ಇನ್ವೆಸ್ಟ್‌ ಕರ್ನಾಟಕ: 30000 ಕೋಟಿ ರು. ಹೂಡಿಕೆ?

By Kannadaprabha NewsFirst Published Jul 15, 2021, 8:33 AM IST
Highlights
  • ಲಾಕ್ಡೌನ್‌ ಸಂಕಷ್ಟದ ನಡುವೆಯೂ ರಾಜ್ಯವು 30 ಸಾವಿರ ಕೋಟಿ ರು. ಬಂಡವಾಳ ಹೂಡಿಕೆ ಆಕರ್ಷಿಸಿದೆ
  • ಬಿ.ಎಸ್‌. ಯಡಿಯೂರಪ್ಪ ನೇತೃತ್ವದಲ್ಲಿ ನಡೆಯಲಿರುವ ಏಕ ದಿನದ ‘ಇನ್ವೆಸ್ಟ್‌ ಕರ್ನಾಟಕ’ ಹೂಡಿಕೆದಾರರ ಸಮಾವೇಶ
  • 20ಕ್ಕೂ ಹೆಚ್ಚು ಕಂಪೆನಿಗಳೊಂದಿಗೆ ಒಪ್ಪಂದಕ್ಕೆ ಸರ್ಕಾರ ಸಹಿ

 ಬೆಂಗಳೂರು (ಜು.15):  ಲಾಕ್ಡೌನ್‌ ಸಂಕಷ್ಟದ ನಡುವೆಯೂ ರಾಜ್ಯವು 30 ಸಾವಿರ ಕೋಟಿ ರು. ಬಂಡವಾಳ ಹೂಡಿಕೆ ಆಕರ್ಷಿಸಿದ್ದು, ಗುರುವಾರ ನಗರದ ಖಾಸಗಿ ಹೋಟೆಲ್‌ನಲ್ಲಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ನೇತೃತ್ವದಲ್ಲಿ ನಡೆಯಲಿರುವ ಏಕ ದಿನದ ‘ಇನ್ವೆಸ್ಟ್‌ ಕರ್ನಾಟಕ’ ಹೂಡಿಕೆದಾರರ ಸಮಾವೇಶದಲ್ಲಿ 20ಕ್ಕೂ ಹೆಚ್ಚು ಕಂಪೆನಿಗಳೊಂದಿಗೆ ಒಪ್ಪಂದಕ್ಕೆ ಸರ್ಕಾರ ಸಹಿ ಹಾಕಲಿದೆ.

ಲಾಕ್‌ಡೌನ್‌ ಅವಧಿಯಲ್ಲೇ (ಏಪ್ರಿಲ್‌-ಮೇ) ರಾಜ್ಯದಲ್ಲಿ 17,718 ಕೋಟಿ ರು. ಬಂಡವಾಳ ಹೂಡಿಕೆಗೆ ಪ್ರಸ್ತಾವನೆಗಳು ಬಂದಿವೆ. ಒಟ್ಟಾರೆ ಗುರುವಾರ 20-22 ಕಂಪೆನಿಗಳಿಂದ 30,192 ಕೋಟಿ ರು. ಹೂಡಿಕೆಗೆ ಸಹಿ ಬೀಳುವುದು ಈಗಾಗಲೇ ಖಚಿತವಾಗಿದೆ. ಈ ಮೊತ್ತ 31,142 ಕೋಟಿ ರು.ಗೆ ಹೆಚ್ಚಳವಾಗುವ ಸಾಧ್ಯತೆಯೂ ಇದೆ ಎಂದು ಬೃಹತ್‌ ಕೈಗಾರಿಕೆ ಇಲಾಖೆ ಅಧಿಕಾರಿಗಳು ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.

30ನೇ ವಯಸ್ಸಿನಲ್ಲಿ ಫೈನಾನ್ಷಿಯಲ್‌ ಪ್ಲ್ಯಾನಿಂಗ್‌ ಹೇಗಿದ್ದರೆ ಲೈಫ್ ಚೆನ್ನಾಗಿರುತ್ತೆ?

ಮುಖ್ಯಮಂತ್ರಿಗಳ ಜತೆಗೆ ಬೃಹತ್‌ ಕೈಗಾರಿಕೆ ಸಚಿವ ಜಗದೀಶ್‌ ಶೆಟ್ಟರ್‌, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಹೆಚ್ಚುವರಿ ಮುಖ್ಯಮಂತ್ರಿ ಡಾ. ರಾಜ್‌ಕುಮಾರ್‌ ಖತ್ರಿ, ಕೈಗಾರಿಕಾ ಅಭಿವೃದ್ಧಿ ಆಯುಕ್ತ ಗುಂಜನ್‌ ಕೃಷ್ಣ ಅವರು ಖಾಸಗಿ ಹೋಟೆಲ್‌ನಲ್ಲಿ ನಡೆಯಲಿರುವ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಈ ವೇಳೆ 20ಕ್ಕೂ ಹೆಚ್ಚು ಬೃಹತ್‌ ಕೈಗಾರಿಕೆಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದರು.

ಎಲೆಕ್ಟ್ರಿಕ್‌ ವಾಹನಗಳು, ಡೇಟಾ ಸೇಂಟರ್‌, ಏರೋಸ್ಪೇಸ್‌ ಹಾಗೂ ರಕ್ಷಣಾ ಕಂಪನಿಗಳು ಸೇರಿದಂತೆ 20ಕ್ಕೂ ಹೆಚ್ಚು ಕಂಪನಿಗಳಿಂದ ಬಂಡವಾಳ ಹೂಡಿಕೆ ಒಪ್ಪಂದ ನಡೆಯಲಿದೆ.

ಅದಾನಿಯಿಂದ 5000 ಕೋಟಿ ಹೂಡಿಕೆ: ಲಿಥಿಯನ್‌ -ಅಯಾನ್‌ ಸೆಲ್‌ ಉತ್ಪಾದನಾ ಕ್ಷೇತ್ರದ ಪ್ರಮುಖ ಕಂಪನಿಯಾಗಿರುವ ಅಮೆರಿಕದ ಸಿ4ವಿ ರಾಜ್ಯದಲ್ಲಿ 4015 ಕೋಟಿ ರೂಪಾಯಿಗಳ ಹೂಡಿಕೆ ಮಾಡಲು ಮುಂದಾಗಿದೆ. ಸಿಂಗಾಪುರ ಮೂಲದ ಎಲ್‌ಎನ್‌ಜಿ ಟರ್ಮಿನಲ… ಆಪರೇಟರ್‌ ಎಲ್‌ಎನ್‌ಜಿ ಅಲೈಯನ್ಸ್‌ನೊಂದಿಗೆ 2,250 ಕೋಟಿ ರು. ಒಪ್ಪಂದ, ಅದಾನಿ ಡೇಟಾ ಸೆಂಟರ್‌ ಸ್ಥಾಪನೆಗೆ 5,000 ಕೋಟಿ ರು. ಒಪ್ಪಂದ ಸೇರಿ ಕೊರೋನಾ ಸಂಕಷ್ಟದ ನಡುವೆಯೂ ಕಳದೆ 6 ತಿಂಗಳಿಂದೀಚೆಗೆ ಹೂಡಿಕೆ ಪ್ರಸ್ತಾವನೆಗಳು ಹಾಗೂ ಒಪ್ಪಂದಗಳ ಮೂಲಕ ಕರ್ನಾಟಕಕ್ಕೆ 30 ಸಾವಿರ ಕೋಟಿ ರು. ಹೂಡಿಕೆ ಹರಿದು ಬಂದಿದೆ. ಇವೆಲ್ಲವುಗಳ ಎಂಒಯುಗೆ ಗುರುವಾರ ಸಹಿ ಬೀಳಲಿದೆ ಎಂದು ತಿಳಿದುಬಂದಿದೆ.

19,729 ಉದ್ಯೋಗ ಸೃಷ್ಟಿ: ಕೊರೊನಾ ಮತ್ತು ಲಾಕ್‌ಡೌನ್‌ನಿಂದ ಉದ್ಯಮಗಳು ಕಂಗಾಲಾಗಿರುವ ಸಂದರ್ಭದಲ್ಲೂ ಹೆಚ್ಚು ಬಂಡವಾಳ ಆಕರ್ಷಿಸಲು ರಾಜ್ಯ ಸರಕಾರ ಯಶಸ್ವಿಯಾಗಿದೆ.

ಕಳೆದೆರೆಡು ತಿಂಗಳಲ್ಲಿ (ಏಪ್ರಿಲ್‌-ಮೇ) 120 ಯೋಜನೆಗಳಿಗೆ ಅನುಮೋದನೆ ನೀಡಿರುವ ಸರಕಾರ ಒಟ್ಟು 17,718 ಕೋಟಿ ರು. ಮೊತ್ತದ ಹೂಡಿಕೆಗೆ ವಿವಿಧ ಕಂಪನಿಗಳ ಹೂಡಿಕೆಗೆ ಅನುಮೋದನೆ ನೀಡಿದೆ. ಲಾಕ್‌ಡೌನ್‌ ಸಂದರ್ಭದಲ್ಲಿ ಬಹುತೇಕ ಕಂಪೆನಿಗಳು ಯೋಜನೆಗಳ ಅನುಷ್ಠಾನಕ್ಕೆ ಕರ್ನಾಟಕವನ್ನೆ ಆಯ್ದುಕೊಂಡಿರುವುದು ಗಮನಾರ್ಹ ಸಂಗತಿ. ಈ ಹೂಡಿಕೆಗಳಿಂದ 19,729 ಉದ್ಯೊಗ ಸೃಷ್ಟಿಯ ನಿರೀಕ್ಷೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

click me!