ಅಂಬಾನಿ,ಅದಾನಿಗಿಂತಲೂ ಹೆಚ್ಚು ಸಂಪತ್ತು ಗಳಿಸಿದ ಸಾವಿತ್ರಿ ಜಿಂದಾಲ್; ಸಂಪತ್ತಿನಲ್ಲಿ9.6 ಶತಕೋಟಿ ಡಾಲರ್ ಏರಿಕೆ

By Suvarna News  |  First Published Dec 20, 2023, 11:22 AM IST

ಭಾರತದ ಶ್ರೀಮಂತ ಮಹಿಳೆ ಸಾವಿತ್ರಿ ಜಿಂದಾಲ್ ಅವರ ಸಂಪತ್ತಿನಲ್ಲಿ 2023ನೇ ಸಾಲಿನಲ್ಲಿ ಭಾರೀ ಏರಿಕೆಯಾಗಿದೆ. ಸಾವಿತ್ರಿ ಜಿಂದಾಲ್ ಅವರ ಸಂಪತ್ತಿನಲ್ಲಿ 9.6 ಶತಕೋಟಿ ಡಾಲರ್ ಏರಿಕೆಯಾಗಿದೆ.


ನವದೆಹಲಿ (ಡಿ.20): ಭಾರತದ ಶ್ರೀಮಂತ ಮಹಿಳೆ ಸಾವಿತ್ರಿ ಜಿಂದಾಲ್ ಅವರ ಸಂಪತ್ತಿನಲ್ಲಿ 2023ನೇ ಸಾಲಿನಲ್ಲಿ ಭಾರೀ ಏರಿಕೆಯಾಗಿದೆ. ಅಷ್ಟೇ ಅಲ್ಲದೆ, ಈ ಹೆಚ್ಚಳದ ಪ್ರಮಾಣ ಭಾರತದ ಶ್ರೀಮಂತ ಉದ್ಯಮಿಗಳಾದ ಮುಖೇಶ್ ಅಂಬಾನಿ ಹಾಗೂ ಗೌತಮ್ ಅದಾನಿ ಅವರ ಸಂಪತ್ತು ಹೆಚ್ಚಳದ ಪ್ರಮಾಣಕ್ಕಿಂತ ಅಧಿಕವಾಗಿದೆ. ಈ ಸಾಲಿನಲ್ಲಿ ಸಾವಿತ್ರಿ ಜಿಂದಾಲ್ ಅವರ ಸಂಪತ್ತಿನಲ್ಲಿ 9.6 ಶತಕೋಟಿ ಡಾಲರ್ ಏರಿಕೆಯಾಗಿದೆ. ಭಾರತದ ಅತೀ ಶ್ರೀಮಂತ ಮಹಿಳಾ ಉದ್ಯಮಿ ಎಂದು ಗುರುತಿಸಿಕೊಂಡಿರುವ ಸಾವಿತ್ರಿ ಜಿಂದಾಲ್ ಅವರು ದೇಶದ ಶ್ರೀಮಂತರ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದ್ದಾರೆ. ಈ ಕ್ಯಾಲೆಂಡರ್ ವರ್ಷದಲ್ಲಿ ಅವರ ಸಂಪತ್ತಿನಲ್ಲಿ ಉಳಿದ ಭಾರತೀಯರಿಗೆ ಅಧಿಕ ಏರಿಕೆಯಾಗಿದೆ ಎಂದು ಬ್ಲೂಮ್ ಬರ್ಗ್ ಬಿಲಿಯನೇರ್ ಗಳ ಸೂಚ್ಯಂಕ ತಿಳಿಸಿದೆ. ಇನ್ನು ಸಾವಿತ್ರಿ ಜಿಂದಾಲ್ ಅವರ ಸಂಪತ್ತಿಗೆ ಈ ವರ್ಷ ಸೇರ್ಪಡೆಯಾಗಿರುವ ಹೆಚ್ಚುವರಿ ಆದಾಯದಿಂದ ಅವರ ನಿವ್ವಳ ಸಂಪತ್ತು 25 ಶತಕೋಟಿ ಡಾಲರ್ ಗೆ ಏರಿಕೆಯಾಗಿದೆ. ಈ ಮೂಲಕ ಸಾವಿತ್ರಿ ಜಿಂದಾಲ್ ವಿಪ್ರೋ ಮುಖ್ಯಸ್ಥ ಅಜೀಂ ಪ್ರೇಮ್ ಜೀ ಅವರನ್ನು ಹಿಂದಿಕ್ಕಿದ್ದಾರೆ. ಅಜೀಂ ಪ್ರೇಮ್ ಜೀ ಅವರ ಸಂಪತ್ತು ಅಂದಾಜು 24 ಶತಕೋಟಿ ಡಾಲರ್ ಇದೆ.

ಭಾರತದ ಅತೀ ಶ್ರೀಮಂತರ ಪಟ್ಟಿಯಲ್ಲಿ ಮೊದಲನೇ ಸ್ಥಾನದಲ್ಲಿರುವ ಮುಖೇಶ್ ಅಂಬಾನಿ ಅವರ ಸಂಪತ್ತು ಈ ವರ್ಷ 5 ಶತಕೋಟಿ ಡಾಲರ್ ಏರಿಕೆಯಾಗಿದೆ. ಅಂಬಾನಿ ಅವರ ಒಟ್ಟು ಸಂಪತ್ತು 92.3 ಲಕ್ಷ ಕೋಟಿ ಡಾಲರ್ ಆಗಿದೆ. ಇನ್ನು ಈ ವರ್ಷ ಸಂಪತ್ತಿನಲ್ಲಿ ಭಾರೀ ಏರಿಕೆ ಕಂಡ ಉದ್ಯಮಿಗಳಲ್ಲಿ ಎಚ್ ಸಿಎಲ್ ಸ್ಥಾಪಕ ಶಿವ ನಡಾರ್ ಎರಡನೇ ಸ್ಥಾನದಲ್ಲಿದ್ದಾರೆ. ಕಳೆದ ವರ್ಷ ಅವರ ಸಂಪತ್ತಿಗೆ 8 ಶತಕೋಟಿ ಡಾಲರ್ ಸೇರ್ಪಡೆಗೊಂಡಿದೆ. ಇನ್ನು ಡಿಎಲ್ ಎಫ್ ಮುಖ್ಯಸ್ಥ ಕೆ.ಪಿ.ಸಿಂಗ್ ಅವರ ಸಂಪತ್ತಿಗೆ 7 ಶತಕೋಟಿ ಡಾಲರ್ ಸೇರ್ಪಡೆಯಾಗಿದೆ. ಕುಮಾರ್ ಮಂಗಲಂ ಬಿರ್ಲಾ ಹಾಗೂ ಶಾಪೂರ್ ಮಿಸ್ತ್ರಿ ಅವರ ಸಂಪತ್ತಿಗೆ ತಲಾ 6.3 ಶತಕೋಟಿ ಡಾಲರ್ ಸೇರ್ಪಡೆಗೊಂಡಿದೆ. ಇನ್ನು ಈ ವರ್ಷದಲ್ಲಿ ಹೆಚ್ಚು ಸಂಪತ್ತು ಗಳಿಸಿದವರ ಪಟ್ಟಿಯಲ್ಲಿ ದಿಲೀಪ್ ಶಾಂಘವಿ, ರವಿ ಜೈಪುರಿಯಾ, ಎಂಪಿ ಲೋಧಾ, ಸುನಿಲ್ ಮಿತ್ತಲ್ ಮತ್ತಿತರರು ಇದ್ದಾರೆ. 

Tap to resize

Latest Videos

ರತನ್‌ ಟಾಟಾ ಮಾಲೀಕತ್ವದ ಕಂಪನಿಯ 6.70 ಕೋಟಿ ಷೇರು ಮಾರಾಟ ಮಾಡಿದ ಎಲ್‌ಐಸಿ!

ಇನ್ನು ಭಾರತದ ಎರಡನೇ ಶ್ರೀಮಂತ ಉದ್ಯಮಿ ಎಂದು ಗುರುತಿಸಿಕೊಂಡಿರುವ ಅದಾನಿ ಸಮೂಹ ಸಂಸ್ಥೆ ಮುಖ್ಯಸ್ಥ ಗೌತಮ್ ಅದಾನಿ ಅವರ ಸಂಪತ್ತಿನಲ್ಲಿ ಮಾತ್ರ ಈ ವರ್ಷ ಇಳಿಕೆ ಕಂಡುಬಂದಿದೆ. ಈ ಕ್ಯಾಲೆಂಡರ್ ವರ್ಷದಲ್ಲಿ ಅದಾನಿ 35.4 ಶತಕೋಟಿ ಡಾಲರ್ ಸಂಪತ್ತು ಕಳೆದುಕೊಂಡಿದ್ದಾರೆ. ಈಗ  ಅವರ ಸಂಪತ್ತು 85.1 ಶತಕೋಟಿ ಡಾಲರ್ ಇದೆ. 

ಸಾವಿತ್ರಿ ಜಿಂದಾಲ್ ಯಾರು? 
ಒಪಿ ಜಿಂದಾಲ್‌ ಗ್ರೂಪ್ ಮುಖ್ಯಸ್ಥೆಯಾಗಿರುವ ಸಾವಿತ್ರಿ ಜಿಂದಾಲ್, ಉದ್ಯಮಿ ಒ.ಪಿ.ಜಿಂದಾಲ್ ಅವರ ಪತ್ನಿ. ಪತಿ ನಿಧನದ ಬಳಿಕ ಜಿಂದಾಲ್ ಗ್ರೂಪ್ ಜವಾಬ್ದಾರಿ ವಹಿಸಿಕೊಂಡ ಅವರು, ಕಂಪನಿಯನ್ನು ಸಮರ್ಥವಾಗಿ ಮುನ್ನಡೆಸುತ್ತಿದ್ದಾರೆ. ಇವರ ನಾಯಕತ್ವದಲ್ಲಿ ಸಂಸ್ಥೆ ಆದಾಯ ನಾಲ್ಕು ಪಟ್ಟು ಹೆಚ್ಚಾಗಿದೆ.  ಜಿಂದಾಲ್ ಗ್ರೂಪ್ ದೇಶದ ಅತೀದೊಡ್ಡ ಸಮೂಹ ಸಂಸ್ಥೆಗಳಲ್ಲಿ ಒಂದಾಗಿದೆ. ಇವರ ಒಬ್ಬ ಪುತ್ರ ಸಜ್ಜನ್ ಜಿಂದಾಲ್ ಜೆಎಸ್ ಡಬ್ಲ್ಯು ಸ್ಟೀಲ್ (JSW Steel) ಮುನ್ನಡೆಸಿದರೆ, ಇನ್ನೊಬ್ಬ ಪುತ್ರ ನವೀನ್ ಜಿಂದಾಲ್, ಜಿಂದಾಲ್ ಸ್ಟೀಲ್  ಹಾಗೂ ಇಂಧನ ಕ್ಷೇತ್ರದ (Jindal Steel & Power) ನಿರ್ವಹಣೆ ಮಾಡುತ್ತಿದ್ದಾರೆ. 

ಹಳ್ಳಿ ಹಳ್ಳಿಗಳಲ್ಲೂ ಬಿಸಿನೆಸ್ ಆರಂಭಿಸಲು ಅಂಬಾನಿ ಪ್ಲಾನ್‌, ಬರೋಬ್ಬರಿ 500 ಕೋಟಿ ರೂ. ಹೂಡಿಕೆ!

ಸಾವಿತ್ರಿ ಜಿಂದಾಲ್ ಹೆಸರು ಬರೀ ಉದ್ಯಮ ಕ್ಷೇತ್ರಕ್ಕಷ್ಟೇ ಸೀಮಿತವಾಗಿಲ್ಲ. ಈ ಹಿಂದೆ ಇವರು ರಾಜಕೀಯದಲ್ಲೂ ಸಕ್ರಿಯರಾಗಿದ್ದರು. ಈ ಹಿಂದೆ ಹರಿಯಾಣದಲ್ಲಿ (Haryana) ಭೂಪಿಂದರ್ ಸಿಂಗ್ ಸರ್ಕಾರದಲ್ಲಿ ಸಾವಿತ್ರಿ ಜಿಂದಾಲ್ ಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದರು. 

click me!