
ನವದೆಹಲಿ (ನ.08) ಬಡವರು, ಶ್ರೀಮಂತರು ಸೇರಿದಂತೆ ಎಲ್ಲರೂ ಸಾಲ ಪಡೆಯುತ್ತಾರೆ. ಆದರೆ ಬಡವರು, ಮಧ್ಯಮ ವರ್ಗ ತಮ್ಮ ಮೂಲಭೂತ ಅವಶ್ಯತೆಗಾಗಿ ಸಾಲ ಪಡೆಯುವ ಅನಿವಾರ್ಯತೆ ಇದೆ. ಅದರಲ್ಲೂ ಮನೆ ಸಾಲ ಅತೀ ದೊಡ್ಡ ಸವಾಲಾಗಿ ಪರಿಣಮಿಸಲಿದೆ. ಭಾರತೀಯ ಟೆಕ್ಕಿಯೊಬ್ಬರು ಮನೆಗಾಗಿ ತೆಗೆದುಕೊಂಡು 53 ಲಕ್ಷ ರೂಪಾಯಿ ಸಾಲ, ಅದರ ಬಡ್ಡಿ ಸೇರಿ ಒಟ್ಟು 67 ಲಕ್ಷ ರೂಪಾಯಿ ಸಾಲವನ್ನು ಕೇವಲ ಆರೇ ವರ್ಷದಲ್ಲಿ ಮುಗಿಸಿದ್ದಾರೆ. ಇದು ಎಲ್ಲರಿಗೂ ಸಾಧ್ಯ ಎಂದು ತಮ್ಮ ಅನುಭವ ಹಂಚಿಕೊಂಡಿದ್ದಾರೆ.
ದೆಹಲಿ ಮೂಲದ ಸಾಫ್ಟ್‌ವೇರ್ ಎಂಜಿನೀಯರ್ 53 ಲಕ್ಷ ರೂಪಾಯಿ ಮನೆ ಸಾಲ ಹಾಗೂ ಅದರ ಬಡ್ಡಿಯನ್ನು ಕೇವಲ 6 ವರ್ಷದಲ್ಲಿ ಮುಗಿಸಿರುವ ರಣರೋಚಕ ಕತೆಯನ್ನು ತೆರೆದಿಟ್ಟಿದ್ದಾರೆ. ಸದ್ಯ ಜರ್ಮನಿಯಲ್ಲಿ ಟೆಕ್ಕಿಯಾಗಿ ಕೆಲಸ ಮಾಡುತ್ತಿದ್ದಾರೆ. 2019ರಲ್ಲಿ ಪಡೆದ ಸಾಲವನ್ನು 2026ರಲ್ಲಿ ಮುಗಿಸಿದ್ದಾರೆ. ಸಾಮಾನ್ಯವಾಗಿ ಮನೆ ಸಾಲ 15 ವರ್ಷ, 20 ವರ್ಷದ ಸುದೀರ್ಘ ಸಾಲಗಳಾಗಿರುತ್ತದೆ. ಲಕ್ಷದಲ್ಲಿರುವ ಸಾಲ ಬಡ್ಡಿ ಸಮೇತ ಕೋಟಿಯಾಗುತ್ತದೆ. ಬೇರೆ ದಾರಿಯಿಲ್ಲದ ಕಾರಣ ಬಹುತೇಕರು ಸಾಲ ಮಾಡಿ ಜೀವನ ಪೂರ್ತಿ ಸಾಲ ಕಟ್ಟುತ್ತಲೇ ಕಳೆದು ಹೋಗುತ್ತಾರೆ.
ಟೆಕ್ಕಿ ತಾವು ಸಾಲ ತೀರಿಸಿದ ರೀತಿ ಕೆಲವರಿಗೆ ಉಪಯೋಗವಾಗಬಹುದು ಎಂದು ಈ ಮಾಹಿತಿ ಹಂಚಿಕೊಂಡಿದ್ದಾರೆ. ದೊಡ್ಡ ಮೊತ್ತ ಸಾಲು ಮಾಡುವಾಗ ನೀವು ಹೆಚ್ಚು ಟೆನ್ಶನ್, ಒತ್ತಡವಾಗುತ್ತದೆ ಎಂದು ತೆಗೆದುಕೊಳ್ಳುವುದು ಸೂಕ್ತವಲ್ಲ. ಸಾಲ, ಅದನ್ನು ತೀರಿಸುವ ಸಮಯ, ಆದಾಯ ಮೂಲ ಎಲ್ಲವನ್ನೂ ಲೆಕ್ಕ ಹಾಕಿ ಸಾಲ ಪಡೆಯಬೇಕು. ಈ ಲೆಕ್ಕಾಚರದಲ್ಲಿ ಒಂದಿಷ್ಟು ಬದಲಾವಣೆಯಾಗಬಹುದು. ಆದರೆ ಭಾರಿ ಬದಲಾವಣೆ, ತಿರುವು ಬರದಂತೆ ಖಾತ್ರಿಯಿದ್ದರೆ ಯಾವುದೇ ಚಿಂತೆ ಇಲ್ಲದೆ ಸಾಲ ಪಡೆಯಬಹುದು ಎಂದು ಟೆಕ್ಕಿ ಹೇಳಿದ್ದಾರೆ. ಗೆಳೆಯರು, ಕುಟುಬಂಸ್ಥರು, ಆರ್ಥಿಕ ತಜ್ಞರು ಸೇರಿದಂತೆ ಹಲವರ ಬಳಿ ವಿಚಾರಿಸಿಕೊಳ್ಳಿ. ಸಾಲ ತೀರಿಸುವ ಬಗೆ ಕುರಿತು ಪ್ಲಾನ್ ಮಾಡಿಕೊಳ್ಳಿ. ಬಹುಬೇಗನೆ ಸಾಲ ತೀರಿಸಲು ಸಾಧ್ಯವಾಗುವಂತೆ ಪರಿಸ್ಥಿತಿ ನಿರ್ಮಾಣ ಮಾಡಿಕೊಳ್ಳಬೇಕು ಎಂದಿದ್ದಾರೆ.
ವೇತನ ಪಡೆಯುವ ವರ್ಗವಾಗಿದ್ದರೆ ವಿದೇಶದಲ್ಲಿ ಕೆಲಸ ಮಾಡುವುದು ಹೆಚ್ಚು ಸೂಕ್ತ. ಕಾರಣ ವಿದೇಶದ ವೇತನದಲ್ಲಿ ಸಾಲ ತೀರಿಸುವುದು ಸುಲಭಾಗುತ್ತದೆ. ಹೀಗಾಗಿ ನಾನು ದೆಹಲಿಯಿಂದ ಜರ್ಮನಿಗೆ ಸ್ಥಳಾಂತರಗೊಂಡೆ. ಇಲ್ಲಿನ ವೇತನದಿಂದ ಸುಲಭವಾಗಿ ಹಾಗೂ ಬಹುಬೇಗನೆ ಸಾಲ ತೀರಿಸಲು ಸಾಧ್ಯವಾಯಿತು ಎಂದಿದ್ದಾರೆ. ಸಾಲ ಪಡೆದಿದ್ದು 2019ರಲ್ಲಿ ಆದರೆ ಜರ್ಮನಿಗೆ ಸ್ಥಳಾಂತರಗೊಂಡಿದ್ದು 2021ರಲ್ಲಿ. ಇದೀಗ ಎಲ್ಲಾ ಸಾಲದಿಂದ ಮುಕ್ತವಾಗಿದ್ದೇನೆ ಎಂದಿದ್ದಾರೆ.
ಸಾಧ್ಯವಾದಷ್ಟು ಬೇಗ ಸಾಲ ತೀರಿಸುವ ಪ್ಲಾನ್ ಮಾಡಬೇಕು, ಒಂದಷ್ಟು ಹಣ ಒಟ್ಟಿಗೆ ಪಾವತಿಸಿದರೆ ಕಂತುಗಳ ಸಂಖ್ಯೆ ಕಡಿಮೆಯಾಗಲಿದೆ. ಇದರಿಂದ ಬಡ್ಡಿ ಉಳಿತಾಯವಾಗಲಿದೆ. ನಿಮ್ಮ ಮನೆಯ ಮೌಲ್ಯ ಹೆಚ್ಚಾಗಿರುತ್ತದೆ. ಅದರ ಮೇಲೆ ಮತ್ತೊಂದು ಸಾಲ ಒಳ್ಳೆಯದಲ್ಲ. ಕಾರಣ ನನ್ನ ಮನೆಯ ಮೌಲ್ಯ ಈಗ 1 ಕೋಟಿ ರೂಪಾಯಿ. ಆದರೆ ನನ್ನ ಬ್ಯಾಂಕ್ ಖಾತೆಯಲ್ಲಿ ಯಾವುದೇ ಬ್ಯಾಲೆನ್ಸ್ ಇಲ್ಲ. ಹೀಗಾಗಿ ಮೌಲ್ಯದ ಆಧಾರದಲ್ಲಿ ನೀವು ಲೆಕ್ಕಾಚಾರ ಹಾಕಿಕೊಳ್ಳಬೇಡಿ ಎಂದು ಸಲಹೆ ನೀಡಿದ್ದಾರೆ.
ನೀವು ಮನೆ ಖರೀದಿಸಿದಾಗ ಕುಟುಂಬಸ್ಥರು, ಸೇರಿದಂತೆ ಹಲವರು ಅಭಿನಂದಿಸುತ್ತಾರೆ, ಆದರೆ ಅವರು ಸಾಲ ಮರುಪಾವತಿಸಲ್ಲ. ನೀು ಜೀವನದ ಉತ್ಸಾಹ ಕಳೆದುಕೊಂಡಿದ್ದರೆ ಮನೆ ಸಾಲ ಮಾಡಿನೋಡಿ. ಆಗ ನೀವು ಎಲ್ಲವನ್ನು ನಿರ್ವಹಣೆ ಮಾಡುವುದು ಕಲಿಯುತ್ತೀರಿ. ಇಡೀ ಜೀವನದ ಬಜೆಟ್ ರೂಪಿಸಲು ಸಾಧ್ಯವಾಗುತ್ತದೆ ಎಂದು ಟೆಕ್ಕಿ ಸಲಹೆ ನೀಡಿದ್ದಾರೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.