
ಮಂಗಳೂರು (ಆ.13): ಖಾಸಗಿ ರಂಗದ ಮುಂಚೂಣಿಯ ಕರ್ಣಾಟಕ ಬ್ಯಾಂಕ್ ಜೂ.30, 2025ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ₹292.40 ಕೋಟಿ ನಿವ್ವಳ ಲಾಭ ಗಳಿಸಿದೆ. ಕಳೆದ ಹಣಕಾಸು ವರ್ಷದ ಇದೇ ತ್ರೈಮಾಸಿಕದಲ್ಲಿ ಬ್ಯಾಂಕ್ ₹400.33 ಕೋಟಿ ನಿವ್ವಳ ಲಾಭ ಗಳಿಸಿತ್ತು.
ಬ್ಯಾಂಕ್‌ನ ಮಂಗಳೂರಿನ ಕೇಂದ್ರ ಕಚೇರಿಯಲ್ಲಿ ಮಂಗಳವಾರ ನಡೆದ ನಿರ್ದೇಶಕರ ಮಂಡಳಿ ಸಭೆಯಲ್ಲಿ ಈ ಹಣಕಾಸು ಫಲಿತಾಂಶಗಳಿಗೆ ಅನುಮೋದನೆ ನೀಡಲಾಗಿದೆ. ಬ್ಯಾಂಕಿನ ಒಟ್ಟು ವ್ಯವಹಾರ ಶೇ.1.12ರಷ್ಟು ಬೆಳವಣಿಗೆ ಕಂಡಿದ್ದು, ಮೊದಲ ಅವಧಿಯಲ್ಲಿ ₹1,77,509.19 ಕೋಟಿ ತಲುಪಿದೆ. ಇದು ಕಳೆದ ಅವಧಿಯಲ್ಲಿ ₹1,75,534.89 ಕೋಟಿ ಇತ್ತು. ಒಟ್ಟು ಠೇವಣಿಗಳು ₹1,03,242.17 ಕೋಟಿ ಇದ್ದು, ಇದು ಕಳೆದ ವರ್ಷದ ₹1,00,079.88 ಕೋಟಿಗಿಂತ ಹೆಚ್ಚಾಗಿದೆ. ಆದರೆ ಒಟ್ಟು ಸಾಲಗಳ ಪ್ರಮಾಣದಲ್ಲಿ ಸ್ವಲ್ಪ ಇಳಿಕೆ ಕಂಡು ₹74,267.02 ಕೋಟಿಗೆ ತಲುಪಿದೆ. ಬ್ಯಾಂಕ್ ₹467.29 ಕೋಟಿ ಕಾರ್ಯಾಚರಣಾ ಲಾಭ ಮತ್ತು ₹755.60 ಕೋಟಿ ನಿವ್ವಳ ಬಡ್ಡಿ ಆದಾಯ ಗಳಿಸಿದೆ ಎಂದು ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ರಾಘವೇಂದ್ರ ಎಸ್.ಭಟ್ ತಿಳಿಸಿದ್ದಾರೆ.ಬ್ಯಾಂಕಿನ ಎನ್‌ಪಿಎ ಅಂತ್ಯಕ್ಕೆ ಶೇ.3.46 ಗೆ ಇಳಿದಿದ್ದು, ಕಳೆದ ವರ್ಷದ ಇದೇ ಅವಧಿಯಲ್ಲಿ ಶೇ. 3.54 ಇತ್ತು. ನಿವ್ವಳ ಎನ್‌ಪಿಎ ಸಹ ಶೇ. 1.66 ನಿಂದ ಶೇ. 1.44 ಗೆ ಇಳಿದಿದೆ ಎಂದು ಮಾಹಿತಿ ನೀಡಿದರು.
ಈ ಫಲಿತಾಂಶಗಳ ಬಗ್ಗೆ ಮಾತನಾಡಿದ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ರಾಘವೇಂದ್ರ ಎಸ್.ಭಟ್, ಈ ಅವಧಿಯಲ್ಲಿ ಬ್ಯಾಂಕ್ ಮಧ್ಯಮ ಮಟ್ಟದ ಬೆಳವಣಿಗೆ ದಾಖಲಿಸಿದೆ. ಮೂಲಸೌಕರ್ಯ ಮತ್ತು ಪ್ರಕ್ರಿಯೆಗಳ ಸುಧಾರಣೆಗೆ ನಾವು ಮಾಡಿರುವ ಹೂಡಿಕೆಗಳು ಮುಂದಿನ ತ್ರೈಮಾಸಿಕಗಳಲ್ಲಿ ಉತ್ತಮ ಫಲಿತಾಂಶಗಳನ್ನು ನೀಡುವ ನಿರೀಕ್ಷೆಯಿದೆ. ಕಡಿಮೆ ವೆಚ್ಚದ ಠೇವಣಿಗಳನ್ನು ಹೆಚ್ಚಿಸುವುದರ ಜೊತೆಗೆ ಕಾರ್ಪೊರೇಟ್ ಅಲ್ಲದ ಸಾಲದ ಮೇಲೆ ನಮ್ಮ ಗಮನ ಮುಂದುವರಿಯುತ್ತದೆ ಎಂದು ತಿಳಿಸಿದರು.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.