* ಸ್ಥಳೀಯ ಉತ್ಪನ್ನ ಮಳಿಗೆಯಿಂದ ವ್ಯಾಪಾರ ವೃದ್ಧಿ
* ಲೋಕಲ್ ಉತ್ಪನ್ನಗಳಿಗೆ ಗ್ಲೋಬಲ್ ಪ್ರಚಾರ
* ಸ್ಥಳೀಯ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮಾಡಬಹುದು
ಜಗದೀಶ ವಿರಕ್ತಮಠ
ಬೆಳಗಾವಿ(ಜು.12): ಸ್ಥಳೀಯ ಉತ್ಪನ್ನಗಳಿಗೆ ಉತ್ತೇಜನ ನೀಡುವ ಸದುದ್ದೇಶದಿಂದ ವಿಮಾನ ನಿಲ್ದಾಣದಲ್ಲಿ ಮಳಿಗೆ ನಿರ್ಮಿಸಿ ಉತ್ಪಾದಕರಿಗೆ ನೀಡುವ ವಿನೂತನ ಯೋಜನೆಗೆ ಬೆಳಗಾವಿ ವಿಮಾನ ನಿಲ್ದಾಣ ಪ್ರಾಧಿಕಾರ ಮುಂದಾಗಿದೆ. ಈ ಯೋಜನೆಯಿಂದ ದೇಶದಲ್ಲಿರುವ ಡೊಮೆಸ್ಟಿಕ್ ವಿಮಾನ ನಿಲ್ದಾಣಗಳಲ್ಲಿ ಸ್ಥಳೀಯ ಉತ್ಪನ್ನಗಳಿಗೆ ಆದ್ಯತೆ ನೀಡುವ ಮೊದಲ ವಿಮಾನ ನಿಲ್ದಾಣವಾಗಿ ಬೆಳಗಾವಿ ಹೊರಹೊಮ್ಮಿದೆ.
ಸ್ಥಳೀಯ ಎನ್‌ಜಿಒಗಳು, ಸಂಘ ಸಂಸ್ಥೆಗಳಿಗಾಗಿ ವಿಮಾನ ನಿಲ್ದಾಣದಲ್ಲಿ 3*3 ಮೀಟರ್ ಜಾಗದಲ್ಲಿ ಮಳಿಗೆ ಸ್ಥಾಪಿಸಲು ಯೋಜಿಸಿದೆ. ಇಲ್ಲಿ ಬೆಳಗಾವಿ ಜಿಲ್ಲೆಯ ಬ್ರಾಂಡೆಡ್ ಉತ್ಪನ್ನಗಳಾದ ಕುಂದಾ, ಗೋಕಾಕ ಕರದಂಟು, ಲಡಗಿ ಲಾಡು, ಮೋದಗಾದ ಸಾವಯವ ಬೆಲ್ಲ, ಹುದಲಿ ಗ್ರಾಮೋದ್ಯೋಗ ಕೇಂದ್ರದ ಉಪ್ಪಿನಕಾಯಿ, ಅಥಣಿ ಮೂಲದ ಕೊಲ್ಲಾಪೂರ ಚಪ್ಪಲಿ, ಖಾನಾಪುರ ಮೂಲದ ಕರಕುಶಲ ಕೆತ್ತನೆ ಒಳಗೊಂಡ ಕಟ್ಟಿಗೆಯ ಮೂರ್ತಿಗಳು, ವರ್ಣಚಿತ್ರಗಳನ್ನು ಒಳಗೊಂಡ ಮಡಕೆಗಳು, ಆಟದ ಸಲಕರಣೆಗಳು ಸೇರಿದಂತೆ ಮತ್ತಿತರ ಸ್ಥಳೀಯ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮಾಡಬಹುದು.
ಹೆಚ್ಚು ಜನ ಪ್ರಯಾಣ: 2ನೇ ಸ್ಥಾನಕ್ಕೇರಿದ ಬೆಳಗಾವಿಯ ಸಾಂಬ್ರಾ ಏರ್ಪೊರ್ಟ್
ಈ ಯೋಜನೆಯಡಿ ಹದಿನೈದು ದಿನಗಳವರೆಗೆ ವಿಮಾನ ನಿಲ್ದಾಣದಲ್ಲಿ ಆದ್ಯತೆಯ ಮೇರೆಗೆ ಸ್ವಸಹಾಯ ಗುಂಪುಗಳಿಗೆ, ಅವರ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮಾಡಲು ಮಳಿಗೆಯನ್ನು ಒದಗಿಸಲಾಗುತ್ತದೆ. ಈಗಾಗಲೇ ಸ್ವಸಹಾಯ ಗುಂಪುಗಳಿಗೆ ಪ್ರತ್ಯೇಕವಾಗಿ ಮೀಸಲಿಡಲಾಗಿದ್ದ ಒಂದು ಔಟ್‌ಲೆಟ್ ಪ್ರಾಯೋಗಿಕವಾಗಿ ಕಾರ್ಯನಿರ್ವಹಿಸುತ್ತಿದೆ. ಇನ್ನು ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟಪಂಗಡಗಳ ಅಭಿವೃದ್ಧಿ ನಿಗಮ, ಬುಡಕಟ್ಟು ಸಮುದಾಯಕ್ಕೆ ಸಂಬಂಧಿಸಿದ ಅರಣ್ಯ ಆಧಾರಿತ ಉತ್ಪನ್ನಗಳು ಮತ್ತು ಇತರ ಕರಕುಶಲ ವಸ್ತುಗಳನ್ನು ಮಾರಾಟ ಮಾಡಲು ಬುಡಕಟ್ಟು ವ್ಯಾಪಾರ ಮಳಿಗೆ ಸ್ಥಾಪಿಸಲು ಪ್ರಸ್ತಾವ ಸಲ್ಲಿಸಿವೆ.