Asianet Suvarna News Asianet Suvarna News

ಕುಸಿದ ರೂಪಾಯಿ ಮೌಲ್ಯ; ಹಲವರಿಗೆ ನಷ್ಟ,ಕೆಲವರಿಗೆ ಲಾಭ, ಹೇಗೆ? ಇಲ್ಲಿದೆ ಮಾಹಿತಿ

ರೂಪಾಯಿ ಮೌಲ್ಯ ಕುಸಿತದಿಂದ ಅನೇಕರು ನಷ್ಟ ಅನುಭವಿಸಿದ್ರೆ, ಇನ್ನೂ ಕೆಲವರು ಲಾಭ ಗಳಿಸಿದ್ದಾರೆ ಕೂಡ. ರೂಪಾಯಿ ಮೌಲ್ಯ ಕುಸಿತದಿಂದ ರಫ್ತು ಆಧಾರಿತ ಕೈಗಾರಿಕೆಗಳ ಗಳಿಕೆ ಹೆಚ್ಚಿದೆ. ಹಾಗಾದ್ರೆ ಯಾವ ವಲಯಗಳು ಲಾಭ ಗಳಿಸುತ್ತಿವೆ? ಯಾವ ವಲಯಗಳು ನಷ್ಟ ಅನುಭವಿಸುತ್ತಿವೆ? ಇಲ್ಲಿದೆ ಮಾಹಿತಿ.
 

Rupee Continuous Fall Which Industries Stand To Gain Which Tend To Lose
Author
Bangalore, First Published Jul 19, 2022, 3:06 PM IST

ನವದೆಹಲಿ (ಜು.18): ಡಾಲರ್ ಎದುರು ರೂಪಾಯಿ ಮೌಲ್ಯ ನಿರಂತರ ಕುಸಿತ ಕಾಣುತ್ತಿದ್ದು,ದೇಶೀಯ ಹಣದುಬ್ಬರ ಹಾಗೂ ಹೂಡಿಕೆಗಳ ಮೇಲೆ ಪರಿಣಾಮ ಬೀರಿದೆ. ಆದ್ರೆ, ಎಲ್ಲ ವಲಯಗಳ ಬೇಡಿಕೆ ಹಾಗೂ ಹಣಕಾಸಿನ ಮೇಲೆ ಇದು ಒಂದೇ ರೀತಿಯ ಪರಿಣಾಮ ಬೀರಿಲ್ಲ. ಕೆಲವು ವಲಯಗಳ ಮೇಲೆ ಇದು ನಕಾರಾತ್ಮಕ ಪರಿಣಾಮ ಬೀರಿದ್ರೆ, ಇನ್ನೂ ಕೆಲವು ವಲಯಗಳಿಗೆ ಇದ್ರಿಂದ ಲಾಭವಾಗಿದೆ. ಈ ಕ್ಯಾಲೆಂಡರ್ ವರ್ಷದಲ್ಲಿ ಅಂದ್ರೆ 2022ನೇ ಸಾಲಿನಲ್ಲಿ ಇಲ್ಲಿಯ ತನಕ ರೂಪಾಯಿ ಮೌಲ್ಯ ಡಾಲರ್ ಎದುರು ಶೇ. 8 ರಷ್ಟು ಕುಸಿತ ದಾಖಲಿಸಿದೆ. ಇದಕ್ಕೆ ಕಾರಣ ವಿದೇಶಿ ಹೂಡಿಕೆಗಳ ನಿರಂತರ ಹೊರಹರಿವಿಕೆ, ಕಚ್ಚಾ ತೈಲದ ಬೆಲೆಗಳಲ್ಲಿ ಏರಿಕೆ, ಅಮೆರಿಕದ ಫೆಡರಲ್ ರಿಸರ್ವ್ ಬ್ಯಾಂಕಿನ ಬಿಗಿ ಹಣಕಾಸು ನೀತಿ ಹಾಗೂ ಡಾಲರ್ ಬಲವರ್ಧನೆ. ಇನ್ನು ರಷ್ಯಾ-ಉಕ್ರೇನ್ ಸಂಘರ್ಷ ಕೂಡ ಜಾಗತಿಕ ಮಟ್ಟದಲ್ಲಿ ಅನಿಶ್ಚಿತೆ ಹೆಚ್ಚಳಕ್ಕೆ ಕಾರಣವಾಯಿತು. ಈ ವರ್ಷದ ಜನವರಿ 12ರಂದು ಡಾಲರ್ ಎದುರು ರೂಪಾಯಿ ಮೌಲ್ಯ 73.77 ಆಗಿತ್ತು. ಆದರೆ, ಈಗ 79.76ಕ್ಕೆ ಇಳಿಕೆಯಾಗಿದೆ. 80ರ ಗಡಿಗೆ ಅತ್ಯಂತ ಸನಿಹದಲ್ಲಿದೆ.  

ಈ ವಲಯಗಳ ಮೇಲೆ ನಕಾರಾತ್ಮಕ ಪರಿಣಾಮ
ತೈಲ ಹಾಗೂ ಅನಿಲ: ಭಾರತದ ಶೇ.80ಕ್ಕೂ ಹೆಚ್ಚು ಇಂಧನ ಅಗತ್ಯ ಆಮದಿನ (Import) ಮೇಲೆ ಅವಲಂಬಿತವಾಗಿದೆ. ರೂಪಾಯಿ (Rupee) ಮೌಲ್ಯ ಕುಸಿತದಿಂದ ಅತ್ಯಧಿಕ ಪರಿಣಾಮ ಉಂಟಾಗಿರುವುದು ಈ ವಲಯದ ಮೇಲೆಯೇ. ಆಮದು ದುಬಾರಿಯಾದ ಕಾರಣ ದೇಶೀಯ ತೈಲ ಮಾರುಕಟ್ಟೆ ಕಂಪನಿಗಳ ವೆಚ್ಚ ಕೂಡ ಹೆಚ್ಚಿದೆ. ಅವರ ಲಾಭದ ಮಾರ್ಜಿನ್ ಮೇಲೆ ಕೂಡ ಇದು ಪರಿಣಾಮ ಬೀರಿದೆ.

Amazon Prime Day Sale:ಮತ್ತೆ ಬಂದಿದೆ ಆನ್ ಲೈನ್ ಶಾಪಿಂಗ್ ಹಬ್ಬ; ಅಮೆಜಾನ್ ಪ್ರೈಮ್ ಡೇ ಯಾವಾಗ?

ಎಫ್ ಎಂಸಿಜಿ: ಫಾಸ್ಟ್ ಮೂವಿಂಗ್ ಕನ್ಸೂಮರ್ ಗೂಡ್ಸ್ (FMCG) ವಲಯ ರೂಪಾಯಿ ಮೌಲ್ಯ ಕುಸಿತದಿಂದ ತೀವ್ರ ಹೊಡೆತ ಅನುಭವಿಸಿದೆ. ಕಚ್ಚಾ ತೈಲ (Crude oil)  ಹಾಗೂ ಅಡುಗೆ ಎಣ್ಣೆ (Edible oil) ದುಬಾರಿಯಾಗಿರೋದ್ರಿಂದ ಈ ಉತ್ಪನ್ನಗಳ ಉತ್ಪಾದನಾ ವೆಚ್ಚ ಕೂಡ ಹೆಚ್ಚಿದೆ. ವರದಿಗಳ ಪ್ರಕಾರ ಕಂಪನಿಗಳಿಗೆ ಕಚ್ಚಾ ವಸ್ತುಗಳ ಬೆಲೆಯೇರಿಕೆಯ ವೆಚ್ವನ್ನು ಸಂಪೂರ್ಣವಾಗಿ ಗ್ರಾಹಕರಿಗೆ ವರ್ಗಾಯಿಸಲು ಸಾಧ್ಯವಾಗಿಲ್ಲ. ನಿವ್ವಳ ಮಾರ್ಜಿನ್ ನಿರ್ವಹಣೆಗೆ ಶೇ.15ರಷ್ಟು ಬೆಲೆ ಹೆಚ್ಚಳ ಮಾಡೋದು ಅನಿವಾರ್ಯವಾಗಿದೆ ಕೂಡ.

ಏರ್ ಲೈನ್ಸ್ : ಏರ್ ಲೈನ್ಸ್  (Airlines) ಕಾರ್ಯನಿರ್ವಹಣಾ ವೆಚ್ಚಗಳನ್ನು ಡಾಲರ್ ಗಳಲ್ಲೇ ಪಾವತಿಸುವ ಕಾರಣ ಏರ್ ಲೈನ್ಸ್ ನಿರ್ವಹಣಾ ವೆಚ್ಚಗಳು ಹೆಚ್ಚಿವೆ. ಹೀಗಾಗಿ ರೂಪಾಯಿ ಮೌಲ್ಯ ಕುಸಿತ ಏರ್ ಲೈನ್ಸ್ ಗಳ ಮಾರ್ಜಿನ್ ಹಾಗೂ ಲಾಭದ ಮೇಲೆ ವ್ಯತಿರಿಕ್ತ ಪರಿಣಾಮಗಳನ್ನುಂಟು ಮಾಡುತ್ತಿವೆ.
ಎಲೆಕ್ಟ್ರಾನಿಕ್ಸ್: ಗ್ರಾಹಕರ ಎಲೆಕ್ಟ್ರಾನಿಕ್ಸ್ ಕಂಪನಿಗಳ ಒಟ್ಟು ಅರ್ಧಕ್ಕೂ ಹೆಚ್ಚಿನ ಆಂತರಿಕ ವೆಚ್ಚ ಆಮದಿನ ಮೇಲೆಯೇ ಅವಲಂಬಿತವಾಗಿದೆ. ರೂಪಾಯಿ ಮೌಲ್ಯ ಕುಸಿತದಿಂದ ಆಮದು ದುಬಾರಿಯಾಗಿದೆ. ಪರಿಣಾಮ ಉತ್ಪಾದನಾ ವೆಚ್ಚ ಕೂಡ ಹೆಚ್ಚಿದೆ. ಕಳೆದ ಆರು ತಿಂಗಳಿಂದ ದೇಶದಲ್ಲಿ ಗ್ರಾಹಕರ ಎಲೆಕ್ಟ್ರಾನಿಕ್ಸ್ ಬೇಡಿಕೆ ಶೇ.35 ರಷ್ಟು ತಗ್ಗಿದೆ.

ಸಿಮೆಂಟ್ ಕೈಗಾರಿಕೆ: ತೈಲ ಬೆಲೆಯಲ್ಲಿ ಏರಿಕೆಯಾಗಿರೋದು ಸಿಮೆಂಟ್ ಕಂಪನಿಗಳ (Cement Companies) ಮೇಲೆ ಪರಿಣಾಮ ಬೀರಿದೆ. ಇಲ್ಲೂ ಕೂಡ ಉತ್ಪಾದನಾ ವೆಚ್ಚ ಹೆಚ್ಚಿದೆ.

ಈ ವಲಯಗಳ ಮೇಲೆ ಸಕಾರಾತ್ಮಕ ಪರಿಣಾಮ
ಮಾಹಿತಿ ತಂತ್ರಜ್ಞಾನ:  ಇದು ರಫ್ತು ಆಧಾರಿತ ಸೇವಾ ವಲಯವಾದ ಕಾರಣ  ರೂಪಾಯಿ ಮೌಲ್ಯದಲ್ಲಿ ಕುಸಿತವಾದ್ರೆ ಅದು ದೇಶದ ಐಟಿ ವಲಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಈ ಕಂಪನಿಗಳು ಡಾಲರ್ ಲೆಕ್ಕದಲ್ಲಿ ಸಂಪಾದನೆ ಮಾಡುವ ಕಾರಣ ರೂಪಾಯಿ ಮೌಲ್ಯ ಕುಸಿತದಿಂದ ಅವರ ಗಳಿಕೆ ಹೆಚ್ಚುತ್ತದೆ. 

Rupee Vs Dollar; ಮೊದಲ ಬಾರಿ 80 ದಾಟಿದ ರು. ಮೌಲ್ಯ

ಫಾರ್ಮಾ: ಈ ವಲಯ ಸಾಕಷ್ಟು ಪ್ರಮಾಣದಲ್ಲಿ ಕಚ್ಚಾ ವಸ್ತುಗಳನ್ನು ಆಮದು ಮಾಡಿಕೊಂಡರೂ ರೂಪಾಯಿ ಮೌಲ್ಯ ಕುಸಿತದ ಪರಿಣಾಮ  ರಫ್ತಿನಿಂದ ಸಾಕಷ್ಟು ಆದಾಯ ಗಳಿಸುತ್ತಿದೆ. ಭಾರತ 2021-22 ನೇ ಆರ್ಥಿಕ ಸಾಲಿನಲ್ಲಿ 24.62 ಡಾಲರ್ ಮೌಲ್ಯದ ಫಾರ್ಮಾ ಉತ್ಪನ್ನಗಳನ್ನು ರಫ್ತು ಮಾಡಿದೆ. ಇದರಲ್ಲಿ ಸುಮಾರು ಶೇ.30 ರಷ್ಟನ್ನು ಅಮೆರಿಕಕ್ಕೆ ಕಳುಹಿಸಲಾಗಿದೆ. ಇನ್ನು ಕಚ್ಚಾ ವಸ್ತುಗಳ ಆಮದು 4-5 ಬಿಲಿಯನ್ ಡಾಲರ್ ಇದೆ.

ಚಹಾ: ರೂಪಾಯಿ ಮೌಲ್ಯದ ಕುಸಿತದಿಂದ ಭಾರತದ ರಫ್ತು ಹೆಚ್ಚು ಸ್ಪರ್ಧಾತ್ಮಕವಾಗಿದೆ. ರೂಪಾಯಿ ಮೌಲ್ಯ ಕುಸಿತದಿಂದ ಭಾರತದ ವಸ್ತುಗಳು ವಿದೇಶಿಯರಿಗೆ ಅಗ್ಗವಾಗಿರುವ ಕಾರಣ ಬೇಡಿಕೆ ಹೆಚ್ಚಿದೆ. ಭಾರತ ವಿವಿಧ ರಾಷ್ಟ್ರಗಳಿಗೆ 230 ದಶಲಕ್ಷ ಕೆಜಿ ಅಥವಾ ಒಟ್ಟು ಉತ್ಪಾದನೆಯ ಶೇ.16ರಷ್ಟು ಚಹಾ ರಫ್ತು ಮಾಡುತ್ತದೆ. ರೂಪಾಯಿ ಮೌಲ್ಯ ಕುಸಿತದ ಬಳಿಕ ಚಹಾ ಕಂಪನಿಗಳ ಲಾಭದಲ್ಲಿ ಪ್ರಸಕ್ತ ಆರ್ಥಿಕ ಸಾಲಿನಲ್ಲಿ ಶೇ.10ರಷ್ಟು ಹೆಚ್ಚಳವಾಗಿದೆ. 

Follow Us:
Download App:
  • android
  • ios