
ನವದೆಹಲಿ : ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ‘ಡೆಡ್ ಎಕಾನಮಿ’ ಎಂಬ ವ್ಯಂಗ್ಯದ ಬೆನ್ನಲ್ಲೇ ಅಂತಾರಾಷ್ಟ್ರೀಯ ರೇಟಿಂಗ್ ಸಂಸ್ಥೆ ಎಸ್ ಆ್ಯಂಡ್ ಪಿ ಗ್ಲೋಬಲ್ ದೇಶದ ಸಾಲದ ಮೇಲಿನ ಕ್ರೆಡಿಟ್ ರೇಟಿಂಗ್ ಅನ್ನು ‘ಬಿಬಿಬಿ-’(ಋಣಾತ್ಮಕ)ಯಿಂದ ‘ಬಿಬಿಬಿ’ಗೆ ಸ್ಥಿರ ಮುನ್ನೋಟದೊಂದಿಗೆ ಮೇಲ್ದರ್ಜೆಗೇರಿಸಿ ಶುಭ ಸುದ್ದಿ ನೀಡಿದೆ. ಸುಮಾರು 19 ವರ್ಷಗಳ ಬಳಿಕ ಭಾರತದ ಸಾಲದ ಮೇಲಿನ ರೇಟಿಂಗ್ ಅನ್ನು ಎಸ್ ಆ್ಯಂಡ್ ಪಿ ಗ್ಲೋಬಲ್ ಮೇಲ್ದರ್ಜೆಗೇರಿಸಿದೆ.
ಈ ಮೂಲಕ ಅಮೆರಿಕದ ಶೇ.50ರಷ್ಟು ತೆರಿಗೆ ಹೊರತಾಗಿಯೂ ಭಾರತದ ಆರ್ಥಿಕತೆ ಬಲಿಷ್ಠವಾಗಿದೆ, ಸರ್ಕಾರವು ತನ್ನ ಖರ್ಚು-ವೆಚ್ಚ ನಿರ್ವಹಿಸುವಲ್ಲಿ ಸಕ್ಷಮವಾಗಿದೆ ಎಂದು ಅಮೆರಿಕದ್ದೇ ಕ್ರೆಡಿಟ್ ರೇಟಿಂಗ್ ಸಂಸ್ಥೆ ಒಪ್ಪಿಕೊಂಡಂತಾಗಿದೆ.
ತೆರಿಗೆ ಬಾಂಬ್ ಹೆಚ್ಚಿನ ಪರಿಣಾಮಬೀರದು:
ಭಾರತವು ವಿಶ್ವದಲ್ಲೇ ಅತ್ಯುತ್ತಮವಾಗಿ ಬೆಳವಣಿಗೆ ತೋರುತ್ತಿರುವ ಅರ್ಥವ್ಯವಸ್ಥೆಗಳಲ್ಲೊಂದು. ಕಳೆದ 5-6 ವರ್ಷಗಳಲ್ಲಿ ಸರ್ಕಾರದ ವೆಚ್ಚ ಸುಧಾರಣೆ ಕಂಡಿದೆ. ಅಮೆರಿಕದ ತೆರಿಗೆಯಿಂದ ಭಾರತದ ಆರ್ಥಿಕತೆ ಮೇಲೆ ಆಗಬಹುದಾದ ಹಾನಿ ನಿಯಂತ್ರಿಸಬಹುದಾಗಿದೆ. ಶೇ.50ರಷ್ಟು ತೆರಿಗೆ ಭಾರತದ ಆರ್ಥಿಕ ಬೆಳವಣಿಗೆ ಮೇಲೆ ಹೆಚ್ಚಿನ ಪರಿಣಾಮವನ್ನೇನೂ ಬೀರುವುದಿಲ್ಲ. ಭಾರತದ ಶೇ.60ರಷ್ಟು ಆರ್ಥಿಕತೆ ಆಂತರಿಕ ಅನುಭೋಗವನ್ನೇ ಅವಲಂಬಿಸಿದೆ ಎಂದು ರೇಟಿಂಗ್ ಸಂಸ್ಥೆ ಅಭಿಪ್ರಾಯಪಟ್ಟಿದೆ.
ಎಸ್ ಆ್ಯಂಡ್ ಪಿಯು 2007ರಲ್ಲಿ ಭಾರತದ ಸಾಲಕ್ಕೆ ಬಿಬಿಬಿ-(ಋಣಾತ್ಮಕ) ರೇಟಿಂಗ್ ನೀಡಿತ್ತು. ‘ಬಿಬಿಬಿ’ ರೇಟಿಂಗ್ ಅಂದರೆ ದೇಶವು ತನ್ನ ಸಾಲವನ್ನು ಸಮಸ್ಯೆಯಿಲ್ಲದೆ ಮರುಪಾವತಿ ಮಾಡುವ ಸಾಮರ್ಥ್ಯ ಹೊಂದಿದೆ ಎಂಬರ್ಥ.
‘ಬಿಬಿಬಿ-’ನಿಂದ ‘ಬಿಬಿಬಿ’ಗೆ ಮೆಲ್ದರ್ಜೆಗೇರಿಸಿದ ಎಸ್‌ಆ್ಯಂಡ್‌ಪಿ
ಮೇಲ್ದರ್ಜೆಗೆ ಏರಿಸಿದ್ದು 19 ವರ್ಷದಲ್ಲಿ ಇದೇ ಮೊದಲು
ಅಮೆರಿಕದ ತೆರಿಗೆ ಹೆಚ್ಚಿನ ಪರಿಣಾಮ ಬೀರಲ್ಲ
ಭಾರತದ ಆರ್ಥಿಕತೆ ರಫ್ತನ್ನು ಹೆಚ್ಚಿ ಅವಲಂಬಿಸಿಲ್ಲ
ಅಂತಾರಾಷ್ಟ್ರೀಯ ರೇಟಿಂಗ್ ಸಂಸ್ಥೆ ಅಭಿಪ್ರಾಯ
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.