
ನವದೆಹಲಿ (ಮಾರ್ಚ್ 18, 2023): ಇತ್ತೀಚೆಗೆ ಪತನಗೊಂಡ ಅಮೆರಿಕದ ಸಿಲಿಕಾನ್ ವ್ಯಾಲಿ ಬ್ಯಾಂಕಲ್ಲಿ (ಎಸ್‌ವಿಬಿ) ಭಾರತದ ಸ್ಟಾರ್ಟಪ್‌ಗಳು ಅಂದಾಜು 1 ಶತಕೋಟಿ ಡಾಲರ್ (8200 ಕೋಟಿ ರು.) ಠೇವಣಿ ಹೊಂದಿವೆ ಎಂದು ಕೇಂದ್ರ ಮಾಹಿತಿ ತಂತ್ರಜ್ಞಾನ ಖಾತೆ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ. ಅಮೆರಿಕದ ಮೂರು ಬ್ಯಾಂಕ್‌ಗಳ ಪತನದ ಬೆನ್ನಲ್ಲೇ, ಭಾರತದ 450ಕ್ಕೂ ಸ್ಟಾರ್ಟಪ್ ಕಂಪನಿಗಳ ಜೊತೆ ಇತ್ತೀಚೆಗೆ ಸಚಿವ ರಾಜೀವ್ ಚಂದ್ರಶೇಖರ್ ಸಭೆ ನಡೆಸಿ, ಉದ್ಯಮಗಳ ಅಭಿಪ್ರಾಯ ಸಂಗ್ರಹ ಆಲಿಸುವ ಕೆಲಸ ಮಾಡಿದ್ದರು.
ಅದರ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿರುವ ಅವರು, ‘ಭಾರತದ ಸ್ಟಾರ್ಟಪ್‌ಗಳು ಎಸ್‌ವಿಬಿಯಲ್ಲಿ ಅಂದಾಜು 8200 ಕೋಟಿ ಠೇವಣಿ ಹೊಂದಿವೆ. ಇದೀಗ ನಮ್ಮ ಮುಂದಿರುವ ವಿಷಯ, ಈ ಹಣವನ್ನು ಭಾರತದ ಬ್ಯಾಂಕಿಂಗ್ ವ್ಯವಸ್ಥೆಗೆ ವರ್ಗಾಯಿಸುವುದು ಹೇಗೆ ಎಂಬುದು? ಇದು ಸಂಕೀರ್ಣ ಪ್ರಕ್ರಿಯೆ. ಹೀಗಾಗಿಯೇ ತಕ್ಷಣಕ್ಕೆ ಈ ಸ್ಟಾರ್ಟಪ್‌ಗಳಿಗೆ ಯಾವುದೇ ತೊಂದರೆಯಾಗದಂತೆ ಸ್ಥಳೀಯ ಬ್ಯಾಂಕ್‌ಗಳು ಅವುಗಳಿಗೆ ನೆರವು ನೀಡಬೇಕು’ ಎಂದು ಅವರು ಸಲಹೆ ನೀಡಿದ್ದಾರೆ.
ಇದನ್ನು ಓದಿ: ಅಮೆರಿಕ ಬ್ಯಾಂಕ್ ಕುಸಿತ: ಆತಂಕಗೊಂಡ ಭಾರತೀಯ ಸ್ಟಾರ್ಟಪ್ ಬೆಂಬಲಕ್ಕೆ ನಿಂತ ಕೇಂದ್ರ ಸರ್ಕಾರ
‘ಜೊತೆಗೆ ಅಮೆರಿಕದ ಬ್ಯಾಂಕ್‌ಗಳಲ್ಲಿ ತಾವು ಹೊಂದಿರುವ ಠೇವಣಿಯನ್ನೇ ಆಧಾರವಾಗಿಟ್ಟುಕೊಂಡು ಭಾರತೀಯ ಬ್ಯಾಂಕ್‌ಗಳು ನೆರವು ನೀಡಬೇಕೆಂಬುದು ಹಲವು ಸ್ಟಾರ್ಟಪ್‌ಗಳ ಅಂಬೋಣ. ಈ ವಿಷಯವನ್ನು ಈಗಾಗಲೇ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಗಮನಕ್ಕೂ ತರಲಾಗಿದೆ’ ಎಂದು ರಾಜೀವ್ ಚಂದ್ರಶೇಖರ್ ತಿಳಿಸಿದ್ದಾರೆ.
ದಿವಾಳಿಯಿಂದ ರಕ್ಷಣೆ ಕೋರಿದ ಎಸ್‌ವಿಬಿ
ಈ ನಡುವೆ ಸಿಲಿಕಾನ್ ವ್ಯಾಲಿ ಬ್ಯಾಂಕ್‌ನ ಮಾತೃ ಸಂಸ್ಥೆಯಾದ ಸಿಲಿಕಾನ್ ವ್ಯಾಲಿ ಬ್ಯಾಂಕ್ ಫೈನಾನ್ಷಿಯಲ್ ಗ್ರೂಪ್, ದಿವಾಳಿಯಿಂದ ರಕ್ಷಣೆ ಕೋರಿ ಅರ್ಜಿ ಸಲ್ಲಿಸಿದೆ. ಇದು ಮಾನ್ಯವಾದರೆ ಪರ್ಯಾಯ ಯೋಜನೆಗೆ ರಕ್ಷಣೆ ಲಭಿಸಲಿದೆ.
ಇದನ್ನೂ ಓದಿ: ಅಮೆರಿಕದ ಬ್ಯಾಂಕ್ ಪತನದಿಂದ 1 ಲಕ್ಷ ಉದ್ಯೋಗ ನಷ್ಟ..? ಭಾರತದ ಸ್ಟಾರ್ಟಪ್‌ಗಳ ನೆರವಿಗೆ ಸಜ್ಜಾದ ಕೆಂದ್ರ ಸರ್ಕಾರ
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.