ಕೋಲಾರ: ಏಷ್ಯಾದ 2ನೇ ಅತೀ ದೊಡ್ಡ ಟೊಮೊಟೊ ಮಾರುಕಟ್ಟೆ ಖಾಲಿ ಖಾಲಿ..!

By Girish Goudar  |  First Published May 25, 2022, 11:53 AM IST

*   ಟೊಮೊಟೊಗೆ ಹೆಚ್ಚಿದ ಬೇಡಿಕೆ
*   ಟೊಮೊಟೊ ಮಾರುಕಟ್ಟೆಗೆ ನಾಸಿಕ್ ಹಾಗೂ ದೆಹಲಿಯಿಂದ ಆಮದು ಮಾಡಿಕೊಳ್ಳುವ ಪರಿಸ್ಥಿತಿ
*   ಭಾರೀ ಮಳೆಯ ಪರಿಣಾಮ ಕೋಲಾರದ ಎಪಿಎಂಸಿ ಮಾರುಕಟ್ಟೆಯಲ್ಲಿ ಟೊಮೊಟೊಗೆ ಬರ 
 


ವರದಿ: ದೀಪಕ್, ಏಷ್ಯಾನೆಟ್ ಸುವರ್ಣ ನ್ಯೂಸ್, ಕೋಲಾರ

ಕೋಲಾರ(ಮೇ.25): ಅದು ನಮ್ಮ ರಾಜ್ಯದಲ್ಲೇ ಇರುವ ಏಷ್ಯಾದ ಎರಡನೇ ಅತೀ ದೊಡ್ಡ ಟೊಮೊಟೊ ಮಾರುಕಟ್ಟೆ. ದೇಶ ವಿದೇಶಗಳಿಗೂ ಇಲ್ಲಿಂದ ರಫ್ತು ಟೊಮೊಟೊ ಮಾಡಲಾಗುತ್ತೆ. ಸದಾ ಜನಜಂಗುಳಿಯಿಂದ ಕೂಡಿರುತ್ತಿದ್ದ ಮಾರುಕಟ್ಟೆ ಇದೀಗ ಖಾಲಿ ಖಾಲಿಯಾಗಿ ಕಾಣಿಸುತ್ತಿದೆ. ಅಲ್ಪ ಸ್ವಲ್ಪ ಟೊಮೊಟೊ ಬಾಕ್ಸ್‌ಗಳು ಕಂಡು ಬರುತ್ತಿವೆ. ಅದ್ಯಾಕೆ ಅನ್ನೋ ಕುತೂಹಲಕ್ಕೆ ಈ ಸ್ಟೋರಿ ನೋಡಿ.

Latest Videos

undefined

ಹೌದು, ಇದು ಕೋಲಾರ ಜಿಲ್ಲೆಯಲ್ಲಿರುವ ಏಷ್ಯಾದಲ್ಲೇ ಇರುವ ಎರಡನೇ ಅತೀ ದೊಡ್ಡ ಟೊಮೊಟೊ ಮಾರುಕಟ್ಟೆ. ಪ್ರತಿದಿನ ದೇಶದ ವಿವಿಧ ಭಾಗಗಳಿಂದ ಸಾವಿರಾರು ಜನರು ಭೇಟಿ ಕೊಟ್ಟು ವ್ಯಾಪಾರ ಮಾಡಿ ತೆರಳುತ್ತಾರೆ. ಆದ್ರೆ ಕಳೆದ 10 ದಿನಗಳಿಂದ ಇಲ್ಲಿಗೆ ಭೇಟಿ ಕೊಡುವವರ ಸಂಖ್ಯೆ ಕಡಿಮೆ ಆಗಿದ್ದು, ಇಡೀ ಮಾರುಕಟ್ಟೆಯೇ ಖಾಲಿ ಖಾಲಿ ಕಾಣುತ್ತಿದೆ. ಇದಕ್ಕೆ ಪ್ರಮುಖ ಕಾರಣ ಸತತವಾಗಿ ಸುರಿದ ಮಳೆ. 

ಟೊಮೆಟೋ ಕೆಜಿಗೆ 125 ರೂ.: ಬೆಲೆ ಕೇಳಿ ದಂಗಾದ ಗ್ರಾಹಕರು..!

ಹೌದು, ಕಳೆದ ಕೆಲವು ದಿನಗಳ ಹಿಂದೆ ಜಿಲ್ಲೆಯಲ್ಲಿ ಬಿಟ್ಟು ಬಿಟ್ಟು ಸುರಿದ ಮಳೆಯ ಪರಿಣಾಮ ಕೋಲಾರದ ಎಪಿಎಂಸಿ ಮಾರುಕಟ್ಟೆಯಲ್ಲೇ ಟೊಮೊಟೊಗೆ ಬರ ಬಂದಿದೆ. ಇದೇ ಮೊದಲ ಬಾರಿ ಇಲ್ಲಿಂದ ದೇಶ ವಿದೇಶಗಳಿಗೆ ರಪ್ತು ಮಾಡುತ್ತಿದ್ದವರೇ ಇದೀಗ ಏಷ್ಯಾದ ಎರಡನೇ ಅತೀ ದೊಡ್ಡ ಟೊಮೊಟೊ ಮಾರುಕಟ್ಟೆಗೆ ನಾಸಿಕ್ ಹಾಗೂ ದೆಹಲಿಯಿಂದ ಆಮದು ಮಾಡಿಕೊಳ್ಳುವ ಪರಿಸ್ಥಿತಿ ಬಂದಿದೆ.

ಇನ್ನು ಟೊಮೊಟೊ ಸೀಸನ್ ಇದ್ರೂ ಸಹ ಮಾರುಕಟ್ಟೆಯಲ್ಲಿ ಎಲ್ಲಿ ನೋಡಿದ್ರು ಕೇವಲ ಖಾಲಿ ಕ್ರೇಟ್‌ಗಳು ಬಿಟ್ರೆ ಟೊಮೊಟೊ ಇರೋದು ಕಾಣುತ್ತಿಲ್ಲ. ಸದಾ ಜನರಿಂದ ತುಂಬಿ ತುಳುಕುತ್ತಿದ್ದು ಈಗ ಖಾಲಿ ಖಾಲಿ ಹೊಡೆಯುತ್ತಿದೆ.ವರ್ಷ ವಿಡೀ ಟೊಮೇಟೊ ಬೆಳೆದು ರಪ್ತು ಮಾಡುತ್ತಿದ್ದ ಮಾರುಕಟ್ಟೆ ಅದರಲ್ಲೂ ಮೇ ತಿಂಗಳಿಂದ ಆಗಸ್ಟ್ ವರೆಗೂ ಮರುಕಟ್ಟೆಯಲ್ಲಿ ಟೊಮೊಟೊ ತುಂಬಿ ತುಳುಕುತ್ತಿತ್ತು. ಆದರೆ ಈ ವರ್ಷ ಬಿದ್ದ ಭಾರೀ ಮಳೆಯಿಂದಾಗಿ ಎಲ್ಲರ ಲೆಕ್ಕಾಚಾರಗಳು ಉಲ್ಟಾ ಮಾಡಿದೆ. 

Karnataka Rains Effect: 100 ರ ಗಡಿಗೆ ತಲುಪಿದ ಟೊಮೆಟೋ ಬೆಲೆ..!

ಬೇಸಿಗೆಯಲ್ಲಿ ಮಿತಿ ಮೀರಿದ ತಾಪಮಾನದಿಂದ ಟೊಮೊಟೊ ಬೆಳೆ ಹಾಳಾಗಿತ್ತು, ಆಗ ಟೊಮೊಟೊಗೆ ಬೆಲೆಯೂ ಇರಲಿಲ್ಲ. ಹೀಗಾಗಿ ಕೆಲ ರೈತರು ಟೊಮೊಟೊ ಬೆಳೆ ಬೆಳೆಯಲು ರೈತರು ನಿರಾಸಕ್ತಿ ತೋರಿದ್ರು, ಆದ್ರೂ ಸಹ ಕೆಲ ರೈತರು ಟೊಮೊಟೊ ಬೆಳೆದಿದ್ರು, ಆದ್ರೆ ನಿರಂತರ ಮಳೆ ಸುರಿದ ಪರಿಣಾಮ ಎಲ್ಲಾ ಬೆಳೆಯುವ ನಾಶವಾಗಿದೆ. ಅಲ್ಪ ಸ್ವಲ್ಪ ಉಳಿದಿರುವ ಟೊಮೊಟೊಗೆ ಭಾರೀ ಡಿಮ್ಯಾಂಡ್ ಬಂದಿದ್ದು ಕೆಲ ರೈತರು ಜಾಕ್ ಪಾಟ್ ಹೊಡೆದಿದ್ದಾರೆ. ಕಳೆದ ತಿಂಗಳು 15 ಕೆಜಿಯ ಟೊಮೊಟೊ ಬಾಕ್ಸ್ ಗೆ 100 ರಿಂದ 200 ರುಪಾಯಿ ವರೆಗೂ ಹೋಗ್ತಿತ್ತು, ಆದ್ರೀಗ ಪ್ರತಿ 15 ಕೆಜಿ ಟೊಮೊಟೊ ಬಾಕ್ಸ್ ಗೆ 500 ರಿಂದ 1500 ರುಪಾಯಿವರೆಗೂ ಮಾರಾಟವಾಗ್ತಿದೆ. ಇನ್ನು ಕಳೆದ ವರ್ಷ ಇದೆ ಸಮಯದಲ್ಲಿ 19,147 ಕ್ವಿನ್ಟಲ್ ಟೊಮೊಟೊ ಬಂದಿತ್ತು, ಆದ್ರೆ ಈ ವರ್ಷ 5940 ಕ್ವಿನ್ಟಲ್ ಮಾತ್ರ ಟೊಮೊಟೊ ಬಂದಿದೆ.

ಒಟ್ಟಾರೆ ಟೊಮೊಟೊ ವ್ಯಾಪಾರವೇ ಹಾವು ಏಣಿ ಆಟದಂತಾಗಿದ್ದು, ವರ್ಷ ಪೂರ್ತಿ ದೇಶ ವಿದೇಶಗಳಿಗೆ ಟೊಮೊಟೊ ರಫ್ತು ಮಾಡ್ತಿದ್ದ ಏಷ್ಯಾದ ಎರಡನೇ ಅತೀ ದೊಡ್ಡ ಟೊಮೊಟೊ ಮಾರುಕಟ್ಟೆಗೆ ಇದೀಗ ಟೊಮೊಟೊ ಆಮದು ಮಾಡ್ತಿಕೊಳ್ತಿರೋದು ಆಶ್ಚರ್ಯ ತಂದಿರೋದಂತೂ ಸುಳಲ್ಲ.
 

click me!