ಐಟಿ ಸರ್ವೇ ಸಂದರ್ಭದಲ್ಲಿ ಸರ್ವರ್, ಹಿರಿಯ ಅಧಿಕಾರಿಗಳ ಮೊಬೈಲ್ ಕ್ಲೋನಿಂಗ್ : ಆಕ್ಸ್‌ಫಾಮ್‌ ಇಂಡಿಯಾ ಆರೋಪ

By Suvarna News  |  First Published Sep 10, 2022, 5:17 PM IST

*ಸೆ.7ರಂದು ಆಕ್ಸ್‌ಫಾಮ್‌ ಇಂಡಿಯಾ ನವದೆಹಲಿ ಕಚೇರಿಯಲ್ಲಿ ಸರ್ವೇ ನಡೆಸಿದ ಐಟಿ ಇಲಾಖೆ
*35ಕ್ಕೂ ಅಧಿಕ ಗಂಟೆಗಳ ತನಕ ನಡೆದ ನಿರಂತರ ಸರ್ವೇ
* ಹಣಕಾಸಿನ ನಿಯಮಗಳ ಉಲ್ಲಂಘನೆ ಹಿನ್ನೆಲೆಯಲ್ಲಿ ದಾಳಿ 
 


ನವದೆಹಲಿ (ಸೆ.10):  ಆದಾಯ ತೆರಿಗೆ ಇಲಾಖೆ ಸರ್ವೇ ಸಂದರ್ಭದಲ್ಲಿ ಅಧಿಕಾರಿಗಳ ತಂಡ ಸಂಸ್ಥೆಯ ಸರ್ವರ್ ಹಾಗೂ  ಹಿರಿಯ ನಾಯಕರ  ಖಾಸಗಿ ಮೊಬೈಲ್ ಫೋನ್ ಗಳ ಕ್ಲೋನಿಂಗ್ ನಡೆಸಿ ಎಲ್ಲ ಮಾಹಿತಿಗಳನ್ನು ಪಡೆದುಕೊಂಡಿದ್ದಾರೆ ಎಂದು ಆಕ್ಸ್‌ಫಾಮ್‌ ಇಂಡಿಯಾ ಆರೋಪಿಸಿದೆ.  ಹಣಕಾಸಿನ ನಿಯಮಗಳ ಉಲ್ಲಂಘನೆ ಹಿನ್ನೆಲೆಯಲ್ಲಿ ಆದಾಯ ತೆರಿಗೆ ಇಲಾಖೆ (ಐಟಿ) ಅಧಿಕಾರಿಗಳು ಆಕ್ಸ್‌ಫಾಮ್‌ ಇಂಡಿಯಾದ ದೆಹಲಿ ಕಚೇರಿಯಲ್ಲಿ ಎರಡು ದಿನಗಳ ಹಿಂದೆ ಸರ್ವೇ ನಡೆಸಿದ್ದರು. ಹಣದ ವಹಿವಾಟುಗಳಿಗೆ ಸಂಬಂಧಿಸಿ  ಅಕ್ರಮ ನಡೆದಿದೆ ಎಂಬ ಅನುಮಾನದ ಹಿನ್ನೆಲೆಯಲ್ಲಿ ಐಟಿ ಅಧಿಕಾರಿಗಳು ಬುಧವಾರ ಆಕ್ಸ್‌ಫಾಮ್‌ ಇಂಡಿಯಾ ಸೇರಿದಂತೆ ಎರಡು ಪ್ರಮುಖ ಥಿಂಕ್ ಟ್ಯಾಂಕ್ ಸಂಸ್ಥೆಗಳು  ಹಾಗೂ ಒಂದು  ಚಾರಿಟಿ ಸಂಸ್ಥೆ ಮೇಲೆ ದಾಳಿ ನಡೆಸಿದ್ದರು. 'ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಆಕ್ಸ್‌ಫಾಮ್‌ ಇಂಡಿಯಾದ ದೆಹಲಿ ಕಚೇರಿಯಲ್ಲಿ ಸೆ.2ರ ಮಧ್ಯಾಹ್ನದಿಂದ ಸೆ.9ರ ಬೆಳಗ್ಗಿನ ಜಾವದ ತನಕ ಸರ್ವೇ ನಡೆಸಿದ್ದರು. ಈ 35ಕ್ಕೂ ಅಧಿಕ ಗಂಟೆಗಳ ತನಕ ನಡೆದ ನಿರಂತರ ಸರ್ವೇ ಸಮಯದಲ್ಲಿ ಆಕ್ಸ್‌ಫಾಮ್‌ ಇಂಡಿಯಾ ತಂಡದ ಸದಸ್ಯರುಗಳನ್ನು ಕಚೇರಿಯ ಹೊರಗೆ ಹೋಗದಂತೆ ತಡೆಯಲಾಗಿತ್ತು. ಈ ಸಮಯದಲ್ಲಿ ಇಂಟರ್ನೆಟ್ ಸಂಪರ್ಕ ಸ್ಥಗಿತಗೊಳಿಸಲಾಗಿತ್ತು ಹಾಗೂ ಎಲ್ಲರ ಮೊಬೈಲ್ ಫೋನ್ ಗಳನ್ನು ಐಟಿ ಅಧಿಕಾರಿಗಳು ವಶಪಡಿಸಿಕೊಂಡಿದ್ದರು' ಎಂದು ಆಕ್ಸ್‌ಫಾಮ್‌ ಇಂಡಿಯಾ ಹೇಳಿಕೆಯೊಂದರಲ್ಲಿ ತಿಳಿಸಿದೆ.

ಸರ್ವೇಯನ್ನು ಐಟಿ ತಂಡ ವಿನಯದಿಂದ ಹಾಗೂ ವೃತ್ತಿಪರತೆಯಿಂದ ನಡೆಸಿತ್ತು. ಆದರೆ, ಅಧಿಕಾರಯುತವಾದ ಹಾಗೂ ದೀರ್ಘಾವಧಿಯ ಸರ್ವೇ ಪ್ರಕ್ರಿಯೆಗಳು  ಆಕ್ಸ್‌ಫಾಮ್‌ ಇಂಡಿಯಾಕ್ಕೆ ನಿರಾಸೆ ಉಂಟು ಮಾಡಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. 'ಆದಾಯ ತೆರಿಗೆ ಸರ್ವೇ ತಂಡ ಆಕ್ಸ್‌ಫಾಮ್‌ ಇಂಡಿಯಾದ ಹಣಕಾಸು ಹಾಗೂ ಕಾರ್ಯಕ್ರಮಗಳಿಗೆ ಸಂಬಂಧಿಸಿದ ನೂರಾರು ಪುಟಗಳ ಮಾಹಿತಿಗಳನ್ನು ತೆಗೆದುಕೊಂಡು ಹೋಗಿದೆ. ಅಲ್ಲದೆ, ಆಕ್ಸ್‌ಫಾಮ್‌ ಇಂಡಿಯಾದ ಸರ್ವರ್ ಹಾಗೂ ಸಂಸ್ಥೆಯ ಹಿರಿಯ ಅಧಿಕಾರಿಗಳ ಖಾಸಗಿ ಮೊಬೈಲ್ ಫೋನ್ ಗಳನ್ನು ಕ್ಲೋನಿಂಗ್ ಮಾಡುವ ಮೂಲಕ ಎಲ್ಲ ಮಾಹಿತಿಗಳನ್ನು ತೆಗೆದುಕೊಂಡು ಹೋಗಿದ್ದಾರೆ' ಎಂದು ಸಂಸ್ಥೆ ಆರೋಪಿಸಿದೆ. 

Tap to resize

Latest Videos

ಏರುತ್ತಿರುವ ಅಕ್ಕಿ ಬೆಲೆಗೆ ಕಡಿವಾಣ; ನುಚ್ಚಕ್ಕಿ ರಫ್ತು ನಿಷೇಧ, ಬಾಸ್ಮತಿಯೇತರ ಅಕ್ಕಿ ರಫ್ತಿನ ಮೇಲೆ ಶೇ.20 ಸುಂಕ

ಆಕ್ಸ್‌ಫಾಮ್‌ ಇಂಡಿಯಾ ಸಂಸ್ಥೆ ಭಾರತೀಯ ಕಾನೂನುಗಳಿಗೆ ಬದ್ಧವಾಗಿದ್ದು, ಆದಾಯ ತೆರಿಗೆ ಹಾಗೂ ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ  (FCRA) ರಿಟರ್ನ್ಸ್ ಸೇರಿದಂತೆ ಸಂಸ್ಥೆಗೆ ಸಂಬಂಧಿಸಿದ ಎಲ್ಲ ನಿಯಮಗಳನ್ನು  ಪ್ರಾರಂಭದಿಂದಲೂ ಸಮಯಕ್ಕೆ ಸರಿಯಾಗಿ ಪಾಲಿಸಿದ್ದೇವೆ ಎಂದು ಕೂಡ ತಿಳಿಸಿದೆ. ಯಾವುದೇ ಕಾರಣವನ್ನು ನೀಡದೆ ಆದಾಯ ತೆರಿಗೆ ಸರ್ವೇ ನಡೆಸಲಾಗಿದೆ. ಆಕ್ಸ್‌ಫಾಮ್‌ ಇಂಡಿಯಾ ಸರ್ವೇ ಸಂದರ್ಭದಲ್ಲಿ ಆದಾಯ ತೆರಿಗೆ ಇಲಾಖೆಯೊಂದಿಗೆ ಸಹಕರಿಸಿದ್ದು, ಭವಿಷ್ಯದಲ್ಲಿ ಕೂಡ ಇದನ್ನು ಮುಂದುವರಿಸಲಿದೆ. ಎಫ್ ಸಿಆರ್ ಎ ವಿಭಾಗ ನೇಮಿಸಿದ ಅಡಿಟರ್ ಗಳು 2022ರ ಜನವರಿಯಲ್ಲಿ ಇಡೀ ವಾರ  ಎಫ್ ಸಿಆರ್ ಎ ಖಾತೆಗಳ ಸವಿವರವಾದ ಅಡಿಟ್ ನಡೆಸಿದ್ದರು.  ಕಳೆದ ಎಂಟು ತಿಂಗಳು ಆಕ್ಸ್‌ಫಾಮ್‌ ಇಂಡಿಯಾಕ್ಕೆ ಒತ್ತಡದ ದಿನಗಳಾಗಿದ್ದವು. 2021ರ ಡಿಸೆಂಬರ್ ನಲ್ಲಿ ಗೃಹ ಸಚಿವಾಲಯ ಎಫ್ ಸಿಆರ್ ಎ ಲೈಸೆನ್ಸ್ ನವೀಕರಣಕ್ಕೆ ನಿರಾಕರಿಸಿತ್ತು. 

ಬೆಂಗಳೂರಿನಲ್ಲಿ ಭಾರತೀಯ ಘಟಕದ ಕೇಂದ್ರ ಕಚೇರಿ ಹೊಂದಿರುವ ಆಕ್ಸ್‌ಫಾಮ್‌  ಇಂಡಿಯಾ ಜಾಗತಿಕ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ ಎನ್ ಜಿಒ ಸಂಸ್ಥೆಯಾಗಿದೆ. ಭಾರತೀಯ ಸಂವಿಧಾನದ ಆಶಯದಂತೆ ನೀತಿ ರೂಪಿಸಲು ಸರ್ಕಾರದ ಮೇಲೆ ಒತ್ತಡ ಹೇರುವ ಅಭಿಯಾನಗಳಿಗೆ ಈ ಸಂಸ್ಥೆ ಬೆಂಬಲ ನೀಡುವ ಕಾರ್ಯ ಮಾಡುತ್ತದೆ. 

ಹಣದುಬ್ಬರ ತಗ್ಗಿಸೋ ಹೊಣೆಗಾರಿಕೆ ಬರೀ ಕೇಂದ್ರದ್ದಲ್ಲ, ರಾಜ್ಯಗಳ ಪಾಲೂ ಇದೆ: ನಿರ್ಮಲಾ ಸೀತಾರಾಮನ್

ಬೆಂಗಳೂರು ಮೂಲದ ಇಂಡಿಪೆಂಡೆಂಟ್ ಅಂಡ್ ಪಬ್ಲಿಕ್ ಸ್ಪಿರಿಟೆಡ್ ಮೀಡಿಯಾ ಫೌಂಡೇಶನ್ (IPSMF),ಸೆಂಟರ್ ಫಾರ್ ಪಾಲಿಸಿ ರಿಸರ್ಚ್ (CPR) ಮತ್ತು ಆಕ್ಸ್‌ಫ್ಯಾಮ್ ಇಂಡಿಯಾ (OxFam India)ಸಂಸ್ಥೆಗಳ ದೆಹಲಿ ಕಚೇರಿಯ ಮೇಲೆ ಸೆ.7ರಂದು ಐಟಿ ದಾಳಿ ನಡೆದಿತ್ತು. 

click me!