
ಯೂಟ್ಯೂಬ್ ಮೂಲಕ ಹಣ ಸಂಪಾದಿಸುವುದು ಸುಲಭವಾಗಿ ಕಾಣಬಹುದು. ಆದರೆ ಆದಾಯ ಮತ್ತು ತೆರಿಗೆ ಲೆಕ್ಕಾಚಾರದಲ್ಲಿ ತಪ್ಪಾದರೆ ನಂತ್ರ ಸಮಸ್ಯೆಯಾಗ್ಬಹುದು. ಆಗಸ್ಟ್ 31 ITR ಸಲ್ಲಿಸಲು ಕೊನೆಯ ದಿನ. ನಿಮಗೆ ಇನ್ನು 4 ದಿನ ಮಾತ್ರ ಉಳಿದಿದ್ದು, ಇಂದೇ ಕೆಲ್ಸ ಪೂರ್ಣಗೊಳಿಸಿ. ಯೂಟ್ಯೂಬ್, ಫ್ರೀಲಾನ್ಸ್, ಬ್ರ್ಯಾಂಡ್ ಡೀಲ್ ಅಥವಾ ಕಂಟೆಂಟ್ ಕ್ರಿಯೇಷನ್ ಮೂಲಕ ಆದಾಯ ಗಳಿಸುವವರು ರಿಟರ್ನ್ ಸಲ್ಲಿಸುವ ಮುನ್ನ ಕೆಲವು ವಿಷಯಗಳನ್ನು ಪರಿಶೀಲಿಸಬೇಕು.
ಮೊದಲಿಗೆ ನಿಮ್ಮ ಒಟ್ಟು ಆದಾಯದ ಸರಿಯಾದ ಲೆಕ್ಕ ಇರಬೇಕು. ಯೂಟ್ಯೂಬ್ ಆದಾಯ, ಫ್ರೀಲಾನ್ಸ್ ಪ್ರಾಜೆಕ್ಟ್ಗಳು, ಕನ್ಸಲ್ಟಿಂಗ್, ಬ್ರ್ಯಾಂಡ್ ಕಾಲಬರೇಷನ್ ಸೇರಿದಂತೆ ಎಲ್ಲ ಆದಾಯವನ್ನು ಸರಿಯಾಗಿ ದಾಖಲಿಸುವುದು ಮುಖ್ಯ.
ವೈಯಕ್ತಿಕ ಖರ್ಚನ್ನು ಬಿಸಿನೆಸ್ ಖರ್ಚಾಗಿ ತೋರಿಸಬೇಡಿ. ಮನೆಯಿಂದ ಕೆಲಸ ಮಾಡುತ್ತಿದ್ದೀರಿ ಅಥವಾ ವೈಯಕ್ತಿಕ ಕಾರು ಬಳಸುತ್ತಿದ್ದೀರಿ ಎಂಬ ಕಾರಣಕ್ಕೆ ಅದರ ಸಂಪೂರ್ಣ ವೆಚ್ಚವನ್ನು ಬಿಸಿನೆಸ್ ಎಕ್ಸ್ಪೆನ್ಸ್ ಆಗಿ ಕ್ಲೇಮ್ ಮಾಡಲಾಗುವುದಿಲ್ಲ. ಕೆಲಸಕ್ಕೆ ನೇರವಾಗಿ ಸಂಬಂಧಿಸಿದ ಮತ್ತು ದಾಖಲೆ ಹೊಂದಿರುವ ಖರ್ಚುಗಳನ್ನು ಮಾತ್ರ ತೋರಿಸಬೇಕು. ವೈಯಕ್ತಿಕ ಹಾಗೂ ಕೆಲಸ ಎರಡಕ್ಕೂ ಬಳಸುವ ವೆಚ್ಚವಿದ್ದರೆ, ಕೆಲಸಕ್ಕೆ ಸಂಬಂಧಿಸಿದ ಭಾಗವನ್ನು ಮಾತ್ರ ಪರಿಗಣಿಸಬೇಕು.
44ADA ನಿಯಮ ಎಲ್ಲರಿಗೂ ಅನ್ವಯಿಸುವುದಿಲ್ಲ. ಫ್ರೀಲಾನ್ಸ್ ಕೆಲಸ ಮಾಡುತ್ತಿದ್ದೇನೆ ಎಂಬ ಕಾರಣಕ್ಕೆ ಮಾತ್ರ ಈ ನಿಯಮದ ಪ್ರಯೋಜನ ಪಡೆಯಲು ಸಾಧ್ಯವಿಲ್ಲ. ನಿಮ್ಮ ವೃತ್ತಿ ಈ ನಿಯಮದ ವ್ಯಾಪ್ತಿಗೆ ಬರುತ್ತದೆಯೇ ಎಂಬುದನ್ನು ಮೊದಲು ಪರಿಶೀಲಿಸಬೇಕು.
GST ವಿಚಾರವನ್ನೂ ಮರೆಯಬೇಡಿ. ಆದಾಯ ತೆರಿಗೆ ಮತ್ತು GST ಎರಡೂ ಪ್ರತ್ಯೇಕ ನಿಯಮಗಳನ್ನು ಹೊಂದಿವೆ. ಸೇವೆಯ ಸ್ವರೂಪ ಮತ್ತು ಟರ್ನ್ಓವರ್ ಆಧರಿಸಿ GST ನೋಂದಣಿ ಅಗತ್ಯವಾಗಬಹುದು. ವಿದೇಶಿ ಗ್ರಾಹಕರಿಂದ ಹಣ ಪಡೆಯುವವರು ಸಂಬಂಧಿತ ನಿಯಮಗಳನ್ನೂ ಪರಿಶೀಲಿಸಬೇಕು.
ಆದ್ದರಿಂದ ಕೊನೆಯ ದಿನದವರೆಗೆ ಕಾಯದೆ ಆದಾಯ, ಬಿಲ್, ಖರ್ಚು, 44ADA, GST ಮತ್ತು ಅಗತ್ಯವಿದ್ದರೆ ಆಡಿಟ್ ಸಂಬಂಧಿತ ವಿಷಯಗಳನ್ನು ಈಗಲೇ ಪರಿಶೀಲಿಸಿ. ಸರಿಯಾದ ದಾಖಲೆಗಳೊಂದಿಗೆ ಸಮಯಕ್ಕೆ ITR ಸಲ್ಲಿಸುವುದು ಮುಂದಿನ ತೆರಿಗೆ ಸಮಸ್ಯೆಗಳನ್ನು ತಪ್ಪಿಸಲು ಸಹಾಯ ಮಾಡುತ್ತದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.