
ಮುಂಬೈ: ಮುಕೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್‌ನ ಡಿಜಿಟಲ್ ವಿಭಾಗವಾದ 'ಜಿಯೋ ಪ್ಲಾಟ್‌ಫಾರ್ಮ್ಸ್' (Jio Platforms) ಶೀಘ್ರದಲ್ಲೇ ಷೇರು ಮಾರುಕಟ್ಟೆ ಪ್ರವೇಶಿಸಲಿದೆ. ಸುಮಾರು 4 ಬಿಲಿಯನ್ ಡಾಲರ್ (ಅಂದಾಜು ₹37,700 ಕೋಟಿ) ಮೌಲ್ಯದ ಸಾರ್ವಜನಿಕ ಷೇರು ಕೊಡುಗೆಗೆ (IPO) ಭಾರತೀಯ ಬಂಡವಾಳ ಮಾರುಕಟ್ಟೆ ನಿಯಂತ್ರಣ ಮಂಡಳಿ (SEBI) ಅಂತಿಮ ಅನುಮೋದನೆ ನೀಡಿದೆ. ಇದು ಭಾರತದ ಷೇರು ಮಾರುಕಟ್ಟೆ ಇತಿಹಾಸದಲ್ಲೇ ಅತಿದೊಡ್ಡ ಐಪಿಒ ಆಗಲಿದೆ.
ಈ ಕುರಿತು ಶುಕ್ರವಾರ ಷೇರು ವಿನಿಮಯ ಕೇಂದ್ರಗಳಿಗೆ ನೀಡಿರುವ ಮಾಹಿತಿಯಲ್ಲಿ, ಜಿಯೋ ಪ್ಲಾಟ್‌ಫಾರ್ಮ್ಸ್ ತನ್ನ ಕರಡು ಪ್ರಾಸ್ಪೆಕ್ಟಸ್‌ಗೆ (DRHP) ಸೆಬಿಯಿಂದ 'ವೀಕ್ಷಣಾ ಪತ್ರ' (Observation Letter) ಸ್ವೀಕರಿಸಿದೆ ಎಂದು ರಿಲಯನ್ಸ್ ಇಂಡಸ್ಟ್ರೀಸ್ ತಿಳಿಸಿದೆ. ಸೆಬಿಯಿಂದ ಯಾವುದೇ ಆಕ್ಷೇಪಣೆಗಳಿಲ್ಲ ಎಂಬುದನ್ನು ಈ ಪತ್ರ ದೃಢೀಕರಿಸುತ್ತದೆ. ನಿಯಮಗಳ ಪ್ರಕಾರ, ಅನುಮೋದನೆ ದೊರೆತ 12 ತಿಂಗಳೊಳಗೆ ಕಂಪನಿಯು ಐಪಿಒ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕಾಗಿದೆ.
₹37,700 ಕೋಟಿಗೂ ಹೆಚ್ಚಿನ ಮೊತ್ತ ಸಂಗ್ರಹಿಸುವ ಗುರಿ ಹೊಂದಿರುವ ಜಿಯೋ, 2024ರಲ್ಲಿ ಹ್ಯುಂಡೈ ಮೋಟಾರ್ ಇಂಡಿಯಾ ($3.3 ಬಿಲಿಯನ್) ನಿರ್ಮಿಸಿದ್ದ ಸಾರ್ವಜನಿಕ ಕೊಡುಗೆಯ ದಾಖಲೆಯನ್ನು ಮುರಿಯಲಿದೆ.
ವಿಶೇಷವೆಂದರೆ, ಜಿಯೋ ತನ್ನ ಈ ಐಪಿಒನಲ್ಲಿ ಅಸ್ತಿತ್ವದಲ್ಲಿರುವ ಷೇರುಗಳನ್ನು ಮಾರಾಟ ಮಾಡುತ್ತಿಲ್ಲ. ಬದಲಾಗಿ ಸಂಪೂರ್ಣವಾಗಿ ಪ್ರೈಮರಿ ಷೇರುಗಳನ್ನು ಬಿಡುಗಡೆ ಮಾಡುತ್ತಿದೆ. ತಲಾ ₹10 ಮುಖಬೆಲೆಯ 27 ಕೋಟಿ ಹೊಸ ಷೇರುಗಳನ್ನು ವಿತರಿಸಲಿದ್ದು, ಇದರಿಂದ ಕಂಪನಿಯ ಈಕ್ವಿಟಿ ಶೇ.2.9 ರಷ್ಟು ತಗ್ಗಲಿದೆ. ಷೇರು ಮಾರಾಟದಿಂದ ಬರುವ ಸಂಪೂರ್ಣ ಹಣ ಕಂಪನಿಯ ಖಾತೆಗೇ ತಲುಪಲಿದೆ.
ಸೆಬಿಯ ನವೀಕೃತ ನಿಯಮಗಳ ಪ್ರಕಾರ, ಪಟ್ಟಿಮಾಡಿದ ನಂತರ ₹5 ಲಕ್ಷ ಕೋಟಿಗೂ ಹೆಚ್ಚು ಮಾರುಕಟ್ಟೆ ಮೌಲ್ಯ ಹೊಂದಿರುವ ಬೃಹತ್ ಕಂಪನಿಗಳು ಆರಂಭದಲ್ಲಿ ಶೇ. 2.5 ರಷ್ಟು ಷೇರುಗಳನ್ನು ಮಾತ್ರ ಸಾರ್ವಜನಿಕರಿಗೆ ನೀಡಲು ಅವಕಾಶವಿದೆ. ಮುಂದಿನ 10 ವರ್ಷಗಳಲ್ಲಿ ಇದನ್ನು ಕಡ್ಡಾಯವಾಗಿ ಶೇ. 25 ಕ್ಕೆ ಹೆಚ್ಚಿಸಬೇಕು.
ಮುಕೇಶ್ ಅಂಬಾನಿ ಅವರು 2019ರಲ್ಲೇ ಜಿಯೋ ಪ್ಲಾಟ್‌ಫಾರ್ಮ್ಸ್ ಐಪಿಒ ಯೋಜನೆಗೆ ಸುಳಿವು ನೀಡಿದ್ದರು. 2006ರಲ್ಲಿ ರಿಲಯನ್ಸ್ ಪೆಟ್ರೋಲಿಯಂ ಐಪಿಒ ಬಂದ ನಂತರ, ರಿಲಯನ್ಸ್ ಸಮೂಹದಿಂದ ಹೊರಬರುತ್ತಿರುವ ಮೊದಲ ಅಧಿಕೃತ ಐಪಿಒ ಇದಾಗಿದೆ. ಪ್ರಸ್ತುತ ಜಿಯೋ ಪ್ಲಾಟ್‌ಫಾರ್ಮ್ಸ್ ₹27,579 ಕೋಟಿ ನಿವ್ವಳ ಸಾಲ ಹೊಂದಿದ್ದು, ಐಪಿಒ ಮೂಲಕ ಸಂಗ್ರಹವಾಗುವ ಹಣವನ್ನು ಸಾಲ ತೀರಿಸಲು ಹಾಗೂ ಉದ್ಯಮ ವಿಸ್ತರಣೆಗೆ ಬಳಸಿಕೊಳ್ಳಲಿದೆ.
ಜಿಯೋ ಪ್ಲಾಟ್‌ಫಾರ್ಮ್ಸ್‌ನಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಶೇ. 66.43 ರಷ್ಟು ಪ್ರಮುಖ ಪಾಲು ಹೊಂದಿದ್ದರೆ, ಉಳಿದ ಶೇ. 33.57 ರಷ್ಟು ಪಾಲು ಜಾಗತಿಕ ಹೂಡಿಕೆದಾರರ ಬಳಿಯಿದೆ. ಮೆಟಾ (ಫೇಸ್‌ಬುಕ್): ಶೇ. 9.98, ಗೂಗಲ್: ಶೇ. 7.73, ಪಿಐಎಫ್ (ಸೌದಿ ಅರೇಬಿಯಾ ಪಿಐಎಫ್): ಶೇ. 2.31, ಕೆಕೆಆರ್ (KKR): ಶೇ. 2.31, ವಿಸ್ಟಾ ಇಕ್ವಿಟಿ ಪಾರ್ಟ್‌ನರ್ಸ್: ಶೇ. 2.31 ಇದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.