
ಜ್ಯೂರಿಚ್(ಜೂ.28): ಕಳೆದ ಲೋಕಸಭೆ ಚುನಾವಣೆ ವೇಳೆ ವಿದೇಶದಲ್ಲಿರುವ ಕಪ್ಪುಹಣವನ್ನು ಭಾರತಕ್ಕೆ ವಾಪಸ್ ತರುವುದಾಗಿ ಭರವಸೆ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಚ್ಚರಿ ಮೂಡಿಸುವಂತಹ ಸುದ್ದಿ ಇದು.
ಹೌದು, ಅಚ್ಚರಿಯಾದರೂ ನಿಜ. 2017ರಲ್ಲಿ ಸ್ವಿಸ್ ಬ್ಯಾಂಕ್ ನಲ್ಲಿರುವ ಭಾರತೀಯರ ಹಣ ಶೇ.50ರಷ್ಟು(7 ಸಾವಿರ ಕೋಟಿ) ಹೆಚ್ಚಳವಾಗಿದೆ ಎಂದು ಸ್ವಿಸ್ ನ್ಯಾಷನಲ್ ಬ್ಯಾಂಕ್ (ಎಸ್ ಎನ್ ಬಿ) ಬಿಡುಗಡೆ ಮಾಡಿರುವ ವಾರ್ಷಿಕ ದತ್ತಾಂಶಗಳಿಂದ ಬಹಿರಂಗವಾಗಿದೆ.
2017ರಲ್ಲಿ ಸ್ವಿಸ್ ಬ್ಯಾಂಕ್ ನಲ್ಲಿ ವಿಶ್ವದ ಒಟ್ಟು ವಿದೇಶಿ ಗ್ರಾಹಕರ ಹಣದಲ್ಲಿ ಶೇ.3ರಷ್ಟು(100 ಲಕ್ಷ ಕೋಟಿ ರುಪಾಯಿ) ಹೆಚ್ಚಳವಾಗಿದೆ. ಈ ಪೈಕಿ ಭಾರತೀಯರ ಹಣ ಶೇ.50ರಷ್ಟು ಹೆಚ್ಚವಾಗಿದೆ ಎಂದು ಸ್ವಿಸ್ ರಾಷ್ಟ್ರೀಯ ಬ್ಯಾಂಕ್ ತಿಳಿಸಿದೆ.ಸ್ವಿಸ್ ಬ್ಯಾಂಕ್ ನಲ್ಲಿರುವ ಭಾರತೀಯರ ಹಣ ವಾಪಸ್ ತರುವ ಕೇಂದ್ರ ಸರ್ಕಾರದ ಸತತ ಪ್ರಯತ್ನಗಳ ಹೊರತಾಗಿಯೂ ಭಾರತೀಯರ ಹಣ ಶೇ.50ರಷ್ಟ ಹೆಚ್ಚಳವಾಗಿರುವುದು ಎಲ್ಲರಿಗೂ ಅಚ್ಚರಿ ಮೂಡಿಸಿದೆ.
2016ರಲ್ಲಿ ಸ್ವಿಸ್ ಬ್ಯಾಂಕ್ ನಲ್ಲಿರುವ ಭಾರತೀಯರ ಹಣ ಶೇ.45ರಷ್ಟು(4,500 ಕೋಟಿ ರು.) ಕಡಿಮೆಯಾಗಿತ್ತು. ಆದರೆ 2017ನೇ ಸಾಲಿನಲ್ಲಿ ಭಾರತೀಯರ ಹಣ 999 ಮಿಲಿಯನ್ ಸ್ವಿಸ್ ಫ್ರಾನ್ಸ್(6,891 ಕೋಟಿ) ಹೆಚ್ಚಳವಾಗಿದೆ ಎಂದು ಎಸ್ ಎನ್ ಬಿ ಡಾಟಾ ತಿಳಿಸಿದೆ.
ಕಳೆದ ಒಂದು ದಶಕದಲ್ಲಿ ಸ್ವಿಸ್ ಬ್ಯಾಂಕ್ ನಲ್ಲಿ ಭಾರತೀಯರ ಹಣ ಹೆಚ್ಚಳವಾಗುತ್ತಿರುವುದು ಇದು ಮೂರನೇ ಬಾರಿ. ಈ ಹಿಂದೆ 2011ರಲ್ಲಿ ಶೇ.12ರಷ್ಟು, 2013ರಲ್ಲಿ ಶೇ.43ರಷ್ಟು ಹೆಚ್ಚಳವಾಗಿತ್ತು. 2004ರಲ್ಲಿ ಶೇ. 56ರಷ್ಟು ಹೆಚ್ಚಳವಾಗಿತ್ತು. 2012 ರಲ್ಲಿ ಸ್ವಿಸ್ ಬ್ಯಾಂಕ್ ನಲ್ಲಿರುವ ಭಾರತೀಯರ ಕಪ್ಪು ಹಣದ ಮೊತ್ತ ಮೂರನೇ ಒಂದು ಭಾಗದಷ್ಟು ಕುಸಿದಿತ್ತು.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.