LIC IPO:ಎಲ್ಐಸಿ ಪಾಲಿಸಿದಾರರು, ಸಿಬ್ಬಂದಿ,ರೀಟೆಲ್ ಹೂಡಿಕೆದಾರರಿಗೆ ಎಷ್ಟು ಪಾಲು ಮೀಸಲು? ಎಷ್ಟು ಮೊತ್ತದ ಷೇರು ಖರೀದಿಸಬಹುದು?

Suvarna News   | Asianet News
Published : Mar 01, 2022, 04:53 PM IST
LIC IPO:ಎಲ್ಐಸಿ ಪಾಲಿಸಿದಾರರು, ಸಿಬ್ಬಂದಿ,ರೀಟೆಲ್ ಹೂಡಿಕೆದಾರರಿಗೆ ಎಷ್ಟು ಪಾಲು ಮೀಸಲು? ಎಷ್ಟು ಮೊತ್ತದ ಷೇರು ಖರೀದಿಸಬಹುದು?

ಸಾರಾಂಶ

*ಸೆಬಿಯಿಂದ ಈ ವಾರ ಅನುಮೋದನೆ ಸಿಗೋ ಸಾಧ್ಯತೆ *ಪಾಲಿಸಿದಾರರಿಗೆ ಶೇ.10ರಷ್ಟು ಷೇರು ಮೀಸಲು *ರೀಟೆಲ್ ಹೂಡಿಕೆದಾರರಿಗೆ ಶೇ.35ರಷ್ಟು ಷೇರು ಮೀಸಲು

Business Desk: ದೇಶದ ಅತಿದೊಡ್ಡ ವಿಮಾ ಕಂಪೆನಿ ಭಾರತೀಯ ಜೀವ ವಿಮಾ ನಿಗಮದ (LIC) ಐಪಿಒಗೆ (IPO) ಸಿದ್ಧತೆಗಳು ಭರದಿಂದ ಸಾಗುತ್ತಿವೆ. ಹೂಡಿಕೆದಾರರು (Investors) ಈ ಐಪಿಒ (IPO) ಬಗ್ಗೆ ಸಾಕಷ್ಟು ನಿರೀಕ್ಷೆಗಳನ್ನು ಕೂಡ ಇಟ್ಟುಕೊಂಡಿದ್ದಾರೆ. ಈಗಾಗಲೇ ಎಲ್ ಐಸಿ(LIC) ಭಾರತೀಯ ಸೆಕ್ಯುರಿಟೀಸ್ ಹಾಗೂ ಎಕ್ಸ್ ಚೇಂಜ್ ಬೋರ್ಡ್ ಗೆ (SEBI) ಐಪಿಒ ಕರಡು ಪ್ರತಿಗಳನ್ನು ಸಲ್ಲಿಸಿದ್ದು, ಈ ವಾರದಲ್ಲಿ ಅನುಮೋದನೆ ಸಿಗೋ ನಿರೀಕ್ಷೆಯಿದೆ.  ಹೀಗಾಗಿ ಮಾರ್ಚ್ 11 ರಂದು ಆಂಕರ್ ಹೂಡಿಕೆದಾರರಿಗೆ (anchor investors) ಐಪಿಓ (IPO) ತೆರೆಯುವ ಸಾಧ್ಯತೆಯಿದೆ. ಇನ್ನು ಎಲ್ಐಸಿ ಐಪಿಒನಲ್ಲಿ ಸಿಬ್ಬಂದಿ (employees),ಪಾಲಿಸಿದಾರರು (Policyholders)ಹಾಗೂ ರೀಟೆಲ್ ಹೂಡಿಕೆದಾರರಿಗೆ (Retail Investors)ಈಗಾಗಲೇ ಶೇಕಡವಾರು ಮೀಸಲಾತಿ ನಿಗದಿಪಡಿಸಲಾಗಿದೆ. ಹಾಗಾದ್ರೆ ಎಲ್ಐಸಿ ಐಪಿಒನಲ್ಲಿ ಯಾರಿಗೆಲ್ಲ ಆದ್ಯತೆ ನೀಡಲಾಗುತ್ತೆ? ಯಾರಿಗೆ ಎಷ್ಟು ಪಾಲು ನಿಗದಿಪಡಿಸಲಾಗಿದೆ?

ಪಾಲಿಸಿದಾರರಿಗೆ ಎಷ್ಟು ಮೀಸಲು?
ಎಲ್ಐಸಿ ಐಪಿಒನಲ್ಲಿ 26 ಕೋಟಿ ಪಾಲಿಸಿದಾರರಿಗೆ 3.16 ಕೋಟಿ ಷೇರುಗಳನ್ನು ಮೀಸಲಿಡಲಾಗಿದೆ. ಅಂದ್ರೆ ಶೇ.10ರಷ್ಟು ಷೇರುಗಳನ್ನು ಮೀಸಲಿಡಲಾಗಿದೆ. ಆದ್ರೆ ಪಾಲಿಸಿಯೊಂದಿಗೆ ಪ್ಯಾನ್ ಜೋಡಿಸಿರೋ ಹಾಗೂ ಡಿಮ್ಯಾಟ್ ಖಾತೆ ಹೊಂದಿರೋ ಪಾಲಿಸಿದಾರರು ಮಾತ್ರ ಈ ಐಪಿಒನಲ್ಲಿ ಪಾಲ್ಗೊಳ್ಳಬಹುದಾಗಿದೆ. ಇನ್ನು ಪಾಲಿಸಿಯೊಂದಿಗೆ ಪ್ಯಾನ್ ಕಾರ್ಡ್ ಲಿಂಕ್ ಮಾಡಲು  ಪಾಲಿಸಿದಾರರಿಗೆ ಎಲ್ಐಸಿ 2022 ಫೆಬ್ರವರಿ 28ರ ತನಕ ಸಮಯಾವಕಾಶ ನೀಡಿತ್ತು. ಈ ಬಗ್ಗೆ ಅನೇಕ ತಿಂಗಳುಗಳಿಂದ ಎಲ್ಐಸಿ ಮಾಧ್ಯಮ ಜಾಹೀರಾತುಗಳ ಮೂಲಕ ಪಾಲಿಸಿದಾರರಿಗೆ ಮಾಹಿತಿ ನೀಡುತ್ತ ಬಂದಿದೆ ಕೂಡ. ಹೀಗಾಗಿ ಫೆ.28 ಹಾಗೂ ಅದಕ್ಕೂ ಮುನ್ನ ಪಾಲಿಸಿಯೊಂದಿಗೆ ಪ್ಯಾನ್ ಲಿಂಕ್ ಮಾಡಿದ ಪಾಲಿಸಿದಾರರಿಗೆ ಮಾತ್ರ ಐಪಿಒನಲ್ಲಿ ಪಾಲ್ಗೊಳ್ಳಲು ಅವಕಾಶವಿದೆ. ಇನ್ನು  2022ರ ಫೆಬ್ರವರಿ 13 ಹಾಗೂ ಅದಕ್ಕೂ ಮುನ್ನ ಪಾಲಿಸಿ ಮಾಡಿಸಿದ ಪಾಲಿಸಿದಾರರು ಮಾತ್ರ ಈ ಐಪಿಒನಲ್ಲಿ ಭಾಗವಹಿಸೋ ಅರ್ಹತೆ ಹೊಂದಿದ್ದಾರೆ. 

LIC IPO: ಎಲ್ ಐಸಿ ಪಾಲಿಸಿದಾರರು ಐಪಿಒನಲ್ಲಿ ಪಾಲ್ಗೊಳ್ಳಲು ತಪ್ಪದೇ ಈ ಒಂದು ಕೆಲ್ಸ ಮಾಡ್ಬೇಕು!

ಪಾಲಿಸಿದಾರರು ಗರಿಷ್ಠ ಎಷ್ಟು ಮೊತ್ತದ ಷೇರು ಖರೀದಿಸಬಹುದು?
ಎಲ್ಐಸಿ ಪಾಲಿಸಿದಾರರು ಎಲ್ಐಸಿ ಐಪಿಒನಲ್ಲಿ ಗರಿಷ್ಠ 4ಲಕ್ಷ ರೂ. ಮೌಲ್ಯದ ಷೇರು ಖರೀದಿಸಬಹುದಾಗಿದೆ. ಅಂದರೆ  ಪಾಲಿಸಿದಾರರ ವರ್ಗದಡಿಯಲ್ಲಿ 2ಲಕ್ಷ ರೂ. ಹಾಗೂ ಚಿಲ್ಲರೆ (Retail) ಹೂಡಿಕೆದಾರರ ವರ್ಗದಡಿಯಲ್ಲಿ 2ಲಕ್ಷ ರೂ.  ಹೀಗೆ ಒಟ್ಟು 4 ಲಕ್ಷ ರೂ. ಮೌಲ್ಯದ ಷೇರುಗಳನ್ನು ಖರೀದಿ ಮಾಡಹುದಾಗಿದೆ. ಅಲ್ಲದೆ, ಈ ಎರಡೂ ವರ್ಗಗಳಡಿಯಲ್ಲಿ ಒಂದೇ ಡಿಮ್ಯಾಟ್ ಖಾತೆಯಿಂದ ಖರೀದಿ ಮಾಡಬಹುದಾಗಿದೆ. ಇನ್ನು ಪಾಲಿಸಿದಾರರಿಗೆ ಯಾವುದೇ ಲಾಕ್ ಇನ್ ಅವಧಿಯಿಲ್ಲ. ಹೀಗಾಗಿ ಅವರು ಲಿಸ್ಟಿಂಗ್ ದಿನವೇ ಷೇರುಗಳನ್ನು ಮಾರಾಟ ಮಾಡಬಹುದಾಗಿದೆ.

ಎಲ್ಐಸಿ ನೌಕರರಿಗೆಷ್ಟು ಮೀಸಲು?
ಎಲ್ಐಸಿ ನೌಕರರಿಗೆ ಶೇ.5ರಷ್ಟು ಷೇರುಗಳನ್ನು ಮೀಸಲಿಡಲಾಗಿದೆ. ಎಲ್ಐಸಿ ನೌಕರರು 6ಲಕ್ಷ ರೂ. ಮೌಲ್ಯದ ಷೇರುಗಳನ್ನು ಖರೀದಿಸಲು ಅವಕಾಶವಿದೆ. ಅಂದ್ರೆ ಸಿಬ್ಬಂದಿ ವರ್ಗದಡಿಯಲ್ಲಿ 2ಲಕ್ಷ ರೂ., ಚಿಲ್ಲರೆ (Retail) ಹೂಡಿಕೆದಾರರ ವರ್ಗದಡಿಯಲ್ಲಿ 2ಲಕ್ಷ ರೂ. ಹಾಗೂ ಪಾಲಿಸಿದಾರರ ವರ್ಗದಡಿಯಲ್ಲಿ 2ಲಕ್ಷ ರೂ. ಹೀಗೆ ಒಟ್ಟು 6ಲಕ್ಷ ರೂ. ಮೌಲ್ಯದ ಷೇರುಗಳನ್ನು ಖರೀದಿಸಬಹುದಾಗಿದೆ. 

LIC IPO : ಮಾರ್ಚ್ 11ಕ್ಕೆ ಬರೋದು ಬಹುತೇಕ ಖಚಿತ, ಇಲ್ಲಿದೆ ಮತ್ತಷ್ಟು ವಿವರ!

ಚಿಲ್ಲರೆ (retail) ಹೂಡಿಕೆದಾರರಿಗೆ ಎಷ್ಟು?
ಎಲ್ ಐಸಿ ಐಪಿಒನಲ್ಲಿ ಶೇ.35ರಷ್ಟು ರೀಟೆಲ್ ಹೂಡಿಕೆದಾರರಿಗೆ ಮೀಸಲಿಡಲಾಗಿದೆ. 

ಸರ್ಕಾರಕ್ಕೆ ಪ್ರಮುಖ ಐಪಿಒ
ಭಾರತೀಯ ಜೀವ ವಿಮಾ ನಿಗಮದಲ್ಲಿ(LIC) ಕೇಂದ್ರ ಸರ್ಕಾರ ಶೇ.100ರಷ್ಟು ಷೇರುಗಳನ್ನು ಹೊಂದಿದೆ. ವರದಿಗಳ ಪ್ರಕಾರ ಸರ್ಕಾರ ಶೇ.5ರಷ್ಟು ಷೇರುಗಳನ್ನು ಮಾರಾಟ ಮಾಡಲು ನಿರ್ಧರಿಸಿದೆ. ಈ ಮೂಲಕ 75,000 ಕೋಟಿ ರೂ. ಬಂಡವಾಳ ಸಂಗ್ರಹಿಸೋ ಗುರಿ ಹೊಂದಿದೆ. ಎಲ್ಐಸಿ ಐಪಿಒ ಕೇಂದ್ರ ಸರ್ಕಾರದ ಬಂಡವಾಳ ಹಿಂತೆಗೆತ ಕಾರ್ಯಕ್ರಮದ ಒಂದು ಭಾಗವೇ ಆಗಿದೆ. 2021-22ನೇ ಸಾಲಿನಲ್ಲಿ ಕೇಂದ್ರ ಸರ್ಕಾರಕ್ಕೆ ಬಂಡವಾಳ ಹಿಂತೆಗೆತದ ಗುರಿ ತಲುಪಲು ಈ ಐಪಿಒ ನಿರ್ಣಾಯಕವಾಗಲಿದೆ. 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಯೂಟ್ಯೂಬ್ ನಲ್ಲಿ ಗೋಲ್ಡನ್ ಬಟನ್ ಸಿಕ್ಕಿದ್ರೆ ಹಣದ ಹೊಳೆ, ಜಾಸ್ತಿ ಆಗುತ್ತೆ ತೆರಿಗೆ ಭಾರ
ಒನ್‌8 ಬ್ರ್ಯಾಂಡ್‌ ಸೇಲ್‌: ತನ್ನ ಆಪ್ತ ಗೆಳೆಯನ ಈ ಸಂಸ್ಥೆಯಲ್ಲಿ ಕೊಹ್ಲಿ 40 ಕೋಟಿ ಹೂಡಿಕೆ!