ಜಪಾನಿಗೆ ಆರ್ಥಿಕ ಹಿಂಜರಿತದ ಹೊಡೆತ, ಕೈಜಾರಿದ ಜಗತ್ತಿನ ಮೂರನೇ ಅತೀದೊಡ್ಡಆರ್ಥಿಕತೆಯ ಪಟ್ಟ!

By Suvarna News  |  First Published Feb 15, 2024, 2:19 PM IST

ಜಪಾನಿಗೆ ಅನಿರೀಕ್ಷಿತ ಆಘಾತ ಎದುರಾಗಿದೆ. ಜಪಾನ್ ಆರ್ಥಿಕ ಹಿಂಜರಿತದ ಹೊಡೆತಕ್ಕೆ ಸಿಲುಕಿದ್ದು, ವಿಶ್ವದ ಮೂರನೇ ಅತೀದೊಡ್ಡ ಆರ್ಥಿಕತೆ ಪಟ್ಟ ಕೈಜಾರಿದೆ.ಜೊತೆಗೆ ಆರ್ಥಿಕತೆಯನ್ನು ಮತ್ತೆ ಹಳಿಗೆ ತಂದು ಬಲಪಡಿಸುವ ದೊಡ್ಡ ಸವಾಲು ಎದುರಾಗಿದೆ. 
 


ಟೋಕಿಯೋ (ಫೆ.15): ಜಪಾನ್ ಅನಿರೀಕ್ಷಿತವಾಗಿ ಆರ್ಥಿಕ ಹಿಂಜರಿತದ ಸುಳಿಗೆ ಸಿಲುಕಿದೆ. ಇದರಿಂದ ವಿಶ್ವದ ಮೂರನೇ ಅತೀದೊಡ್ಡ ಆರ್ಥಿಕತೆಯ ಪಟ್ಟ ಜಪಾನ್ ಕೈಜಾರಿ ಜರ್ಮನಿ ಪಾಲಾಗಿದೆ. ಒಂದು ಕಾಲದಲ್ಲಿ ಜಪಾನ್ ವಿಶ್ವದ ಎರಡನೇ ಅತೀದೊಡ್ಡ ಆರ್ಥಿಕತೆಯಾಗಿತ್ತು. ಆದರೆ, ಸತತ ಎರಡು ತ್ರೈಮಾಸಿಕದಲ್ಲಿ ಜಪಾನ್ ಆರ್ಥಿಕತೆ ಸಂಕೋಚಿತಗೊಂಡಿದೆ. ಮೂರನೇ ತ್ರೈಮಾಸಿಕದಲ್ಲಿ ಶೇ.3.3ರಷ್ಟು ಸಂಕೋಚಿತಗೊಂಡಿದ್ದ ಜಪಾನ್ ಆರ್ಥಿಕತೆ ನಾಲ್ಕನೇ ತ್ರೈಮಾಸಿಕದಲ್ಲಿ ಅಂದಾಜು ಶೇ.1.4ರಷ್ಟು ಜಿಡಿಪಿ ಗುರಿ ತಲುಪಲು ಸಾಧ್ಯವಾಗಲಿಲ್ಲ ಎಂದು ರಾಯ್ಟರ್ಸ್ ನಡೆಸಿದ ಅರ್ಥಶಾಸ್ತ್ರಜ್ಞರ ಸಮೀಕ್ಷಿ ಅಭಿಪ್ರಾಯಪಟ್ಟಿದೆ. ಸತತ ಎರಡು ತ್ರೈಮಾಸಿಕಗಳಲ್ಲಿ ಜಪಾನ್ ಆರ್ಥಿಕತೆ ಹಿಂಜರಿತ ಕಂಡಿರೋದೆ ಇದಕ್ಕೆ ಕಾರಣ ಎಂದು ಹೇಳಲಾಗಿದೆ. 2023ನೇ ಪೂರ್ಣ ಸಾಲಿನಲ್ಲಿ ಜಪಾನ್ ನಾಮಿನಲ್ ಜಿಡಿಪಿ ಶೇ.5.7ರಷ್ಟು ಪ್ರಗತಿ ಸಾಧಿಸಿತ್ತು. ಆ ಮೂಲಕ ಅಲ್ಲಿನ ಆರ್ಥಿಕತೆ 591.48 ಟ್ರಿಲಿಯನ್ ಯೇನ್ ಗೆ ಅಭಿವೃದ್ಧಿ ಹೊಂದಿತ್ತು. ಇನ್ನೊಂದೆಡೆ ಜರ್ಮನಿ ನಾಮಿನಲ್ ಜಿಡಿಪಿ ಶೇ.6.3ರಷ್ಟು ಅಭಿವೃದ್ಧಿ ಹೊಂದಿದ್ದು, 4.12 ಟ್ರಿಲಿಯನ್ ಯುರೋಸ್ ಅಥವಾ 4.46 ಟ್ರಿಲಿಯನ್ ಡಾಲರ್ ತಲುಪಿತ್ತು. 

ಜಪಾನ್ ಜಿಡಿಪಿ ದರ ಪ್ರಕಟವಾಗುತ್ತಿದ್ದಂತೆ ಷೇರು ಮಾರುಕಟ್ಟೆಯಲ್ಲಿ ಕೂಡ ಕೆಲವು ಬೆಳವಣಿಗೆಗಳು ನಡೆದಿವೆ. ಬೆಳಗ್ಗಿನ ಅವಧಿಯಲ್ಲಿ ಜಪಾನ್  ಷೇರು ಮಾರುಕಟ್ಟೆ ಬೆಂಚ್ ಮಾರ್ಕ್ ನಿಕ್ಕಿ 225 ಶೇ.0.65 ಏರಿಕೆ ಕಂಡು  38,000 ಮಾರ್ಕ್ ತಲುಪಿದೆ. ಇನ್ನು ಜಪಾನ್ ಕರೆನ್ಸಿ ಯೇನ್ ಡಾಲರ್ ಎದುರು ಅಂದಾಜು 15 ಮಾರ್ಕ್ ನಲ್ಲಿದೆ. ಕೆಲವು ತಜ್ಞರ ಪ್ರಕಾರ ಈ ತ್ರೈಮಾಸಿಕದಲ್ಲಿ ಆರ್ಥಿಕತೆ ಇನ್ನೊಮ್ಮೆ ಸಂಕೋಚಿತಗೊಳ್ಳುವ ಸಾಧ್ಯತೆಯಿದೆ. ಏಕೆಂದರೆ ಚೀನಾದಲ್ಲಿ ಬೇಡಿಕೆ ತಗ್ಗಿರೋದು ಜಪಾನ್ ಆರ್ಥಿಕತೆಯ ಮೇಲೆ ಪರಿಣಾಮ ಬೀರೋ ಸಾಧ್ಯತೆಯಿದೆ. ಟೊಯೋಟಾ ಮೋಟಾರ್ ಕಾರ್ಪೋರೇಷನ್ ಘಟಕದಲ್ಲಿ ಉತ್ಪಾದನೆ ನಿಂತಿರೋದು ಹಾಗೂ ಬೇಡಿಕೆ ತಗ್ಗಿರೋದು ಜಪಾನ್ ಆರ್ಥಿಕ ಚೇತರಿಕೆಯ ಹಾದಿಗೆ ದೊಡ್ಡ ಸವಾಲಾಗುವ ಸಾಧ್ಯತೆಯಿದೆ ಎಂದು ಕೆಲವು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. 

Tap to resize

Latest Videos

ಭಾರತದಲ್ಲಿದೆ ವಿಶ್ವದ ಅತ್ಯುತ್ತಮ ಡಿಜಿಟಲ್ ಎಕಾನಮಿ;ನೊಬೆಲ್ ಪುರಸ್ಕೃತ ಸ್ಪೆನ್ಸ್ ಮೆಚ್ಚುಗೆ!

ಬಳಕೆ, ಬಂಡವಾಳ ವೆಚ್ಚ ಕುಸಿತ
ಆರ್ಥಿಕ ಚಟುವಟಿಕೆಯ ಅರ್ಧಕ್ಕಿಂತ ಹೆಚ್ಚು ಪಾಲನ್ನು ಖಾಸಗಿ ಬಳಕೆ ಆವರಿಸಿಕೊಂಡಿದೆ. ಆದರೆ, ಈ ಖಾಸಗಿ ಬಳಕೆ ಮಾರುಕಟ್ಟೆ ನಿರೀಕ್ಷಿತ ಮಟ್ಟಕ್ಕಿಂತ ಹೆಚ್ಚಿನ ಕುಸಿತ ಕಂಡಿದೆ. ಇದು ಶೇ. 0.2ರಷ್ಟು ಇಳಿಕೆ ಕಂಡಿದೆ. ಜೀವನ ವೆಚ್ಚದಲ್ಲಿ ಏರಿಕೆಯಾಗುತ್ತಿರೋದು ಹಾಗೂ ಒಣ ಹವೆಯ ಕಾರಣಕ್ಕೆ ಜನರು ಹೆಚ್ಚಾಗಿ ಹೊರಗಡೆ ಹೋಗಲು ಬಯಸುತ್ತಿಲ್ಲ. ಹೀಗಾಗಿ ಹೋಟೆಲ್ ಗಳಲ್ಲಿ ಊಟ-ತಿಂಡಿಗೆ ಬೇಡಿಕೆ ತಗ್ಗಿದೆ. ಹಾಗೆಯೇ ಬಟ್ಟೆಗಳ ಖರೀದಿಯಲ್ಲಿ ಕೂಡ ಇಳಿಕೆಯಾಗಿದೆ. ಇನ್ನು ಬಂಡವಾಳ ವೆಚ್ಚ ಖಾಸಗಿ ವಲಯದ ಅಭಿವೃದ್ಧಿ ಇಂಜಿನ್ ನಲ್ಲಿ ಒಂದಾಗಿದೆ. ಜಪಾನ್ ಬಂಡವಾಳ ವೆಚ್ಚದಲ್ಲಿ ಕೂಡ ಇಳಿಕೆ ಕಂಡುಬಂದಿದೆ. ಅದು ನಿರೀಕ್ಷೆಗಿಂತ ಕೆಳಗೆ ಇಳಿಕೆಯಾಗಿದೆ. ಬಂಡವಾಳ ವೆಚ್ಚ ಶೇ.0.1ಕ್ಕೆ ಇಳಿಕೆಯಾಗಿದೆ. ಕಟ್ಟಡ ನಿರ್ಮಾಣ ಕಾಮಗಾರಿಗಳು ಅಗತ್ಯ ಸಾಮಗ್ರಿಗಳ ಪೂರೈಕೆಯಲ್ಲಿನ ವಿಳಂಬದಿಂದ ಪೂರ್ಣಗೊಳ್ಳಲು ತಡವಾಗುತ್ತಿದೆ. 

ಜಾಗತಿಕ ಮಟ್ಟದಲ್ಲೂ ಈಗ UPI ಹವಾ; ಯುಪಿಐ ಪಾವತಿ ಸ್ವೀಕರಿಸುವ ರಾಷ್ಟ್ರಗಳ ಪಟ್ಟಿ ಪ್ರಕಟಿಸಿದ ಸರ್ಕಾರ

ಇನ್ನು ಜಪಾನ್ ಕೇಂದ್ರ ಬ್ಯಾಂಕಿನ ಮೃದು ಧೋರಣೆಗಳು ಕೂಡ ಆರ್ಥಿಕ ಹಿಂಜರಿತಕ್ಕೆ ಕಾರಣವಾಗಿದೆ ಎಂದು ಹೇಳಲಾಗಿದೆ. ಅಲ್ಲದೆ, ಜಪಾನ್ ಕೇಂದ್ರ ಬ್ಯಾಂಕಿನ ನಕಾರಾತ್ಮಕ ದರಗಳು ಕೂಡ ಆರ್ಥಿಕತೆ ಮೇಲೆ ಪ್ರಭಾವ ಬೀರಿದೆ ಎಂದು ಹೇಳಲಾಗಿದೆ. ಈ ವರ್ಷದ ಏಪ್ರಿಲ್ ಒಳಗೆ ಜಪಾನ್ ಕೇಂದ್ರ ಬ್ಯಾಂಕ್ ನಕಾರಾತ್ಮಕ ದರಗಳನ್ನು ಸ್ಥಗಿತಗೊಳಿಸಲಿದೆ. ಹಾಗೆಯೇ ತನ್ನ ನಿಯಮಗಳನ್ನು ಬಿಗಿಗೊಳಿಸಲಿದೆ ಎಂಬ ನಿರೀಕ್ಷೆಯನ್ನು ಆರ್ಥಿಕ ತಜ್ಞರು ವ್ಯಕ್ತಪಡಿಸಿದ್ದಾರೆ. ಇನ್ನು ಹೆಚ್ಚುತ್ತಿರುವ ಬೆಲೆಗಳಿಂದ ಖರೀದಿ ತಗ್ಗಿದೆ. ಹೀಗಾಗಿ ಜನರ ಖರೀದಿ ಸಾಮರ್ಥ್ಯ ಹೆಚ್ಚಿಸಲು ವೇತನದಲ್ಲಿ ಏರಿಕೆ ಮಾಡೋದು ಅಗತ್ಯ ಎಂಬುದು ತಜ್ಞರ ಅಭಿಪ್ರಾಯವಾಗಿದೆ. 

click me!