
ಬೆಂಗಳೂರು: ಜರ್ಮನಿಯ ಪ್ರಮುಖ ಸೆಮಿಕಂಡಕ್ಟರ್ ಸಂಸ್ಥೆಯಾದ ‘ಇನ್ಫಿನಿಯಾನ್ ಟೆಕ್ನಾಲಜೀಸ್’ (Infineon Technologies), ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿರುವ ಬ್ರಿಗೇಡ್ ಸೋಲಾರಿಯಂ ಸಿಟಿಯಲ್ಲಿ 6.31 ಲಕ್ಷ ಚದರ ಅಡಿ ಕಚೇರಿ ಜಾಗವನ್ನು 10 ವರ್ಷಗಳ ಸುದೀರ್ಘ ಅವಧಿಗೆ ಲೀಸ್‌ಗೆ ಪಡೆದುಕೊಂಡಿದೆ. ರಿಯಲ್ ಎಸ್ಟೇಟ್ ದತ್ತಾಂಶ ಸಂಸ್ಥೆ ‘ಪ್ರಾಪ್‌ಸ್ಟ್ಯಾಕ್’ (PropStack) ದಾಖಲೆಗಳ ಪ್ರಕಾರ, ಈ ಗುತ್ತಿಗೆಯ ಒಟ್ಟು ಅಂದಾಜು ಮೌಲ್ಯ ಇತರ ಶುಲ್ಕಗಳನ್ನು ಹೊರತುಪಡಿಸಿ ಸುಮಾರು ₹752 ಕೋಟಿ ಆಗಿದೆ.
ಅಕೃತಿ ಇನ್ಫ್ರಾ-ಬಿಲ್ಡ್ ಡೆವಲಪರ್ಸ್ ಪ್ರೈವೇಟ್ ಲಿಮಿಟೆಡ್ ಒಡೆತನದ ಈ ಕಟ್ಟಡದಲ್ಲಿ ಇನ್ಫಿನಿಯಾನ್ ಸಂಸ್ಥೆಯು ಗ್ರೌಂಡ್ ಪ್ಲೋರ್ ನಿಂದ 9ನೇ ಮಹಡಿಯವರೆಗೆ ಕೋಣೆಗಳನ್ನು ತನ್ನದಾಗಿಸಿಕೊಂಡಿದೆ. ಡಿಸೆಂಬರ್ 1, 2026 ರಿಂದ ಈ ಗುತ್ತಿಗೆ ಅವಧಿ ಆರಂಭವಾಗಲಿದ್ದು, ಆರಂಭಿಕ ಹಂತದಲ್ಲಿ 8 ತಿಂಗಳ ಬಾಡಿಗೆ ಮುಕ್ತ ಅವಧಿಯ ಸೌಲಭ್ಯವನ್ನು ಒಳಗೊಂಡಿದೆ.
ಪ್ರತಿ ಚದರ ಅಡಿಗೆ ₹88 ರಂತೆ, ಕಂಪನಿಯು ತಿಂಗಳಿಗೆ ಸುಮಾರು ₹5.56 ಕೋಟಿ ಬಾಡಿಗೆ ಪಾವತಿಸಲಿದೆ. ಆರು ತಿಂಗಳ ಬಾಡಿಗೆಗೆ ಸಮಾನವಾದ ₹33.36 ಕೋಟಿಯನ್ನು ಭದ್ರತಾ ಠೇವಣಿಯಾಗಿ (Security Deposit) ನೀಡಲಾಗಿದೆ. ಗುತ್ತಿಗೆ ನಿಯಮಗಳ ಪ್ರಕಾರ ಪ್ರತಿ ಮೂರು ವರ್ಷಗಳಿಗೊಮ್ಮೆ ಬಾಡಿಗೆಯಲ್ಲಿ ಶೇಕಡಾ 15 ರಷ್ಟು ಏರಿಕೆಯಾಗಲಿದೆ.
ಬೆಂಗಳೂರು ಮೂಲದ ಫ್ಯಾಬ್ಲೆಸ್ ಚಿಪ್ ಸ್ಟಾರ್ಟ್‌ಅಪ್ 'C2i ಸೆಮಿಕಂಡಕ್ಟರ್ಸ್' ಸಂಸ್ಥೆಯನ್ನು ಸ್ವಾಧೀನಪಡಿಸಿಕೊಳ್ಳುವುದಾಗಿ ಇನ್ಫಿನಿಯಾನ್ ಇತ್ತೀಚೆಗೆ ಘೋಷಿಸಿತ್ತು. AI ಡೇಟಾ ಸೆಂಟರ್‌ಗಳಿಗೆ ಅಗತ್ಯವಿರುವ ವಿದ್ಯುತ್ ನಿರ್ವಹಣಾ ಪರಿಹಾರಗಳನ್ನು ಬಲಪಡಿಸುವುದು ಮತ್ತು ಭಾರತದಲ್ಲಿ ತನ್ನ ಸಂಶೋಧನೆ ಹಾಗೂ ಅಭಿವೃದ್ಧಿ ಸಾಮರ್ಥ್ಯವನ್ನು ಹೆಚ್ಚಿಸುವುದು ಈ ಸ್ವಾಧೀನದ ಮುಖ್ಯ ಉದ್ದೇಶವಾಗಿದೆ.
ಪ್ರಸ್ತುತ ಭಾರತದಲ್ಲಿ ಸುಮಾರು 2,500 ಉದ್ಯೋಗಿಗಳನ್ನು ಹೊಂದಿರುವ ಇನ್ಫಿನಿಯಾನ್, ಈ ಹೂಡಿಕೆಯ ಮೂಲಕ ಡಿಜಿಟಲ್ ಪವರ್ ತಂತ್ರಜ್ಞಾನದಲ್ಲಿ ಭಾರತವನ್ನು ಜಾಗತಿಕ 'ಉತ್ಕೃಷ್ಟತಾ ಕೇಂದ್ರ'ವನ್ನಾಗಿ ರೂಪಿಸಲು ಮುಂದಾಗಿದೆ.
ಈ ಕುರಿತು ಮಾತನಾಡಿದ ಪ್ರಾಪ್‌ಸ್ಟ್ಯಾಕ್‌ನ ಸಹ-ಸಂಸ್ಥಾಪಕ ರಾಜಾ ಸೀತಾರಾಮನ್, ಬೆಂಗಳೂರಿನಲ್ಲಿ ಇನ್ಫಿನಿಯಾನ್ ಸಂಸ್ಥೆಯ ಈ ಬೃಹತ್ ಹೂಡಿಕೆಯು ನಗರವು ಕೇವಲ ಪ್ರಾದೇಶಿಕ ಸೇವಾ ಕೇಂದ್ರವಾಗಿರದೆ, ಜಾಗತಿಕ R&D ಮತ್ತು AI ಎಂಜಿನಿಯರಿಂಗ್ ಶಕ್ತಿ ಕೇಂದ್ರವಾಗಿ ಬೆಳೆಯುತ್ತಿರುವುದಕ್ಕೆ ಸಾಕ್ಷಿಯಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಬೆಂಗಳೂರಿನ ವಾಣಿಜ್ಯ ರಿಯಲ್ ಎಸ್ಟೇಟ್ ಮಾರುಕಟ್ಟೆಯಲ್ಲಿ ಜಾಗತಿಕ ಸಂಸ್ಥೆಗಳ ಕಚೇರಿ ವಿಸ್ತರಣೆ ಭರದಿಂದ ಸಾಗುತ್ತಿದ್ದು, ಇತ್ತೀಚಿನ ಪ್ರಮುಖ ವಹಿವಾಟುಗಳು ಹೀಗಿವೆ.
NVIDIA: ಬಾಗ್ಮನೆ ಕ್ಯಾಪಿಟಲ್‌ನ ಮೆಂಫಿಸ್ ಸೌತ್ ಟವರ್‌ನಲ್ಲಿ 7.6 ಲಕ್ಷ ಚದರ ಅಡಿ ಕಚೇರಿ ಜಾಗವನ್ನು 10 ವರ್ಷಗಳ ಅವಧಿಗೆ ₹1,230 ಕೋಟಿ ವೆಚ್ಚದಲ್ಲಿ ಗುತ್ತಿಗೆಗೆ ಪಡೆದಿದೆ. ಇದು ಭಾರತದಲ್ಲಿ ಸಂಸ್ಥೆಯ ಅತಿದೊಡ್ಡ ವಿಸ್ತರಣೆಯಾಗಿದೆ.
Intuit India: ಬೆಳ್ಳಂದೂರಿನಲ್ಲಿ 6.31 ಲಕ್ಷ ಚದರ ಅಡಿ ಜಾಗವನ್ನು 10 ವರ್ಷಗಳ ಅವಧಿಗೆ ಮಾಸಿಕ ₹6.13 ಕೋಟಿ ಬಾಡಿಗೆಗೆ ಕಾಯ್ದಿರಿಸಿದೆ.
Disney (India): ಬೆಳ್ಳಂದೂರಿನಲ್ಲಿ 1.75 ಲಕ್ಷ ಚದರ ಅಡಿ ಆಸ್ತಿಯನ್ನು 5 ವರ್ಷಗಳ ಅವಧಿಗೆ ₹128 ಕೋಟಿ ಬಾಡಿಗೆ ಒಪ್ಪಂದದಡಿ ಪಡೆದುಕೊಂಡಿದೆ.
ನೈಟ್ ಫ್ರಾಂಕ್ ಇಂಡಿಯಾ (Knight Frank India) ವರದಿಯ ಪ್ರಕಾರ, ಜೂನ್ 30, 2026 ರ ವೇಳೆಗೆ ಭಾರತದ ಪ್ರಮುಖ 8 ನಗರಗಳಲ್ಲಿ ಆಕ್ರಮಿತ ಕಚೇರಿ ಜಾಗದ ಪ್ರಮಾಣ 901.1 ಮಿಲಿಯನ್ ಚದರ ಅಡಿ ತಲುಪಿದ್ದು, ವರ್ಷದಿಂದ ವರ್ಷಕ್ಕೆ (YoY) 6% ಬೆಳವಣಿಗೆ ಕಂಡಿದೆ. ಇದರಲ್ಲಿ 222.4 ಮಿಲಿಯನ್ ಚದರ ಅಡಿ ಕೊಡುಗೆ ನೀಡುವ ಮೂಲಕ ಬೆಂಗಳೂರು ದೇಶದ ಅತ್ಯಂತ ದೊಡ್ಡ ವಾಣಿಜ್ಯ ರಿಯಲ್ ಎಸ್ಟೇಟ್ ಮಾರುಕಟ್ಟೆಯಾಗಿ ತನ್ನ ಅಗ್ರಸ್ಥಾನವನ್ನು ಕಾಯ್ದುಕೊಂಡಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.