ಹೂಡಿಕೆಯ ಟಾಪ್ 10 ಪಟ್ಟಿಯಲ್ಲಿದೆ ಬೆಂಗಳೂರು

By Web DeskFirst Published Jun 20, 2019, 8:38 AM IST
Highlights

ಹೂಡಿಕೆಯಲ್ಲಿರುವ ಬೆಂಗಳೂರಿಗರೂ ಮುಂದಿದ್ದಾರೆ. ಏಷ್ಯಾ ಫೆಸಿಫಿಕ್ ವಲಯದಲ್ಲಿ ಹೂಡಿಕೆಯಲ್ಲಿ ಮುಂದಿರುವ ಟಾಪ್ 10 ನಗರಗಳ ಪಟ್ಟಿಯಲ್ಲಿ ಬೆಂಗಳೂರು ಸ್ಥಾನ ಪಡೆದಿದೆ.

ನವದೆಹಲಿ (ಜೂ.20) : ದೇಶದ ಐಟಿ ರಾಜಧಾನಿ ಎಂದೇ ಬಿರುದಾಂಕಿತವಾಗಿರುವ ಕರುನಾಡಿನ ರಾಜಧಾನಿ ಬೆಂಗಳೂರಿಗೆ ಮತ್ತೊಂದು ಹಿರಿಮೆ ಪ್ರಾಪ್ತವಾಗಿದೆ. ಗಡಿಯಾಚೆಯಿಂದ ಅತಿ ಹೆಚ್ಚು ಹೂಡಿಕೆ ಆಕರ್ಷಿಸಿದ ಏಷ್ಯಾ ಪೆಸಿಫಿಕ್ ವಲಯದ ಟಾಪ್ 10 ನಗರಗಳ ಪಟ್ಟಿಗೆ ಇದೇ ಮೊದಲ ಬಾರಿಗೆ ಬೆಂಗಳೂರು ಸೇರ್ಪಡೆಯಾಗಿದೆ. 

ಅಲ್ಲದೆ ಈ ಪಟ್ಟಿಯಲ್ಲಿ ಸ್ಥಾನ ಪಡೆದ ಭಾರತದ ಮೊದಲ ನಗರ ಎಂಬ ಗೌರವಕ್ಕೂ ಭಾಜನವಾಗಿದೆ. ಸಿಬಿಆರ್‌ಇ ಎಂಬ ಪ್ರಾಪರ್ಟಿ ಕನ್ಸಲ್ಟಂಟ್ ಸಂಸ್ಥೆ ತಯಾರಿಸಿರುವ ‘ಏಷ್ಯಾ ಪೆಸಿಫಿಕ್ ಇನ್ ವೆಸ್ಟರ್ ಇನ್‌ಟೆನ್ಷನ್’ ಎಂಬ ಸಮೀಕ್ಷೆಯಲ್ಲಿ ಬೆಂಗಳೂರಿಗೆ ಟಾಪ್ 10 ನಗರಗಳ ಪಟ್ಟಿಯಲ್ಲಿ ಸ್ಥಾನ ನೀಡಲಾಗಿದೆ. ಕಳೆದ ಹಣಕಾಸು ವರ್ಷದಲ್ಲಿ ಬೆಂಗಳೂರಿಗೆ 11 ಸಾವಿರ ಕೋಟಿ ರು. ಹೂಡಿಕೆ ಹರಿದುಬಂದಿದೆ ಎಂದು ಸಮೀಕ್ಷೆ ತಿಳಿಸಿದೆ. 

ಹಲವಾರು ಅಂತಾರಾಷ್ಟ್ರೀಯ ಕಂಪನಿಗಳಿಗೆ ನೆಲೆಯಾಗಿರುವ ಗೌರವವನ್ನು ಬೆಂಗಳೂರು ಹೆಚ್ಚಿಸಿಕೊಳ್ಳುತ್ತಲೇ ಇದೆ. ಅದರ ಆಧಾರದಲ್ಲಿ ಭಾರತದ ಮೊದಲ ಆದ್ಯತಾ ಹೂಡಿಕೆ ನಗರವಾಗಿ ಬೆಂಗಳೂರು ಸ್ಥಾನ ಪಡೆದಿದೆ’ ಎಂದು ಸಿಬಿಆರ್‌ಇ ಸಂಸ್ಥೆಯ ಭಾರತ, ಆಗ್ನೇಯ ಏಷ್ಯಾ, ಮಧ್ಯಪ್ರಾಚ್ಯ ಹಾಗೂ ಆಫ್ರಿಕಾ ವಿಭಾಗದ ಮುಖ್ಯಸ್ಥ ಮತ್ತು ಸಿಇಒ ಅಂಶುಮಾನ್ ಮ್ಯಾಗಜಿನ್ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಗಮನಾರ್ಹ ಪ್ರತಿಭಾವಂತರು ಇದ್ದಾರೆ. ವಿಶ್ವದರ್ಜೆಯ ಮೂಲಸೌಕರ್ಯವನ್ನು ಈ ನಗರ ಹೊಂದಿದ್ದು, ಕಚೇರಿ, ರೀಟೆಲ್ ಹಾಗೂ ವಸತಿ ವಿಭಾಗದಲ್ಲಿ ಹಲವಾರು ಹೂಡಿಕೆ ದರ್ಜೆ ಅವಕಾಶಗಳನ್ನು ಒದಗಿಸುತ್ತಿದೆ ಎಂದಿದ್ದಾರೆ. ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ಔಷಧ, ಉತ್ಪಾದನೆ ಹಾಗೂ ಇನ್ನಿತರೆ ಕ್ಷೇತ್ರದ ಪ್ರಮುಖ ಕಂಪನಿಗಳು ಬೆಂಗಳೂರಿನಲ್ಲಿವೆ. ಹೀಗಾಗಿ ಬೆಂಗಳೂರನ್ನು ಭಾರತದ ಶರವೇಗದಲ್ಲಿ ಪ್ರಗತಿ ಹೊಂದುತ್ತಿರುವ ನಗರ ಎಂದು ಪರಿಗಣಿಸಲಾಗಿದೆ. 

2017 -  18 ನೇ ಸಾಲಿನಲ್ಲಿ ಬೆಂಗಳೂರಿನ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ 5500  ಕೋಟಿ ರು. ಹೂಡಿಕೆಯಾಗಿತ್ತು. ಅದು 2018 - 19 ರಲ್ಲಿ ಡಬಲ್ ಆಗಿದೆ ಎಂದು ಸಮೀಕ್ಷೆ ತಿಳಿಸಿದೆ.

click me!