
ಇದಾಗಲೇ ರೈಲ್ವೆ ಇಲಾಖೆ ತನ್ನ ಬುಕ್ಕಿಂಗ್ನಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಿದೆ. ಜುಲೈ 1ರಿಂದ ತತ್ಕಾಲ್ ನಿಯಮದಲ್ಲಿಯೂ ಬದಲಾವಣೆ ಆಗಿದೆ. ಇನ್ನು ಮುಂದೆ ಯಾವುದೇ ಪ್ರಯಾಣಿಕರು ಆಧಾರ್ ಕಾರ್ಡ್‌ಗೆ ಲಿಂಕ್ ಮಾಡಲಾದ ಮೊಬೈಲ್ ಸಂಖ್ಯೆಯಲ್ಲಿ OTP ಪರಿಶೀಲನೆ ಇಲ್ಲದೆ ಟಿಕೆಟ್ ಬುಕ್ ಮಾಡಲು ಸಾಧ್ಯವಾಗುವುದಿಲ್ಲ. ದಲ್ಲಾಳಿಗಳು ಮತ್ತು ಮಧ್ಯವರ್ತಿಗಳು ಮಾಡುವ ದುಷ್ಕೃತ್ಯಗಳನ್ನು ತಡೆಯಲು ಈ ಕ್ರಮವನ್ನು ಸ್ಪಷ್ಟವಾಗಿ ತೆಗೆದುಕೊಳ್ಳಲಾಗಿದೆ. ಇದಕ್ಕೂ ಮುನ್ನ ಯಾರೇ ಆದರೂ ಲಾಗಿನ್ ಮಾಡುವ ಮೂಲಕ ಟಿಕೆಟ್ ಬುಕ್ ಮಾಡಬಹುದಾಗಿತ್ತು. ಇದರ ದುರುಪಯೋಗವನ್ನು ಏಜೆಂಟರು ಪಡೆದುಕೊಳ್ಳುತ್ತಿರುವುದು ಗಮನಕ್ಕೆ ಬಂದಿರುವ ಹಿನ್ನೆಲೆಯಲ್ಲಿ, ಈ ನಿಯಮಗಳನ್ನು ಬಲಾಯಿಸಲಾಗಿದೆ. ಏಜೆಂಟ್‌ಗಳು 30 ನಿಮಿಷಗಳ ಕಾಲ ಬುಕ್ ಮಾಡಲು ಸಾಧ್ಯವಾಗುವುದಿಲ್ಲ, ಮೊದಲಿಗೆ ಪ್ರಯಾಣಿಕರಿಗೆ ಅವಕಾಶ ಕಲ್ಪಿಸಿ ಬಳಿಕ ಏಜೆಂಟರಿಗೆ ನೀಡಲಾಗುವುದು.
ಇದರ ಅರ್ಥ, ಬುಕಿಂಗ್ ವಿಂಡೋ ತೆರೆದ ತಕ್ಷಣ IRCTC ಯ ಅಧಿಕೃತ ಟಿಕೆಟ್ ಏಜೆಂಟ್‌ಗಳು ಇನ್ನು ಮುಂದೆ ಟಿಕೆಟ್ ಬುಕ್ ಮಾಡಲು ಸಾಧ್ಯವಾಗುವುದಿಲ್ಲ. ಮೊದಲ 30 ನಿಮಿಷಗಳ ಕಾಲ ಅವರಿಗೆ ಬುಕಿಂಗ್ ಮುಚ್ಚಲಾಗುವುದು. AC ದರ್ಜೆಯ ಟಿಕೆಟ್‌ಗಳಿಗೆ: ಏಜೆಂಟ್ ಬುಕಿಂಗ್ ಬೆಳಿಗ್ಗೆ 10:00 ರಿಂದ 10:30 ರವರೆಗೆ ಮುಚ್ಚಲಾಗುವುದು. AC ದರ್ಜೆಯ ಟಿಕೆಟ್‌ಗಳಿಗೆ: ಏಜೆಂಟ್ ಬುಕಿಂಗ್ ಬೆಳಿಗ್ಗೆ 11:00 ರಿಂದ 11:30 ರವರೆಗೆ ಮುಚ್ಚಲಾಗುವುದು. ಜುಲೈ 1 ರಿಂದ ಯಾವುದೇ ಅಡಚಣೆಯಿಲ್ಲದೆ ಹೊಸ ವ್ಯವಸ್ಥೆಯನ್ನು ಪ್ರಾರಂಭಿಸಲು ಸಾಧ್ಯವಾಗುವಂತೆ ಎಲ್ಲಾ ವಲಯ ರೈಲ್ವೆಗಳು ಮತ್ತು ಸಂಬಂಧಿತ ಇಲಾಖೆಗಳಿಗೆ ಹೊಸ ಸೂಚನೆಗಳನ್ನು ಕಳುಹಿಸಲಾಗಿದೆ.
ಇನ್ನೊಂದು ಭಾರಿ ಬದಲಾವಣೆಯೂ ಆಗಿದೆ. ಅದು RAC ಮತ್ತು ವೇಟಿಂಗ್ ಲಿಸ್ಟ್ (WL) ಪ್ರಯಾಣಿಕರಿಗೆ ಭಾರಿ ಅನುಕೂಲ ಕಲ್ಪಿಸುವಂತದ್ದಾಗಿದೆ. ಈ ಮೊದಲು ರೈಲು ಹೊರಡುವ ನಾಲ್ಕು ಗಂಟೆ ಮೊದಲು ಮೀಸಲಾತಿ ಚಾರ್ಟ್ ಬುಕ್ ಆಗುತ್ತಿತ್ತು. ಇದರಿಂದಾಗಿ ಆರ್ಎಸಿ ಮತ್ತು ವೇಟಿಂಗ್ ಲಿಸ್ಟ್ನಲ್ಲಿ ಇರುವ ಪ್ರಯಾಣಿಕರು ಬೇರೆಯ ವ್ಯವಸ್ಥೆ ಮಾಡಿಕೊಳ್ಳುವುದು ಕಷ್ಟವಾಗುತ್ತಿತ್ತು. ಈ ಪ್ರಯಾಣಿಕರಿಗೆ ಒಂದು ವೇಳೆ ಬುಕಿಂಗ್ ಕನ್ಫರ್ಮ್ ಆಗದೇ ಇದ್ದ ಪಕ್ಷದಲ್ಲಿ ಬೇರೆ ರೈಲಿಗೆ ಹೋಗುವುದು ಅಥವಾ ಇನ್ನು ಯಾವುದೇ ರೀತಿಯ ಪರ್ಯಾಯ ವ್ಯವಸ್ಥೆಗೆ ಟೈಮೇ ಸಿಗುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ ಇದೀಗ ರೈಲ್ವೆ ಇಲಾಖೆ 24 ಗಂಟೆಗೂ ಮುನ್ನವೇ ಚಾರ್ಟ್ ಸಿದ್ಧಪಡಿಸುತ್ತದೆ. ಇದರಿಂದಾಗಿ WL ಮತ್ತು RAC ಪ್ರಯಾಣಿಕರು ತಮಗೆ ಟಿಕೆಟ್ ಕನ್ಫರ್ಮ್ ಆಗದೇ ಇದ್ದ ಪಕ್ಷದಲ್ಲಿ ಬೇರೆ ವ್ಯವಸ್ಥೆ ಮಾಡಿಕೊಳ್ಳಲು ಅನುಕೂಲ ಆಗಲಿದೆ. ಬಿಕಾನೆರ್ ವಿಭಾಗದಲ್ಲಿ ಇದರ ಪ್ರಯೋಗ ಯಶಸ್ವಿಯಾಗಿದ್ದು, ಈಗ ಇದನ್ನು ದೇಶಾದ್ಯಂತ ಜಾರಿಗೆ ತರಲಾಗುತ್ತಿದೆ.
ರೈಲ್ವೆಯಲ್ಲಿ ಇನ್ನೂ ಹಲವು ಬದಲಾವಣೆಗಳನ್ನು ಮಾಡಲಾಗುತ್ತಿದೆ ಎಂದು ಇದಾಗಲೇ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಮಾಹಿತಿ ನೀಡಿದ್ದಾರೆ. ಈ ಹೊಸ ನಿಯಮವು ರೈಲ್ವೆಯ ಬುಕಿಂಗ್ ಪ್ರಕ್ರಿಯೆಯನ್ನು ಹೆಚ್ಚು ಪಾರದರ್ಶಕ ಮತ್ತು ಸುರಕ್ಷಿತವಾಗಿಸುತ್ತದೆ. ಇದು ನಕಲಿ ಖಾತೆಗಳು ಅಥವಾ ದಲ್ಲಾಳಿಗಳು ಟಿಕೆಟ್‌ಗಳನ್ನು ಬುಕ್ ಮಾಡಲು ಸಾಧ್ಯವಿಲ್ಲ ಎಂದು ಖಚಿತಪಡಿಸುತ್ತದೆ. ಈಗ ನಿಜವಾದ ಮತ್ತು ಪರಿಶೀಲಿಸಿದ ಪ್ರಯಾಣಿಕರು ಮಾತ್ರ ಟಿಕೆಟ್‌ಗಳನ್ನು ಪಡೆಯಲು ಸಾಧ್ಯವಾಗುತ್ತದೆ, ಇದು ಸಾಮಾನ್ಯ ಜನರಿಗೆ ಸುಲಭವಾಗುತ್ತದೆ. ಟಿಕೆಟ್‌ಗಳ ಕೊರತೆ, ಅಧಿಕ ಶುಲ್ಕ ವಿಧಿಸುವುದು ಮತ್ತು ತತ್ಕಾಲ್ ಟಿಕೆಟ್‌ಗಳ ಕಪ್ಪು ಮಾರುಕಟ್ಟೆಯನ್ನು ಪರಿಣಾಮಕಾರಿಯಾಗಿ ನಿಲ್ಲಿಸಲಾಗುತ್ತದೆ ಎಂದಿದ್ದಾರೆ. ಭವಿಷ್ಯದಲ್ಲಿ ಕೃತಕ ಬುದ್ಧಿಮತ್ತೆ (AI) ಮತ್ತು ಬಯೋಮೆಟ್ರಿಕ್ ಪರಿಶೀಲನೆಯನ್ನು ಟಿಕೆಟ್ ಬುಕಿಂಗ್ ವ್ಯವಸ್ಥೆಗೆ ಸೇರಿಸಲಾಗುದು. ಇದರ ಮೊದಲ ಹೆಜ್ಜೆಯಾಗಿ ಆಧಾರ್ OTP ಪರಿಶೀಲನೆ ಇದಾಗಲೇ ಜಾರಿ ಮಾಡಲಾಗುತ್ತಿದೆ ಎಂದಿದ್ದಾರೆ.
ಆಧಾರ್ ಕಾರ್ಡ್ ಲಿಂಕ್ ಮಾಡುವುದು ಹೇಗೆ?
- ನಿಮ್ಮ ಆಧಾರ್ ಕಾರ್ಡ್ ಅನ್ನು ಮೊಬೈಲ್ ಸಂಖ್ಯೆಗೆ ಲಿಂಕ್ ಮಾಡಿ.
- ನಿಮ್ಮ IRCTC ಖಾತೆಯಲ್ಲಿ ಆಧಾರ್ ಸಂಖ್ಯೆಯನ್ನು ನವೀಕರಿಸಿ.
- ಮೊಬೈಲ್‌ನಲ್ಲಿ OTP ಪಡೆಯುವ ಸೌಲಭ್ಯವನ್ನು ಸಕ್ರಿಯಗೊಳಿಸಿ.
- ಬುಕಿಂಗ್ ಮಾಡುವ ಮೊದಲು ವ್ಯವಸ್ಥೆಯನ್ನು ಪರೀಕ್ಷಿಸಿ.
ಈ ಸಿದ್ಧತೆಗಳೊಂದಿಗೆ, ನೀವು ಕೊನೆಯ ಕ್ಷಣದ ತೊಂದರೆಯನ್ನು ತಪ್ಪಿಸುತ್ತೀರಿ ಮತ್ತು ತತ್ಕಾಲ್ ಟಿಕೆಟ್ ಅನ್ನು ಸುಲಭವಾಗಿ ಬುಕ್ ಮಾಡಲು ಸಾಧ್ಯವಾಗುತ್ತದೆ. ನಿಯಮಗಳಲ್ಲಿ ಬದಲಾವಣೆಯ ಸಂದರ್ಭದಲ್ಲಿ, ಯಾವಾಗಲೂ IRCTC ಯ ಅಧಿಕೃತ ವೆಬ್‌ಸೈಟ್ ಅಥವಾ ಅಪ್ಲಿಕೇಶನ್‌ನಿಂದ ಮಾಹಿತಿಯನ್ನು ದೃಢೀಕರಿಸಿ. ಯಾವುದೇ ಬುಕಿಂಗ್ ಮಾಡುವ ಮೊದಲು ನಿಮ್ಮ IRCTC ಪ್ರೊಫೈಲ್ ಮತ್ತು ಆಧಾರ್ ಪರಿಶೀಲನೆಯನ್ನು ಪರಿಶೀಲಿಸಿ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.