
ಬೆಂಗಳೂರು(ಜೂ.25): ವ್ಯವಹಾರವೇ ಹಾಗೆ. ಲಾಭ ನಷ್ಟದ ಲೆಕ್ಕಾಚಾರದಲ್ಲಿ ದೇಶ ಕೆಲವೊಮ್ಮೆ ಹಿನ್ನೆಲೆಗೆ ಸೇರುತ್ತದೆ. ಕ್ರಿಕೆಟ್ ಎಂಬ ವಾಣಿಜ್ಯ ಕ್ರೀಡೆ ಕೂಡ ಇದಕ್ಕೆ ಹೊರತಾಗಿಲ್ಲ.
ಕ್ರಿಕೆಟ್ ವಾಣಿಜ್ಯೀಕರಣವಾದ ಮೇಲೆ ಪ್ರತಿಯೊಂದೂ ತಂಡದ ಜೆರ್ಸಿ ಮೇಲೂ ವಿವಿಧ ಕಂಪನಿಗಳ ಲೋಗೋ, ಹೆಸರುಗಳನ್ನು ಮುದ್ರಿಸುವ ಪರಿಪಾಠ ಬೆಳೆದು ಬಂದಿದೆ. ದೇಶವನ್ನು ಪ್ರತಿನಿಧಿಸಬೇಕಾದ ಈ ಆಟಗಾರರು ತಮ್ಮ ಜೆರ್ಸಿ ಮೂಲಕ ಕಂಪನಿಯೊಂದರ ಪ್ರಚಾರ ಮಾಡುವ ಅನಿವಾರ್ಯತೆಗೆ ಸಿಲುಕಿದ್ದಾರೆ.
ಅದರಂತೆ ಐಸಿಸಿ ವಿಶ್ವಕಪ್ 2019ರ ಪ್ರತಿಯೊಂದೂ ತಂಡವೂ ತಮ್ಮ ಜೆರ್ಸಿಯಲ್ಲಿ ವಿವಿಧ ಕಂಪನಿಗಳ ಹೆಸರುಗಳನ್ನು ಮುದ್ರಿಸುವ ಮೂಲಕ ಕಂಪನಿಯ ಪ್ರಚಾರ ನಡೆಸುತ್ತಿವೆ. ಭಾರತ ತಂಡದ ಜೆರ್ಸಿ ಮೇಲೆ ಒಪ್ಪೊ ಮೊಬೈಲ್ ಹೆಸರಿರುವುದು ಎಲ್ಲರ ಗಮನಕ್ಕೆ ಬಂದಿರುತ್ತದೆ.
ಚೀನಾ ವಸ್ತುಗಳನ್ನು ಕೊಳ್ಳಬೇಡಿ ಎಂದು ಜನಸಾಮಾನ್ಯರಿಗೆ ದೇಶಭಕ್ತಿಯ ಪಾಠ ಮಾಡುವವರು ಒಂದೆಡೆ. ಅದೇ ದೇಶವನ್ನು ಪ್ರತಿನಿಧಿಸುವ ಆಟಗಾರರ ಜೆರ್ಸಿ ಮೇಲೆ ಅದೇ ಚೀನಾ ಮೊಬೈಲ್ ಕಂಪನಿಯ ಹೆಸರು ಮತ್ತೊಂದೆಡೆ.
ಇರಲಿ, ಅದು ಬಿಸಿಸಿಐ ಮತ್ತು ಕಂಪನಿಗಳ ನಡುವೆ ನಡೆದ ವಾಣಿಜ್ಯ ಒಪ್ಪಂದದ ಮಾತಾಯಿತು. ಆದರೆ ಗಮನಸೆಳೆದಿರುವುದು ಅಫ್ಘಾನಿಸ್ತಾನ್ ತಂಡದ ಜೆರ್ಸಿ ಮೇಲೆ ಭಾರತದ ಹಾಲು ಮತ್ತು ಹಾಲಿನ ಉತ್ಪನ್ನಗಳ ಸಂಸ್ಥೆ ಅಮುಲ್ ಹೆಸರು ಮುದ್ರಿತವಾಗಿರುವುದು.
ಹೌದು, ಭಾರತ ತಂಡದ ಜೆರ್ಸಿ ಮೇಲೆ ಒಪ್ಪೊ ಕಂಪನಿಯ ಹೆಸರು ಮುದ್ರಿತವಾಗಿದ್ದರೆ, ಅಫ್ಘಾನಿಸ್ತಾನ್ ತಂಡದ ಜೆರ್ಸಿ ಮೇಲೆ ಅಮುಲ್ ಹೆಸರು ಮುದ್ರಿತವಾಗಿದೆ. ಅಂತೆಯೇ ಶ್ರೀಲಂಕಾ ತಂಡದ ಮೇಲೆ ಭಾರತದ್ದೇ ಕಂಪನಿಯಾದ ಕೆಂಟ್ RO ದ ಹೆಸರು ಮುದ್ರಿತವಾಗಿದೆ.
ಏಕೆ ಹೀಗೆ?:
ತಂಡದ ಜೆರ್ಸಿ ಸಿದ್ದಪಡಿಸುವಾಗ ಅದರ ಮೇಲೆ ತಮ್ಮ ಕಂಪನಿಯ ಹೆಸರು ಮುದ್ರಿಸಿ ಪ್ರಚಾರ ಮಾಡುವ ಅವಕಾಶ ವಿವಿಧ ಕಂಪನಿಗಳಿಗಿದೆ. ಬಿಡ್ಡಿಂಗ್ ಮೂಲಕ ಜೆರ್ಸಿ ಮೇಲೆ ಹೆಸರು ಬರೆಸಲು ಕಂಪನಿಗಳು ಮುಗಿ ಬೀಳುತ್ತವೆ. ಅದರಲ್ಲೂ ಭಾರತದಂತ ಪ್ರಸಿದ್ಧ ತಂಡದ ಜೆರ್ಸಿ ಮೇಲೆ ತಮ್ಮ ಕಂಪನಿಯ ಹೆಸರಿದ್ದರೆ ಪ್ರಚಾರಕ್ಕೆ ಅದಕ್ಕಿಂತ ಇನ್ನೇನು ಬೇಕು ಹೇಳಿ?.
ಅದರಂತೆ 2017ರಲ್ಲಿ ಭಾರತ ತಂಡದ ಜೆರ್ಸಿ ಮೇಲೆ ತನ್ನ ಹೆಸರು ಬರೆಸುವ ಅವಕಾಶ ಪಡೆದ ಒಪ್ಪೊ, ಮುಂದಿನ 5 ವರ್ಷಗಳ ಕಾಲ ಅಂದರೆ 2022ರವರೆಗೂ ಈ ಹಕ್ಕನ್ನು ಪಡೆದುಕೊಂಡಿದೆ. ಈ ಒಪ್ಪಂದಕ್ಕಾಗಿ ಒಪ್ಪೊ ಬರೋಬ್ಬರಿ 1079 ಕೋಟಿ ರೂ.ಗಳನ್ನು ಪಾವತಿಸಿದೆ.
ಅದರಂತೆ ಅಮುಲ್ ಅಫ್ಘಾನಿಸ್ತಾನ್ ತಂಡದ ಜೆರ್ಸಿ ಮೇಲೆ ಹೆಸರು ಮುದ್ರಿಸುವ ಅವಕಾಶ ಪಡೆದರೆ, ಶ್ರೀಲಂಕಾ ಜೆರ್ಸಿ ಮೇಲೆ ಕೆಂಟ್ RO ಹೆಸರು ರಾರಾಜಿಸುತ್ತಿದೆ.
ಈ ಹಿಂದೆ ಅಮುಲ್ ನ್ಯೂಜಿಲ್ಯಾಂಡ್ ಮತ್ತು ಹಾಲೆಂಡ್ ತಂಡಗಳ ಜೆರ್ಸಿ ಮೇಲೂ ರಾರಾಜಿಸಿದ್ದನ್ನು ಕ್ರಿಕೆಟ್ ಅಭಿಮಾನಿಗಳು ಖಂಡಿತ ಗಮನಿಸಿರುತ್ತಾರೆ.
ಕೇವಲ ಜೆರ್ಸಿಯಲ್ಲಿ ಹೆಸರು ಮುದ್ರಿಸುವ ಮೂಲಕ ಬಿಸಿಸಿಐ ಸಾವಿರಾರು ಕೋಟಿ ರೂ.ಗಳನ್ನು ಪಡೆಯುತ್ತಿದೆ. ಇದರಿಂದ ಕ್ರಿಕೆಟ್ ಬೆಳವಣಿಗೆಗೂ ಅನುಕೂಲ ಎಂಬುದರಲ್ಲಿ ಎರಡು ಮಾತಿಲ್ಲ.
ವಿದೇಶಿ ಕಂಪನಿಗಳು ನಮ್ಮ ಭಾರತ ತಂಡವನ್ನು ಬೆಂಬಲಿಸುವಂತೆ, ಸ್ವದೇಶಿ ಕಂಪನಿಗಳು ವಿದೇಶಿ ತಂಡಗಳನ್ನು ಬೆಂಬಲಿಸುವ ಮೂಲಕ ಪ್ರಚಾರ ಪಡೆಯುತ್ತಿವೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.