ಡಾಲರ್ ಎದುರು ರುಪಾಯಿ ಮೌಲ್ಯ ಭಾರಿ ಕುಸಿತ ಕಂಡಿದ್ದು ಇದೇ ಮೊದಲ ಬಾರಿ 80 ರು. ದಾಟಿ ದಿನದ ಕೊನೆಗೆ ವಹಿವಾಟು ಅಂತ್ಯಗೊಳಿಸಿದೆ. 80.05ಕ್ಕೆ ರುಪಾಯಿ ಮೌಲ್ಯ ಸ್ಥಿರವಾಗಿದ್ದು, ಇದು ಡಾಲರ್ ವಿರುದ್ಧ ರುಪಾಯಿಯ ಸಾರ್ವಕಾಲಿಕ ಕನಿಷ್ಠ.
ಮುಂಬೈ (ಜು.21): ಡಾಲರ್ ಎದುರು ರುಪಾಯಿ ಮೌಲ್ಯ ಭಾರಿ ಕುಸಿತ ಕಂಡಿದ್ದು ಇದೇ ಮೊದಲ ಬಾರಿ 80 ರು. ದಾಟಿ ದಿನದ ಕೊನೆಗೆ ವಹಿವಾಟು ಅಂತ್ಯಗೊಳಿಸಿದೆ. 80.05ಕ್ಕೆ ರುಪಾಯಿ ಮೌಲ್ಯ ಸ್ಥಿರವಾಗಿದ್ದು, ಇದು ಡಾಲರ್ ವಿರುದ್ಧ ರುಪಾಯಿಯ ಸಾರ್ವಕಾಲಿಕ ಕನಿಷ್ಠ. ಇಲ್ಲಿನ ಅಂತರ್‌ಬ್ಯಾಂಕ್ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಸೋಮವಾರ ಹಾಗೂ ಮಂಗಳವಾರ ರುಪಾಯಿ ಮೌಲ್ಯ ಮಧ್ಯಂತರದಲ್ಲಿ 80 ರು.ಗಿಂತ ಕೆಳಗೆ ಕುಸಿದಿತ್ತಾದರೂ, ಬಳಿಕ ಆರ್‌ಬಿಐನ ಮಧ್ಯಪ್ರವೇಶದಿಂದಾಗಿ ಚೇತರಿಕೊಂಡಿತ್ತು.
ಆದರೆ ಬುಧವಾರ ರುಪಾಯಿ 79.91 ರು.ನೊಂದಿಗೆ ವಹಿವಾಟು ಆರಂಭಿಸಿ, ದಿನದಂತ್ಯಕ್ಕೆ 80.05ರಲ್ಲಿ ವಹಿವಾಟು ಮುಕ್ತಾಯಗೊಳಿಸಿತು. ಈ ಮೂಲಕ ಡಾಲರ್ ಎದುರು 13 ಪೈಸೆಯಷ್ಟು ಭಾರೀ ಕುಸಿತ ದಾಖಲಿಸಿತು. ಕಚ್ಚಾತೈಲ ಆಮದುದಾರರಿಂದ ಡಾಲರ್‌ಗೆ ಭಾರೀ ಬೇಡಿಕೆ ವ್ಯಕ್ತವಾಗಿದ್ದು, ದೇಶದ ಆಮದು ಮತ್ತು ರಫ್ತಿನ ನಡುವಿನ ವ್ಯತ್ಯಾಸ ಮತ್ತಷ್ಟು ಹೆಚ್ಚಳವಾಗಿದ್ದು ಹೂಡಿಕೆದಾರರ ಮೇಲೆ ಪರಿಣಾಮ ಬೀರಿ ಅವರು ಮಾರುಕಟ್ಟೆಯಿಂದ ಹಣ ಹಿಂದಕ್ಕೆ ಪಡೆದಿದ್ದು, ಬುಧವಾರ ಭಾರತದ ಕರೆನ್ಸಿ ಮೌಲ್ಯದ ಭಾರೀ ಕುಸಿತಕ್ಕೆ ಕಾರಣವಾಯಿತು ಎನ್ನಲಾಗಿದೆ.
ಕುಸಿದ ರೂಪಾಯಿ ಮೌಲ್ಯ; ಹಲವರಿಗೆ ನಷ್ಟ,ಕೆಲವರಿಗೆ ಲಾಭ, ಹೇಗೆ? ಇಲ್ಲಿದೆ ಮಾಹಿತಿ
ಇತರ ದೇಶಕ್ಕೆ ಹೋಲಿಸಿದರೆ ರುಪಾಯಿ ಅಷ್ಟು ಕುಸಿದಿಲ್ಲ: ರುಪಾಯಿ ಮೌಲ್ಯ ಕುಸಿತದ ಬಗ್ಗೆ ಪ್ರತಿಕ್ರಿಯಿಸಿರುವ ಕೇಂದ್ರ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರ ಅನಂತ ನಾಗೇಶ್ವರನ್, ಇತರೆ ದೇಶಗಳ ಕರೆನ್ಸಿಗೆ ಹೋಲಿಸಿದರೆ ಡಾಲರ್ ಎದುರು ಭಾರತದ ರುಪಾಯಿ ಮೌಲ್ಯ ಹೆಚ್ಚು ಕುಸಿತ ಕಂಡಿಲ್ಲ. ಅಮೆರಿಕ ಕೇಂದ್ರೀಯ ಬ್ಯಾಂಕ್ ಹಣದುಬ್ಬರ ತಡೆಯಲು ಕೈಗೊಂಡ ಕೆಲವು ಕ್ರಮಗಳು ಇತರೆ ದೇಶಗಳ ಕರೆನ್ಸಿ ಮೇಲೆ ಪ್ರಭಾವ ಬೀರಿದೆ ಎಂದು ಹೇಳಿದ್ದಾರೆ.
ಕಳೆದ 7 ತಿಂಗಳಲ್ಲಿ ವಿವಿಧ ದೇಶಗಳ ಕರೆನ್ಸಿ ಏರಿಳಿತವನ್ನು ಗಮನಿಸಿದಾಗ ಇದು ಸ್ಪಷ್ಟವಾಗಿದೆ. ಟರ್ಕಿಯ ಇರಾ 7 ತಿಂಗಳಲ್ಲಿ ಶೇ.22.34ರಷ್ಟು, ಜಪಾನ್‌ನ ಯೆನ್ ಶೇ.16.95, ಸ್ವೀಡನ್‌ನ ಕ್ರೊನಾ ಶೇ.13.66, ಬ್ರಿಟನ್‌ನ ಪೌಂಡ್ ಶೇ.12.27, ಯುರೋ ಶೇ.11.30ರಷ್ಟುಕುಸಿದಿವೆ. ಆದರೆ ಭಾರತದ ರುಪಾಯಿ ಶೇ.6.94ರಷ್ಟುಮಾತ್ರ ಕುಸಿದಿದೆ.
ಈಗ ರುಪಾಯಿ ಮೌಲ್ಯ ಕುಸಿತಕ್ಕೆ ಕಾರಣವೇನು?
- ಎರಡು ಕರೆನ್ಸಿಗಳ ನಡುವೆ ಒಂದಕ್ಕೆ ಬೇಡಿಕೆ ಹೆಚ್ಚಾದಾಗ ಮತ್ತೊಂದರ ಮೌಲ್ಯ ಕುಸಿಯುತ್ತದೆ. ಇದೀಗ ಡಾಲರ್‌ಗೆ ಬೇಡಿಕೆ ಹೆಚ್ಚಾದ ಪರಿಣಾಮ ರುಪಾಯಿ ಮೌಲ್ಯ ಇಳಿಕೆ.
- ರಫ್ತಿಗಿಂತ ಆಮದು ಹೆಚ್ಚಾದಾಗ, ಡಾಲರ್‌ನಲ್ಲೇ ಹಣ ಪಾವತಿ ಮಾಡಬೇಕಾದ ಅನಿವಾರ್ಯತೆ ಸೃಷ್ಟಿ. ಈಗಲೂ ಇದೇ ಕಾರಣದಿಂದಾಗಿ ಡಾಲರ್‌ಗೆ ಬೇಡಿಕೆ ಹೆಚ್ಚಾಗಿದೆ.
- ಹಣದುಬ್ಬರ ದಾಖಲೆ ಪ್ರಮಾಣಕ್ಕೆ ಏರಿಕೆ ಕಂಡಿರುವುದು. ಇದರ ನಿಯಂತ್ರಣಕ್ಕೆ ಬಡ್ಡಿ ದರ ಏರಿಕೆ ಮೊದಲಾದ ಕ್ರಮಗಳಿಂದ ಆರ್ಥಿಕತೆಗೆ ಮತ್ತಷ್ಟುಹೊಡೆತದ ಆತಂಕ
- ಈ ವರ್ಷವೊಂದಲ್ಲೇ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಮಾರುಕಟ್ಟೆಯಿಂದ 1.10 ಲಕ್ಷ ಕೋಟಿ ಹಣ ಹಿಂದಕ್ಕೆ ಪಡೆದಿರುವುದು
Rupee Vs Dollar; ಮೊದಲ ಬಾರಿ 80 ದಾಟಿದ ರು. ಮೌಲ್ಯ
ಸ್ವಾತಂತ್ರ್ಯಾ ನಂತರದಲ್ಲಿ ಡಾಲರ್- ರುಪಾಯಿ ಏರಿಳಿಕೆ
ವರ್ಷ ಡಾಲರ್ ರುಪಾಯಿ
1947 1 4.16
1950 1 4.76
1960 1 4.76
1970 1 7.5
1980 1 7.86
1990 1 17.5
2000 1 44.94
2010 1 45.73
2014 1 62.33
2019 1 70.39
2020 1 76.38