Karnataka budget 2023-24: ನೀರಾವರಿಗೆ 11,236 ಕೋಟಿ ಕೊಡುಗೆ: 38 ಯೋಜನೆಗಳಿಗೆ ಅನುಮೋದನೆ

By Sathish Kumar KHFirst Published Feb 17, 2023, 1:30 PM IST
Highlights

ನೀರಾವರಿಗೆ ಆದ್ಯತೆ ದೃಷ್ಟಿಯಿಂದ 2022-23ನೇ ಸಾಲಿನಲ್ಲಿ 11,236 ಕೋಟಿ ರೂ. ಮೊತ್ತದ 38 ಯೋಜನೆಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಜಲಸಂಪನ್ಮೂಲ ಇಲಾಖೆಯ ವತಿಯಿಂದ 1.5 ಲಕ್ಷ ಎಕರೆ ನೀರಾವರಿ ಸಾಮರ್ಥ್ಯ ಸೃಜಿಸಲಾಗುವುದು.

ಬೆಂಗಳೂರು (ಫೆ.17): ನೀರಾವರಿಗೆ ಆದ್ಯತೆ ದೃಷ್ಟಿಯಿಂದ ಸರ್ಕಾರವು 2022-23ನೇ ಸಾಲಿನಲ್ಲಿ 11,236 ಕೋಟಿ ರೂ. ಮೊತ್ತದ 38 ಯೋಜನೆಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಿದ್ದು, ಪ್ರಸಕ್ತ ಸಾಲಿನಲ್ಲಿ ಅನುಷ್ಠಾನಗೊಳಿಸಲಾಗುವುದು. ಪ್ರಸಕ್ತ ಸಾಲಿನಲ್ಲಿ ಜಲಸಂಪನ್ಮೂಲ ಇಲಾಖೆಯ ವತಿಯಿಂದ ಸುಮಾರು 1.5 ಲಕ್ಷ ಎಕರೆ ನೀರಾವರಿ ಸಾಮರ್ಥ್ಯವನ್ನು ಸೃಜಿಸಲಾಗುವುದು.

ಪ್ರಸಕ್ತ ಸಾಲಿನಲ್ಲಿ ಪ್ರಗತಿಯಲ್ಲಿರುವ ಜಗಳೂರು, ಕಿತ್ತೂರು, ಬಾಳಂಬೀಡ, ಹರಪನಹಳ್ಳಿ, ಯಾದಗಿರಿ, ರಾಯಚೂರಿನ ವಿವಿಧ ಕೆರೆಗಳನ್ನು ತುಂಬಿಸುವ ಯೋಜನೆಗಳನ್ನು ಈ ಸಾಲಿನಲ್ಲಿ ಪೂರ್ಣಗೊಳಿಸಲಾಗುವುದು. ಸಸಾಲಟ್ಟಿ-ಶಿವಲಿಂಗೇಶ್ವರ, ಮಂಟೂರು ಮಹಾಲಕ್ಷ್ಮೀ ಮತ್ತು ಶ್ರೀ ವೆಂಕಟೇಶ್ವರ ಏತ ನೀರಾವರಿ ಯೋಜನೆಗಳು ಮತ್ತು ಪೂರಿಗಾಲಿ ಸೂಕ್ಷ್ಮ ನೀರಾವರಿ ಯೋಜನೆಗಳನ್ನು ಪ್ರಸಕ್ತ ಸಾಲಿನಲ್ಲಿ ಪೂರ್ಣಗೊಳಿಸಲು ಕ್ರಮವಹಿಸಲಾಗುವುದು.

ಕಳಸಾ ಬಂಡೂರಿ ಯೋಜನೆಗೆ  1,000 ಕೋಟಿ ರೂ. ಮೀಸಲು: ಕಳಸಾ ಮತ್ತು ಬಂಡೂರಾ ನಾಲಾ ತಿರುವು ಯೋಜನೆಗಳಿಗೆ ಮಹದಾಯಿ ನ್ಯಾಯಾಧಿಕರಣದಿಂದ ಹಂಚಿಕೆಯಾದ 3.90 TMC ನೀರಿನ ಬಳಕೆಗಾಗಿ ವಿವರವಾದ ಯೋಜನಾ ವರದಿಗಳಿಗೆ (DPR) ಪ್ರಸಕ್ತ ಸರ್ಕಾರದ ಸತತ ಪ್ರಯತ್ನಗಳಿಂದಾಗಿ ಕೇಂದ್ರ ಜಲ ಆಯೋಗದಿಂದ ಅನುಮೋದನೆ ಪಡೆಯಲಾಗಿದೆ. ಈ ಹಿನ್ನೆಲೆಯಲ್ಲಿ ಸನ್ಮಾನ್ಯ ಪ್ರಧಾನಮಂತ್ರಿಗಳಿಗೆ ಹಾಗೂ ಕೇಂದ್ರ ಸರ್ಕಾರಕ್ಕೆ ರಾಜ್ಯದ ಜನತೆಯ ಪರವಾಗಿ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಯೋಜನೆಯ ಕಾಮಗಾರಿಗಳನ್ನು ಪ್ರಾರಂಭಿಸಲು 1,000 ಕೋಟಿ ರೂ. ಗಳನ್ನು ನೀಡಲು ಉದ್ದೇಶಿಸಲಾಗಿದೆ. ಈ ಯೋಜನೆಯ ಅನುಷ್ಠಾನಕ್ಕೆ ತ್ವರಿತ ಕ್ರಮಗಳನ್ನು ಕೈಗೊಳ್ಳಲಾಗುವುದು.

Karnataka Budget 2023-24: ರೈತರ ಆರ್ಥಿಕ ಸ್ಥಿತಿ ಸುಧಾರಣೆಗೆ ಒತ್ತು; ಭೂ ಸಿರಿ ನೂತನ ಯೋಜನೆ ಘೋಷಣೆ

ಭದ್ರಾ ಮೇಲ್ದಂಡೆ ರಾಷ್ಟ್ರೀಯ ಯೋಜನೆ ಜಾರಿ: ಕೇಂದ್ರ ಸರ್ಕಾರವು 2023-24ನೇ ಸಾಲಿನ ಆಯವ್ಯಯದಲ್ಲಿ ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ ಹಾಗೂ ತುಮಕೂರು ಜಿಲ್ಲೆಗಳ ರೈತರಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ಭದ್ರಾ ಮೇಲ್ದಂಡೆ ಯೋಜನೆಗೆ ಪ್ರಸಕ್ತ ಸರ್ಕಾರದ ತೀವ್ರ ಪ್ರಯತ್ನದ ಫಲವಾಗಿ 'ರಾಷ್ಟ್ರೀಯ ಯೋಜನೆ' ಮಾನ್ಯತೆ ದೊರೆಯುವ ಹಿನ್ನಲೆಯಲ್ಲಿ, ಕೇಂದ್ರ ಸರ್ಕಾರವು 5,300 ಕೋಟಿ ರೂ. ಸಹಾಯಧನ ಘೋಷಣೆ ಮಾಡಿದೆ. ಇದಕ್ಕಾಗಿ ರಾಜ್ಯದ ಜನತೆಯ ಪರವಾಗಿ ಸನ್ಮಾನ್ಯ ಪ್ರಧಾನ ಮಂತ್ರಿಗಳಿಗೆ ಹಾಗೂ ಕೇಂದ್ರ ಸರ್ಕಾರಕ್ಕೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಸದರಿ ಯೋಜನೆಯ ತೀವ್ರ ಅನುಷ್ಠಾನಕ್ಕೆ ರಾಜ್ಯ ಸರ್ಕಾರವು ಬದ್ಧವಾಗಿದೆ.

ತುಮಕೂರಿಗೆ ಎತ್ತಿನಹೊಳೆ ನೀರು ಪೂರೈಕೆ:  ರಾಜ್ಯದ ಮಹತ್ವಾಕಾಂಕ್ಷೆಯ ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯ ಪ್ರಥಮ ಹಂತದ ಕಾಮಗಾರಿಗಳು ಬಹುತೇಕ ಪೂರ್ಣಗೊಳ್ಳುವ ಹಂತದಲ್ಲಿದ್ದು, ತುಮಕೂರು ಜಿಲ್ಲೆವರೆಗಿನ ಗುರುತ್ವ ಕಾಲುವೆ ಮತ್ತು ಫೀಡರ್ ಕಾಲುವೆ ಕಾಮಗಾರಿಗಳನ್ನು ಪೂರ್ಣಗೊಳಿಸಿ, 2023-24ರಲ್ಲಿ ನೀರು ಪೂರೈಸಲು ಉದ್ದೇಶಿಸಲಾಗಿದೆ. ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ಕೆರೆಗಳಿಗೆ ನೀರನ್ನು ಪೂರೈಸುವ ಕಾಮಗಾರಿಗಳ ಶ್ರೀನಿವಾಸಪುರ ಮತ್ತು ಕೋಲಾರ ಕಾಮಗಾರಿಗಳಿಗೆ ಟೆಂಡರ್ ಕರೆಯಲಾಗಿದ್ದು, ಶೀಘ್ರದಲ್ಲಿಯೇ ಕಾಮಗಾರಿಗಳನ್ನು ಪ್ರಾರಂಭಿಸಿ ಪೂರ್ಣಗೊಳಿಸಲಾಗುವುದು. 

ತುಂಗಭದ್ರಾ ನದಿಗೆ ನವಲಿ ಬಳಿ ಸಮತೋಲನ ಜಲಾಶಯ:  ತುಂಗಭದ್ರಾ ಜಲಾಶಯದಲ್ಲಿ ಸಂಗ್ರಹಣಾ ಸಾಮರ್ಥ್ಯದ ಕೊರತೆಯನ್ನು ನಿವಾರಿಸಲು ಕೊಪ್ಪಳ ಜಿಲ್ಲೆಯ ನವಲಿ ಬಳಿ ಸಮತೋಲನಾ ಜಲಾಶಯ (Balancing reservoir) ನಿರ್ಮಿಸಲು ಯೋಜನಾ ವರದಿಯನ್ನು ಸಿದ್ಧಪಡಿಸಲಾಗಿದೆ. ಸದರಿ ಯೋಜನೆಯು ಅಂತರ್‌ ರಾಜ್ಯ ಯೋಜನೆಯಾಗಿದ್ದು, ಈಗಾಗಲೇ ಆಂಧ್ರಪ್ರದೇಶ ಸರ್ಕಾರದೊಂದಿಗೆ ಸಭೆ ನಡೆಸಲಾಗಿದೆ. ಈ ವಿಷಯದ ಕುರಿತು ಆಂಧ್ರಪ್ರದೇಶ ಹಾಗೂ ತೆಲಂಗಾಣ ಮುಖ್ಯಮಂತ್ರಿಗಳೊಂದಿಗೆ ಸಭೆ ಜರುಗಿಸಿ ಅನುಷ್ಠಾನಗೊಳಿಸಲು ಕ್ರಮವಹಿಸಲಾಗುವುದು. ಮೇಕೆದಾಟು ಯೋಜನೆಯ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನಲ್ಲಿ ತಮಿಳುನಾಡು ರಾಜ್ಯವು ದಾವೆ ಹೂಡಿದ್ದು, ಇದನ್ನು ಅನುಷ್ಠಾನಗೊಳಿಸಲು ಕ್ರಮ ವಹಿಸಲಾಗುವುದು. ಈ ಯೋಜನೆಗೆ ಅಗತ್ಯ ಅನುದಾನವನ್ನು ಕಲ್ಪಿಸಲಾಗುವುದು.

Women in Karnataka Budget 2023-24 : ಮಹಿಳೆಯರಿಗೆ ಬಂಪರ್‌ ಗಿಫ್ಟ್: ಮಹಿಳೆ- ವಿದ್ಯಾರ್ಥಿನಿಯರಿಗೆ ಉಚಿತ ಬಸ್‌ಪಾಸ್

ಆನ್‌ಲೈನ್‌ ಬಿಲ್‌ ಪಾವತಿಗೆ ಕ್ರಮ: ನಿಗಮಗಳ ವ್ಯಾಪ್ತಿಯಲ್ಲಿನ ಯೋಜನೆಗಳ ಪ್ರಗತಿಯನ್ನು ಮೇಲ್ವಿಚಾರಣೆ ಮಾಡಲು ಹಾಗೂ ಗುತ್ತಿಗೆದಾರರಿಗೆ ನೇರವಾಗಿ Online ಬಿಲ್ ಪಾವತಿಸಲು "Online Project Management System” ಅನ್ನು ಪ್ರಾರಂಭಿಸಲಾಗುವುದು. ರೈತರ ಜಮೀನುಗಳಿಗೆ ನೀರಾವರಿ ಸೌಲಭ್ಯ ಒದಗಿಸಿ ಉತ್ಪಾದನೆಯನ್ನು ಹೆಚ್ಚು ಮಾಡುವ ಉದ್ದೇಶಕ್ಕೆ ನಮ್ಮ ಸರ್ಕಾರ ಪ್ರಸಕ್ತ ವರ್ಷದಲ್ಲಿ ನೀರಾವರಿ ಕ್ಷೇತ್ರಕ್ಕೆ ಒಟ್ಟಾರೆ 25,000 ಕೋಟಿ ರೂ. ಗಳನ್ನು ಒದಗಿಸಲಾಗಿದೆ. ಕೃಷಿ ಮತ್ತು ಪೂರಕ ಚಟುವಟಿಕೆಗಳ ವಲಯಕ್ಕೆ 2023-24ನೇ ಸಾಲಿನಲ್ಲಿ ಒಟ್ಟಾರೆಯಾಗಿ 39,031 ಕೋಟಿ ರೂ. ಅನುದಾನ ಒದಗಿಸಲಾಗಿದೆ. 

click me!