ಕೆಲ ವ್ಯವಹಾರಗಳನ್ನು ನಮೂದಿಸದೇ ಬಿಬಿಸಿ ಭಾರಿ ತೆರಿಗೆ ವಂಚನೆ ಮಾಡಿದೆ. ಕಾರ‍್ಯವ್ಯಾಪ್ತಿಗೂ ಆದಾಯಕ್ಕೂ ಹೊಂದಾಣಿಕೆ ಆಗಿಲ್ಲ, ಭಾರತದಿಂದ ರವಾನಿಸಿದ ಹಣ ಬ್ರಿಟನ್‌ನಲ್ಲಿ ಆದಾಯವೆಂದು ತೋರಿಸಿಲ್ಲ ಎಂದು ಬಿಬಿಸಿ ಮೇಲೆ ಐಟಿ ಸರ್ವೇ ಬೆನ್ನಲ್ಲೇ ಐಟಿ ಇಲಾಖೆ ಅಧಿಕೃತ ಹೇಳಿಕೆ ನೀಡಿದೆ.
ನವದೆಹಲಿ (ಫೆಬ್ರವರಿ 18, 2023): ‘ಪ್ರಮುಖ ಅಂತಾರಾಷ್ಟ್ರೀಯ ಮಾಧ್ಯಮ ಕಂಪನಿಯೊಂದರ ದೆಹಲಿ ಮತ್ತು ಮುಂಬೈ ಕಚೇರಿಗಳಲ್ಲಿ ಕಳೆದ 3 ದಿನಗಳ ಕಾಲ ನಡೆಸಿದ ತಪಾಸಣೆ ವೇಳೆ ಹಣಕಾಸು ಲೆಕ್ಕಪತ್ರದಲ್ಲಿ ಅಕ್ರಮಗಳು ಪತ್ತೆಯಾಗಿವೆ’ ಎಂದು ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಶುಕ್ರವಾರ ಬಿಡುಗಡೆ ಮಾಡಿದ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಈ ಮೂಲಕ ಬ್ರಿಟನ್ ಮೂಲದ ಬಿಬಿಸಿ ಮಾಧ್ಯಮ ಸಂಸ್ಥೆ ತನ್ನ ಭಾರತೀಯ ಕಾರ್ಯನಿರ್ವಹಣೆಯಲ್ಲಿ ಗೋಲ್‌ಮಾಲ್ ನಡೆಸಿದೆ ಎಂದು ಅದರ ಹೆಸರನ್ನು ನೇರವಾಗಿ ಉಲ್ಲೇಖಿಸದೇ ಗಂಭೀರ ಆರೋಪ ಮಾಡಿದೆ.
ಕಳೆದ ಮಂಗಳವಾರ 2 ನಗರಗಳಲ್ಲಿನ ಕಚೇರಿಗಳ ಮೇಲೆ ದಾಳಿ ನಡೆಸಿದ್ದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು (Income Tax Department Officers) ಗುರುವಾರ ರಾತ್ರಿಯವರೆಗೂ ಕಾರ್ಯಾಚರಣೆ ನಡೆಸಿದ್ದರು. 2002ರ ಗುಜರಾತ್ ಗಲಭೆ ಪ್ರಕರಣದಲ್ಲಿ (Gujarat Riots Case) ಅಂದಿನ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ (Narendra Modi) ಪಾತ್ರದ ಕುರಿತು ಬೆಳಕು ಚೆಲ್ಲುವ ಸಾಕ್ಷ್ಯಚಿತ್ರ (Documentary) ಪ್ರಸಾರದ ಬೆನ್ನಲ್ಲೇ ಈ ದಾಳಿ ನಡೆದಿದ್ದ ಕಾರಣ, ಇದಕ್ಕೆ ರಾಜಕೀಯ ಬಣ್ಣವೂ ಮೆತ್ತಿಕೊಂಡಿತ್ತು. ಇದು ಸೇಡಿನ ದಾಳಿ ಎಂದೆಲ್ಲಾ ವಿಪಕ್ಷಗಳು (Opposition Parties) ಸರ್ಕಾರದ ವಿರುದ್ಧ ಕಿಡಿಕಾರಿದ್ದವು. ಅದರ ಬೆನ್ನಲ್ಲೇ ಇದೀಗ, ದಾಳಿ ವೇಳೆ ಬಿಬಿಸಿಯ (BBC) ಲೆಕ್ಕಪತ್ರದಲ್ಲಿ ಅಕ್ರಮಗಳು ಕಂಡುಬಂದಿವೆ ಎಂದು ತೆರಿಗೆ ಇಲಾಖೆ ಮಾಹಿತಿ ನೀಡಿದೆ.
ಇದನ್ನು ಓದಿ: ಮೋದಿ ಸಾಕ್ಷ್ಯಚಿತ್ರ ವಿವಾದ ಬೆನ್ನಲ್ಲೇ ಬಿಬಿಸಿಯ ದೆಹಲಿ, ಮುಂಬೈ ಕಚೇರಿಗೆ ಐಟಿ ಶಾಕ್..!
ಕಂಪನಿ ಅಕ್ರಮ ಎಸಗಿದೆ- ಐಟಿ ಇಲಾಖೆ:
ಸಿಬಿಡಿಟಿ (CBDT) ಶುಕ್ರವಾರ ಬಿಡುಗಡೆ ಮಾಡಿದ ತನ್ನ ಹೇಳಿಕೆಯಲ್ಲಿ ‘ಕೆಲ ವ್ಯವಹಾರಗಳನ್ನು ನಮೂದಿಸದೇ ತೆರಿಗೆ ವಂಚನೆ ಮಾಡಲಾಗಿದೆ. ಮಾಧ್ಯಮ ಸಂಸ್ಥೆಯ ವಿವಿಧ ಅಂಗಗಳು ಆದಾಯ ತೆರಿಗೆ ಇಲಾಖೆಗೆ ಸಲ್ಲಿಸಿರುವ ಆದಾಯ ಮತ್ತು ಲಾಭದ ಮಾಹಿತಿಯು, ಅದು ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ವ್ಯಾಪ್ತಿ ಮತ್ತು ವಿಸ್ತಾರಕ್ಕೆ ಹೊಂದಾಣಿಕೆಯಾಗುತ್ತಿಲ್ಲ. ಜೊತೆಗೆ ಮಾಧ್ಯಮ ಸಂಸ್ಥೆಯ ಕೆಲ ವಿದೇಶಿ ವಿಭಾಗಗಳು ತಾವು ಸ್ವೀಕರಿಸಿದ ಹಣವನ್ನು ಭಾರತದಲ್ಲಿನ ಆದಾಯ ಎಂದು ನಮೂದಿಸದೇ ಇರುವುದು ಕಂಡುಬಂದಿದೆ. ಅಲ್ಲದೆ ಟ್ರಾನ್ಸ್‌ಫರ್ ಪ್ರೈಸಿಂಗ್ ಡಾಕ್ಯುಮೆಂಟೇಷನ್‌ನಲ್ಲೂ ಕೆಲವೊಂದು ಲೋಪ ಮತ್ತು ಅಸಮಂಜಸ ಸಂಗತಿಗಳು ಕಂಡುಬಂದಿವೆ’ ಎಂದು ಹೇಳಿದೆ.
ಜೊತೆಗೆ ’ತಪಾಸಣೆ ವೇಳೆ ಮಾಧ್ಯಮ ಸಂಸ್ಥೆಯ ಸಿಬ್ಬಂದಿಗಳು ಸೂಕ್ತ ಸಹಕಾರ ನೀಡದೇ ತನಿಖೆಯನ್ನು ವಿಳಂಬ ಮಾಡುವ ತಂತ್ರ ಅನುಸರಿಸಿದ್ದಾರೆ. ಇದೆಲ್ಲದರ ಹೊರತಾಗಿಯೂ ಮಾಧ್ಯಮ ಸಂಸ್ಥೆಯ ಕಾರ್ಯನಿರ್ವಹಣೆಗೆ ಯಾವುದೇ ಅಡ್ಡಿಯಾಗದಂತೆ ತಪಾಸಣೆ ನಡೆಸಲಾಗಿದೆ. ಜೊತೆಗೆ ತಪಾಸಣೆ ವೇಳೆ ನಾವು ಸಾಕಷ್ಟು ಸಾಕ್ಷ್ಯಗಳನ್ನು ಸಂಗ್ರಹಿಸಿದ್ದೇವೆ ಮತ್ತು ಕಚೇರಿಯಿಂದ ಸಂಗ್ರಹಿಸಲಾದ ಡಿಜಿಟಲ್ ದಾಖಲೆಗಳ, ಕಾಗದ ಪತ್ರಗಳು, ಸಿಬ್ಬಂದಿ ಹೇಳಿಕೆಗಳನ್ನು ಪರಿಶೀಲಿಸುತ್ತಿದ್ದೇವೆ’ ಎಂದು ಸಿಬಿಡಿಟಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಇದನ್ನೂ ಓದಿ: BBC ಅಂದ್ರೆ ಭ್ರಷ್ಟ ಬಕ್ವಾಸ್ ಕಾರ್ಪೋರೇಶನ್, ಐಟಿ ದಾಳಿ ಬೆನ್ನಲ್ಲೇ ಬಿಜೆಪಿ ನಾಯಕನ ಹೇಳಿಕೆ ವೈರಲ್!