ತೆರಿಗೆ ಕಟ್ಟದೆ ಜೈಲು ಸೇರಿದ ಉದ್ಯಮಿ!

By Web DeskFirst Published Feb 17, 2019, 10:34 AM IST
Highlights

ತೆರಿಗೆ ಕಟ್ಟದ ಉದ್ಯಮಿ 6 ತಿಂಗಳು ಜೈಲಿಗೆ| 7.35 ಕೋಟಿ ರು. ತೆರಿಗೆ ವಂಚಿಸಿದ್ದ ತುಮಕೂರು ಮೂಲದ ಸೆಲ್ವರಾಜ್‌| ಐಟಿ ಅಧಿಕಾರಿಗಳು 17 ಬಾರಿ ನೋಟಿಸ್‌ ನೀಡಿದ್ದರೂ ತೆರಿಗೆ ಕಟ್ಟಿರಲಿಲ್ಲ

ಬೆಂಗಳೂರು[ಫೆ.17]: ತೆರಿಗೆ ಪಾವತಿಸದೆ ವಂಚನೆ ಮಾಡುವವರ ವಿರುದ್ಧ ಕಾರ್ಯಾಚರಣೆ ಕೈಗೊಂಡಿರುವ ಆದಾಯ ತೆರಿಗೆ ಇಲಾಖೆ (ಐಟಿ) ಇದೀಗ ಮತ್ತೊಬ್ಬ ಉದ್ಯಮಿಯನ್ನು ಬಂಧಿಸಿ ಆರು ತಿಂಗಳ ಕಾಲ ಜೈಲು ಶಿಕ್ಷೆಯಾಗುವಂತೆ ಮಾಡಿದೆ.

ಶಿಕ್ಷೆಗೊಳಗಾದ ಉದ್ಯಮಿ ತುಮಕೂರು ಮೂಲದ ಸೆಲ್ವರಾಜ್‌. ಬಡ್ಡಿ ಸೇರಿದಂತೆ 7.35 ಕೋಟಿ ರು. ತೆರಿಗೆ ಬಾಕಿ ಉಳಿಸಿಕೊಂಡ ಆರೋಪದ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಐಟಿ ಅಧಿಕಾರಿಗಳು ತಿಳಿಸಿದ್ದಾರೆ. ತೆರಿಗೆ ಪಾವತಿಸುವಂತೆ ಬಂಧಿತ ಉದ್ಯಮಿಗೆ 17 ಬಾರಿ ನೋಟಿಸ್‌ ಜಾರಿಗೊಳಿಸಲಾಗಿತ್ತು. ಆದರೂ ತೆರಿಗೆ ಪಾವತಿಸಲು ಹಿಂದೇಟು ಹಾಕುತ್ತಿದ್ದ. ಹೀಗಾಗಿ ಉದ್ಯಮಿಯನ್ನುಬಂಧಿಸಿ ತೆರಿಗೆ ವಸೂಲಾತಿ ಅಧಿಕಾರಿ (ಟಿಆರ್‌ಓ) ಮುಂದೆ ಹಾಜರುಪಡಿಸಲಾಯಿತು. ಟಿಆರ್‌ಓ ತಮ್ಮ ವಿಶೇಷ ಅಧಿಕಾರ ಬಳಸಿ ಆರೋಪಿ ಸೆಲ್ವರಾಜ್‌ಗೆ ಶಿಕ್ಷೆ ಪ್ರಕಟಿಸಿದ್ದಾರೆ.

17 ಬಾರಿ ನೋಟಿಸ್‌ ನೀಡಿದರೂ ಯಾವುದೇ ಉತ್ತರ ನೀಡದಿದ್ದಾಗ ಉದ್ಯಮಿಗೆ 2018ರ ಅ.3ರಂದು ಬಂಧನ ವಾರಂಟ್‌ ಜಾರಿಗೊಳಿಸಲಾಯಿತು. 2019ರ ಜ.3ರಂದು ಟಿಆರ್‌ಓ ಮುಂದೆ ಹಾಜರಾದ ಸೆಲ್ವರಾಜ್‌ಗೆ ತೆರಿಗೆ ಪಾವತಿಗೆ ಮತ್ತೊಂದು ಅವಕಾಶ ನೀಡಲಾಗಿತ್ತು. ಈ ವೇಳೆ ಆರೋಪಿ ಸೆಲ್ವರಾಜ್‌ ತನಗೆ ವ್ಯಕ್ತಿಯೊಬ್ಬರಿಂದ ಒಂದು ಕೋಟಿ ರು. ಸಾಲದ ಮೊತ್ತವು ಬರಬೇಕಾಗಿದ್ದು, ಅದು ಬಂದಕೂಡಲೇ ತಲುಪಿಸಲಾಗುವುದು ಎಂಬುದಾಗಿ ಸ್ಪಷ್ಟನೆ ನೀಡಿದ್ದರು. ಆದರೆ, ಒಂದು ಕೋಟಿ ರು. ಸಾಲ ಮರುಪಾವತಿಯಾದರೂ ತೆರಿಗೆ ಪಾವತಿಸಿರಲಿಲ್ಲ. ಫೆ.14ರಂದು ಮತ್ತೊಮ್ಮೆ ವಿಚಾರಣೆಗೊಳಪಡಿಸಿದಾಗ ಸಾಲದ ಮೊತ್ತವು ಸೆಲ್ವರಾಜ್‌ಗೆ ಬಂದು ತಲುಪಿದರೂ ತೆರಿಗೆ ಪಾವತಿ ಮಾಡದೆ ವಂಚನೆ ಮಾಡುತ್ತಿರುವುದು ಬಹಿರಂಗಗೊಂಡಿತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಟಿಆರ್‌ಓ ವಿಚಾರಣೆ ನಡೆಸಿದ ವೇಳೆ ತೆರಿಗೆ ವಂಚನೆ ಮಾಡಿರುವುದು ಸಾಬೀತಾಗಿದೆ. ಹೀಗಾಗಿ ಆರೋಪಿ ಸೆಲ್ವರಾಜ್‌ಗೆ ಆರು ತಿಂಗಳ ಜೈಲು ಶಿಕ್ಷೆ ವಿಧಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ನಾಲ್ಕು ದಿನಗಳ ಹಿಂದೆಯಷ್ಟೇ (ಫೆ.12) ಐಟಿ ಅಧಿಕಾರಿಗಳು ತೆರಿಗೆ ಪಾವತಿಸದೆ ವಿದೇಶಕ್ಕೆ ಪ್ರಯಾಣಿಸಲು ಯತ್ನಿಸಿದ್ದ ಬೆಂಗಳೂರು ಮೂಲದ ಉದ್ಯಮಿಯನ್ನು ಮುಂಬೈನಲ್ಲಿ ಬಂಧಿಸಿ ಆರು ತಿಂಗಳ ಕಾಲ ಜೈಲಿಗೆ ಕಳುಹಿಸಿದ್ದರು. 11.94 ಕೋಟಿ ರು. ತೆರಿಗೆ ವಂಚನೆ ಮಾಡಿರುವ ಆರೋಪದ ಮೇಲೆ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ.

click me!