Bengaluru Tech Summit: ಇನ್ಫೋಸಿಸ್‌, ಇಂಟೆಲ್‌ಗೆ 'ಕರ್ನಾಟಕ ಐಟಿ ರತ್ನ' ಪ್ರಶಸ್ತಿ ಪ್ರದಾನ

By Girish Goudar  |  First Published Nov 18, 2022, 3:45 AM IST

ರಾಜ್ಯದಿಂದ ಈಗ ವರ್ಷಕ್ಕೆ ಐಟಿ ವಲಯವು 6 ಲಕ್ಷ ಕೋಟಿ ರೂ. ಮೊತ್ತದ ರಫ್ತು ವಹಿವಾಟು ನಡೆಸುತ್ತಿದೆ. ಮುಂದಿನ ಮೂರು ವರ್ಷಗಳಲ್ಲಿ ಇದನ್ನು ಇನ್ನೂ ಹೆಚ್ಚಿಸಬೇಕು ಎಂದ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ 


ಬೆಂಗಳೂರು(ನ.18): ಮಾಹಿತಿ ತಂತ್ರಜ್ಞಾನ ವಲಯದಲ್ಲಿ ವಾರ್ಷಿಕವಾಗಿ 10 ಸಾವಿರ ಕೋಟಿ ರೂ.ಗಳಿಗೂ ಹೆಚ್ಚಿನ ಮೊತ್ತದ ರಫ್ತು ವಹಿವಾಟು ನಡೆಸುತ್ತಿರುವ ಇನ್ಫೋಸಿಸ್‌ ಮತ್ತು ಇಂಟೆಲ್‌ ಕಂಪನಿಗಳಿಗೆ ಭಾರತೀಯ ಸಾಫ್ಟ್‌ವೇರ್‍‌ ಪಾರ್ಕುಗಳ ಒಕ್ಕೂಟದ ಪ್ರತಿಷ್ಠಿತ 'ಕರ್ನಾಟಕ ಐಟಿ ರತ್ನ' ಪ್ರಶಸ್ತಿಯನ್ನು ಬೆಂಗಳೂರು ತಂತ್ರಜ್ಞಾನ ಸಮಾವೇಶದಲ್ಲಿ ಗುರುವಾರ ಪ್ರದಾನ ಮಾಡಲಾಯಿತು. 

ಇದೇ ಸಂದರ್ಭದಲ್ಲಿ ಐಟಿ-ಬಿಟಿ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರು, ವಾರ್ಷಿಕ ಕನಿಷ್ಠ 2 ಸಾವಿರ ಕೋಟಿ ರೂ.ಗಳಿಂದ ಗರಿಷ್ಠ 10 ಸಾವಿರ ಕೋಟಿ ರೂ.ಗಳವರೆಗೆ ರಫ್ತು ವಹಿವಾಟು ನಡೆಸಿರುವ ಟಿಸಿಎಸ್‌, ಬಾಶ್‌, ಮೈಂಡ್‌ಟ್ರೀ ಸೇರಿದಂತೆ 21 ಕಂಪನಿಗಳಿಗೆ 'ಐಟಿ ಪ್ರೈಡ್‌ ಆಫ್‌ ಕರ್ನಾಟಕ' ಪ್ರಶಸ್ತಿಯನ್ನು ನೀಡಿ, ಗೌರವಿಸಿದರು.

Tap to resize

Latest Videos

BENGALURU TECH SUMMIT: ಬಿಟಿಎಸ್‌ನಲ್ಲಿ 20 ನೂತನ ಸ್ಟಾರ್ಟಪ್‌ ಉತ್ಪನ್ನ ಬಿಡುಗಡೆ: ಸಚಿವ ಅಶ್ವತ್ಥನಾರಾಯಣ

ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, 'ರಾಜ್ಯದಿಂದ ಈಗ ವರ್ಷಕ್ಕೆ ಐಟಿ ವಲಯವು 6 ಲಕ್ಷ ಕೋಟಿ ರೂ. ಮೊತ್ತದ ರಫ್ತು ವಹಿವಾಟು ನಡೆಸುತ್ತಿದೆ. ಮುಂದಿನ ಮೂರು ವರ್ಷಗಳಲ್ಲಿ ಇದನ್ನು ಇನ್ನೂ ಹೆಚ್ಚಿಸಬೇಕು' ಎಂದರು.
ರಾಜ್ಯದಿಂದ ಇಷ್ಟೆಲ್ಲ ಐಟಿ ರಫ್ತು ವಹಿವಾಟು ನಡೆಯುತ್ತಿದ್ದರೂ ಚಾಲ್ತಿ ಖಾತೆಯಲ್ಲಿ ಶೇಕಡ 40ರಷ್ಟು ವಿತ್ತೀಯ ಕೊರತೆ ಇರುವುದು ಕಳವಳಕಾರಿ ಸಂಗತಿಯಾಗಿದೆ. ನಮ್ಮ ಉದ್ಯಮಿಗಳು ಆಮದನ್ನು ಕಡಿಮೆ ಮಾಡಿಕೊಂಡು, ರಫ್ತನ್ನು ಹೆಚ್ಚಿಸಬೇಕು. ಇಲ್ಲದಿದ್ದರೆ, ಕನಿಷ್ಠಪಕ್ಷ ಎರಡರ ನಡುವೆ ಆರೋಗ್ಯಕರ ಸಮತೋಲನವನ್ನಾದರೂ ಸಾಧಿಸಬೇಕು. ಐಟಿ ವಲಯದ ಬೆಳವಣಿಗೆಗೆ ಸರಕಾರವು ಸಂಪೂರ್ಣ ಸಹಕಾರ ಕೊಡಲಿದೆ ಎಂದು ಅವರು ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಎಸ್‌ಟಿಪಿಐನ ಅರವಿಂದಕುಮಾರ್ ಮತ್ತು ಶೈಲೇಂದ್ರ ತ್ಯಾಗಿ, ಐಟಿ ವಿಷನ್‌ ಗ್ರೂಪ್‌ ಅಧ್ಯಕ್ಷ ಕ್ರಿಸ್‌ ಗೋಪಾಲಕೃಷ್ಣನ್‌, ಐಟಿ-ಬಿಟಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಇ.ವಿ.ರಮಣ ರೆಡ್ಡಿ, ನಿರ್ದೇಶಕಿ ಮೀನಾ ನಾಗರಾಜ್‌ ಉಪಸ್ಥಿತರಿದ್ದರು.

ವಿದ್ಯುನ್ಮಾನ ವಲಯದಲ್ಲಿ 36000 ಕೋಟಿ ಹೂಡಿಕೆ: ಸಚಿವ ಅಶ್ವತ್ಥ್‌ ನಾರಾಯಣ

'ಐಟಿ ಪ್ರೈಡ್‌ ಆಫ್‌ ಕರ್ನಾಟಕ' ಪುರಸ್ಕೃತ ಕಂಪನಿಗಳು 

ಆಕ್ಸೆಂಚರ್‍‌, ಅಮೆಜಾನ್‌ ಡೆವಲಪ್‌ಮೆಂಟ್‌ ಸೆಂಟರ್‍‌, ಡೆಲ್‌, ಇಐಟಿ ಸರ್ವೀಸಸ್‌, ಗೋಲ್ಡ್‌ಮ್ಯಾನ್‌ ಸ್ಯಾಕ್ಸ್‌, ಎಚ್‌ಎಸ್‌ಬಿಸಿ, ಐಬಿಎಂ, ಜೆ.ಪಿ.ಮಾರ್ಗನ್‌, ಜೂನಿಪರ್‍‌ ನೆಟ್‌ವರ್ಕ್ಸ್‌, ಮರ್ಸಿಡಿಸ್‌ ಬೆಂಜ್‌, ಮೈಕ್ರೋಸಾಫ್ಟ್‌, ಕ್ವಾಲ್‌ಕಾಂ, ಸ್ಯಾಮ್ಸಂಗ್‌, ಎಸ್‌ಎಪಿ ಲ್ಯಾಬ್ಸ್‌, ಸ್ಟ್ಯಾಂಡರ್ಡ್ ಚಾರ್ಟರ್ಡ್‌, ವಿಎಂವೇರ್‍‌ ಮತ್ತು ವಿಪ್ರೋ.

ಇತರೆ ಪ್ರಶಸ್ತಿ ಪುರಸ್ಕೃತ ಕಂಪನಿಗಳು

* ವಿಜಯಾ ಪೈ, ಇನ್ವೆಂಜರ್‍‌ ಟೆಕ್ನಾಲಜೀಸ್‌, ಮಂಗಳೂರು (ವರ್ಷದ ಮಹಿಳಾ ಉದ್ಯಮಿ)
* ಇನ್ಫೋಸಿಸ್‌ ಬಿಪಿಎಂ (ಮಹಿಳಾ ಸಬಲೀಕರಣ)
* ಎಕ್ಯೂಆರ್‍‌ ಕ್ಯಾಪಿಟಲ್‌ (ಉದ್ಯೋಗಿವಾರು ಅತ್ಯಧಿಕ ರಫ್ತು)
* ಟಿಎಲ್‌ಜಿ ಇಂಡಿಯಾ (ಐಟಿ ಬೆಂಬಲಿತ ಸೇವೆಗಳ ವಲಯದಲ್ಲಿ ಅತ್ಯಧಿಕ ಉದ್ಯೋಗ ಸೃಷ್ಟಿ)
* ಫಿಡೆಲಿಟಿ ಇಂಡಿಯಾ (ಐಟಿ ವಲಯದಲ್ಲಿ ಅತ್ಯಧಿಕ ಉದ್ಯೋಗಸೃಷ್ಟಿ ಮತ್ತು ಮಹಿಳಾ ಸಬಲೀಕರಣ)
* ಎಕ್ಸೆಲ್‌ಸಾಫ್ಟ್‌ (ಮೈಸೂರು ವಲಯದಲ್ಲಿ ಅತ್ಯುತ್ತಮ ಸಾಧನೆ, ಐಟಿ/ಐಟಿಇಎಸ್‌)
* ದಿಯಾ ಸಿಸ್ಟಮ್ಸ್‌ (ಮಂಗಳೂರು ವಲಯದಲ್ಲಿ ಅತ್ಯುತ್ತಮ ಸಾಧನೆ, ಐಟಿ/ಐಟಿಇಎಸ್‌)
* ಸಂಕಲ್ಪ್‌ ಸೆಮಿಕಂಡಕ್ಟರ್‍‌ (ಹುಬ್ಬಳ್ಳಿ ವಲಯದಲ್ಲಿ ಅತ್ಯುತ್ತಮ ಸಾಧನೆ, ಐಟಿ/ಐಟಿಇಎಸ್‌)
* ಕೇನೆಸ್‌ ಟೆಕ್ನಾಲಜಿ (ಮೈಸೂರು, ಎಲೆಕ್ಟ್ರಾನಿಕ್‌ ಹಾರ್ಡ್‌ವೇರ್‍‌ ರಫ್ತು)
* ವಿಪ್ರೋ ಜಿಇ ಹೆಲ್ತ್‌ಕೇರ್‍‌ (ಬೆಂಗಳೂರು, ಎಲೆಕ್ಟ್ರಾನಿಕ್‌ ಹಾರ್ಡ್‌ವೇರ್‍‌ ರಫ್ತು)
* ಎಂಫಸಿಸ್‌ (1,000 ಕೋಟಿ ರೂ.ಗಳಿಂದ 2,000 ಕೋಟಿ ರೂ.ವರೆಗಿನ ರಫ್ತು ವಹಿವಾಟಿನಲ್ಲಿ ಅತ್ಯುತ್ತಮ ಬೆಳವಣಿಗೆ)
* ಕೋಫೋರ್ಜ್‌ ಲಿಮಿಟೆಡ್‌ (100 ಕೋಟಿ ರೂ.ಗಳಿಂದ 1,000 ಕೋಟಿ ರೂ.ವರೆಗಿನ ರಫ್ತು ವಹಿವಾಟಿನಲ್ಲಿ ಅತ್ಯುತ್ತಮ ಬೆಳವಣಿಗೆ)
* ಇನ್ವೆಂಜರ್‍‌ (5 ಕೋಟಿ ರೂ.ಗಳಿಂದ ಗರಿಷ್ಠ 100 ಕೋಟಿ ರೂ.ಗಳವರೆಗಿನ ರಫ್ತಿನಲ್ಲಿ ಅತ್ಯುತ್ತಮ ಬೆಳವಣಿಗೆ)
 

click me!