‘ಇನ್ವೆಸ್ವ್ ಕರ್ನಾಟಕ’ ಮಾದರಿಯಲ್ಲಿ ‘ಇನ್ವೆಸ್ವ್ ರಾಮನಗರ’ ಮಾದರಿಯನ್ನು ಮುನ್ನೆಲೆಗೆ ತರಲಾಗುತ್ತಿದೆ.
ಎಂ.ಅಫ್ರೋಜ್ ಖಾನ್
ರಾಮನಗರ:(ಜು.29): ಭೌಗೋಳಿಕವಾಗಿ ಪ್ರಾಕೃತಿಕ ಸಂಪತ್ಭರಿತವಾಗಿರುವ ರೇಷ್ಮೆನಗರಿಯ ಪ್ರಮುಖ ಪ್ರವಾಸಿ ತಾಣವಾಗಿ ರೂಪಿಸುವ ನಿಟ್ಟಿನಲ್ಲಿ ಆಯೋಜನೆಗೊಂಡಿರುವ ಪ್ರವಾಸೋದ್ಯಮ ಹೂಡಿಕೆದಾರರ ಸಮಾವೇಶ ರಾಮನಗರ ಜಿಲ್ಲೆಯ ಆರ್ಥಿಕ ಚಟುವಟಿಕೆ ಮತ್ತು ಉದ್ಯೋಗ ಸೃಷ್ಟಿಯ ದೃಷ್ಟಿಯಿಂದ ಹೊಸ ಭರವಸೆ ಮೂಡಿಸಿದೆ. ರಾಜ್ಯ ರಾಜಧಾನಿ ಬೆಂಗಳೂರಿಗೆ ಸನಿಹದಲ್ಲಿರುವ ರಾಮನಗರ ಜಿಲ್ಲೆ ಪ್ರವಾಸೋದ್ಯಮದಲ್ಲಿ ವಿಫಲ ಅವಕಾಶಗಳಿಗೆ ಎಡೆಮಾಡಿಕೊಡಲಿದೆ. ಹೀಗಾಗಿ ಜಿಲ್ಲೆಯನ್ನು ಪ್ರವಾಸಿ ಕೇಂದ್ರವನ್ನಾಗಿ ರೂಪಿಸುವ ನಿಟ್ಟಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣರವರು ಜಿಲ್ಲಾಡಳಿತದೊಂದಿಗೆ ಸೇರಿ ವಿಭಿನ್ನ ಯೋಜನೆ ತಯಾರಿಸಿದ್ದು, ಅದಕ್ಕೆ ಪೂರಕವಾಗಿ ಪ್ರವಾಸೋದ್ಯಮ ಹೂಡಿಕೆದಾರರ ಸಮಾವೇಶ ನಡೆಸಲಾಗುತ್ತಿದೆ.
ರಾಮನಗರ ಜಿಲ್ಲೆಯನ್ನು ಪ್ರವಾಸಿತಾಣವನ್ನಾಗಿಸುವಂತೆ ಕ್ರಮಕೈಗೊಳ್ಳುವಂತೆ ಸಚಿವ ಅಶ್ವತ್ಥ ನಾರಾಯಣ ಅವರು ಪ್ರವಾಸೋದ್ಯಮ ಸಚಿವ ಆನಂದ್‌ಸಿಂಗ್ ಅವರಿಗೆ ಪತ್ರ ಬರೆದು ಕೋರಿದ್ದರು. ಇದಕ್ಕೆ ಆನಂದ್‌ಸಿಂಗ್ ಅವರಿಂದಲೂ ಉತ್ತಮ ಸ್ಪಂದನೆ ಸಿಕ್ಕಿದೆ. ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವರ ಸೂಚನೆಯಂತೆ ಜಿಲ್ಲಾಧಿಕಾರಿಗಳು ಪ್ರವಾಸೋದ್ಯಮ ಹೂಡಿಕೆದಾರರನ್ನು ಸೆಳೆಯುವ ನಿಟ್ಟಿನಲ್ಲಿ ಪೂರ್ವಭಾವಿ ಸಭೆಗಳನ್ನು ನಡೆಸಿದ್ದು, ರೂಪು ರೇಷೆಗಳನ್ನು ಸಿದ್ಧಪಡಿಸಲಾಗಿದೆ.
ಸೌಲಭ್ಯ ನೀಡ್ತೇವೆ, ಕರ್ನಾಟಕದಲ್ಲಿ ಬಂಡವಾಳ ಹೂಡ ಬನ್ನಿ: ಸಿಎಂ ಬೊಮ್ಮಾಯಿ
ಸಚಿವ ಅಶ್ವತ್ಥ ನಾರಾಯಣರವರ ಮನವಿಗೆ ಸ್ಪಂದಿಸಿರುವ ಆನಂದ್‌ಸಿಂಗ್ ಅವರು ಶುಕ್ರವಾರ ಕನಕಪುರ ತಾಲೂಕಿನ ಗಾಳಿಬೋರೆ ಪ್ರಕೃತಿ ಶಿಬಿರದಲ್ಲಿ ನಡೆಯಲಿರುವ ಪ್ರವಾಸೋದ್ಯಮ ಹೂಡಿಕೆದಾರರ ಸಮಾವೇಶದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಅನೇಕ ಹೂಡಿಕೆದಾರರು ಪ್ರವಾಸೋದ್ಯಮದ ಮೇಲೆ ಬಂಡವಾಳ ಹೂಡಲು ಆಸಕ್ತಿ ತೋರಿದ್ದಾರೆ ಎನ್ನಲಾಗಿದೆ.
ಟೂರಿಂಗ್ ಹಬ್ ರೂಪಿಸುವ ಚಿಂತನೆ: ರಾಮನಗರ ಜಿಲ್ಲೆಯು ಮುತ್ತತ್ತಿ, ಸಂಗಮ, ಮೇಕೆದಾಟುಗಳಂತಹ ನದಿತೀರ ಪ್ರದೇಶಗಳು, ಸಾವನದುರ್ಗ, ರಾಮದೇವರ ಬೆಟ್ಟಹಾಗೂ ಅರಣ್ಯ ಪ್ರದೇಶಗಳಿಂದ ಕೂಡಿದೆ. ಅಲ್ಲದೆ, ಜಿಲ್ಲೆಯಲ್ಲಿ ಕಾವೇರಿ , ಶಿಂಷಾ, ಅರ್ಕಾವತಿ ಸೇರಿದಂತೆ ಸಣ್ಣಪುಟ್ಟನದಿಗಳು ಹರಿಯುತ್ತಿವೆ. ಸಂಪತ್ಭರಿತವಾದ ವನ್ಯ ಸಂಪತ್ತಿನಿಂದ ಕಂಗೊಳಿಸುತ್ತಿದೆ. ಜಲಸಾಹಸ ಕ್ರೀಡೆಗಳಿಗೆ ಕಣ್ವ, ಇಗ್ಗಲೂರು, ಮಂಚನಬೆಲೆ, ತಿಪ್ಪಗೊಂಡನಹಳ್ಳಿಗಳಂತಹ ಜಲಾಶಯಗಳು ಇಲ್ಲಿವೆ. ಹೀಗೆ ಹತ್ತು ಹಲವು ಬಗೆಯಲ್ಲಿ ಪ್ರವಾಸಿಗರನ್ನು ಆಕರ್ಷಿಸುತ್ತಿವೆ.
ಜಿಲ್ಲೆಗೆ ಬರುವಂತಹ ಪ್ರವಾಸಿಗರನ್ನು ಸೆಳೆಯಲು ಸೈಕಲ್ ಸವಾರಿ ಹಲವು ಸೌಲಭ್ಯ ಕಲ್ಪಿಸಿಕೊಡುವ ಜೊತೆಗೆ ವಿವಿಧ ಚಟುವಟಿಕೆ, ಗುಡ್ಡಗಾಡು ಪ್ರದೇಶದಲ್ಲಿ ಪರ್ವತಾರೋಹಣ, ಸೈಕ್ಲಿಂಗ್ ಹಾಗೂ ಟ್ರೆಕ್ಕಿಂಗ್ ಗಳಿಗೆ ವ್ಯವಸ್ಥೆ ಮಾಡಬಹುದಾಗಿದೆ.
ರಾಮನಗರ ಜಿಲ್ಲೆ ಕಲೆಗೆ ಹೆಸರುವಾಸಿಯಾಗಿದ್ದು, ಜಿಲ್ಲೆಯಲ್ಲಿ ಪಾರಂಪರಿಕ ವಸ್ತು ಸಂಗ್ರಾಹಲಯ ಸಿದ್ಧಪಡಿಸಲು, ಚನ್ನಪಟ್ಟಣದ ಬೊಂಬೆ, ರೇಷ್ಮೆ ಟೂರಿಸಂ, ವಿವಿಧ ಧಾರ್ಮಿಕ ಕೇಂದ್ರಗಳನ್ನು ಗುರುತಿಸಿ ಅಲ್ಲಿಗೂ ಪ್ರವಾಸ ಕೈಗೊಳ್ಳಲು ಅಭಿವೃದ್ಧಿ ಪಡಿಸಬಹುದಾಗಿದೆ. ಇದರ ಜೊತೆಗೆ ಮೈಕ್ರೋಲೈಟ್ ಏರ್‌ಕ್ರಾಫ್ಟ್, ಮ್ಯಾರಥಾನ್, ವಾಕ್ ಥಾನ್, ಪ್ರೋಟಿಂಗ್ ಹೌಸ್ , ಹಿಲಿಂಗ್ ಸೆಂಟರ್ ಹಾಗೂ ಮೂಲಭೂತ ಸೌಕರ್ಯಗಳು ಲಭ್ಯವಿರುವ ಮಾಹಿತಿಯನ್ನು ಒದಗಿಸುವ ತಂತ್ರಾಂಶವನ್ನು ಅಭಿವೃದ್ಧಿಪಡಿಸಬಹುದಾಗಿದೆ.
ಬೆಂಗಳೂರಿನಿಂದ ಅನತಿ ದೂರದಲ್ಲಿರುವ ರಾಮನಗರ ಉತ್ತಮ ರಸ್ತೆ ಸಂಪರ್ಕ ಹೊಂದಿದ್ದು, ಒಂದು ಗಂಟೆ ಪ್ರಯಾಣ, ಜಿಲ್ಲೆಯಲ್ಲಿರುವ ಹಲವು ಪ್ರವಾಸಿತಾಣಗಳನ್ನು ಒಂದು ಯೂನಿಟ್ ನಂತೆ ರೂಪಿಸಿ ಒಂದು ದಿನದ ಕಿರು ಪ್ರವಾಸವನ್ನು ಹಮ್ಮಿಕೊಳ್ಳಲು ಟೂರಿಂಗ್ ಹಬ್ ನಂತೆ ರೂಪಿಸಲು ರಾಮನಗರ ಹೇಳಿ ಮಾಡಿಸಿದಂತಹ ಜಿಲ್ಲೆಯಾಗಿದೆ.
ರಾಮನಗರ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಮತ್ತು ಆತಿಥ್ಯೋದ್ಯಮ ಹಾಗೂ ಸಾಹಸ ಕ್ರೀಡೆಗಳ ಬೆಳವಣಿಗೆಗೆ ವಿಫುಲ ಅವಕಾಶಗಳಿವೆ. ಈ ಬಗ್ಗೆ ವಿಸ್ತೃತವಾಗಿ ಚರ್ಚಿಸಲು ’ರಾಮನಗರ ಪ್ರವಾಸೋದ್ಯಮ ಹೂಡಿಕೆದಾರರ ಸಮಾವೇಶ’ ಆಯೋಜಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರೂ ಆದ ಉನ್ನತ ಶಿಕ್ಷಣ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರ ಪ್ರಯತ್ನದ ಫಲವಾಗಿ ಈ ಸಮಾವೇಶ ಆಯೋಜಿಸಿದ್ದು, ಪ್ರವಾಸೋದ್ಯಮ ಸಚಿವ ಆನಂದಸಿಂಗ್ ಕೂಡ ಭಾಗವಹಿಸುವರು. ಈ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆ, ಹೂಡಿಕೆದಾರರ ಜತೆ ಸಚಿವದ್ವಯರು ಸಮಾಲೋಚನೆ ನಡೆಸಲಿದ್ದಾರೆ.
ಪ್ರವಾಸೋದ್ಯಮ ಅಭಿವೃದ್ಧಿಗೆ ಹೂಡಿಕೆದಾರರ ಸಮಾವೇಶ
ರಾಮನಗರ ಜಿಲ್ಲೆಯ ಪ್ರವಾಸೋದ್ಯಮ ಮತ್ತು ಸಾಹಸ ಕ್ರೀಡೆಗಳ ಬೆಳವಣಿಗೆ ಕುರಿತು ಚರ್ಚಿಸಲು ಶುಕ್ರವಾರ ಕನಕಪುರ ತಾಲೂಕಿನ ಗಾಳಿಬೋರೆಯಲ್ಲಿ ‘ರಾಮನಗರ ಪ್ರವಾಸೋದ್ಯಮ ಹೂಡಿಕೆದಾರರ ಸಮಾವೇಶ’ ಆಯೋಜಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ತಿಳಿಸಿದ್ದಾರೆ.
ಸಮಾವೇಶ ಬೆಳಗ್ಗೆಯಿಂದ ಸಂಜೆಯವರೆಗೂ ನಡೆಯಲಿದೆ. ಹೂಡಿಕೆಗೆ ಇರುವ ಅವಕಾಶಗಳು ಮತ್ತು ತಾಣಗಳನ್ನು ತೀರ್ಮಾನಿಸಿ, ಮುಂದೆ ಇಡಬೇಕಾದ ಹೆಜ್ಜೆಗಳನ್ನು ತೀರ್ಮಾನಿಸಲಾಗುವುದು ಎಂದಿದ್ದಾರೆ.
ಬೆಂಗಳೂರಿನಲ್ಲಿ ಒಂದೂ ಕಾಲು ಕೋಟಿ ಜನಸಂಖ್ಯೆ ಇದ್ದು, ಅಪಾರ ಸಂಖ್ಯೆಯ ಜನ ವಾರಾಂತ್ಯಗಳಲ್ಲಿ ಪ್ರವಾಸ ಹೋಗುತ್ತಿರುತ್ತಾರೆ. ಆದರೆ, ಹೆಚ್ಚಿನ ಜನರಿಗೆ ಶನಿವಾರ ಹಾಗೂ ಭಾನುವಾರಗಳಂದು ಬೆಳಿಗ್ಗೆ ಮನೆ ಬಿಟ್ಟು ಸಂಜೆ ವಾಪಸ್ಸಾಗುವಂತಹ ಪ್ರವಾಸಿ ತಾಣಗಳು ಬೇಕಾಗಿವೆ. ರಾಮನಗರ ಜಿಲ್ಲೆಯಲ್ಲಿ ಕಾಡು, ನದಿ, ಬೆಟ್ಟ, ಜಲಾಶಯ, ಕೋಟೆ, ದೇವಸ್ಥಾನಗಳು, ಕೃಷಿ ಎಲ್ಲವೂ ಸಮೃದ್ಧವಾಗಿವೆ. ಹೀಗಾಗಿ ಇಲ್ಲಿ ಪ್ರವಾಸೋದ್ಯಮ ಮತ್ತು ಆತಿಥ್ಯೋದ್ಯಮವನ್ನು ಬೆಳೆಸಲು ಯಥೇಚ್ಛ ಅವಕಾಶಗಳಿವೆ ಎಂದು ಹೇಳಿದ್ದಾರೆ.
Silicon City Bengaluru ಅಮೆರಿಕದ ಸಿಲಿಕಾನ್ ವ್ಯಾಲಿ ಜತೆ ಕರ್ನಾಟಕ ಸ್ಪರ್ಧೆ, ಸಿಎಂ!
‘ಇನ್ವೆಸ್ವ್ ಕರ್ನಾಟಕ’ ಮಾದರಿಯಲ್ಲಿ ‘ಇನ್ವೆಸ್ವ್ ರಾಮನಗರ’ ಮಾದರಿಯನ್ನು ಮುನ್ನೆಲೆಗೆ ತರಲಾಗುತ್ತಿದೆ. ಇಂತಹ ವಿಕೇಂದ್ರೀಕೃತ ಪ್ರಯತ್ನ ರಾಜ್ಯದ ಬೇರಾವ ಜಿಲ್ಲೆಯಲ್ಲೂ ನಡೆದಿಲ್ಲ. ಉದ್ದೇಶಿತ ಸಭೆಯಲ್ಲಿ ಹಲವು ಉದ್ಯಮಿಗಳ ಜತೆಗೆ ಜಿಲ್ಲಾಧಿಕಾರಿ ಅವಿನಾಶ್ ಮೆನನ್, ಜಿ.ಪಂ ಸಿಇಒ ದಿಗ್ವಿಜಯ ಮತ್ತು ಪ್ರವಾಸೋದ್ಯಮ ಇಲಾಖೆಯ ಸಂಬಂಧಿತ ಉನ್ನತಾಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಬೆಂಗಳೂರಿನ ಜನರು ಸದ್ಯಕ್ಕೆ ಪ್ರವಾಸ ಹೋಗಬೇಕೆಂದರೆ ಹತ್ತಿರದಲ್ಲಿ ನಂದಿ ಬೆಟ್ಟಬಿಟ್ಟರೆ ಸೂಕ್ತ ತಾಣವಿಲ್ಲ. ವಾರಾಂತ್ಯದ ನಂತರ ಪುನಃ ಕೆಲಸಕ್ಕೆ ತೆರಳುವ ಧಾವಂತದಲ್ಲಿರುವವರಿಗೆ ದೂರದ ಜಾಗಗಳಿಗೆ ಹೋಗುವುದು ಸಾಧ್ಯವಿಲ್ಲ. ಜಿಲ್ಲೆಯಲ್ಲಿ ಕೃಷಿ ಜಮೀನುಗಳನ್ನು ಬೇಕಾದರೆ ಆಯ್ದುಕೊಂಡು, ಬೆಳೆ ತೆಗೆಯಲು ಕೂಡ ಪ್ರವಾಸೋದ್ಯಮದ ಭಾಗವಾಗಿ ಅವಕಾಶ ಕೊಡುವ ಬಗ್ಗೆ ಚಿಂತಿಸಲಾಗುತ್ತಿದೆ. ಹೂಡಿಕೆ ಮಾಡಲು ಮುಂದೆ ಬರುವವರಿಗೆ ಮುಕ್ತ ಅವಕಾಶ ಕಲ್ಪಿಸಲಾಗುವುದು. ಸರ್ಕಾರದ ಕಡೆಯಿಂದಲೂ ಎಲ್ಲ ರೀತಿಯ ಅನುಮತಿ ಗಳನ್ನೂ ಸುಲಭವಾಗಿ ಕೊಡಿಸುವ ಕೆಲಸ ಮಾಡಲಾಗುವುದು ಎಂದು ಅಶ್ವತ್ಥನಾರಾಯಣ ತಿಳಿಸಿದ್ದಾರೆ.