ಸ್ವಂತ ಉದ್ಯಮ ಪ್ರಾರಂಭಿಸಲು ಬಹುರಾಷ್ಟ್ರೀಯ ಕಂಪನಿಯ ಉನ್ನತ ಹುದ್ದೆ ತೊರೆದ ಈತ, ಈಗ 200 ಕೋಟಿಯ ಒಡೆಯ!

By Suvarna News  |  First Published Apr 15, 2024, 12:38 PM IST

ಸ್ವಂತ ಉದ್ಯಮ ಪ್ರಾರಂಭಿಸುವ ಯುವಕರಿಗೆ ಹಿಮ್ಮತ್ ಜೈನ್ ಯಶಸ್ಸಿನ ಕಥೆ ಪ್ರೇರಣೆ ನೀಡಬಲ್ಲದು.ಬಹುರಾಷ್ಟ್ರೀಯ ಕಂಪನಿಯ ಉದ್ಯೋಗ ತೊರೆದು ಉದ್ಯಮ ಪ್ರಾರಂಭಿಸಿದ ಹಿಮ್ಮತ್ ಅವರ ಕಂಪನಿಯ ಮೌಲ್ಯ ಈಗ 200 ಕೋಟಿ ರೂ. 
 


Business Desk: ಭಾರತದಲ್ಲಿ ಸ್ಟಾರ್ಟಪ್ ಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಸ್ವಂತ ಉದ್ಯಮ ಪ್ರಾರಂಭಿಸಬೇಕು ಎಂಬ ಹಂಬಲ ಯುವಕರಲ್ಲಿ ಹಿಂದಿಗಿಂತ ಇಂದು ಹೆಚ್ಚಿದೆ. ಇದೇ ಕಾರಣದಿಂದ ಅನೇಕರು ಕೈತುಂಬಾ ವೇತನ ನೀಡುವ ಉದ್ಯೋಗ ತೊರೆದು ಸ್ವಂತ ಉದ್ಯಮ ಪ್ರಾರಂಭಿಸಲು ಆಸಕ್ತಿ ತೋರುತ್ತಿದ್ದಾರೆ. ಈ ರೀತಿ ಬಹುರಾಷ್ಟ್ರೀಯ ಕಂಪನಿಯ ಉನ್ನತ ಹುದ್ದೆ ತೊರೆದು ಉದ್ಯಮ ಪ್ರಯಾಣ ಆರಂಭಿಸಿದವರಲ್ಲಿ ಆಸ್-ಇಟ್-ಈಸ್ ನ್ಯೂಟ್ರಿಷಿಯನ್ ಸಹ-ಸಂಸ್ಥಾಪಕ ಹಾಗೂ ನಿರ್ದೇಶಕ ಹಿಮ್ಮತ್ ಜೈನ್ ಕೂಡ ಒಬ್ಬರು. ಗೋವಾ ಇನ್ಸಿಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ನಲ್ಲಿ 2003ರಲ್ಲಿ ಎಂಬಿಎ ಪದವಿ ಪೂರ್ಣಗೊಳಿಸಿದ ಹಿಮ್ಮತ್ , ಮೋರ್ಗಾನ್ ಸ್ಟ್ಯಾನ್ಲೆಯಲ್ಲಿ ಉದ್ಯೋಗ ಪ್ರಾರಂಭಿಸಿದ್ದರು. ಆದರೆ, ಉದ್ಯಮಿಯಾಗಬೇಕು ಎಂಬ ಹಂಬಲದಿಂದ 2007ರಲ್ಲಿ ಉದ್ಯೋಗ ತೊರೆದು ಕುಟುಂಬದ ಔಷಧ ಉದ್ಯಮ ಸೇರಿಕೊಂಡರು. ಆದರೂ ಹೊಸ ಉದ್ಯಮ ಪ್ರಾರಂಭಿಸಬೇಕು ಎಂಬ ಕನಸು ಅವರಲ್ಲಿ ದಿನೇದಿನೆ ಬಲಗೊಳ್ಳುತ್ತಿತ್ತು. ಪರಿಣಾಮ 2018ರಲ್ಲಿ  ಆಸ್-ಇಟ್-ಈಸ್ ನ್ಯೂಟ್ರಿಷಿಯನ್ ಪ್ರಾರಂಭಿಸಿದರು.

ಸಾಮಾನ್ಯವಾಗಿ ಪ್ರತಿಷ್ಟಿತ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಉದ್ಯೋಗ ಸಿಕ್ಕಿದ್ರೆ ಬಹುತೇಕರು ಅದರಲ್ಲೇ ಮುಂದುವರಿಯುವ ನಿರ್ಧಾರ ಕೈಗೊಳ್ಳುತ್ತಾರೆ. ಏಕೆಂದರೆ ಉತ್ತಮ ವೇತನ ಸಿಗುವ ಕಾರಣ ಜೀವನಕ್ಕೆ ಆರ್ಥಿಕ ಭದ್ರತೆ ಸಿಗುತ್ತದೆ. ಹೀಗಾಗಿ ಉದ್ಯಮ ಪ್ರಾರಂಭಿಸುವ ರಿಸ್ಕ್ ತೆಗೆದುಕೊಳ್ಳೋರು ಕಡಿಮೆ. ಆದರೆ, ತಂದೆ ಅದಾಗಲೇ ಉದ್ಯಮ ಕ್ಷೇತ್ರದ ನಾಡಿಮಿಡಿತ ಅರಿತಿದ್ದರು. ಮಗನಿಗೂ ಕೂಡ ಉದ್ಯಮ ಕ್ಷೇತ್ರದತ್ತ ಆಸಕ್ತಿ ತೋರುವಂತೆ ತಿಳಿ ಹೇಳಿದರು. ತಂದೆಯ ಮಾತುಗಳು ಹಿಮ್ಮತ್ ಅವರಲ್ಲಿ ಹೊಸ ಉತ್ಸಾಹ ಮೂಡಿಸಿತು. ಪರಿಣಾಮ ಉದ್ಯೋಗ ಭದ್ರತೆ, ಕೈ ತುಂಬಾ ಸಂಬಳ ಎಲ್ಲವನ್ನೂ ತೊರೆದು ಸ್ವಂತ ಕಂಪನಿ ಪ್ರಾರಂಭಿಸುವ ನಿರ್ಧಾರವನ್ನು ಅವರು ಮಾಡಿದರು.

Tap to resize

Latest Videos

Business : ಸಿನಿಮಾ ಕೈಕೊಟ್ರೂ ಬ್ಯೂಸಿನೆಸ್ ಕೈ ಬಿಡಲಿಲ್ಲ… ಕೋಟಿ ಸಂಪಾದಿಸ್ತಿರೋ ಬಾಲಿವುಡ್ ಸ್ಟಾರ್

ಹೊಸದೇನಾದರೂ ಮಾಡಬೇಕು ಎಂಬ ಹಂಬಲ ಹಾಗೂ ನ್ಯೂಟ್ರಿಷಿಯನ್ ಕುರಿತು ಹಿಮ್ಮತ್ ಅವರಿಗಿದ್ದ ಜ್ಞಾನ ಹಾಗೂ ಆಸಕ್ತಿ ಅದಕ್ಕೆ ಸಂಬಂಧಿಸಿದ ಉದ್ಯಮ ಪ್ರಾರಂಭಿಸಲು ಪ್ರೇರಣೆಯಾಯಿತು. ಭಾರತದ ಮಾರುಕಟ್ಟೆಯಲ್ಲಿ ಬ್ರ್ಯಾಂಡೆಡ್ ಸಪ್ಲಿಮೆಂಟ್ ಕೊರತೆಯಿರೋದನ್ನು ಗಮನಿಸಿದ ಅವರು 2018ರ ಮಾರ್ಚ್ ನಲ್ಲಿ ಸಹೋದರ ಅರವಿಂದ್ ಜೈನ್ ಅವರ ಜೊತೆಗೆ ಸೇರಿ  ಆಸ್-ಇಟ್-ಈಸ್ ನ್ಯೂಟ್ರಿಷಿಯನ್ ಪ್ರಾರಂಭಿಸಿದರು. 

ಉದ್ಯಮ, ಪ್ರಾರಂಭಿಸಿದ ಕೆಲವೇ ಸಮಯದಲ್ಲಿ ಯಶಸ್ಸಿನ ಹಾದಿಯಲ್ಲಿ ಮುನ್ನಡೆಯಲು ಪ್ರಾರಂಭಿಸಿತು. ವೇಗದ ಬೆಳವಣಿಗೆ ಪರಿಣಾಮ 200 ಕೋಟಿ ರೂ. ವಹಿವಾಟು ನಡೆಸಿತು. ಕಂಪನಿಯ ಈ ಯಶಸ್ಸು ಗುಣಮಟ್ಟ ಹಾಗೂ ಅನ್ವೇಷಣೆಯನ್ನು ಅವಲಂಬಿಸಿದೆ ಎಂದರೆ ತಪ್ಪಿಲ್ಲ. ಹಿಮ್ಮತ್ ಹೊಸತದ ಜೊತೆಗೆ ಗುಣಮಟ್ಟದ ಸುಧಾರಣೆಗೆ ಹೆಚ್ಚಿನ ಆದ್ಯತೆ ನೀಡಿದರ ಪರಿಣಾಮ ಕಂಪನಿ ಬಹುಬೇಗ ಯಶಸ್ಸು ಕಂಡಿತು. ಆನ್ ಲೈನ್ ಮಾರುಕಟ್ಟೆಯನ್ನು ಕೂಡ ಬಳಸಿಕೊಂಡ ಪರಿಣಾಮ ಈ ಕಂಪನಿಯ ಉತ್ಪನ್ನಗಳು ಭಾರತ ಮಾತ್ರವಲ್ಲದೆ ವಿದೇಶಗಳಲ್ಲೂ ಕೂಡ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿವೆ.

Success Story : ಎಂಟನೇ ತರಗತಿ ಓದಿದ ವ್ಯಕ್ತಿ ಹಲ್ದಿರಾಮ್ ಕಂಪನಿ ಕಟ್ಟಿದ್ದು ಹೇಗೆ?

ಇನ್ನು ಹಿಮ್ಮತ್ ಅವರ ಯಶಸ್ಸಿನಲ್ಲಿ ಅವರ ಕುಟುಂಬದ ಪಾತ್ರ ಕೂಡ ದೊಡ್ಡದಿದೆ. ಅವರ ಕುಟುಂಬದ ಸಮಗ್ರತೆ, ಒಗ್ಗಟ್ಟು ಅವರ ಉನ್ನತ ಸಾಧನೆಗೆ ಬೆನ್ನೆಲುಬಾಗಿತ್ತು. ಹೆತ್ತವರು ಹಾಗೂ ಸಹೋದರನ ಪ್ರೋತ್ಸಾಹದಿಂದ ಹಿಮ್ಮತ್ ಉದ್ಯಮದಲ್ಲಿ ಸಾಕಷ್ಟು ಎತ್ತರಕ್ಕೇರಲು ಸಾಧ್ಯವಾಯಿತು. ಹಾಗೆಯೇ ಉದ್ಯಮದಲ್ಲಿ ಎದುರಾದ ಎಲ್ಲ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಸಾಧ್ಯವಾಯಿತು.

ಒಟ್ಟಾರೆ ಹಿಮ್ಮತ್ ಜೈನ್ ಅವರ ಉದ್ಯಮ ಪಯಣ ಕಾರ್ಪೋರೇಟ್ ಜಗತ್ತಿನಲ್ಲಿ ತಮ್ಮದೇ ಆದ ಸಾಮ್ರಾಜ್ಯ ಕಟ್ಟುವ ಕನಸು ಕಾಣುತ್ತಿರೋರಿಗೆ ಪ್ರೇರಣೆಯಾಗಿದೆ. ಹಿಂಜರಿಕೆ ಬಿಟ್ಟು ಹೊಸತನದೊಂದಿಗೆ ಉದ್ಯಮ ಜಗತ್ತಿಗೆ ಕಾಲಿಟ್ಟರೆ ಯಶಸ್ಸು ಸಾಧಿಸಬಹುದು ಎಂಬುದಕ್ಕೆ ಹಿಮ್ಮತ್ ಜೈನ್ ಉತ್ತಮ ನಿದರ್ಶನ. 
 

click me!