ತೆರಿಗೆದಾರರೇ ಗಮನಿಸಿ, ವಿಳಂಬ ಐಟಿಆರ್ ಸಲ್ಲಿಕೆಗೆ ನಾಳೆ ಕೊನೆಯ ಅವಕಾಶ

By Suvarna NewsFirst Published Dec 30, 2022, 1:13 PM IST
Highlights

2021-22 ನೇ ಆರ್ಥಿಕ ಸಾಲಿನ ಐಟಿಆರ್ ಸಲ್ಲಿಕೆ ಮಾಡದವರಿಗೆ ವಿಳಂಬ ಐಟಿಆರ್ ಸಲ್ಲಿಕೆಗೆ ನಾಳೆ (ಡಿ.31) ಕೊನೆಯ ದಿನ. ಹೀಗಾಗಿ ನೀವು ಇನ್ನೂ ವಿಳಂಬ ಐಟಿಆರ್ ಸಲ್ಲಿಕೆ ಮಾಡದಿದ್ರೆ ತಕ್ಷಣ ಈ ಕೆಲಸವನ್ನು ಮಾಡಿ ಮುಗಿಸಿ. 
 

ನವದೆಹಲಿ (ಡಿ.30): 2021-22 ನೇ ಆರ್ಥಿಕ ಸಾಲಿನ ಆದಾಯ ತೆರಿಗೆ ರಿಟರ್ನ್ (ಐಟಿಆರ್)  ಸಲ್ಲಿಕೆ ಗಡುವು (2022ರ ಜುಲೈ 31) ಮುಗಿದಿದ್ದರೂ ವಿಳಂಬ ಹಾಗೂ ಪರಿಷ್ಕೃತ ಐಟಿಆರ್ ಸಲ್ಲಿಕೆಗೆ 2022ರ ಡಿ.31ರ ತನಕ ಕಾಲಾವಕಾಶ ನೀಡಲಾಗಿದೆ. ಹೀಗಾಗಿ 2021-22 ನೇ ಆರ್ಥಿಕ ಸಾಲಿನ ವಿಳಂಬ  ಹಾಗೂ ಪರಿಷ್ಕೃತ ಐಟಿಆರ್ ಸಲ್ಲಿಕೆಗೆ ನಾಳೆ ಕೊನೆಯ ದಿನವಾಗಿದೆ. ಆದಾಯ ತೆರಿಗೆ ವ್ಯಾಪ್ತಿಗೊಳಪಡುವವರು ಐಟಿಆರ್ ಸಲ್ಲಿಕೆ ಮಾಡೋದು ಅತ್ಯಗತ್ಯ. ಒಂದು ವೇಳೆ ಐಟಿಆರ್ ಸಲ್ಲಿಕೆ ಮಾಡದಿದ್ರೆ ಮುಂದೆ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆದಾಯ ತೆರಿಗೆ ರಿಟರ್ನ್ (ಐಟಿಆರ್) ಅನ್ನು ಜುಲೈ 31ರೊಳಗೆ ಸಲ್ಲಿಕೆ ಮಾಡಲು ವಿಫಲರಾಗಿದ್ರೆ ನಿಮಗೆ ಡಿಸೆಂಬರ್ 31ರ ತನಕ ಸ್ವಯಂಪ್ರೇರಣಿಯಿಂದ ಸಲ್ಲಿಕೆ ಮಾಡಲು ಅವಕಾಶವಿದೆ. ಇದಕ್ಕೆ ವಿಳಂಬ ಐಟಿಆರ್ ಸಲ್ಲಿಕೆ ಎನ್ನುತ್ತಾರೆ. ಐಟಿಆರ್ ಸಲ್ಲಿಕೆ ಮಾಡೋದ್ರಿಂದ ಅನೇಕ ವೈಯಕ್ತಿಕ ಪ್ರಯೋಜನಗಳು ಕೂಡ ಇವೆ. ವಿದೇಶಿ ಪ್ರಯಾಣಕ್ಕೆ ವೀಸಾ ಮಾಡಿಸೋದ್ರಿಂದ ಹಿಡಿದು ತೆರಿಗೆ ರೀಫಂಡ್ ಸಮಯದಲ್ಲಿ ಒಂದಿಷ್ಟು ನಗದು ಹಿಂಪಡೆಯುವ ತನಕ ಕೆಲವು ಪ್ರಯೋಜನಗಳಿವೆ. ಹೀಗಾಗಿ ನೀವು ಇನ್ನೂ ವಿಳಂಬ ಐಟಿಆರ್ ಸಲ್ಲಿಕೆ ಮಾಡದಿದ್ರೆ ತಕ್ಷಣ ಆ ಕೆಲಸವನ್ನು ಮಾಡಿ ಮುಗಿಸಿ. 

ವಿಳಂಬ ಐಟಿಆರ್ ಸಲ್ಲಿಕೆ ಹೇಗೆ?
ಮನೆಯಲ್ಲೇ ಕುಳಿತು ಆನ್ ಲೈನ್ ಮೂಲಕ ವಿಳಂಬ ಅಥವಾ ಪರಿಷ್ಕೃತ ಐಟಿಆರ್ ಸಲ್ಲಿಕೆ ಮಾಡಬಹುದು. ಈ ಪ್ರಕ್ರಿಯೆ ತೆರಿಗೆ ರಿಟರ್ನ್ ಸಲ್ಲಿಕೆ ಮಾಡಿದ ಮಾದರಿಯಲ್ಲೇ ಇರುತ್ತದೆ. ಆದಾಯ ತೆರಿಗೆ ಇಲಾಖೆ ಇ-ಪೋರ್ಟಲ್ ನಲ್ಲಿ ಸಲ್ಲಿಕೆ ಮಾಡಬಹುದು. ವಿಳಂಬ ಐಟಿಆರ್ ಸಲ್ಲಿಕೆ ಮಾಡುವಾಗ ನೀವು ಅದರ ಮೌಲ್ಯಮಾಪನ ವರ್ಷ (assessment year) ಆಯ್ಕೆ ಮಾಡಬೇಕು. 

ಪ್ಯಾನ್- ಆಧಾರ್ ಲಿಂಕ್ ಗೆ 2023ರ ಮಾರ್ಚ್ 31 ಗಡುವು; ಮತ್ತೊಮ್ಮೆ ನೆನಪಿಸಿದ ಐಟಿ ಇಲಾಖೆ

ಪರಿಷ್ಕೃತ ರಿಟರ್ನ್
ಅಂತಿಮ ಗಡುವಿನ ಮುನ್ನ ನೀವು ಐಟಿಆರ್ ಸಲ್ಲಿಕೆ ಮಾಡಿದ್ದು, ಅದರಲ್ಲಿನ ಕೆಲವು ತಪ್ಪುಗಳನ್ನು ಸರಿಪಡಿಸಿ ಪರಿಷ್ಕೃತ ರಿಟರ್ನ್ (Revised return) ಸಲ್ಲಿಕೆ ಮಾಡಲು ಕೂಡ ಡಿಸೆಂಬರ್ 31 ಅಂತಿಮ ದಿನಾಂಕ. ಕಳೆದ ವರ್ಷಕ್ಕೆ ನೀವು ಐಟಿಆರ್ ಸಲ್ಲಿಕೆ ಮಾಡಿದ್ದು, ಸೆಕ್ಷನ್ 80ಸಿ ಅಡಿಯಲ್ಲಿ ನೀವು ತಪ್ಪಾಗಿ ತೆರಿಗೆ ಕಡಿತ ಕ್ಲೈಮ್ ಮಾಡಿದ್ರೆ ಆಗ ನೀವು ರಿಟರ್ನ್ ಪರಿಷ್ಕರಿಸಬಹುದು. ಪರಿಷ್ಕೃತ ರಿಟರ್ನ್ ಸಲ್ಲಿಕೆಗೆ ಯಾವುದೇ ಮಿತಿಯಿಲ್ಲ, ಎಷ್ಟು ಬಾರಿ ಬೇಕಾದ್ರೂ ಸಲ್ಲಿಕೆ ಮಾಡಬಹುದು. ಆದರೆ, ಪರಿಷ್ಕೃತ ರಿಟರ್ನ್ ಸಲ್ಲಿಕೆಗೆ ಡಿಸೆಂಬರ್ 31 ಅಂತಿಮ ಗಡುವು ಅನ್ನೋದು ನೆನಪಿರಲಿ.

ವಿಳಂಬ ಐಟಿಆರ್ ಗೆ ದಂಡ
ಐಟಿಆರ್ ಸಲ್ಲಿಕೆಯನ್ನು ಯಾವಾಗಲೂ ಅಂತಿಮ ಗಡುವಿಗಿಂತ ಮೊದಲೇ ಮಾಡಬೇಕು ಎಂದು ಸಲಹೆ ನೀಡುತ್ತಾರೆ. ಆನ್ ಲೈನ್ ಹಾಗೂ ಆಪ್ ಲೈನ್ ಮೂಲಕ ನೀವು ಐಟಿಆರ್ ಸಲ್ಲಿಕೆ ಮಾಡಬಹುದು. ಆದರೆ, ಸಮಯಕ್ಕೆ ಸರಿಯಾಗಿ ಐಟಿಆರ್ ಸಲ್ಲಿಕೆ ಮಾಡಲು ನೀವು ವಿಫಲರಾದ್ರೆ ವಿಳಂಬ (Belated) ಅಥವಾ ಪರಿಷ್ಕೃತ (Revised) ಐಟಿಅರ್ ಸಲ್ಲಿಕೆಗೆ ದಂಡ ಶುಲ್ಕ ಕಟ್ಟಬೇಕು. ಹಣಕಾಸು ಕಾಯ್ದೆ ಅನ್ವಯ ಈ ದಂಡವನ್ನು ನಿಗದಿಪಡಿಸಲಾಗಿದ್ದು, 1,000ರೂ.ನಿಂದ  5,000ರೂ. ತನಕ ಇರುತ್ತದೆ.  ತೆರಿಗೆ ವ್ಯಾಪ್ತಿಗೊಳಪಡೋ ವಾರ್ಷಿಕ ಆದಾಯ  2.5ಲಕ್ಷ ರೂ.ಗಿಂತ ಕಡಿಮೆಯಿದ್ರೆ ದಂಡ ಶುಲ್ಕ ಪಾವತಿಯಿಂದ ವಿನಾಯ್ತಿ ಇದೆ. 

ಸರ್ಟಿಫಿಕೇಟ್ ಆಫ್ ಕವರೇಜ್ ಅಂದ್ರೇನು? ಆನ್ ಲೈನ್ ಅರ್ಜಿ ಸಲ್ಲಿಕೆ ಹೇಗೆ?

ವಿಳಂಬ ಐಟಿಆರ್ ಸಲ್ಲಿಕೆಯಿಂದ ಏನೆಲ್ಲ ಸಮಸ್ಯೆ?
ಈ ವರ್ಷ ತೆರಿಗೆದಾರರು ಅನುಭವಿಸಿದ ನಷ್ಟವನ್ನು ಮುಂದಿನ ಆರ್ಥಿಕ ಸಾಲಿನಲ್ಲಿ ಅವರು ಗಳಿಸೋ ಲಾಭಕ್ಕೆ ಸರಿಹೊಂದಿಸೋ (Setoff) ಅವಕಾಶವನ್ನು ಕಳೆದುಕೊಳ್ಳುತ್ತಾರೆ. ಇನ್ನು ತೆರಿಗೆದಾರರ ಆದಾಯದಿಂದ ಈಗಾಗಲೇ ಹೆಚ್ಚುವರಿಯಾಗಿ ಕಡಿತಗೊಂಡ ತೆರಿಗೆಗೆ ಸೂಕ್ತ ದಾಖಲೆಗಳನ್ನು ಒದಗಿಸಿದ್ರೆ ಅದನ್ನು ಆದಾಯ ತೆರಿಗೆ ಇಲಾಖೆ ಮರುಪಾವತಿ (Refund) ಮಾಡುತ್ತದೆ. ಆದ್ರೆ ಅಂತಿಮ ಗಡುವಿನೊಳಗೆ  ಐಟಿಆರ್ ಫೈಲ್ ಮಾಡದ ತೆರಿಗೆದಾರರಿಗೆ ಮರುಪಾವತಿ ಮಾಡೋದಿಲ್ಲ. ಅಷ್ಟೇ ಅಲ್ಲ, ಒಂದು ವೇಳೆ ತೆರಿಗೆದಾರ ಈ ತನಕ ಪಾವತಿ ಮಾಡಿದ ತೆರಿಗೆ ಮೊತ್ತ ಆದಾಯ ತೆರಿಗೆ ಇಲಾಖೆ ಲೆಕ್ಕ ಹಾಕಿದ ಮೊತ್ತಕ್ಕಿಂತ ಕಡಿಮೆ ಇದ್ರೆ ಬಾಕಿ ತೆರಿಗೆ ಪಾವತಿಸೋ ಜೊತೆಗೆ ಅದಕ್ಕೆ ಬಡ್ಡಿ (Interest) ಕೂಡ ಕಟ್ಟಬೇಕಾಗುತ್ತದೆ. 
 

click me!