ಎಲ್ಐಸಿಗೆ ತೆರಿಗೆ ಬಿಸಿ; 84 ಕೋಟಿ ರೂ. ದಂಡ ಪಾವತಿಸುವಂತೆ ನೋಟಿಸ್ ನೀಡಿದ ಆದಾಯ ತೆರಿಗೆ ಇಲಾಖೆ

By Suvarna News  |  First Published Oct 4, 2023, 2:24 PM IST

ಆದಾಯ ತೆರಿಗೆ ಇಲಾಖೆ ಈ ಹಿಂದಿನ ವರ್ಷಗಳ ತೆರಿಗೆ ಬಾಕಿ ಬಗ್ಗೆಯೂ ಪರಿಶೀಲಿಸುತ್ತಿದೆ. ಈ ಸಂಬಂಧ ಅನೇಕರಿಗೆ ನೋಟಿಸ್ ಕೂಡ ಜಾರಿ ಮಾಡಿದೆ. ಈಗ ಸರ್ಕಾರದ ಬೆಂಬಲಿತ ಎಲ್ಐಸಿಗೆ ಕೂಡ ನೋಟಿಸ್ ಜಾರಿ ಮಾಡುವ ಮೂಲಕ ಶಾಕ್ ನೀಡಿದೆ. 
 


ನವದೆಹಲಿ (ಅ.4): ಭಾರತೀಯ ಜೀವ ವಿಮಾ ನಿಗಮಕ್ಕೂ (ಎಲ್ ಐಸಿ) ಆದಾಯ ತೆರಿಗೆ ಇಲಾಖೆ ನೋಟಿಸ್ ನೀಡುವ ಮೂಲಕ ಶಾಕ್ ನೀಡಿದೆ. ಮೂರು ಮೌಲ್ಯಮಾಪನ ವರ್ಷಗಳಿಗೆ ಸಂಬಂಧಿಸಿ 84 ಕೋಟಿ ರೂ. ದಂಡ ಪಾವತಿಸುವಂತೆ ಆದಾಯ ತೆರಿಗೆ ಇಲಾಖೆ ಬೇಡಿಕೆಯಿಟ್ಟಿದೆ ಎಂಬ ಮಾಹಿತಿಯನ್ನು ನೀಡಿರುವ ಎಲ್ಐಸಿ, ಈ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸೋದಾಗಿಯೂ ತಿಳಿಸಿದೆ. 2012-13ನೇ ಮೌಲ್ಯಮಾಪನ ವರ್ಷಕ್ಕೆ ತೆರಿಗೆ ಪ್ರಾಧಿಕಾರ ಎಲ್ಐಸಿಗೆ 12.61ಕೋಟಿ ರೂ. ದಂಡ ವಿಧಿಸಿದೆ. ಹಾಗೆಯೇ 2018-19 ನೇ ಮೌಲ್ಯಮಾಪನ ವರ್ಷಕ್ಕೆ 33.82ಕೋಟಿ ರೂ. ಹಾಗೂ 2019-20ನೇ ಸಾಲಿಗೆ 37.58 ಕೋಟಿ ರೂ. ದಂಡ ವಿಧಿಸಿರುವ ಬಗ್ಗೆ ಎಲ್ ಐಸಿ ರೆಗ್ಯುಲೇಟರಿ ಫೈಲಿಂಗ್ ನಲ್ಲಿ ಮಾಹಿತಿ ನೀಡಿದೆ. ಆದಾಯ ತೆರಿಗೆ ಇಲಾಖೆ ಕಾಯ್ದೆ  1961ರ ಸೆಕ್ಷನ್ 271(1)(ಸಿ) ಹಾಗೂ 270ಎ ಉಲ್ಲಂಘನೆಗಾಗಿ ಆದಾಯ ತೆರಿಗೆ ಇಲಾಖೆ ಎಲ್ಐಸಿಗೆ ದಂಡ ವಿಧಿಸಿದೆ. ಈ ಸಂಬಂಧ 2023ರ ಸೆಪ್ಟೆಂಬರ್ 29ರಂದು ಆದಾಯ ತೆರಿಗೆ ಇಲಾಖೆ ಎಲ್ಐಸಿಗೆ ನೋಟಿಸ್ ನೀಡಿದೆ. 

ಸರ್ಕಾರದ ಬೆಂಬಲಿತ ಎಲ್ಐಸಿ 5 ಕೋಟಿ ರೂ. ಪ್ರಾರಂಭಿಕ ಬಂಡವಾಳದೊಂದಿಗೆ 1956ರಲ್ಲಿ ಪ್ರಾರಂಭವಾಗಿತ್ತು. 2023ರ ಮಾರ್ಚ್ 31ಕ್ಕೆ ಅನ್ವಯವಾಗುವಂತೆ ಎಲ್ಐಸಿ 45.50 ಲಕ್ಷ ಕೋಟಿ ರೂ. ಆಸ್ತಿ ಹಾಗೂ 40.81 ಲಕ್ಷ ಕೋಟಿ ರೂ. ಲೈಫ್ ಫಂಡ್ ಹೊಂದಿದೆ. 

Tap to resize

Latest Videos

ನಿಮ್ಮ ಎಲ್ ಐಸಿ ಪಾಲಿಸಿ ಲ್ಯಾಪ್ಸ್ ಆಗಿದೆಯಾ? ಮತ್ತೆ ಸಕ್ರಿಯಗೊಳಿಸಲು ಹೀಗೆ ಮಾಡಿ

ಸೆಪ್ಟೆಂಬರ್ 22ರಂದು ಎಲ್ಐಸಿ 290 ಕೋಟಿ ರೂ. ಜಿಎಸ್ ಟಿ ನೋಟಿಸ್ ಬಂದಿರುವ ಮಾಹಿತಿ ನೀಡಿತ್ತು. ಈ ವರ್ಷ ಇಲ್ಲಿಯ ತನಕ ಎಲ್ಐಸಿ ಷೇರುಗಳ ಬೆಲೆಗಳಲ್ಲಿ ಶೇ.9ಕ್ಕಿಂತಲೂ ಹೆಚ್ಚಿನ ಇಳಿಕೆ ಕಂಡುಬಂದಿದೆ. 

ಐಟಿ ಷೇರುಗಳಲ್ಲಿ 8 ಸಾವಿರ ಕೋಟಿ ಹೂಡಿಕೆ 
ಕಳೆದ ತ್ರೈಮಾಸಿಕದಲ್ಲಿ ಭಾರತೀಯ ಷೇರು ಮಾರುಕಟ್ಟೆಯಲ್ಲಿ ಹೂಡಿಕೆಗೆ ಸಂಬಂಧಿಸಿ ಎಲ್ಐಸಿ ದಿಟ್ಟ ನಿರ್ಧಾರ ಕೈಗೊಂಡಿತ್ತು. ಬಹುತೇಕರು ಹೂಡಿಕೆ ಮಾಡಲು ಹೆದರುವ ವಲಯದಲ್ಲೇ ಎಲ್ಐಸಿ ದೊಡ್ಡ ಮೊತ್ತದಲ್ಲಿ ಹೂಡಿಕೆ ಮಾಡುವ ಮೂಲಕ ಅಚ್ಚರಿ ಮೂಡಿಸಿತ್ತು. ಕಳೆದ ಜೂನ್ ತ್ರೈಮಾಸಿಕದಲ್ಲಿ ಎಲ್ಐಸಿ ಐಟಿ ಷೇರುಗಳಲ್ಲಿ 8,000 ಕೋಟಿ ರೂ. ಹೂಡಿಕೆ ಮಾಡಿತ್ತು. ಈ ವಲಯದಲ್ಲಿ ದೊಡ್ಡ ಪ್ರಮಾನದ ಹೂಡಿಕೆ ಅಪಾಯದ ಬಗ್ಗೆ ತಜ್ಞರು ಸಾಕಷ್ಟು ಎಚ್ಚರಿಕೆ ನೀಡಿದ್ದರೂ ದೇಶದ ಅತೀದೊಡ್ಡ ಜೀವ ವಿಮಾ ಸಂಸ್ಥೆ ಈ ವಲಯದಲ್ಲಿ ಹೂಡಿಕೆ ಮಾಡಲು ದೊಡ್ಡ ಮಟ್ಟದಲ್ಲಿ ಧೈರ್ಯ ತೋರಿತ್ತು. ಭಾರತದ ಅತೀದೊಡ್ಡ ಐಟಿ ಕಂಪನಿಗಳಲ್ಲಿ ಸಾವಿರಾರು ಕೋಟಿ ಹೂಡಿಕೆ ಮಾಡಿತ್ತು. ಎಲ್ಐಸಿ ಇನ್ಫೋಸಿಸ್ ಸಂಸ್ಥೆಯ 3,636 ಕೋಟಿ ರೂ. ಮೌಲ್ಯದ ಷೇರುಗಳನ್ನು ಖರೀದಿಸಿದೆ. ಹಾಗೆಯೇ ಟಾಟಾ ಕನ್ಸಲ್ಟೆನ್ಸಿಯ (ಟಿಸಿಎಸ್) 1,973 ಕೋಟಿ ರೂ. ಮೌಲ್ಯದ ಷೇರುಗಳು, ಟೆಕ್ ಮಹೀಂದ್ರಾದ 1,468 ಕೋಟಿ ರೂ. ಹಾಗೂ ಎಚ್ ಸಿಎಲ್ ಟೆಕ್ನಾಲಜೀಸ್ ಕಂಪನಿಯ 979 ಕೋಟಿ ರೂ. ಮೌಲ್ಯದ ಷೇರುಗಳನ್ನು ಖರೀದಿಸಿದೆ.  

ಎಲ್ಐಸಿ ಏಜೆಂಟ್,ಉದ್ಯೋಗಿಗಳಿಗೆ ಗಣೇಶ ಚತುರ್ಥಿಗೆ ಭರ್ಜರಿ ಉಡುಗೊರೆ; ಗ್ರಾಚ್ಯುಟಿ ಮಿತಿ, ಪಿಂಚಣಿ ಹೆಚ್ಚಳ

ಇನ್ಫೋಸಿಸ್ ಸಂಸ್ಥೆಯಲ್ಲಿ ಮ್ಯೂಚವಲ್ ಫಂಡ್ಸ್ ಹಾಗೂ ವಿಮಾ ಕಂಪನಿಗಳು ಒಟ್ಟು ಶೇ.31.33 ಷೇರುಗಳನ್ನು ಹೊಂದಿವೆ. ಇವುಗಳಲ್ಲಿ ಎಲ್ಐಸಿ ಇನ್ಫೋಸಿಸ್ ನ ಅತೀದೊಡ್ಡ ಷೇರುದಾರ ಸಂಸ್ಥೆಯಾಗಿದೆ. ಅಲ್ಲದೆ, ವಿಮಾ ಕಂಪನಿಗಳ ಪೈಕಿ ಅತೀಹೆಚ್ಚು ಷೇರುಗಳನ್ನು ಹೊಂದಿರುವ ಸಂಸ್ಥೆ ಕೂಡ ಆಗಿದೆ. ಎಲ್ಐಸಿ ಏಜೆಂಟ್ ಹಾಗೂ ಉದ್ಯೋಗಿಗಳ  ಗ್ರಾಚ್ಯುಟಿ ಮಿತಿ, ಕುಟುಂಬ ಪಿಂಚಣಿ, ವಿಮೆ ಕವರೇಜ್ ಹಾಗೂ ಇತರ ವಿಚಾರಗಳಿಗೆ ಸಂಬಂಧಿಸಿದ ಕೆಲವು ಬದಲಾವಣೆಗಳಿಗೆ  ಇತ್ತೀಚೆಗಷ್ಟೇ ಹಣಕಾಸು ಸಚಿವಾಲಯ ಅನುಮೋದನೆ ನೀಡಿತ್ತು. 
 

click me!