ಇಂದಿನಿಂದ 1 ತಿಂಗಳು ಬೆಂಗಳೂರಲ್ಲಿ ಖಾದಿ ಉತ್ಸವ

By Kannadaprabha NewsFirst Published Jan 26, 2023, 6:30 AM IST
Highlights

ಅರಮನೆ ಮೈದಾನದ ತ್ರಿಪುರಾವಾಸಿನಿಯಲ್ಲಿ ಪ್ರದರ್ಶನ, ಸಿಎಂ ಬೊಮ್ಮಾಯಿ ಉದ್ಘಾಟನೆ, ರಾಜ್ಯ, ಹೊರರಾಜ್ಯಗಳ ಒಟ್ಟು 200 ಮಳಿಗೆಗಳು ಭಾಗಿ: ಎಂಟಿಬಿ ನಾಗರಾಜ್‌

ಬೆಂಗಳೂರು(ಜ.26):  ನಗರದ ಅರಮನೆ ಮೈದಾನದ ತ್ರಿಪುರಾವಾಸಿನಿಯಲ್ಲಿ ಜ.26ರಿಂದ ಫೆ.26ರವರೆಗೆ ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ವತಿಯಿಂದ ರಾಷ್ಟ್ರ ಮಟ್ಟದ ಖಾದಿ ಮತ್ತು ಗ್ರಾಮೋದ್ಯೋಗ ವಸ್ತು ಪ್ರದರ್ಶನ ಮತ್ತು ಮಾರಾಟ ‘ಖಾದಿ ಉತ್ಸವ- 2023’ ನಡೆಯಲಿದೆ. ನಿನ್ನೆ(ಬುಧವಾರ) ಪತ್ರಿಕಾಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಸಣ್ಣ ಪ್ರಮಾಣದ ಕೈಗಾರಿಕೆಗಳು, ಸಾರ್ವಜನಿಕ ಉದ್ಯಮಗಳ ಸಚಿವ ಎಂಟಿಬಿ ನಾಗರಾಜ್‌ ಅವರು, ಜ.26ರಂದು ಸಂಜೆ 4ಕ್ಕೆ ಖಾದಿ ಉತ್ಸವದ ಉದ್ಘಾಟನೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸುವರು. ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್‌.ಅಶ್ವತ್ಥ ನಾರಾಯಣ ಅವರು ಅಧ್ಯಕ್ಷತೆ ವಹಿಸುವರು ಎಂದು ಹೇಳಿದರು.

ಉತ್ಸವದಲ್ಲಿ ಕರ್ನಾಟಕದ 80 ಖಾದಿ ಮಳಿಗೆಗಳು, 40 ಗ್ರಾಮೋದ್ಯೋಗ ಮಳಿಗೆಗಳು ಹಾಗೂ ಹೊರ ರಾಜ್ಯದ 40 ಖಾದಿ ಮಳಿಗೆ ಮತ್ತು 40 ಗ್ರಾಮೋದ್ಯೋಗ ಮಳಿಗೆಗಳು ಸೇರಿ ಒಟ್ಟು 200 ಮಳಿಗೆಗಳನ್ನು ತೆರೆಯಲಾಗುವುದು. ಆಂಧ್ರಪ್ರದೇಶ, ಗುಜರಾತ್‌, ಜಮ್ಮು ಮತ್ತು ಕಾಶ್ಮೀರ, ಮಹಾರಾಷ್ಟ್ರ, ಪಂಜಾಬ್‌, ರಾಜಸ್ಥಾನ, ಒರಿಸ್ಸಾ, ಬಿಹಾರ್‌, ದೆಹಲಿ, ತಮಿಳುನಾಡು, ತೆಲಂಗಾಣ, ಉತ್ತರ ಪ್ರದೇಶ, ಉತ್ತರ ಖಂಡ್‌, ಪಶ್ಚಿಮ ಬಂಗಾಲದ ಖಾದಿ ಮತ್ತು ಗ್ರಾಮೋದ್ಯೋಗದವರು ಭಾಗವಹಿಸಲಿದ್ದಾರೆ.

2 ವರ್ಷದಿಂದ ದೋಟಿಹಾಳ ಖಾದಿ ಗ್ರಾಮೋದ್ಯೋಗ ಕೇಂದ್ರಕ್ಕೆ ಬೀಗ, ಧೂಳುಮಯವಾದ ನೇಯುವ ಮಗ್ಗಗಳು!

ಹಾಗೆಯೇ ರಾಜ್ಯದ ಬಾಗಲಕೋಟೆ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಬೆಳಗಾವಿ, ಬಳ್ಳಾರಿ, ಬೀದರ್‌, ವಿಜಯಪುರ, ಕೋಲಾರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಧಾರವಾಡ, ದಾವಣಗೆರೆ, ಗದಗ, ಹಾವೇರಿ, ಕೋಲಾರ, ಮೈಸೂರು, ರಾಮನಗರ, ತುಮಕೂರು, ಕಾರವಾರ, ಚಿತ್ರದುರ್ಗದಿಂದ ಮಳಿಗೆದಾರರು ಪಾಲ್ಗೊಳ್ಳುವರು ಎಂದು ಹೇಳಿದರು.

ಗ್ರಾಮೋದ್ಯೋಗ ಉತ್ಪನ್ನಗಳ ಮಾರಾಟ

ವಸ್ತು ಪ್ರದರ್ಶನದಲ್ಲಿ ಖಾದಿ ಮಂಡಳಿಯಿಂದ ವಿವಿಧ ಯೋಜನೆಗಳಡಿಯಲ್ಲಿ ಸಾಲ ಪಡೆದ ಉದ್ದಿಮೆದಾರರು ತಯಾರಿಸಿದ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ವ್ಯವಸ್ಥೆ ಮಾಡಲಾಗಿದೆ. ಗ್ರಾಮೋದ್ಯೋಗ ಉತ್ಪನ್ನಗಳಾದ ಸಂಚಾರ ಪದಾರ್ಥಗಳು, ಉಪ್ಪಿನ ಕಾಯಿ, ಪಾದರಕ್ಷೆಗಳು, ಕರಕುಶಲ ವಸ್ತುಗಳು, ಕೈಕಾಗದ ವಸ್ತುಗಳು, ಜೇನುತುಪ್ಪ, ಗೋಡಂಬಿ, ಔಷಧಿಯ ಉತ್ಪನ್ನಗಳು, ಚನ್ನಪಟ್ಟಣದ ಗೊಂಬೆಗಳು, ಇಳಕಲ್‌ ಸೀರೆಗಳು ಸೇರಿದಂತೆ ಮತ್ತಿತರು ವಸ್ತುಗಳ ಪ್ರದರ್ಶನ, ಮಾರಾಟ ನಡೆಯಲಿದೆ ಎಂದು ಎಂಟಿಬಿ ನಾಗರಾಜ್‌ ತಿಳಿಸಿದರು.

60 ಕೋಟಿ ವ್ಯವಹಾರ ನಿರೀಕ್ಷೆ

ಖಾದಿ ಉತ್ಸವ- 2020 ವಸ್ತುಪ್ರದರ್ಶನದಲ್ಲಿ 1.17 ಲಕ್ಷ ಜನರು ಭೇಟಿ ನೀಡಿದ್ದು, .40 ಕೋಟಿ ವಹಿವಾಟು ನಡೆದಿತ್ತು. ಈ ಬಾರಿ ಖಾದಿ ಉತ್ಸವದಲ್ಲಿ ಸುಮಾರು 1.50 ಲಕ್ಷ ಸಾರ್ವಜನಿಕರು ವಸ್ತು ಪ್ರದರ್ಶನಕ್ಕೆ ಭೇಟಿ ನೀಡುವ ನಿರೀಕ್ಷೆ ಇದೆ. ಅಂದಾಜು 50ರಿಂದ 60 ಕೋಟಿ ರು. ಮೌಲ್ಯದ ಖಾದಿ ಮತ್ತು ಗ್ರಾಮೋದ್ಯೋಗ ವಸ್ತುಗಳ ಮಾರಾಟವಾಗುವ ನಿರೀಕ್ಷೆ ಇದೆ ಎಂದು ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಕೆ.ವಿ.ನಾಗರಾಜ್‌ ತಿಳಿಸಿದರು.

ಖಾದಿ ದೇಶದ ಸಂಕೇತವಾಗಿ ಬಳಕೆಯಾಗಲಿ; ಗಾಂಧಿವಾದಿ ಬಸವಪ್ರಭು ಹೊಸಕೇರಿ

ನಿಫ್ಟ್‌ನೊಂದಿಗೆ ಒಪ್ಪಂದ

ರಾಜ್ಯ ಖಾದಿ ಮಂಡಳಿ ಅಭಿವೃದ್ಧಿಗೆ ಪೂರಕವಾಗುವಂತೆ ಬಾಕಿ ಇರುವ .24 ಕೋಟಿಗಳ ಅನುದಾನ ಬಿಡುಗಡೆಗೆ ಹಣಕಾಸು ಇಲಾಖೆ ಒಪ್ಪಿಗೆ ನೀಡಿದೆ. ಖಾದಿ ವಸ್ತ್ರಗಳತ್ತ ಯುವ ಜನರನ್ನು ಸೆಳೆಯಲು ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಫ್ಯಾಷನ್‌ ಟೆಕ್ನಾಲಜಿ(ನಿಫ್ಟ್‌) ಜೊತೆಗೆ 2014ರಿಂದ ಒಪ್ಪಂದ ಮಾಡಿಕೊಳ್ಳಲಾಗಿದೆ. ಇಲ್ಲಿ ಖಾದಿ ವಸ್ತ್ರ ವಿನ್ಯಾಸ ಮತ್ತು ಮಾರುಕಟ್ಟೆ ನಿರ್ವಹಣೆ ಕುರಿತು ಖಾದಿ ವಿನ್ಯಾಸಕಾರರಿಗೆ ತರಬೇತಿ ನೀಡಲಾಗುತ್ತಿದೆ ಎಂದು ಸಚಿವ ಎಂಟಿಬಿ ನಾಗರಾಜ್‌ ಮಾಹಿತಿ ನೀಡಿದರು.

ಶೇ.35 ರಿಯಾಯಿತಿ

ಗ್ರಾಹಕರಿಗೆ ರಿಯಾಯಿತಿ ದರದಲ್ಲಿ ಖಾದಿ ಮತ್ತು ರೇಷ್ಮೆ ವಸ್ತ್ರಗಳು ಲಭ್ಯವಾಗಬೇಕೆಂಬ ಉದ್ದೇಶದಿಂದ ಖಾದಿ ವಸ್ತುಗಳ ದರದಲ್ಲಿ ಶೇ.30ರಿಂದ 35 ಮತ್ತು ರೇಷ್ಮೆ ವಸ್ತುಗಳಿಗೆ ಶೇ.20ರಿಂದ 25ರಷ್ಟು ರಿಯಾಯಿತಿ ನಿಗದಿಪಡಿಸಲಾಗಿದೆ. ದೇಶದ 14 ರಾಜ್ಯಗಳ ಉತ್ಪನ್ನಗಳು ಇಲ್ಲಿ ದೊರೆಯುವುದರಿಂದ ಗ್ರಾಹಕರಿಗೆ ವೈವಿಧ್ಯಮಯ ಸಂಗ್ರಹ ಸಿಗಲಿದೆ. ರಾಜ್ಯದ 19 ಜಿಲ್ಲೆಗಳ ಖಾದಿ ಮತ್ತು ಗ್ರಾಮೋದ್ಯಮಗಳು ಈ ಮೇಳದಲ್ಲಿ ಪಾಲ್ಗೊಳ್ಳಲಿವೆ ಖಾದಿ ಮಂಡಳಿ ಸಿಇಒ ಬಸವರಾಜ್‌ ತಿಳಿಸಿದರು.

click me!