Union Budget 2024: ಏನಿದು ಮಧ್ಯಂತರ ಬಜೆಟ್? ಪೂರ್ಣ ಆಯವ್ಯಯಕ್ಕಿಂತ ಇದು ಹೇಗೆ ಭಿನ್ನ?

By Suvarna NewsFirst Published Jan 25, 2024, 11:28 AM IST
Highlights

ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1ರಂದು ಮಧ್ಯಂತರ ಬಜೆಟ್ -2024 ಮಂಡಿಸಲಿದ್ದಾರೆ. ಹಾಗಾದ್ರೆ ಈ ಮಧ್ಯಂತರ ಬಜೆಟ್ ಅಂದ್ರೇನು? ಪೂರ್ಣ ಬಜೆಟ್ ಗಿಂತ ಇದು ಹೇಗೆ ಭಿನ್ನ?

ನವದೆಹಲಿ (ಜ.25): ಕೇಂದ್ರ ಸರ್ಕಾರದ 2024-25ನೇ ಆರ್ಥಿಕ ಸಾಲಿನ ಬಜೆಟ್ ಮಂಡನೆಗೆ ದಿನಗಣನೆ ಆರಂಭವಾಗಿದೆ. ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1ರಂದು ಮಧ್ಯಂತರ ಬಜೆಟ್ ಮಂಡಿಸಲಿದ್ದಾರೆ. 2019ನೇ ಸಾಲಿನಲ್ಲಿ ವಿತ್ತ ಸಚಿವೆಯಾಗಿ ನೇಮಕಗೊಳ್ಳುವ ಮೂಲಕ ಭಾರತದ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಪೂರ್ಣಾವಧಿಯ ವಿತ್ತ ಸಚಿವೆ ಎಂಬ ಕೀರ್ತಿಗೆ ಇವರು ಪಾತ್ರರಾಗಿದ್ದಾರೆ. ಇದು ನಿರ್ಮಲಾ ಸೀತಾರಾಮನ್ ಮಂಡಿಸುತ್ತಿರುವ ಆರನೇ ಬಜೆಟ್ ಆಗಿದೆ. ಆದರೆ, ಈ ಬಾರಿಯ ಬಜೆಟ್ ಮಧ್ಯಂತರ ಅವಧಿಯದ್ದಾಗಿದೆ. ಈ ವರ್ಷದ ಏಪ್ರಿಲ್- ಮೇನಲ್ಲಿ ಲೋಕಸಭೆ ಚುನಾವಣೆ ನಡೆಯಲಿರುವ ಕಾರಣ ಮಧ್ಯಂತರ ಅವಧಿಯ ಬಜೆಟ್ ಮಂಡಿಸಲಾಗುತ್ತಿದೆ. ಹಾಗಾದ್ರೆ ಈ ಮಧ್ಯಂತರ ಅವಧಿ ಬಜೆಟ್ ಅಂದ್ರೇನು? ಇದು ಪೂರ್ಣ ಬಜೆಟ್ ನಿಂದ ಹೇಗೆ ಭಿನ್ನವಾಗಿದೆ? 

ಮಧ್ಯಂತರ ಬಜೆಟ್ ಅಂದ್ರೇನು?
ಅಲ್ಪಾವಧಿಗೆ ಅಂದರೆ ಕೆಲವೇ ತಿಂಗಳುಗಳ ಕಾಲ ಸರ್ಕಾರದ ವೆಚ್ಚಗಳ ನಿರ್ವಹಣೆಗೆ ಈ ಮಧ್ಯಂತರ ಬಜೆಟ್ ಅನ್ನು ಮಂಡಿಸಲಾಗುತ್ತದೆ. ಈ ಹಣಕಾಸಿನ ವರ್ಷದಲ್ಲಿ ಹೊಸ ಸರ್ಕಾರ ಅಧಿಕಾರ ವಹಿಸಿಕೊಳ್ಳುವ ತನಕದ ಅವಧಿಗೆ ಮಧ್ಯಂತರ ಬಜೆಟ್ ಸೀಮಿತವಾಗಿರುತ್ತದೆ. ಸಾಮಾನ್ಯವಾಗಿ ಈ ಬಜೆಟ್ ನಲ್ಲಿ ಯಾವುದೇ ಪ್ರಮುಖ ಘೋಷಣೆಗಳನ್ನು ಮಾಡಲಾಗುವುದಿಲ್ಲ. ಅಲ್ಲದೆ, ಮಧ್ಯಂತರ ಬಜೆಟ್ ಅನ್ನು 'ವೋಟ್-ಆನ್-ಅಕೌಂಟ್' ಎಂದೂ ಕರೆಯುತ್ತಾರೆ. ವೋಟ್ ಆನ್ ಅಕೌಂಟ್ ಅವಧಿಯಲ್ಲಿ ಯಾವುದೇ ಪ್ರಮುಖ ನೀತಿಗಳನ್ನು ಪ್ರಕಟಿಸುವಂತಿಲ್ಲ. 

ಮುಂದಿನ ಕೇಂದ್ರ ಬಜೆಟ್‌ ಲೇಖಾನುದಾನ ಮಾತ್ರ; ಅದ್ಭುತ ಘೋಷಣೆಗಳಿಗೆ ಜುಲೈವರೆಗೆ ಕಾಯಬೇಕು: ನಿರ್ಮಲಾ ಸೀತಾರಾಮನ್

ಮಧ್ಯಂತರ ಬಜೆಟ್ ಪೂರ್ಣ ಬಜೆಟ್ ಗಿಂತ ಹೇಗೆ ಭಿನ್ನ?
ಸಾಮಾನ್ಯವಾಗಿ ಪೂರ್ಣ ಕೇಂದ್ರ ಬಜೆಟ್ ಅನ್ನು ಹೆಚ್ಚಿನ ವರ್ಷಗಳಲ್ಲಿ ಮಂಡಿಸಲಾಗುತ್ತದೆ. ಆದರೆ, ಮಧ್ಯಂತರ ಬಜೆಟ್ ಅನ್ನು ಸಾರ್ವತ್ರಿಕ ಚುನಾವಣಾ ವರ್ಷಗಳಲ್ಲಿ ಮಾತ್ರ ಮಂಡಿಸಲಾಗುತ್ತದೆ. ಇನ್ನೊಂದೆಡೆ ಪೂರ್ಣ ಬಜೆಟ್ ಅನ್ನು ಮುಂದಿನ ಪೂರ್ಣ ಆರ್ಥಿಕ ಸಾಲಿಗೆ ಅನ್ವಯಿಸುವಂತೆ ಮಂಡಿಸಲಾಗುತ್ತದೆ. ಆದರೆ, ಮಧ್ಯಂತರ ಬಜೆಟ್ ಅಲ್ಪಾವಧಿಯದ್ದಾಗಿದ್ದು, ಹೆಚ್ಚೆಂದರೆ ಎರಡು ತಿಂಗಳ ಕಾಲಾವಧಿ ಹೊಂದಿರುತ್ತದೆ.

2024ನೇ ಸಾಲಿನಲ್ಲಿ ಮಧ್ಯಂತರ ಬಜೆಟ್ ಮಂಡನೆ ಏಕೆ?
ಈ ವರ್ಷದ ಏಪ್ರಿಲ್ -ಮೇನಲ್ಲಿ ಲೋಕಸಭೆ ಚುನಾವಣೆ ನಡೆಯಲಿರುವ ಕಾರಣ ಪೂರ್ಣ ಪ್ರಮಾಣದ ಕೇಂದ್ರ ಬಜೆಟ್ ಮಂಡನೆಯಾಗೋದಿಲ್ಲ. ಹೊಸ ಆರ್ಥಿಕ ವರ್ಷ 2024-25, ಏಪ್ರಿಲ್ 1ರಿಂದ ಪ್ರಾರಂಭವಾಗಲಿದೆ. ಆದರೆ, ಈ ಸಮಯದಲ್ಲಿ ಚುನಾವಣೆಯಿದೆ. ಹೀಗಾಗಿ ಈ ವರ್ಷ ಫೆಬ್ರವರಿ 1ರಂದು ಪೂರ್ಣ ಬಜೆಟ್ ಮಂಡಿಸಲು ಸಾಧ್ಯವಾಗೋದಿಲ್ಲ. ಹೀಗಾಗಿ ಮಧ್ಯಂತರ ಬಜೆಟ್ ಮಂಡನೆಯಾಗಲಿದೆ.

2024-25ನೇ ಸಾಲಿನ ಪೂರ್ಣ ಬಜೆಟ್ ಯಾವಾಗ?
2024-25ನೇ ಸಾಲಿನ ಪೂರ್ಣ ಬಜೆಟ್ ಜುಲೈನಲ್ಲಿ ಮಂಡನೆಯಾಗಲಿದೆ. ಚುನಾವಣೆ ಮುಗಿದು ಹೊಸ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಆ ಸರ್ಕಾರದ ವಿತ್ತ ಸಚಿವರು ಪೂರ್ಣ ಬಜೆಟ್ ಮಂಡನೆ ಮಾಡಲಿದ್ದಾರೆ. 

ಈ ಹಿಂದಿನ ಮಧ್ಯಂತರ ಬಜೆಟ್ ಯಾರು ಮಂಡಿಸಿದ್ದರು?
ಈ ಹಿಂದಿನ ಮಧ್ಯಂತರ ಬಜೆಟ್ ಅನ್ನು 2019ರ ಫೆಬ್ರವರಿ 1ರಂದು ಪಿಯೂಷ್ ಘೋಯಲ್ ಮಂಡಿಸಿದ್ದರು. 

2024ನೇ ಸಾಲಿನ ಬಜೆಟ್ ನಲ್ಲಿ ತಂಬಾಕು ಉತ್ಪನ್ನಗಳ ಮೇಲಿನ ತೆರಿಗೆ ಹೆಚ್ಚಿಸಿ; ಸರ್ಕಾರಕ್ಕೆ ಆರೋಗ್ಯ ಸಂಘಟನೆಗಳ ಮನವಿ

ಮಧ್ಯಂತರ ಬಜೆಟ್ ಅಧಿವೇಶನ ಯಾವಾಗ?
2024ನೇ ಸಾಲಿನ ಮಧ್ಯಂತರ ಬಜೆಟ್ ಅಧಿವೇಶನ ಜನವರಿ 31ರಂದು ಪ್ರಾರಂಭವಾಗಿ ಫೆಬ್ರವರಿ 9ರ ತನಕ ನಡೆಯಲಿದೆ. 

ನಿರ್ಮಲಾ ಸೀತಾರಾಮನ್ ಯಾವ ವರ್ಷಗಳಲ್ಲಿ ಬಜೆಟ್ ಮಂಡಿಸಿದ್ದರು?
ಭಾರತದ ಪ್ರಸಕ್ತ ವಿತ್ತ ಸಚಿವೆ ನಿರ್ಮಲಾ ಸೀತಾರಾಮ್ ಈ ತನಕ ಒಟ್ಟು ಐದು ಬಜೆಟ್ ಗಳನ್ನು ಮಂಡಿಸಿದ್ದಾರೆ. 2019,2020,2021,2022 ಹಾಗೂ 2023ನೇ ಸಾಲಿನಲ್ಲಿ ಬಜೆಟ್ ಮಂಡನೆ ಮಾಡಿದ್ದಾರೆ. 2024ನೇ ಸಾಲಿನ ಫೆಬ್ರವರಿ 1ರಂದು ಮಂಡಿಸೋದು ಅವರ 6ನೇ ಬಜೆಟ್ ಆಗಿರಲಿದೆ. 

click me!