ಭಾರತದಲ್ಲಿ ಯುಪಿಐ ಪಾವತಿ ಸಾಕಷ್ಟು ಜನಪ್ರಿಯತೆ ಗಳಿಸಿದೆ. ಇದು ಡೆಬಿಟ್ ಕಾರ್ಡ್ ಬಳಕೆ ಮೇಲೆ ಪರಿಣಾಮ ಬೀರಿದೆ. 2023ನೇ ಸಾಲಿನ ಮೊದಲಾರ್ಧದಲ್ಲಿ ಡೆಬಿಟ್ ಕಾರ್ಡ್ ವಹಿವಾಟಿನಲ್ಲಿ ಭಾರೀ ಇಳಿಕೆಯಾಗಿದೆ. ಆದರೆ, ಕ್ರೆಡಿಟ್ ಕಾರ್ಡ್ ವಹಿವಾಟಿನಲ್ಲಿ ಹೆಚ್ಚಳವಾಗಿದೆ.
ನವದೆಹಲಿ( ಸೆ.27): 2023ರ ಮೊದಲ ಅರ್ಧ ವರ್ಷದಲ್ಲಿ ಭಾರತದ ವೆಚ್ಚದ ನಮೂನೆಯಲ್ಲಿ ಆಸಕ್ತಿಕರ ಟ್ರೆಂಡ್ ಕಂಡುಬಂದಿದೆ. ಈ ಅವಧಿಯಲ್ಲಿ ಡೆಬಿಟ್ ಕಾರ್ಡ್ ವಹಿವಾಟುಗಳ ಪ್ರಮಾಣದಲ್ಲಿ ಇಳಿಕೆಯಾಗಿದ್ದರೆ, ಕ್ರೆಡಿಟ್ ಕಾರ್ಡ್ ವಹಿವಾಟುಗಳಲ್ಲಿ ಏರಿಕೆ ಕಂಡುಬಂದಿದೆ. ಈ ಅವಧಿಯಲ್ಲಿ ಡೆಬಿಟ್ ಕಾರ್ಡ್ ವಹಿವಾಟುಗಳು 1.379 ಬಿಲಿಯನ್ ಗೆ ಇಳಿಕೆಯಾಗಿವೆ. ಇದು 2022ರ ಇದೇ ಅವಧಿಗೆ ಹೋಲಿಸಿದರೆ ಶೇ.28ರಷ್ಟು ಇಳಿಕೆಯಾಗಿದೆ. ಇನ್ನೊಂದೆಡೆ ವರ್ಲ್ಡ್ ಲೈನ್ ನೀಡಿರುವ ವರದಿ ಅನ್ವಯ ಕ್ರೆಡಿಟ್ ಕಾರ್ಡ್ ವಹಿವಾಟುಗಳ ಪ್ರಮಾಣದಲ್ಲಿ 1.550 ಬಿಲಿಯನ್ ಏರಿಕೆ ಕಂಡುಬಂದಿದೆ. ಇದು 2022ರ ಮೊದಲಾರ್ಧಕ್ಕೆ ಹೋಲಿಸಿದರೆ ಶೇ.19.6ರಷ್ಟು ಏರಿಕೆಯಾಗಿದೆ. ಇಂಡಿಯಾ ಡಿಜಿಟಲ್ ಪೇಮೆಂಟ್ಸ್ ವರದಿ ಎಚ್ 1 2023 ಕೂಡ ಈ ಟ್ರೆಂಡ್ ವಹಿವಾಟು ಮೌಲ್ಯದಲ್ಲಿ ಕೂಡ ಕಂಡುಬಂದಿರೋದಾಗಿ ಹೇಳಿದೆ. ಯುಪಿಐ ವಹಿವಾಟುಗಳ ಹೆಚ್ಚಳ ಡೆಬಿಟ್ ಕಾರ್ಡ್ ವಹಿವಾಟುಗಳ ಮೇಲೆ ಪ್ರಭಾವ ಬೀರಿವೆ. ಆದರೆ, ಹೆಚ್ಚಿನ ಮೌಲ್ಯದ ಪಾವತಿಗಳಿಗೆ ಕ್ರೆಡಿಟ್ ಆರ್ಡ್ ವಹಿವಾಟುಗಳ ಬಳಕೆ ಹೆಚ್ಚಿದೆ.
2023ರ ಮೊದಲಾರ್ಧದಲ್ಲಿ (ಜನವರಿ-ಜೂನ್ ತನಕ) ಡೆಬಿಟ್ ಕಾರ್ಡ್ ವಹಿವಾಟುಗಳಲ್ಲಿ 1.379 ಬಿಲಿಯನ್ ಇಳಿಕೆಯಾಗಿದೆ. ಇದು 2022ರ ಮೊದಲಾರ್ಧ ಕ್ಕೆ ಹೋಲಿಸಿದರೆ ಶೇ. 28ರಷ್ಟು ಇಳಿಕೆಯಾಗಿದೆ. ಇನ್ನು ಪಿಒಎಸ್ ಟರ್ಮಿನಲ್ ಗಳಲ್ಲಿ ಕ್ರೆಡಿಟ್ ಕಾರ್ಡ್ ವಹಿವಾಟುಗಳು ಶೇ.30.5ರಷ್ಟು ಬೆಳವಣಿಗೆ ದಾಖಲಿಸಿದೆ. ಇನ್ನು ಡೆಬಿಟ್ ಕಾರ್ಡ್ ವಹಿವಾಟುಗಳು ಶೇ.11.9ಕ್ಕೆ ಇಳಿಕೆ ಕಂಡಿವೆ. 2022ರಲ್ಲಿ ಯುಪಿಐ ವಹಿವಾಟುಗಳ ಪ್ರಮಾಣ ದ್ವಿಗುಣಗೊಂಡಿದೆ.
ಭಾರತದಲ್ಲಿ UPI ಎಟಿಎಂ ಕ್ರಾಂತಿ, ಡೆಬಿಟ್ ಕಾರ್ಡ್ ಇಲ್ಲದೆ ಸ್ಕ್ಯಾನ್ ಮೂಲಕ ಹಣ ವಿಥ್‌ಡ್ರಾ ಮಾಡಿ!
ಡೆಬಿಟ್ ಕಾರ್ಡ್ ವಹಿವಾಟು ತಗ್ಗಲು ಯುಪಿಐ ಕಾರಣ
ಡೆಬಿಟ್ ಕಾರ್ಡ್ ವಹಿವಾಟುಗಳಲ್ಲಿ ಇಳಿಕೆಯಾಗಲು ಯುಪಿಐ ಬಳಕೆ ಹೆಚ್ಚಿರೋದೆ ಕಾರಣ ಎಂದು ಹೇಳಲಾಗಿದೆ. ಇಂದು ಜನರು ಪಾವತಿಗಳಿಗೆ ಡೆಬಿಟ್ ಕಾರ್ಡ್ ಬಳಸುವ ಬದಲು ಮೊಬೈಲ್ ನಲ್ಲಿರುವ ಯುಪಿಐ ಅಪ್ಲಿಕೇಷನ್ ಗಳ ಮೂಲಕ ಪಾವತಿ ಮಾಡಲು ಇಚ್ಛಿಸುತ್ತಾರೆ. ಇದ್ರಿಂದ ಡೆಬಿಟ್ ಕಾರ್ಡ್ ಬಳಕೆ ತಗ್ಗಿದೆ.
ಪಿಒಎಸ್ ಟರ್ಮಿನಲ್ ಗಳಲ್ಲಿ ಕ್ರೆಡಿಟ್ ಕಾರ್ಡ್ ಬಳಕೆ ಹೆಚ್ಚಳ
PoS ಟರ್ಮಿನಲ್ ಗಳಲ್ಲಿ ಕ್ರೆಡಿಟ್ ಕಾರ್ಡ್ ವಹಿವಾಟುಗಳು ದಾಖಲೆಯ ಶೇ.30.5 ಬೆಳವಣಿಗೆ ದಾಖಲಿಸಿವೆ. ಆದರೆ, ಡೆಬಿಟ್ ಕಾರ್ಡ್ ವಹಿವಾಟುಗಳು ಶೇ.11.9ಕ್ಕೆ ಇಳಿಕೆಯಾಗಿವೆ. ದೊಡ್ಡ ಮೊತ್ತದ ಪಾವತಿಗಳನ್ನು ಕ್ರೆಡಿಟ್ ಕಾರ್ಡ್ ಬಳಸಿ ಮಾಡೋದ್ರಿಂದ ಹಣದ ಪಾವತಿಗೆ ಸಾಕಷ್ಟು ಸಮಯ ಸಿಗುತ್ತದೆ. ಇಲ್ಲವೇ ಇಎಂಐ ಮೂಲಕ ಕೂಡ ಪಾವತಿಸಲು ಅವಕಾಶವಿದೆ.
ಯುಪಿಐ ಪಾವತಿಯಲ್ಲಿ ಹೆಚ್ಚಳ
ಭಾರತದಲ್ಲಿ ಯುಪಿಐ ಪಾವತಿ ಜನಪ್ರಿಯತೆ ಗಳಿಸಿದ್ದು, ಇತರ ಎಲ್ಲ ಪಾವತಿ ವಿಧಾನಗಳಿಗಿಂತ ಮುಂದಿದೆ. 2023ರಲ್ಲಿ ಕೂಡ ಈ ಟ್ರೆಂಡ್ ಮುಂದುವರಿದಿದೆ. ಯುಪಿಐ ವಹಿವಾಟಿನ ಪ್ರಮಾಣದಲ್ಲಿ ಭಾರೀ ಏರಿಕೆ ಕಂಡುಬಂದಿದ್ದು, 2022ರ ಜನವರಿಯಲ್ಲಿ 4.6 ಬಿಲಿಯನ್ ಇದ್ದ ವಹಿವಾಟು 2023ರ ಜೂನ್ ನಲ್ಲಿ 9.3 ಬಿಲಿಯನ್ ಗೆ ಏರಿಕೆಯಾಗಿದೆ.
SBI ಡೆಬಿಟ್ ಕಾರ್ಡ್ ಕಳೆದು ಹೋಗಿದೆಯಾ? ನೆಟ್ ಬ್ಯಾಂಕಿಂಗ್ ಬಳಸಿ ಬ್ಲಾಕ್ ಮಾಡೋದು ಹೇಗೆ?
ಮೊಬೈಲ್ ಅಪ್ಲಿಕೇಷನ್ ಆಧಾರಿತ ಪಾವತಿ ಹೆಚ್ಚಳ
ಮೊಬೈಲ್ ಅಪ್ಲಿಕೇಷನ್ ಬಳಸಿ ಪಾವತಿ ಪ್ರಮಾಣದಲ್ಲಿ ಕೂಡ 2023ರಲ್ಲಿ ಏರಿಕೆ ಕಂಡುಬಂದಿದೆ. ಇದರಲ್ಲಿ ಯುಪಿಐ ಆಧಾರಿತ ವಹಿವಾಟಿನ ಪ್ರಮಾಣ ಹೆಚ್ಚಿದೆ. ಇದರ ಜೊತೆಗೆ ಬ್ಯಾಂಕ್ ಖಾತೆ ಬಳಸಿ ಹಣದ ವರ್ಗಾವಣೆ ಸೇರಿದಂತೆ ಇತರ ಪಾವತಿ ವಿಧಾನಗಳು ಕೂಡ ಸೇರಿವೆ. 2023ರ ಮೊದಲಾರ್ಧದಲ್ಲಿ ಮೊಬೈಲ್ ವಹಿವಾಟಿನ ಒಟ್ಟು ಮೊತ್ತ 52.15 ಬಿಲಿಯನ್ ಆಗಿದೆ. ಇದು 2022ರ ಮೊದಲಾರ್ಧಕ್ಕೆ ಹೋಲಿಸಿದರೆ ಶೇ.55.4 ಏರಿಕೆಯಾಗಿದೆ. 2022ರ ಮೊದಲಾರ್ಧದಲ್ಲಿ ಮೊಬೈಲ್ ವಹಿವಾಟಿನ ಒಟ್ಟು ಮೊತ್ತ 33.55 ಬಿಲಿಯನ್ ಆಗಿತ್ತು.