇಲ್ ಹೂಡಿಕೆದಾರರಿಗೆ ಶೇ.35ರಷ್ಟು ಷೇರುಗಳನ್ನು ಮೀಸಲಿಡಲಾಗಿದೆ.
143 ವಸ್ತುಗಳ ಜಿಎಸ್‌ಟಿ ದರ ಏರಿಕೆಗೆ ಪ್ರಸ್ತಾಪ!
ಐಪಿಒ ಗಾತ್ರ ಇಳಿಕೆ
ಎಲ್ಐಸಿಯಲ್ಲಿ ಕೇಂದ್ರ ಸರ್ಕಾರ ಶೇ.100ರಷ್ಟು ಷೇರುಗಳನ್ನು ಹೊಂದಿದೆ. ಈ ವರ್ಷ ಫೆಬ್ರುವರಿಯಲ್ಲಿ ಎಲ್ಐಸಿ ಮಾರುಕಟ್ಟೆ ನಿಯಂತ್ರಕ ಸೆಬಿಗೆ ಸಲ್ಲಿಕೆ ಮಾಡಿದ ಐಪಿಒ ಕರಡು ಪ್ರತಿಯಲ್ಲಿ ಶೇ.5ರಷ್ಟು ಅಥವಾ 31.6 ಕೋಟಿ ರೂ. ಷೇರುಗಳನ್ನು ಮಾರಾಟ ಮಾಡುವುದಾಗಿ ತಿಳಿಸಿತ್ತು. ಇನ್ನು ಮಾರ್ಚ್ ನಲ್ಲಿ ಎಲ್ಐಸಿ ಐಪಿಒ ನಡೆಸಲು ಸರ್ಕಾರ ಯೋಜಿಸಿತ್ತು. ಈ ಮೂಲಕ 2021-22ನೇ ಆರ್ಥಿಕ ಸಾಲಿನ ಹೂಡಿಕೆ ಹಿಂತೆಗೆತದ ಗುರಿ ಮುಟ್ಟುವುದು ಸರ್ಕಾರದ ಉದ್ದೇಶವಾಗಿತ್ತು. ಆದ್ರೆ ರಷ್ಯಾ-ಉಕ್ರೇನ್ ಯುದ್ಧ ಜಗತ್ತಿನಾದ್ಯಂತ ಷೇರು ಮಾರುಕಟ್ಟೆಗಳ ಮೇಲೆ ಪ್ರಭಾವ ಬೀರಿತು. ಈ ಹಿನ್ನೆಲೆಯಲ್ಲಿ ಸರ್ಕಾರ ಎಲ್ಐಸಿ ಐಪಿಒ ಅನ್ನು ಮುಂದೂಡಿತ್ತು. ಪ್ರಸಕ್ತ ಮಾರುಕಟ್ಟೆ ಪರಿಸ್ಥಿತಿಯನ್ನು ಗಮನದಲ್ಲಿರಿಸಿಕೊಂಡು ಸರ್ಕಾರ ಈಗ ಐಪಿಒ ಗಾತ್ರವನ್ನು ಕೂಡ ತಗ್ಗಿಸಿದ್ದು, ಶೇ. 3.5ರಷ್ಟು ಅಥವಾ 22.13 ಕೋಟಿ ಷೇರುಗಳನ್ನು ಮಾತ್ರ ಮಾರಾಟ ಮಾಡಲು ನಿರ್ಧರಿಸಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.