LIC Policy: ವಾರಸುದಾರರ ಕೈತಪ್ಪುವ ವಿಮೆ, ಠೇವಣಿ ಹಣ, ಏನು ಮಾಡಬೇಕು.?

By Kannadaprabha News  |  First Published Jan 17, 2022, 8:52 AM IST

ಪಾಲಿಸಿ ಮಾಡಿಸಿ ಕಂತು ತುಂಬಲಾಗದೆ ಬಿಟ್ಟವರು, ನಾಮಿನಿ ಮಾಡದೆ ಬಿಟ್ಟವರು, ಬದಲಾದ ವಿಳಾಸ ತಿಳಿಸದಿರುವುದು, ಸಾಯುವುದಕ್ಕಿಂತ ಮುಂಚೆ ವಾರಸುದಾರರಿಗೆ ವಿಮೆ ಅಥವಾ ಬ್ಯಾಂಕ್‌ ಠೇವಣಿ ಬಗ್ಗೆ ಹೇಳದೇ ಇರುವುದು ಹೀಗೆ ಹಲವಾರು ಕಾರಣಗಳಿಂದ ನಾಮಿನಿದಾರರಿಗೆ ಪಾವತಿಯಾಗದ ಸಾವಿರಾರು ಕೋಟಿ ರು. ಹಣ ಸರ್ಕಾರದಲ್ಲಿ ಕೊಳೆಯುತ್ತಿದೆ.


ಹಣಕಾಸು ಕಂಪನಿ ಅಥವಾ ಬ್ಯಾಂಕಿನಲ್ಲಿ ಅಲ್ಪಸ್ವಲ್ಪ ಹಣವನ್ನು ಜಮೆ, ಠೇವಣಿ ಇಟ್ಟಿದ್ದ ವೃದ್ಧರೊಬ್ಬರು ಸಾಯುವುದಕ್ಕಿಂತ ಮುಂಚೆ ತಮ್ಮ ಹೆಂಡತಿಗೆ ಅಥವಾ ವಾರಸುದಾರರಿಗೆ ತಮ್ಮ ಹಣಕಾಸಿನ ವ್ಯವಹಾರಗಳ ಬಗ್ಗೆ ಏನನ್ನೂ ಹೇಳದೆ ಕಣ್ಣುಮುಚ್ಚಿದ್ದರು. ಆಕೆ ಜೀವನ ಕಷ್ಟವಾಗಿ ಗಂಡ ಠೇವಣಿ ಇಟ್ಟ ಮೊತ್ತವನ್ನು ತನಗೆ ನೀಡಬೇಕೆಂದು ಬ್ಯಾಂಕುಗಳಿಗೆ ಎಡತಾಕುತ್ತಿದ್ದಾರೆ. ನನ್ನ ಸಂಬಂಧಿಯಾದ ಅವರ ಅಲೆದಾಟ ನೋಡಲಾಗದೆ ನಾನು ಖಾಸಗಿ ಬ್ಯಾಂಕಲ್ಲಿ ಮೃತರ ಹೆಸರಿನಲ್ಲಿ ಇದ್ದ ಮೊತ್ತವನ್ನು ಅವರ ನಾಮಿನಿ (ನಾಮನಿರ್ದೇಶಿತ)ದಾರಳಾದ ಅವರ ಹೆಂಡತಿಗೆ ಬಟವಾಡೆ ಮಾಡಬೇಕು ಎಂದು ಬ್ಯಾಂಕ್‌ ಮ್ಯಾನೇಜರರಿಗೆ ವಿನಂತಿಸಿದೆ.

ವೃದ್ಧ ಸಾಯುವಾಗ ಬ್ಯಾಂಕ್‌ ಖಾತೆಗೆ ಯಾರನ್ನೂ ನಾಮಿನಿ ಮಾಡಿಲ್ಲ. ಹೀಗಾಗಿ ಮರಣ ಉತಾರ ಇದ್ದರಷ್ಟೆಸಾಲದು, ವಾರಸಾ/ಉತ್ತರ ಜೀವಿ ಪ್ರಮಾಣ ಪತ್ರ, ವಾರಸುದಾರರ ಆಧಾರ ಕಾರ್ಡ್‌, ಪಾನ್‌ಕಾರ್ಡ್‌, ಬ್ಯಾಂಕ್‌ ಖಾತೆಯ ಪಾಸ್‌ಬುಕ್‌, ಸ್ಟಾಂಪ್‌ ಪೇಪರ್‌ ಮೇಲೆ ಮಾಡಿಸಿದ ವಾರಸುದಾರರ ಅಫಿಡವಿಟ್‌ ಬೇಕು ಎಂದು ಒಂದು ದೊಟ್ಟಪಟ್ಟಿಯನ್ನೇ ಬ್ಯಾಂಕಿನವರು ಕೊಟ್ಟರು.

Tap to resize

Latest Videos

undefined

Digital Gold: ಚಿನ್ನಾಭರಣ ಖರೀದಿ ಬದಲು ಬಂಗಾರದ ಈ ಯೋಜನೆಯಲ್ಲಿ ಹೂಡಿಕೆ ಮಾಡಿ!

ವಯೋವೃದ್ಧ ಇಟ್ಟಹತ್ತಿಪ್ಪತ್ತು ಸಾವಿರ ರು. ಬಿಡಿಸಿಕೊಳ್ಳಲು ಇಷ್ಟೆಲ್ಲಾ ದಾಖಲೆ ತರಬೇಕೇ? ಖಾತೆ ತೆರೆಯುವಾಗ, ಠೇವಣಿ ಇಟ್ಟುಕೊಳ್ಳುವಾಗ ಅರ್ಜಿ ಫಾರ್ಮಿನಲ್ಲಿ ನಾಮಿನಿ ಕಾಲಂ ಇದೆ, ಅದನ್ನು ನೀವು ಏಕೆ ಖಾಲಿ ಬಿಟ್ಟಿದ್ದೀರಿ? ಅಶಿಕ್ಷಿತ ಖಾತೆದಾರರನ್ನು ವಿಚಾರಿಸಿ ಅವರ ನಾಮಿನಿಯನ್ನು ನೀವು ಕಾಲಂನಲ್ಲಿ ಬರೆಯಬೇಕಲ್ಲವೆ? ಹಣ ಇಟ್ಟುಕೊಳ್ಳುವಾಗ ಯಾವ ದಾಖಲೆಯೂ ಬೇಡ. ಆದರೆ ಹಣ ಹಿದಿರುಗಿಸಬೇಕಾದರೆ ಹತ್ತಾರು ದಾಖಲೆ ಕೇಳುತ್ತೀರಿ ಎಂದು ದಬಾಯಿಸಿದೆ.

ಸಾಮಾನ್ಯರ ಅರಿಕೆಗೆ ಬೆಲೆ ಇಲ್ಲ

ನಾನು ಒಬ್ಬ ಶ್ರೀಸಾಮಾನ್ಯನಂತೆ ಅವರಿಗೆ ಅರಿಕೆ ಮಾಡಿದೆ. ಆದರೂ ಅವರು ಸೊಪ್ಪು ಹಾಕಲಿಲ್ಲ. ಮಾರನೆಯ ದಿನ ನನ್ನ ಕಚೇರಿಯಿಂದ ಕರೆ ಮಾಡಿ ಆಫೀಸಿಗೆ ಬರುವಂತೆ ಮ್ಯಾನೇಜರಿಗೆ ಖಡಕ್‌ ಧ್ವನಿಯಲ್ಲಿ ಹೇಳಿದೆ. ಮ್ಯಾನೇಜರ್‌ ಬಂದರು. ಹಿಂದಿನ ದಿನ ಅವರ ಬ್ಯಾಂಕಿನಲ್ಲಿ ನಡೆದದ್ದನ್ನು ಜ್ಞಾಪಿಸಿದೆ. ‘ಸರಿ ಮಾಡಿಸುತ್ತೇನೆ ಸರ್‌. ಸದ್ಯ ನಿಮ್ಮ ಬಳಿ ಇರುವ ಮರಣ ಪತ್ರ, ಆಧಾರ್‌ ಕಾರ್ಡ್‌ ಮತ್ತು ಒಂದು ಅಫಿಡವಿಟ್‌ ಕೊಡಿ ಸಾಕು’ ಎಂದು ಅವುಗಳನ್ನು ಪಡೆದುಕೊಂಡು ತೆರಳಿದರು. ಮಾರನೆಯ ದಿನ ಹಣ ಬಟವಾಡೆಯಾಯಿತು. ಸೋಜಿಗವೆಂದರೆ, ಅಧಿಕಾರದ ಬಲ ಇದ್ದರೆ ನಿಯಮಗಳು ಸಡಿಲವಾಗುತ್ತವೆ!

National Start Up Day ಐಟಿ-ಬಿಟಿಯಲ್ಲಿ ದೇಶದಲ್ಲೇ ಕರ್ನಾಟಕ ಪ್ರಥಮ ಸ್ಥಾನ

ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಇರುವ ಮೊತ್ತವನ್ನು ಬಿಡಿಸಿಕೊಳ್ಳುವುದಕ್ಕೂ ಇದೇ ಮಾರ್ಗವನ್ನು ಬಳಸಿದೆ. ಆದರೆ ಅವರು ದಾಖಲೆಗಳಷ್ಟೇ ಅಲ್ಲ. ಕೋರ್ಟ್‌ನಿಂದ ಸಕ್ಷೇಶನ್‌ ಸರ್ಟಿಫಿಕೇಟ್‌ ತರಬೇಕು ಎಂದು ಹೇಳಿದರು. ನಮ್ಮ ಹಣ ನಾವು ತೆಗೆದುಕೊಳ್ಳಬೇಕಾದರೆ ಪ್ರಕರಣ ದಾಖಲಿಸಲು ವಕೀಲರಿಗೆ ಶುಲ್ಕ ಕೊಡಬೇಕು. ಕ್ಲೇಮ್‌ ಮೊತ್ತಕ್ಕೆ ಶೇ.3ರಿಂದ 5ರಷ್ಟುಕೋರ್ಟ್‌ ಶುಲ್ಕ ಕಟ್ಟಬೇಕು. ಆ ಖರ್ಚು ಯಾರು ಕೊಡುತ್ತಾರೆ? ಸಕ್ಷೇಶನ್‌ ಸರ್ಟಿಫಿಕೇಟ್‌ ತರಬೇಕಂತ ಯಾವ ಕಾನೂನಿನಲ್ಲಿದೆ ತೋರಿಸಿ. ಇಲ್ಲದಿದ್ದರೆ ನಿಮ್ಮ ಮೇಲೆ ದೂರು ದಾಖಲಿಸುತ್ತೇನೆ ಎಂದು ಬೆದರಿಕೆ ಹಾಕಿದೆ.

ಆ ಬ್ಯಾಂಕಿನ ಕಾನೂನು ಸಲಹೆಗಾರರಾದ ವಕೀಲರು ನನಗೆ ಕರೆ ಮಾಡಿ, ಕೆಲವು ಸಲ ಠೇವಣಿ ಮೊತ್ತ ಬಹಳವಿದ್ದಾಗ ವಾರಸುದಾರರಲ್ಲಿ ಪಾಲು ಹಂಚಿಕೆಯ ವಿಷಯದಲ್ಲಿ ಜಗಳವಾಗಿ ಬ್ಯಾಂಕ್‌ ಮ್ಯಾನೇಜರನ್ನು ಪಾರ್ಟಿ ಮಾಡಿ ಕೋರ್ಟಿನಲ್ಲಿ ಪ್ರಕರಣ ದಾಖಲಿಸಿದ ಉದಾಹರಣೆಗಳಿವೆ. ಅದಕ್ಕಾಗಿ ಸೂಕ್ತ ದಾಖಲೆಗಳಿಲ್ಲದೆ ಹಣ ಬಿಡುಗಡೆ ಮಾಡಿದರೆ ಮ್ಯಾನೇಜರಿಗೇ ಕಂಟಕ ಬರುತ್ತದೆ ಎಂದು ಸಮಸ್ಯೆ ತಿಳಿಸಿದರು. 6 ತಿಂಗಳ ನಂತರ ಕೆಲವು ಅವಶ್ಯ ದಾಖಲೆಗಳನ್ನು ನೀಡಿದ ಮೇಲೆ ಮೊತ್ತವನ್ನು ವಾರಸುದಾರರ ಖಾತೆಗೆ ವರ್ಗಾಯಿಸಲಾಯಿತು.

ಗ್ರಾಹಕ ಸ್ನೇಹಿ ನಿಯಮ ಬೇಕು

ಈ ಎರಡು ಘಟನೆಗಳನ್ನು ಇಲ್ಲಿ ವಿವರಿಸುವ ಉದ್ದೇಶವೇನೆಂದರೆ ರಿಸರ್ವ್ ಬ್ಯಾಂಕ್‌ ಗೈಡ್‌ಲೈನ್ಸ್‌ ಹೆಸರಿನಲ್ಲಿ ಖಾತೆದಾರರಿಗೆ, ಠೇವಣಿದಾರರಿಗೆ, ಅವರ ವಾರಸುದಾರರಿಗೆ ಆಗುತ್ತಿರುವ ಈ ಸಮಸ್ಯೆಗಳನ್ನು ತಪ್ಪಿಸಲು, ಖಾತೆ ತೆರೆಯುವಾಗ ಮತ್ತು ಠೇವಣಿ ಇಟ್ಟುಕೊಳ್ಳುವಾಗಲೇ ನಾಮಿನಿ ಕಡ್ಡಾಯ ಮಾಡಬೇಕು. ಖಾತೆ ಅಥವಾ ಠೇವಣಿದಾರರು ಮರಣ ಹೊಂದಿದರೆ ಅವರ ನಾಮಿನಿಗೆ ನೇರವಾಗಿ ಹಣ ಸಂದಾಯವಾಗುವಂತೆ ಮಾಡಬೇಕು. ಇಲ್ಲದಿದ್ದರೆ ಕೆಲವು ಸಾರಿ ಮೃತರ ವಾರಸುದಾರರು ಬಹಳ ಜನ ಇರುತ್ತಾರೆ. ಅವರು ಬೇರೆ ಊರುಗಳಲ್ಲಿ ಇರುತ್ತಾರೆ.

Aditya Birla Fashion ಡೇಟಾ ಆನ್‌ಲೈನ್ ಲೀಕ್: 50 ಲಕ್ಷಕ್ಕೂ ಹೆಚ್ಚು ಜನರ ವೈಯಕ್ತಿಕ ಮಾಹಿತಿ ಬಹಿರಂಗ

ಅವರಲ್ಲಿ ಹೊಂದಾಣಿಕೆ ಇಲ್ಲದಿದ್ದರೆ ಅವರು ಬರಲು ಒಪ್ಪಲಾರರು ಅಥವಾ ಕೆಲವರು ಮರಣ ಹೊಂದಿರಲೂಬಹುದು. ಅವರೆಲ್ಲರೂ ಬರಬೇಕು, ಮೇಲೆ ಹೇಳಿದ ಎಲ್ಲಾ ದಾಖಲೆಗಳನ್ನೂ ತರಬೇಕು ಎಂದರೆ ಹೇಗೆ ಸಾಧ್ಯ? ಹಾಗಾಗಿ ಸಂಬಂಧಪಟ್ಟವರು ನಿಯಮಗಳನ್ನು ಗ್ರಾಹಕ ಸ್ನೇಹಿ ಮಾಡಬೇಕು. ನಾಗರಿಕರಿಗೆ ಬ್ಯಾಂಕ್‌ ವ್ಯವಹಾರ ಈಗ ಕಡ್ಡಾಯವಾಗಿದೆ. ಪ್ರತಿಯೊಬ್ಬರೂ ಬ್ಯಾಂಕ್‌ ಖಾತೆ ತೆರೆಯಲೇಬೇಕಾದ ಅನಿವಾರ್ಯವಿದೆ. ಸಬ್ಸಿಡಿ, ಸಣ್ಣಪುಟ್ಟ ಸ್ಕೀಮ್‌ಗಳ ಫಲಾನುಭವಿಯಾಗಬೇಕಾದರೆ, ವ್ಯಾಪಾರ, ವೃತ್ತಿ, ವ್ಯವಹಾರ ಮಾಡಬೇಕಾದರೆ, ಹಣ ವರ್ಗಾಯಿಸಬೇಕಾದರೆ ಬ್ಯಾಂಕ್‌ ಖಾತೆ ಬೇಕೇಬೇಕು.

ಅನ್‌ಕ್ಲೇಮ್ಡ್‌ ಹಣ ಎಷ್ಟು?

ಅನಿವಾರ್ಯವಾಗಿ ಖಾತೆ ತೆರೆದವರ ಮೊತ್ತ, ಹಿಂತೆಗೆಯಲಾಗದ ಅಲ್ಪಸ್ವಲ್ಪ ಜಮೆ, ಠೇವಣಿ ಹಣಗಳು ಮೇಲೆ ಹೇಳಲಾದ ಕಾರಣಗಳಿಂದ ಬಟವಾಡೆಯಾಗದೇ ಉಳಿಯುತ್ತದೆ. ಜೀವ ವಿಮಾ ಕಂಪನಿಗಳಲ್ಲೂ ಹೀಗೆಯೇ ಆಗುತ್ತದೆ. ಮೊದಲು ಪಾಲಿಸಿ ಮಾಡಿಸಿ ನಂತರ ಕಂತು ತುಂಬಲಾಗದೆ ಬಿಟ್ಟವರು, ನಾಮಿನಿ ಮಾಡದೆ ಬಿಟ್ಟವರು, ವಿಳಾಸ ಬದಲಾದರೆ ವಿಮಾ ಕಂಪನಿಗೆ ತಿಳಿಸದೆ ಇರುವುದು, ಸಾಯುವುದಕ್ಕಿಂತ ಮುಂಚೆ ವಾರಸುದಾರರಿಗೆ ವಿಮೆ ಮಾಡಿಸಿದ ಬಗ್ಗೆ ಹೇಳದೇ ಇರುವುದು ಹೀಗೆ ಹಲವಾರು ಕಾರಣಗಳಿಂದ ವಿಮೆದಾರರಿಗೆ ಅಥವಾ ನಾಮಿನಿದಾರರಿಗೆ ಪಾಲಿಸಿ ಮೊತ್ತ ಸಂದಾಯವಾಗುವುದೇ ಇಲ್ಲ. ಹೀಗೆ ಬ್ಯಾಂಕ್‌ ಮತ್ತು ಜೀವ ವಿಮಾ ಕಂಪನಿಗಳಲ್ಲಿ ಸಂದಾಯವಾಗದೆ ಅನ್‌ಕ್ಲೇಮ್ಡ್ ಎಂದು 50000 ಕೋಟಿ ಮೊತ್ತ 2020ರ ಡಿಸೆಂಬರ್‌ ಅವಧಿಯಲ್ಲಿ ಉಳಿದಿದೆ. ಎಲ್‌ಐಸಿಯಲ್ಲಿ 19,100 ಕೋಟಿ ಮತ್ತು ಎಸ್‌ಬಿಐನಲ್ಲಿ 1.31 ಕೋಟಿ ಖಾತೆದಾರರ 3,577 ಕೋಟಿ ಮೊತ್ತ ಉಳಿದಿದೆ. 8.13 ಕೋಟಿ ಇಂತಹ ಒಟ್ಟಾರೆ ಖಾತೆಗಳು ವಿವಿಧ ಬ್ಯಾಂಕುಗಳಲ್ಲಿ ಇವೆ.

ಈ ಹಣ ಎಲ್ಲಿಗೆ ಹೋಗುತ್ತೆ?

ಹೀಗೆ ಹಿಂತೆಗೆಯಲಾಗದ ಮೊತ್ತವನ್ನು ಬ್ಯಾಂಕ್‌ ಮತ್ತು ವಿಮಾ ಕಂಪನಿಗಳು ರಿಸರ್ವ್ ಬ್ಯಾಂಕ್‌ ಆಫ್‌ ಇಂಡಿಯಾದ ಡೆಪಾಸಿಟರ್‌ ಎಜುಕೇಶನ್‌ ಆ್ಯಂಡ್‌ ಅವೇರ್‌ನೆಸ್‌ ಫಂಡ್‌ಗೆ ವರ್ಗಾಯಿಸುತ್ತವೆ. ಬ್ಯಾಂಕಿನ ಕಠಿಣ ನಿಯಮಗಳಿಂದಾಗಿ ಸಾರ್ವಜನಿಕರ ಅದರಲ್ಲೂ ಅಶಿಕ್ಷಿತರ, ಬಡವರ, ಕೋರ್ಟು ಕಚೇರಿ ಅಲೆಯಲಾಗದ ಮುಗ್ಧ ಜನರ ಹಣವನ್ನು ಸರ್ಕಾರ ಅವರ ಮನೆಬಾಗಿಲಿಗೆ ತಲುಪಿಸಬೇಕು. ಸಾಲ ಮರುಪಾವತಿ ಮಾಡದಿದ್ದರೆ ಆಸ್ತಿ ಜಪ್ತಿಮಾಡುವ ಬ್ಯಾಂಕುಗಳು, ಜನರೇ ನಿಮ್ಮ ಹಣ ನಮ್ಮಲ್ಲಿದೆ, ಬಂದು ತೆಗೆದುಕೊಂಡು ಹೋಗಿ ಎಂದು ಎಂದಾದರೂ ನೋಟಿಸ್‌ ಕೊಟ್ಟಿವೆಯೇ? ಜನರ ಹಣದಿಂದಲೇ ನಡೆಯುವ ಬ್ಯಾಂಕುಗಳು, ಜನರೇ ನಮ್ಮ ಪಾಲಕರು ಎಂದು ಏಕೆ ಭಾವಿಸುವುದಿಲ್ಲ? ನಿಗದಿತ ಸಮಯಕ್ಕೆ ಜನ ತೆರಿಗೆ ಕಟ್ಟಲಿಲ್ಲ ಎಂದರೆ ಅವರ ಮೇಲೆ ಕ್ರಮ ತೆಗೆದುಕೊಳ್ಳುವ ಸರ್ಕಾರ, ಹೀಗೆ ಹಿಂತೆಗೆಯಲಾಗದ ಖಾತೆದಾರರ ಮೊತ್ತವನ್ನು ಅವರಿಗೆ ಸರಳವಾಗಿ ಬಟವಾಡೆಯಾಗುವಂತೆ ಏಕೆ ಕ್ರಮ ತೆಗೆದುಕೊಳ್ಳಬಾರದು?

- ಡಾ. ಮಲ್ಲಿಕಾರ್ಜುನ ಗುಮ್ಮಗೋಳ, ಧಾರವಾಡ

click me!