ಗಗನಕ್ಕೇರಿರುವ ಚಿನ್ನದ ಬೆಲೆ ಇನ್ನಷ್ಟು ಹೆಚ್ಚುತ್ತಾ? ಹೂಡಿಕೆಗೆ ಇದು ಸೂಕ್ತ ಸಮಯವೇ? ತಜ್ಞರ ಅಭಿಪ್ರಾಯ ಹೀಗಿದೆ..

By Suvarna News  |  First Published Apr 15, 2024, 4:14 PM IST

ಚಿನ್ನದ ಬೆಲೆ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿದೆ.ಇದು ಈಗಾಗಲೇ ಚಿನ್ನದ ಮೇಲೆ ಹೂಡಿಕೆ ಮಾಡಿರೋರಿಗೆ ಖುಷಿ ಕೊಟ್ಟರೆ, ಹೂಡಿಕೆ ಮಾಡುವ ಯೋಚನೆಯಲ್ಲಿರೋರಿಗೆ ತುಸು ಗೊಂದಲ ಮೂಡಿಸಿದೆ. ಹೀಗಿರುವಾಗ ಚಿನ್ನದ ಬೆಲೆ ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚುತ್ತಾ? 


ನವದೆಹಲಿ (ಏ.15): ಚಿನ್ನದ ಬೆಲೆ ಗಗನಕ್ಕೇರಿದೆ. ಬಂಗಾರದ ಬೆಲೆಯಲ್ಲಿ ಏರಿಳಿತವಾಗೋದು ಸಹಜ. ಆದ್ರೆ, ಈ ತಿಂಗಳು (ಏಪ್ರಿಲ್ ನಲ್ಲಿ) ಮಾತ್ರ ಚಿನ್ನದ ಬೆಲೆ ಸಾರ್ವಕಾಲಿಕ ಏರಿಕೆ ಕಾಣುವ ಮೂಲಕ ಆಭರಣ ಖರೀದಿಯ ಕನಸು ಕಾಣುತ್ತಿರೋರಿಗೆ ಏಟು ನೀಡಿದೆ. ಆದರೆ, ಚಿನ್ನದ ಮೇಲೆ ಹೂಡಿಕೆ ಮಾಡಿರೋರಿಗೆ ಮಾತ್ರ ಬಂಪರ್ ರಿಟರ್ನ್ಸ್ ನೀಡಿದೆ. ಈ ವರ್ಷದಲ್ಲಿ ಇಲ್ಲಿಯ ತನಕದ ಚಿನ್ನದ ಮೇಲಿನ ಹೂಡಿಕೆಗೆ ಶೇ.14ರಷ್ಟು ಗಳಿಕೆ ಸಿಕ್ಕಿದೆ. ಇದು ಕಳೆದ ವರ್ಷದ ಗಳಿಕೆ ಪ್ರಮಾಣ ಶೇ.13ರಷ್ಟನ್ನು ಮೀರಿಸಿದೆ. ಸತತ ನಾಲ್ಕು ವಾರಗಳಿಂದ ಚಿನ್ನದ ಬೆಲೆಯಲ್ಲಿ ಜಾಗತಿಕವಾಗಿ ಏರಿಕೆ ಕಂಡುಬಂದಿದೆ. ಚಿನ್ನದ ಬೆಲೆ ಔನ್ಸ್ ಗೆ 2,410 ಅಮೆರಿಕನ್ ಡಾಲರ್ ದಾಟುವ ಮೂಲಕ ಬಂಗಾರ ಖರೀದಿಸೋರಿಗೆ ಶಾಕ್ ನೀಡಿದೆ. ಮಧ್ಯ ಪೂರ್ವದಲ್ಲಿನ ಸಂಘರ್ಷದ ಕಾರ್ಮೋಡ ಬರೀ ಒಂದೇ ವಾರದಲ್ಲಿ ಚಿನ್ನದ ಬೆಲೆಯಲ್ಲಿ ಶೇ.3ರಷ್ಟು ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಹೇಳಬಹುದು. ಚಿನ್ನದ ಬೆಲೆ ಭಾರೀ ಏರಿಕೆ ಕಂಡಿರೋದು ಆಸಕ್ತ ಹೂಡಿಕೆದಾರರಿಗೆ ಬಂಗಾರದ ಮೇಲಿನ ಹೂಡಿಕೆಗೆ ಇದು ಉತ್ತಮ ಸಮಯವೇ? ಪ್ರಮುಖ ಬ್ರೋಕರೇಜ್ ಸಂಸ್ಥೆಗಳು ಈ ಬಗ್ಗೆ ಏನು ಹೇಳುತ್ತವೆ? ಇಲ್ಲಿದೆ ಮಾಹಿತಿ.

ಚಿನ್ನದ ಬೆಲೆ ಹೆಚ್ಚಳಕ್ಕೆ ಕಾರಣವೇನು?
*ಬಡ್ಡಿದರ ಕಡಿತದ ನಿರೀಕ್ಷೆ: ಚಿನ್ನದ ಬೆಲೆ ಹೆಚ್ಚಳಕ್ಕೆ ಅನೇಕ ಕಾರಣಗಳಿವೆ. ಮೊದಲಿಗೆ ಅಧಿಕ ಹಣದುಬ್ಬರ ಹಾಗೂ ಬಡ್ಡಿದರ ಕಡಿತದ ನಿರೀಕ್ಷೆಗಳ ಕಾರಣಕ್ಕೆ ಚಿನ್ನಕ್ಕೆ ಭಾರೀ ಬೇಡಿಕೆಯಿದೆ. ಇನ್ನೊಂದೆಡೆ ಜಾಗತಿಕ ಮಟ್ಟದಲ್ಲಿನ ಭೌಗೋಳಿಕ ರಾಜಕೀಯ ಒತ್ತಡಗಳು ಅದರಲ್ಲೂ ಮಧ್ಯ ಪೂರ್ವದಲ್ಲಿನ ಪರಿಸ್ಥಿತಿಗಳು ಚಿನ್ನವನ್ನು ಹೂಡಿಕೆಗೆ ಅತ್ಯಂತ ಸುರಕ್ಷಿತ ಸಾಧನವನ್ನಾಗಿಸಿದೆ. 

Tap to resize

Latest Videos

ಸೀರೆಯುಟ್ಟ ಬಂಗಾರದ ಗೊಂಬೆ.. ದೃಷ್ಟಿ ತೆಗೆಸಿಕೊಳ್ಳಿ: ರಾಧಿಕಾ ಪಂಡಿತ್‌ ಬ್ಯೂಟಿಗೆ ಮನಸೋತ ನೆಟ್ಟಿಗರು!

*ಮಧ್ಯ ಪೂರ್ವದಲ್ಲಿ ಹೆಚ್ಚಿದ ಸಂಘರ್ಷದ ಭೀತಿ: ಇಸ್ರೇಲ್ ಹಾಗೂ ಇರಾನ್ ನಡುವೆ ಸಂಘರ್ಷದ ಭೀತಿ ಹೆಚ್ಚಿದೆ. ಈಗಾಗಲೇ ಇಸ್ರೇಲ್ ಮೇಲೆ ಇರಾನ್, ಇರಾಕ್ ಹಾಗೂ ಯೆಮೆನ್  ಅನೇಕ ಡ್ರೋನ್ ಹಾಗೂ ಮಿಸೆಲ್ ದಾಳಿಗಳನ್ನು ನಡೆಸಿವೆ ಎಂದು ವರದಿಯಾಗಿದೆ. ಈ ಸಂಘರ್ಷದ ಭೀತಿ ಚಿನ್ನದ ಬೆಲೆ ಹೆಚ್ಚಳಕ್ಕೆ ಕಾರಣವಾಗುವ ನಿರೀಕ್ಷೆಯಿದೆ. ಭೌಗೋಳಿಕ-ರಾಜಕೀಯ ಅನಿಶ್ಚಿತತೆ ಸಮಯದಲ್ಲಿ ಚಿನ್ನ ಹೂಡಿಕೆಗೆ ಸೂಕ್ತ ಸಾಧನವಾಗುವ ನಿರೀಕ್ಷೆಯಿದೆ. 

*ಕಚ್ಚಾ ತೈಲದ ಬೆಲೆ ಹೆಚ್ಚಳ: 2024ನೇ ಸಾಲಿನಲ್ಲಿ ಕಚ್ಚಾ ತೈಲದ ಬೆಲೆಯಲ್ಲಿ ಶೇ.18ರಷ್ಟು ಹೆಚ್ಚಳವಾಗಿದೆ. ಇದು ಕೂಡ ಚಿನ್ನದ ಬೆಲೆಯೇರಿಕೆಗೆ ಕಾರಣವಾಗಲಿದೆ. ಇನ್ನು ಕೆಂಪು ಸಮುದ್ರದಲ್ಲಿ ಪೂರೈಕೆ ಅಡೆತಡೆಗಳು, ರಷ್ಯಾದ ಕಚ್ಚಾ ತೈಲ ಸಂಗ್ರಹಣೆ ಮೇಲೆ ಉಕ್ರೇನ್ ಡ್ರೋನ್ ದಾಳಿಯಿಂದ ಕಚ್ಚಾ ತೈಲದ ಬೆಲೆಯಲ್ಲಿ ಹೆಚ್ಚಳವಾಗಿದೆ. ಕಚ್ಚಾ ತೈಲದ ಬೆಲೆಯೇರಿಕೆ ಅಧಿಕ ಹಣದುಬ್ಬರಕ್ಕೆ ಕಾರಣವಾಗಿದೆ ಕೂಡ. ಇದು ಹೂಡಿಕೆದಾರರನ್ನು ಸುರಕ್ಷಿತ ಹೂಡಿಕೆ ಸಾಧನವಾದ ಚಿನ್ನದ ಕಡೆಗೆ ಹೆಚ್ಚಿನ ಒಲವು ತೋರುವಂತೆ ಮಾಡಿದೆ. 

*ದೀರ್ಘಾವಧಿಯ ಹೂಡಿಕೆ ಸಾಧನ: ಕಳೆದ ನಾಲ್ಕು ವಾರಗಳಿಂದ ಚಿನ್ನದ ಬೆಲೆಯಲ್ಲಿ ಏರಿಕೆಯಾಗಿದೆ. ಈ ಮೂಲಕ 2023ರ ಪ್ರಾರಂಭದಿಂದಲೂ ಚಿನ್ನವನ್ನು ಅತ್ಯುತ್ತಮ ಹೂಡಿಕೆ ಸಾಧನವನ್ನಾಗಿಸಿದೆ. ಚಿನ್ನವನ್ನು ಅಗತ್ಯಕ್ಕಿಂತ ಹೆಚ್ಚು ಖರೀದಿಸಲಾಗುತ್ತದೆ ಎಂಬ ಭಾವನೆ ಕೂಡ ಮಧ್ಯಪೂರ್ವದಲ್ಲಿ ಪ್ರಾದೇಶಿಕ ಸಂಘರ್ಷಕ್ಕೆ ಕಾರಣವಾಗಲಿದೆ. 

ಮಾರಾಟಕ್ಕಿದೆ ಸುಂದರ ದ್ವೀಪದ ಐಷಾರಾಮಿ ಬಂಗಲೆ, ಬೆಲೆ ಎಷ್ಟು ಗೊತ್ತಾ?

ತಜ್ಞರ ಚಿನ್ನದ ಬೆಲೆ ಅಂದಾಜು ಹೇಗಿದೆ?: ಅಮೆರಿಕದ ಪ್ರಮುಖ ಹೂಡಿಕೆ ಬ್ಯಾಂಕ್ ಜೆಪಿ ಮೋರ್ಗಾನ್ ಪ್ರಕಾರ ಚಿನ್ನದ ಬೆಲೆ ಪ್ರತಿ ಔನ್ಸ್ ಗೆ 2,500 ಅಮೆರಿಕನ್ ಡಾಲರ್ ತಲುಪುವ ನಿರೀಕ್ಷೆಯಿದೆ. ಇನ್ನು ಸಿಟಿ ಫೋರ್ ಕಾಸ್ಟ್ ಪ್ರಕಾರರ ಚಿನ್ನದ ಬೆಲೆ ಪ್ರತಿ ಔನ್ಸ್ ಗೆ 3000 ಅಮೆರಿಕನ್ ಡಾಲರ್ ತಲುಪಲಿದೆ. ಇನ್ನು ಬ್ಯಾಂಕ್ ಆಫ್ ಅಮೆರಿಕದ ಅಂದಾಜಿನ ಪ್ರಕಾರ 2025ರೊಳಗೆ ಚಿನ್ನದ ಬೆಲೆ 3000 ಅಮೆರಿಕನ್ ಡಾಲರ್ ತಲುಪಲಿದೆ. 

click me!