
ನವದೆಹಲಿ(ಮಾ.07): ಪಂಚ ರಾಜ್ಯ ಚುನಾವಣೆ ಅಂತ್ಯಗೊಂಡಿದೆ, ಉಕ್ರೇನ್ ಮೇಲಿನ ರಷ್ಯಾ ಯುದ್ಧ ತೀವ್ರಗೊಂಡಿದೆ, ಜೊತೆಗೆ ಡಾಲರ್ ಎದರು ರೂಪಾಯಿ ಮೌಲ್ಯ ಕುಸಿತಗೊಂಡಿದೆ. ಈ ಎಲ್ಲಾ ಕಾರಣಗಳು ನೇರವಾಗಿ ಇದೀಗ ಭಾರತದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಬೆಲೆ ಏರಿಕೆಗೆ ಕಾರಣವಾಗಲಿದೆ. ಇಂದು ಮಧ್ಯ ರಾತ್ರಿಯಿಂದಲೇ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ.
ಉಕ್ರೇನ್ ಮೇಲಿನ ಯುದ್ಧದಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲ ಬೆಲೆ ಏರಿಕೆಯಾಗಿದೆ. ಇದರ ಬೆನ್ನಲ್ಲೇ ಡಾಲರ್ ಮೌಲ್ಯವೂ ಕೂಡ ಏರಿಕೆಯಾಗಿದೆ. ಇತ್ತ ಭಾರತದ ರೂಪಾಯಿ ಡಾಲರ್ ಎದರು ಕುಸಿತ ಕಂಡಿದೆ. ಇದರ ಪರಿಣಾಮ ಭಾರತದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆಯಾಗಲಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಬ್ಯಾರೆಲ್ 140 ಡಾಲರ್‌ಗೆ ಏರಿಕೆಯಾಗಿದೆ. ಇದು ಕಳೆದ 13 ವರ್ಷಗಳಲ್ಲೇ ಅತ್ಯಧಿಕವಾಗಿದೆ. ಯುನೈಟೆಡ್ ಸ್ಟೇಟ್ಸ್ ಬೆಂಚ್‌ಮಾರ್ಕ್‌ನಲ್ಲಿ ಕಚ್ಚಾ ತೈಲ ಬೆಲೆ ಭಾನುವಾರ 130.50 ಅಮೆರಿಕನ್ ಡಾಲರ್ ಆಗಿತ್ತು. ಇನ್ನು ಸೋಮವಾರದ ಅಂತ್ಯದ ವೇಳೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಪ್ರತಿ ಬ್ಯಾರೆಲ್‌ಗೆ 139.13 ಡಾಲರ್ ಆಗಿದೆ. ಇದು 2008ರ ಬಳಿಕ ಕಂಡ ಗರಿಷ್ಠ ಮೊತ್ತವಾಗಿದೆ.
ಇಂಧನ ಆಮದು ವಿಚಾರದಲ್ಲಿ ಭಾರತ ಇತರ ರಾಷ್ಟ್ರಗಳಿಂದ ಮುಂದಿದೆ. ಗರಿಷ್ಠ ಇಂಧನ ಆಮದು ಮಾಡಿಕೊಳ್ಳುತ್ತಿರುವ ವಿಶ್ವದ 3ನೇ ರಾಷ್ಟ್ರ ಭಾರತವಾಗಿದೆ. ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ಭಾರತ ಇತರ ದೇಶಗಳ ಇಂಧನದ ಮೇಲೆ ಅವಲಂಬಿತವಾಗಿದೆ. ಹೀಗಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಾದ ಸಣ್ಣ ಬದಲಾವಣೆ ನೇರವಾಗಿ ಭಾರತದ ಇಂಧನದ ಬೆಲೆಯ ಪರಿಣಾಮ ಬೀರಲಿದೆ.
ಕಚ್ಚಾ ತೈಲ ಬೆಲೆ ಏರಿಕೆ, ರಷ್ಯಾದ ಯುದ್ಧ ಹಾಗೂ ರೂಪಾಯಿ ಮೌಲ್ಯ ಕುಸಿತದಿಂದ ಭಾರತದಲ್ಲಿ ಒಂದೇ ದಿನ ಒಂದು ಲೀಟರ್ ಪೆಟ್ರೋಲ್ ಮೇಲೆ 10 ರಿಂದ 16 ರೂಪಾಯಿ ಏರಿಕೆಯಾಗುವ ಸಾಧ್ಯತೆ ಇದೆ. ಇನ್ನು ಡೀಸೆಲ್ ಬೆಲೆ ಪ್ರತಿ ಲೀಟರ್ ಮೇಲೆ 8 ರೂಪಾಯಿಂದ 12 ರೂಪಾಯಿಗೆ ಏರಿಕೆಯಾಗುವ ಸಾಧ್ಯತೆ ಇದೆ. ಹೀಗಾದಲ್ಲಿ 101ರ ಆಸುಪಾಸಿನಲ್ಲಿರುವ ಪೆಟ್ರೋಲ್ ಬೆಲೆ 121 ರಿಂದ 126 ರೂಪಾಯಿ ಆಗಲಿದೆ.
ಚುನಾವಣೆ ಮುಗಿಯುತ್ತಿದ್ದಂತೆ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಹೆಚ್ಚಾಗಲಿದೆ ಎಂದು ಹಲವು ವರದಿಗಳು ಪ್ರಕಟಗೊಂಡಿದೆ. ಇನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡ ಈ ಕುರಿತು ಸೂಚನೆ ನೀಡಿದ್ದರು. ಆದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿನ ಬೆಲೆ ಏರಿಕೆ ಭಾರತಕ್ಕೆ ಶಾಪವಾಗಲಿದೆ.
Petrol Price ಚುನಾವಣೆ ಬಳಿಕ ತೈಲ ದರ 12 ರು. ಏರಿಕೆ ಸಾಧ್ಯತೆ?
ನಾವಣೆ ಬಳಿಕ ತೈಲ ದರ 12 ರು. ಏರಿಕೆ ಸಾಧ್ಯತೆ?
ಕಳೆದ ನಾಲ್ಕು ತಿಂಗಳಿಂದ ತಟಸ್ಥವಾಗಿರುವ ಪೆಟ್ರೋಲ್, ಡೀಸೆಲ್ ದರ ಪಂಚ ರಾಜ್ಯ ಚುನಾವಣೆ ಬಳಿಕ ಅಂದರೆ ಮಾ.16ರ ವೇಳೆ ಬರೋಬ್ಬರಿ 12 ರು. ಏರಿಕೆಯಾಗುವ ಸಾಧ್ಯತೆ ಇದೆ. ತೈಲ ಉತ್ಪಾದನಾ ವೆಚ್ಚ ಮತ್ತು ಪೆಟ್ರೋಲ್ ಬಂಕ್‌ಗಳಲ್ಲಿ ಮಾರಾಟ ಮಾಡುತ್ತಿರುವ ಪ್ರತಿ ಲೀಟರ್ ಪೆಟ್ರೋಲ್, ಡೀಸೆಲ್ ದರದ ನಡುವೆ ವ್ಯತ್ಯಾಸ ಹೆಚ್ಚಿದೆ. ಈ ವ್ಯತ್ಯಾಸವನ್ನು ಸರಿಗಟ್ಟುವ ಉದ್ದೇಶದಿಂದ ಸರ್ಕಾರ ಬೆಲೆ ಏರಿಕೆ ಮಾಡುವ ಸಾಧ್ಯತೆ ಇದೆ ಎಂದು ಐಸಿಐಸಿಐ ಸೆಕ್ಯುರಿಟೀಸ್ ವರದಿ ಮಾಡಿದೆ. ರಷ್ಯಾ-ಉಕ್ರೇನ್ ಯುದ್ಧ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಕಚ್ಚಾತೈಲ ಮಾರುಟ್ಟೆಯಲ್ಲಿ ಗುರುವಾರ ಪ್ರತಿ ಬ್ಯಾರೆಲ್‌ಗೆ 120 ಡಾಲರ್ ಗಡಿ ದಾಟಿತ್ತು. ಈ ಮೂಲಕ ಕಳೆದ 9 ವರ್ಷದಲ್ಲೇ ಅತ್ಯಂತ ಗರಿಷ್ಠಕ್ಕೆ ತಲುಪಿತ್ತು. ಬಳಿಕ ಶುಕ್ರವಾರ ಮತ್ತೆ 111 ಡಾಲರ್‌ಗೆ ಇಳಿಕೆಯಾಗಿದೆ. ಬೆಂಗಳೂರಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ 100.56 ರು ಮತ್ತು 85 ರು. ಇದೆ. ಆದರೆ ಪಂಚರಾಜ್ಯ ಚುನಾವಣೆ ಹಿನ್ನೆಲೆಯಲ್ಲಿ ದೈನಂದಿನ ತೈಲ ದರ ಪರಿಷ್ಕರಣೆಯನ್ನು ನಿಲ್ಲಿಸಿದ ಕಾರಣ ಉತ್ಪಾದನಾ ವೆಚ್ಚ ಮತ್ತು ಮಾರಾಟ ದರದ ನಡುವಣ ವ್ಯತ್ಯಾಸ ಏರಿಕೆಯಾಗಿದೆ. ಹೀಗಾಗಿ ತೈಲ ಉತ್ಪಾದನಾ ಕಂಪನಿಗಳು ನಷ್ಟಅನುಭವಿಸುತ್ತಿವೆ. ಆದ್ದರಿಂದ 12.1 ರಿಂದ 15.1 ರು. ವರೆಗೆ ತೈಲ ದರ ಏರಿಕೆ ಮಾಡುವ ಅಗತ್ಯವಿದೆ. ಹೀಗಾಗಿ ಫೆ.16ರ ವೇಳೆಗೆ 12 ರು. ಏರಿಕೆಯಾಗಬಹುದು ಎಂದು ಅದು ಹೇಳಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.