
ಬೆಂಗಳೂರು (ಅ.8): ಭಾರತದ ಪ್ರಮುಖ ಹಣಕಾಸು ಸೇವಾ ಸಂಸ್ಥೆಗಳಲ್ಲಿ ಒಂದಾದ 'ಕೋಟಕ್ ಸೆಕ್ಯುರಿಟೀಸ್ ಲಿಮಿಟೆಡ್' (Kotak Securities Limited), ತನ್ನ ರಿಟೇಲ್ ವ್ಯವಹಾರವನ್ನು 'ಕೋಟಕ್ ನಿಯೋ' (Kotak Neo) ಎಂದು ಮರುಬ್ರಾಂಡ್ ಮಾಡುವುದಾಗಿ ಗುರುವಾರ ಅಧಿಕೃತವಾಗಿ ಘೋಷಿಸಿದೆ. ಭಾರತೀಯರ ಬದಲಾಗುತ್ತಿರುವ ಅಗತ್ಯಗಳನ್ನು ಪೂರೈಸುವ ಸಲುವಾಗಿ, ತನ್ನ ಡಿಜಿಟಲ್ ಹಾಗೂ ಅದರ ಆಧಾರಿತ ಸೇವೆಗಳನ್ನು ಏಕೀಕರಿಸಿ, ಭವಿಷ್ಯದ ಅಗತ್ಯಗಳಿಗೆ ಸಿದ್ಧವಾಗಿರುವ ಸಮಗ್ರ ಹೂಡಿಕೆ ಪರಿಸರ ವ್ಯವಸ್ಥೆಯನ್ನು ಸಂಸ್ಥೆಯು ರೂಪಿಸಿದೆ.
ಇಂದಿನ ಹಣಕಾಸು ಮಾರುಕಟ್ಟೆಗಳೊಂದಿಗೆ ಗ್ರಾಹಕರು ಸಂಪರ್ಕ ಸಾಧಿಸುವ ವಿಧಾನದಲ್ಲಿ ಮೂಲಭೂತ ಬದಲಾವಣೆಗಳು ಉಂಟಾಗಿವೆ. ಗ್ರಾಹಕರು ಈಗ ಹೆಚ್ಚಿನ ಆಯ್ಕೆಗಳು, ನಿರಂತರ ಡಿಜಿಟಲ್ ಅನುಭವ ಮತ್ತು ಪರಿಣಿತರ ಮಾರ್ಗದರ್ಶನವನ್ನು ಒಂದೇ ವೇದಿಕೆಯಲ್ಲಿ ಬಯಸುತ್ತಿದ್ದು, ಈ ಅಗತ್ಯಗಳನ್ನು ಪೂರೈಸಲು ಕೋಟಕ್ ನಿಯೋ ಮುಂದಾಗಿದೆ.
ಕೋಟಕ್ ಸೆಕ್ಯುರಿಟೀಸ್ ಕಳೆದ ಕೆಲವು ವರ್ಷಗಳಿಂದ ನಡೆಸಿಕೊಂಡು ಬಂದಿದ್ದ ಪರಿವರ್ತನಾ ಪಯಣದ ಭಾಗವಾಗಿ ಈ ಬದಲಾವಣೆ ಜಾರಿಯಾಗಿದೆ. ಕಂಪನಿಯು ಹೊಸ ತಂತ್ರಜ್ಞಾನ ಮೂಲಸೌಕರ್ಯ, ಉತ್ಪನ್ನ ನವೀನತೆ, ಸಂಶೋಧನೆ ಹಾಗೂ ಗ್ರಾಹಕ ಅನುಭವ ಕ್ಷೇತ್ರಗಳಲ್ಲಿ ಗಮನಾರ್ಹ ಹೂಡಿಕೆಗಳನ್ನು ಮಾಡಿದ್ದು, ವ್ಯವಹಾರವನ್ನು ಒಂದೇ ಬ್ರಾಂಡ್ ಗುರುತಿನ ಅಡಿಯಲ್ಲಿ ತಂದಿದೆ.
ಈ ಹೊಸ ಬ್ರಾಂಡ್ ಲಾಂಚ್ ಕುರಿತು ಮಾತನಾಡಿದ ಕೋಟಕ್ ನಿಯೋದ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (MD & CEO) ಶ್ರಿಪಾಲ್ ಶಾ, "ಹೂಡಿಕೆದಾರರ ಅಗತ್ಯಗಳು ನಿರಂತರವಾಗಿ ವಿಕಸಿಸುತ್ತಿವೆ. ಇಂದು ಅವರು ಕೇವಲ ಷೇರುಗಳು, ಮ್ಯೂಚುವಲ್ ಫಂಡ್‌ಗಳು ಅಥವಾ ಡೆರಿವೇಟಿವ್‌ಗಳಂತಹ ಪ್ರತ್ಯೇಕ ಉತ್ಪನ್ನಗಳ ದೃಷ್ಟಿಯಿಂದ ಮಾತ್ರ ಯೋಚಿಸುತ್ತಿಲ್ಲ. ಬದಲಿಗೆ, ಸಂಪತ್ತನ್ನು ಹೇಗೆ ನಿರ್ಮಿಸಬೇಕು, ತಮ್ಮ ಪೋರ್ಟ್‌ಫೋಲಿಯೊಗಳನ್ನು ಹೇಗೆ ವೈವಿಧ್ಯಗೊಳಿಸಬೇಕು ಹಾಗೂ ಆರ್ಥಿಕತೆಯ ವಿವಿಧ ಅವಕಾಶಗಳಲ್ಲಿ ಹೇಗೆ ಭಾಗವಹಿಸಬೇಕು ಎಂಬ ದೊಡ್ಡ ಚಿತ್ರಣದತ್ತ ಗಮನ ಹರಿಸುತ್ತಿದ್ದಾರೆ" ಎಂದು ತಿಳಿಸಿದರು.
"ಆದರೆ ಈ ಎಲ್ಲಾ ಅಗತ್ಯಗಳನ್ನು ಪೂರೈಸಲು ಹೂಡಿಕೆದಾರರು ಹಲವು ವೇದಿಕೆಗಳು, ಸೇವಾ ಪೂರೈಕೆದಾರರು ಮತ್ತು ಸಲಹೆಗಾರರೊಂದಿಗೆ ವ್ಯವಹರಿಸಬೇಕಾಗುತ್ತದೆ. ಕೋಟಕ್ ನಿಯೋ ಮೂಲಕ, ಈ ಹೂಡಿಕೆ ಪಯಣದ ಹೆಚ್ಚಿನ ಭಾಗವನ್ನು ಒಂದೇ ಸಮಗ್ರ ಪರಿಸರ ವ್ಯವಸ್ಥೆಯ ಅಡಿಯಲ್ಲಿ ಒಟ್ಟುಗೂಡಿಸುವುದು ನಮ್ಮ ಪ್ರಮುಖ ಉದ್ದೇಶವಾಗಿದೆ" ಎಂದು ಅವರು ಸ್ಪಷ್ಟಪಡಿಸಿದರು.
ಕೋಟಕ್ ನಿಯೋದ ಪ್ರಮುಖ ವೈಶಿಷ್ಟ್ಯವೆಂದರೆ ಡಿಜಿಟಲ್ ತಂತ್ರಜ್ಞಾನ ಮತ್ತು ಮಾನವ ಪರಿಣತಿಯನ್ನು ಅತ್ಯಂತ ಪರಿಣಾಮಕಾರಿಯಾಗಿ ಸಂಯೋಜಿಸಿರುವುದು. ಈ ಡಿಜಿಟಲ್-ಫಸ್ಟ್ ವೇದಿಕೆಯೊಂದಿಗೆ ಕೋಟಕ್‌ನ ದೇಶವ್ಯಾಪಿ ಶಾಖಾ ಜಾಲ, ಪಾಲುದಾರರ ನೆಟ್‌ವರ್ಕ್, ಸಂಶೋಧನಾ ಸಾಮರ್ಥ್ಯಗಳು ಹಾಗೂ ರಿಲೇಶನ್‌ಶಿಪ್ ಮ್ಯಾನೇಜರ್‌ಗಳ ಬೆಂಬಲವೂ ಗ್ರಾಹಕರಿಗೆ ಲಭ್ಯವಾಗಲಿದೆ. ಇದರಿಂದ ಹೂಡಿಕೆದಾರರು ತಮ್ಮ ಅಗತ್ಯಕ್ಕೆ ಅನುಗುಣವಾಗಿ ತಂತ್ರಜ್ಞಾನ ಆಧಾರಿತ ಸೇವೆ ಅಥವಾ ಪರಿಣಿತರ ನೇರ ಮಾರ್ಗದರ್ಶನವನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ಹೊಂದಿದ್ದಾರೆ.
ಈ ಪರಿವರ್ತನೆಯ ಭಾಗವಾಗಿ ಕೋಟಕ್ ನಿಯೋ ತನ್ನ ವೆಲ್ತ್ ಮ್ಯಾನೇಜ್‌ಮೆಂಟ್ ಸೇವೆಗಳ ವ್ಯಾಪ್ತಿಯನ್ನು ವಿಸ್ತರಿಸುತ್ತಿದ್ದು, ಎರಡು ಪ್ರಮುಖ ಸೇವೆಗಳನ್ನು ಪರಿಚಯಿಸಿದೆ.
ಕೋಟಕ್ ನಿಯೋ ಪ್ರೈವೇಟ್ ಕ್ಲೈಂಟ್ ಗ್ರೂಪ್: ಇದು ಹೂಡಿಕೆದಾರರಿಗೆ ಓಪನ್-ಆರ್ಕಿಟೆಕ್ಚರ್ ಪರಿಹಾರಗಳನ್ನು ಒದಗಿಸುತ್ತದೆ. ಸಂಸ್ಥಾತ್ಮಕ ಮಟ್ಟದ ಸಂಶೋಧನಾ ಪರಿಣತಿಯನ್ನು ಬಳಸಿಕೊಂಡು ವ್ಯಕ್ತಿಗಳು ಹಾಗೂ ಕುಟುಂಬಗಳು ತಮ್ಮ ಸಂಪತ್ತನ್ನು ನಿರ್ಮಿಸಲು, ನಿರ್ವಹಿಸಲು ಮತ್ತು ಸಂರಕ್ಷಿಸಲು ನೆರವಾಗುತ್ತದೆ.
ಕನೆಕ್ಟ್ ಪ್ಲಸ್ ಬೈ ಕೋಟಕ್ ನಿಯೋ (Connect Plus by Kotak Neo): ಇದು ವಿತರಕರಿಗಾಗಿ (Distributors) ರೂಪಿಸಲಾದ ವೇದಿಕೆಯಾಗಿದ್ದು, ಮ್ಯೂಚುವಲ್ ಫಂಡ್‌ಗಳು, ಇಕ್ವಿಟಿ ಬ್ರೋಕಿಂಗ್, ವಿಮೆ, ಪೋರ್ಟ್‌ಫೋಲಿಯೊ ಮ್ಯಾನೇಜ್‌ಮೆಂಟ್ ಸೇವೆಗಳು (PMS) ಹಾಗೂ ಆಲ್ಟರ್ನೇಟಿವ್ ಇನ್ವೆಸ್ಟ್‌ಮೆಂಟ್ ಫಂಡ್‌ಗಳು (AIF) ಸೇರಿದಂತೆ ವಿವಿಧ ಸಮಗ್ರ ಉತ್ಪನ್ನಗಳನ್ನು ಒದಗಿಸುತ್ತದೆ.
ವಿನ್ಯಾಸ ಮತ್ತು ತಂತ್ರಜ್ಞಾನದಲ್ಲಿ ನವೀನತೆಯನ್ನು ಅಳವಡಿಸಿಕೊಂಡಿರುವ ಕಂಪನಿಯು ಹಲವು ಅತ್ಯಾಧುನಿಕ ಸಾಮರ್ಥ್ಯಗಳನ್ನು ಗ್ರಾಹಕರಿಗೆ ನೀಡುತ್ತಿದೆ. ಅವುಗಳಲ್ಲಿ ಅಲ್ಗೊರಿದಮಿಕ್ ಟ್ರೇಡಿಂಗ್ (Algorithmic Trading) ಮತ್ತು ಸ್ಟ್ರಾಟಜಿ ಟೂಲ್‌ಗಳು, ಥೀಮ್ ಆಧಾರಿತ ಸ್ಟಾಕ್ ಬಾಸ್ಕೆಟ್‌ಗಳು ಮತ್ತು ಮ್ಯೂಚುವಲ್ ಫಂಡ್ ಪೋರ್ಟ್‌ಫೋಲಿಯೊ ಅನಾಲೈಸರ್, 'ನಿಯೋಮ್' (NEOM) ಮೂಲಕ ಹೂಡಿಕೆದಾರರಿಗೆ ಸಂಶೋಧನಾ ಒಳನೋಟಗಳನ್ನು ಪಡೆದುಕೊಳ್ಳಲು ನೆರವಾಗುವ ಕೃತಕ ಬುದ್ಧಿಮತ್ತೆ (AI) ಚಾಲಿತ ಸಹಾಯಕ ಹಾಗೂ ಬ್ಯಾಂಕಿಂಗ್, ಹೂಡಿಕೆ ಮತ್ತು ವೆಲ್ತ್ ಮ್ಯಾನೇಜ್‌ಮೆಂಟ್ ಪರಿಹಾರಗಳನ್ನು ಒಂದೇ ಸಂಪರ್ಕಿತ ವ್ಯವಸ್ಥೆಯಡಿ ತರುವುದರಿಂದ ಗ್ರಾಹಕರಿಗೆ ಸುಲಭ ಹಣಕಾಸು ಅನುಭವ ಸಿಗಲಿದೆ.
ಕೋಟಕ್ ನಿಯೋ ಎಂಬುದು ಕೋಟಕ್ ಸಿಕ್ಯುರಿಟೀಸ್ ಲಿಮಿಟೆಡ್‌ನ ಗ್ರಾಹಕ-ಮುಖಿ ಚಿಲ್ಲರೆ ವ್ಯವಹಾರವನ್ನು ಪ್ರತಿನಿಧಿಸುವ ಬ್ರಾಂಡ್ ಆಗಿದೆ. ಕೋಟಕ್ ಸಿಕ್ಯುರಿಟೀಸ್ ಲಿಮಿಟೆಡ್ ಮುಂದುವರೆಯೂ ಕಾನೂನುಬದ್ಧ ಸಂಸ್ಥೆಯಾಗಿಯೇ ಕಾರ್ಯನಿರ್ವಹಿಸಲಿದೆ. ಈ ಮರುಬ್ರಾಂಡಿಂಗ್‌ನಿಂದ ಈಗಿರುವ ಗ್ರಾಹಕರ ಖಾತೆಗಳು, ಉತ್ಪನ್ನಗಳು, ಸೇವೆಗಳು ಅಥವಾ ಆಡಳಿತಾತ್ಮಕ ಚೌಕಟ್ಟಿನಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.