100 ರೂ. ಇದ್ದ ಕೇಜಿ ನಿಂಬೆಹಣ್ಣಿಗೆ ಈಗ 300 ರೂ!

By Suvarna News  |  First Published Apr 18, 2022, 6:16 AM IST

* ಇಳುವರಿ ಕುಸಿತ, ವಿದೇಶಕ್ಕೆ ರಫ್ತು ಏರಿಕೆಯಿಂದ ಬೆಲೆ ಭಾರಿ ಹೆಚ್ಚಳ

* 100 ಇದ್ದ ಕೇಜಿ ನಿಂಬೆಹಣ್ಣಿಗೆ ಈಗ .300!

* 1 ನಿಂಬೆಹಣ್ಣಿಗೆ 10 ರು.


ಬೆಂಗಳೂರು(ಏ.18): ಉತ್ತರ ಭಾರತದಲ್ಲಿ ನಿಂಬೆ ಬೆಲೆ ಕೇಜಿಗೆ 350 ರು.ಗೆ ಏರಿ ಇತ್ತೀಚೆಗೆ ನಿಂಬೆಹಣ್ಣಿನ ದರೋಡೆ ನಡೆದಿದ್ದುಂಟು. ಈಗ ಉತ್ತರ ಭಾರತ ಮಾತ್ರವಲ್ಲ, ರಾಜ್ಯದಲ್ಲಿ ಕೂಡ ನಿಂಬೆಹಣ್ಣಿನ ಬೆಲೆ ದಿನದಿಂದ ದಿನಕ್ಕೆ ಗಗನಕ್ಕೆ ಏರುತ್ತಿದೆ. ಉತ್ತಮ ಗಾತ್ರದ ನಿಂಬೆಹಣ್ಣಿನ ದರ ಪ್ರತಿ ಕೆಜಿಗೆ 300 ರು. ತಲುಪಿದೆ. ಕಡಿಮೆಯಾದ ಇಳುವರಿ, ಬೇಡಿಕೆ ಹೆಚ್ಚಿರುವ ಕೊಲ್ಲಿ ರಾಷ್ಟ್ರಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ರಫ್ತು ಆಗುತ್ತಿರುವ ಪರಿಣಾಮ ನಿಂಬೆಹಣ್ಣನ್ನು ಖರೀದಿಸಲು ಜನರು ಹಿಂಜರಿಯುವಂತಾಗಿದೆ.

ಈ ಮುಂಚೆ ಕೇಜಿಗೆ 100-150 ರು. ದರದಲ್ಲಿ ಒಂದು ಕೇಜಿ ದೊಡ್ಡ ಗಾತ್ರದ ನಿಂಬೆಹಣ್ಣು ಸಿಗುತ್ತಿತ್ತು. ಈಗ ಬೆಂಗಳೂರಿನ ಕೆ.ಆರ್‌.ಮಾರುಕಟ್ಟೆಯಂಥ ಪೇಟೆಯಲ್ಲಿ ಅತ್ಯಂತ ಎಳೆಯ, ಸಣ್ಣ ಗಾತ್ರದ ನಿಂಬೆಹಣ್ಣು ಕೆಜಿಗೆ ಕನಿಷ್ಠ 100 ರು. ಇದೆ. ಇಂಥ ಒಂದು ನಿಂಬೆಹಣ್ಣಿಗೆ 7-8 ರು. ಕೊಟ್ಟು ಖರೀದಿಸಬೇಕಾಗಿದೆ. ಸ್ವಲ್ಪ ದೊಡ್ಡ ಗಾತ್ರದ ಒಂದು ನಿಂಬೆ ಹಣ್ಣಿಗೆ 9ರಿಂದ 10 ರು.ವರೆಗೆ ಮಾರಾಟ ಮಾಡಲಾಗುತ್ತದೆ. ಆದರೆ ಹಾಪ್‌ಕಾಮ್ಸ್‌ನಲ್ಲಿ ಮಾತ್ರ ಒಂದು ಕೆಜಿ ನಿಂಬೆಹಣ್ಣಿನ ಬೆಲೆ 84 ರು. ಇದೆ.

Tap to resize

Latest Videos

ಏರಿಕೆಗೆ ಕಾರಣ ಏನು:

ರಾಜ್ಯಾದ್ಯಾಂತ ಜನವರಿ ಮತ್ತು ಫೆಬ್ರವರಿ ತಿಂಗಳಲ್ಲಿ ಬಿದ್ದ ಅಕಾಲಿಕ ಮಳೆಯಿಂದ ನಿಂಬೆ ಹಣ್ಣಿನ ಫಸಲಿನಲ್ಲಿ ಶೇ.40 ರಷ್ಟುಕುಸಿತವಾಗಿದೆ. ಇದು ಸಹ ಬೆಲೆ ಏರಿಕೆಗೆ ಪ್ರಮುಖ ಕಾರಣ. ರಾಜ್ಯದಲ್ಲಿ ಸುಮಾರು 21 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ನಿಂಬೆ ಬೆಳೆಯುತ್ತಿದ್ದು, ವಿಜಯಪುರ ಜಿಲ್ಲೆಯಲ್ಲಿ ಶೇ.75 ರಷ್ಟುನಿಂಬೆ ಬೆಳೆಯುವ ರೈತರಿದ್ದಾರೆ. ಆದರೆ, ಹೂವು ಬಿಡುವ ತಿಂಗಳಾದ ಜನವರಿ ಮತ್ತು ಫೆಬ್ರವರಿ ತಿಂಗಳಲ್ಲಿ ಅಕಾಲಿಕ ಮಳೆ ಬಿದ್ದಿದೆ. ಇದೇ ಕಾರಣದಿಂದ ನಿಂಬೆ ಹೂವು ಶೇ.50 ರಷ್ಟುಉದುರಿ ಹೋಗಿದೆ. ಅಲ್ಲದೆ, 100 ಹಣ್ಣು ಸಿಗುವ ಮರದಲ್ಲಿ ಕೇವಲ 50-60 ಹಣ್ಣು ಮಾತ್ರ ಸಿಗುತ್ತಿದೆ. ಇದು ಬೇಡಿಕೆ ಹೆಚ್ಚಾಗಲು ಕಾರಣವಾಗಿದೆ ಎಂದು ನಿಂಬೆ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಆಶೋಕ್‌ ಎಸ್‌.ಅಲ್ಲಾಪುರ ಮಾಹಿತಿ ನೀಡಿದರು.

ಬೇಸಿಗೆ ಪ್ರಾರಂಭವಾಗುತ್ತಿದ್ದಂತೆ ನಿಂಬೆ ಹಣ್ಣಿಗೆ ಕೊಂಚ ಪ್ರಮಾಣದಲ್ಲಿ ಬೆಲೆ ಏರಿಕೆಯಾಗುವುದು ಸಾಮಾನ್ಯ. ಜನರು ಸಹ ಹೆಚ್ಚಿನ ನಿಂಬೆ ಬಳಕೆ ಮಾಡುತ್ತಾರೆ. ಇಂತಹ ಸಂದರ್ಭದಲ್ಲಿ ಬೇಡಿಕೆಗೆ ತಕ್ಕಂತೆ ಪೂರೈಕೆ ಆಗದ ಹಿನ್ನೆಲೆಯಲ್ಲಿ ಬೆಲೆ ತುಸು ಹೆಚ್ಚಳವಾಗಿದೆ ಎಂದು ನಿಂಬೆ ಅಭಿವೃದ್ಧಿ ಮಂಡಳಿ ವ್ಯವಸ್ಥಾಪಕ ನಿರ್ದೇಶಕ ಸಂತೋಷ್‌ ಸಂಪಂಡಿ ಹೇಳುತ್ತಾರೆ.

ಆಂಧ್ರ ಮತ್ತು ತೆಲಂಗಾಣ ರಾಜ್ಯಗಳಿಂದ ಬೆಂಗಳೂರು ನಗರಕ್ಕೆ ನಿಂಬೆ ಹಣ್ಣು ಪೂರೈಕೆಯಾಗುತ್ತಿದೆ. ಆದರೆ ಈಗ ಬೇಡಿಕೆ ಹೆಚ್ಚು ಬಂದಿರುವ ಕೊಲ್ಲಿ ರಾಷ್ಟ್ರಗಳಿಗೆ ಮಾರಾಟ ಮಾಡಲಾಗುತ್ತಿರುವುದರಿಂದ ನಗರಕ್ಕೆ ಸಾಕಷ್ಟುನಿಂಬೆಹಣ್ಣು ಪೂರೈಕೆಯಾಗುತ್ತಿಲ್ಲ. ಚಿಲ್ಲರೆ ಮಾರಾಟದಲ್ಲಿ ಹಣ್ಣಿನ ಗಾತ್ರಕ್ಕೆ ಅನುಗುಣವಾಗಿ 7ರಿಂದ 10ರು.ವರೆಗೂ ಮಾರಾಟ ಮಾಡಲಾಗುತ್ತಿದೆ ಎಂದು ಹೆಬ್ಬಾಳದ ನಿಂಬೆ ಹಣ್ಣಿನ ವ್ಯಾಪಾರಿ ಕೃಷ್ಣಪ್ಪ ಮಾಹಿತಿ ನೀಡಿದರು.

ನಿಂಬೆ ರಸದ ಬೆಲೆ ಹೆಚ್ಚಳ:

ಸಾಮಾನ್ಯ ದಿನಗಳಲ್ಲಿ ಬೆಂಗಳೂರು ನಗರದಲ್ಲಿ ನಿಂಬೆ ಹಣ್ಣಿನ ಜ್ಯೂಸ್‌ (ಪಾನಕ) ಬೆಲೆಯಲ್ಲಿ 10 ರಿಂದ 15 ರು.ಇರುತ್ತಿತ್ತು. ಆದರೆ, ಈಗ ನಿಂಬೆ ಬೆಲೆ ಹೆಚ್ಚಳದಿಂದ 20ರಿಂದ 25 ರು.ಗಳ ವರೆಗೆ ಹೆಚ್ಚಳ ಮಾಡಲಾಗಿದೆ ಎಂದು ಅಂಗಡಿಗಳ ಮಾಲೀಕರು ವಿವರಿಸಿದರು.

ಬೆಲೆ ಭಾರಿ ದುಬಾರಿ

ಸಣ್ಣ ನಿಂಬೆಹಣ್ಣು = ಪ್ರತಿ ಹಣ್ಣಿಗೆ 7 ರಿಂದ 8 ರು.

ದೊಡ್ಡ ನಿಂಬೆಹಣ್ಣು = ಪ್ರತಿ ಹಣ್ಣಿಗೆ 9 ರಿಂದ 10 ರು.

ಮಾರುಕಟ್ಟೆದರ = ಪ್ರತಿ ಕೆ.ಜಿ.ಗೆ 300 ರು.

click me!